ಪ್ರಧಾನ ಸುದ್ದಿ

ಸಿದ್ದು ಸರ್ಕಾರದ ವರ್ತನೆ ಮತ್ತೆ ರಾಜ್ಯಪಾಲರ ಬೇಸರ

ಸಿದ್ದು ಸರ್ಕಾರದ ವರ್ತನೆ ಮತ್ತೆ ರಾಜ್ಯಪಾಲರ ಬೇಸರ
Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ನ.22-
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿಡದೆ ಕಾಡಿದ್ದ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ತಿರುಗಿಬಿದ್ದಿದ್ದಾರೆ.
ಈ ಹಿಂದೆ 3- 4 ಬಾರಿ ರಾಜ್ಯ ಸರ್ಕಾರದ ಮೇಲೆ ಚಾಟಿ ಬೀಸಿದ್ದ ರಾಜ್ಯಪಾಲರು ಇದೀಗ ಅಧಿವೇಶನದಲ್ಲಿ ಪ್ರಸ್ತಾಪಿಸಲು ಸಿದ್ಧಪಡಿಸಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್‌ಜಿಯುಎಚ್‌ಎಸ್) ತಿದ್ದುಪಡಿ ವಿಧೇಯಕದ ಬಗ್ಗೆ ಅಪಸ್ವರ ಎತ್ತಿದ್ದು, ಈ ವಿಧೇಯಕವನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಸರ್ಕಾರ ಅದನ್ನು ಕಳುಹಿಸಿದರೆ ಮರಳಿ ಕಳುಹಿಸುವ ಮುನ್ಸೂಚನೆ ನೀಡಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಹಗ್ಗ ಜಗ್ಗಾಟ ಮುಂದುವರಿದೇ ಇದೆ. ಕುಲಪತಿಗಳ ನೇಮಕದಿಂದ ಹಿಡಿದು ಖಾಸಗಿ ವಿವಿಗಳ ವಿಧೇಯಕ, ವಿವಿ ಕಾಯ್ದೆ ತಿದ್ದುಪಡಿ, ಬೆಂಗಳೂರು ವಿವಿ ವಿಭಜನೆ.. ಹೀಗೆ ಎಲ್ಲಾ ಹಂತಗಳಲ್ಲೂ ಅವರು ಸರ್ಕಾರದ ವಿರುದ್ಧ ತಿರುಗಿಬೀಳುತ್ತಿದ್ದಾರೆ. ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಕಾಯ್ದೆ ತಿದ್ದುಪಡಿ ಮಾಡುವಾಗ ಮತ್ತು ನಿರ್ಧಾರಗಳನ್ನು ಕೈಗೊಳ್ಳುವಾಗ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಮತ್ತು ತಮ್ಮ ಅಧಿಕಾರವನ್ನು ಸರ್ಕಾರ ಮೊಟಕುಗೊಳಿಸಲು ಯತ್ನಿಸುತ್ತಿರುವುದು ರಾಜ್ಯಪಾಲರ ಬೇಸರಕ್ಕೆ ಕಾರಣ.

ಶುಕ್ರವಾರ ನಡೆದಿದ್ದೇನು?: ಆರ್‌ಜಿಯುಎಚ್‌ಎಸ್ ಭೀಮನಕುಪ್ಪೆ ಅವರಣದಲ್ಲಿ ರಾಜೀವ್ ಗಾಂಧಿ ಸಾರ್ವಜನಿಕ ಆರೋಗ್ಯ ಸಂಸ್ಥೆ ಹಾಗೂ ರೋಗ ನಿಯಂತ್ರಣ ಕೇಂದ್ರ ಮತ್ತು ಉನ್ನತ ಸಂಶೋಧನಾ ಕೇಂದ್ರ ಕಟ್ಟಡಗಳಿಗೆ ಶಿಲಾನ್ಯಾಸ ಸಮಾರಂಭದ ನಂತರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಆರ್‌ಜಿಯುಎಚ್‌ಎಸ್ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರುವುದರಿಂದ ವಿಶ್ವವಿದ್ಯಾಲಯದ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವುದಾದರೇ ನಾನು ಅದಕ್ಕೆ ಸಹಿ ಹಾಕುವುದಿಲ್ಲ ಎಂದಿದ್ದಾರೆ.

ರಾಜ್ಯಪಾಲರ ಅಪಸ್ವರ ಏಕೆ?: ಈ ಹಿಂದೆ ವಿವಿ ಸಿಂಡಿಕೇಟ್ ಸದಸ್ಯರ ಸಂಖ್ಯೆ 6 ಇತ್ತು. ಆದರೆ, ತಿದ್ದುಪಡಿಯಲ್ಲಿ ಸರ್ಕಾರ ಈ ಸಂಖ್ಯೆಯನ್ನು 11ಕ್ಕೆ ಏರಿಸಿದೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನೂ ಸಿಂಡಿಕೇಟ್ ಸದಸ್ಯ ಎಂದು ಪರಿಗಣಿಸಲಾಗಿದೆ. ಅಲ್ಲದೆ ಕುಲಪತಿಗಳ ಅವಧಿಯನ್ನು 4 ವರ್ಷದಿಂದ ಮೂರು ವರ್ಷಕ್ಕೆ ಇಳಿಸಲಾಗಿದೆ. ಈ ಬಗ್ಗೆ ಕಿಡಿ ಕಾರಿರುವ ರಾಜ್ಯಪಾಲರು, ಸಿಂಡಿಕೇಟ್ ಸದಸ್ಯತ್ವಕ್ಕೆ ವೈದ್ಯಕೀಯ ಶಿಕ್ಷಣ ತಜ್ಞರನ್ನು ನೇಮಕ ಮಾಡಿದರೆ ಯಾವುದೇ ಆಕ್ಷೇಪವಿರಲಿಲ್ಲ.
ಆದರೆ, 11 ರಾಜ್ಯ ಸರ್ಕಾರದ ನಾಮನಿರ್ದೇಶಿತ ಸದಸ್ಯರೊಂದಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನು ಸೇರಿಸಿರುವುದು ಸರಿಯಲ್ಲ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ಆದರೆ, ನನ್ನ ಮಾತನ್ನು ಯಾರೂ ಕೇಳುತ್ತಿಲ್ಲ. ಆದ್ದರಿಂದ ಆರೋಗ್ಯ ವಿವಿಗೆ ಧಕ್ಕೆಬರದಂತೆ ನೋಡಿಕೊಳ್ಳಿ ಎಂದು ಕುಲಪತಿಗಳಿಗೆ ಸೂಚಿಸಿದ್ದೇನೆ. ಅಷ್ಟೇ ಅಲ್ಲ, ಈ ರೀತಿಯ ತಿದ್ದುಪಡಿ ವಿಧೇಯಕವನ್ನು ಸರ್ಕಾರ ಅಂಗೀಕರಿಸಿದರೆ ಅದನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದರು.

ಪ್ರಯತ್ನ ವಿಫಲವಾಗಿತ್ತು: ಆರೋಗ್ಯ ವಿವಿ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದ್ದ ಸರ್ಕಾರ ಈ ಕುರಿತ ನಿಯಮಾವಳಿ ರಚಿಸಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಆದರೆ, ರಾಜ್ಯಪಾಲರು ಇದನ್ನು ಸರ್ಕಾರಕ್ಕೆ ಮತ್ತೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತೀಚೆಗೆ ಸಂಪುಟ ಸಭೆಯಲ್ಲಿ ತಿದ್ದುಪಡಿ ವಿಧೇಯಕದ ಕುರಿತು ಚರ್ಚಿಸಿತ್ತು. ಅಧಿವೇಶನದಲ್ಲಿ ವಿಧೇಯಕಕ್ಕೆ ಅನುಮೋದನೆ ಪಡೆದು ರಾಜ್ಯಪಾಲರಿಗೆ ಕಳುಹಿಸಿಕೊಡುವುದು ಸರ್ಕಾರದ ಉದ್ದೇಶವಾಗಿತ್ತು.

ರಾಜ್ಯಪಾಲ ಉಲ್ಟಾ:
ಕಳೆದ ವಾರ ಉರ್ದು ಅಕಾಡೆಮಿಗೆ ಸೂಕ್ತ ವ್ಯಕ್ತಿಯನ್ನು ಅಧ್ಯಕ್ಷರಾಗಿ ನೇಮಿಸಿ ಎಂಬ ತಮ್ಮ ಸಲಹೆಯನ್ನು ಪಾಲಿಸದೆ ವಿಳಂಬ ಮಾಡುತ್ತಿರುವ ಸಚಿವ ಖಮರುಲ್ ಇಸ್ಲಾಂ ಅವರನ್ನು ರಾಜ್ಯಪಾಲರು ತರಾಟೆಗೆ ತೆಗೆದುಕೊಂಡಿದ್ದರು. ನಿಮ್ಮ ಸರ್ಕಾರಕ್ಕಿಂತ ಯಡಿಯೂರಪ್ಪ ಸರ್ಕಾರವೇ ವಾಸಿ ಎಂದಿದ್ದರು. ಎರಡು ದಿನಗಳ ಹಿಂದೆ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಸಚಿವರೇ ಗಮನಹರಿಸುತ್ತಿಲ್ಲ ಎಂದು ಮತ್ತೊಮ್ಮೆ ಖಮರುಲ್ ಇಸ್ಲಾಂ ಅವರ ಬಗ್ಗೆ ರಾಜ್ಯಪಾಲರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ವಿವಿ ಕಾಯ್ದೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.