ನಾಡು ಬೇಡವಾಯ್ತು, ಜೀವ ಕಳೆದ್ಹೋಯ್ತು!
ಕ.ಪ್ರ. ವಾರ್ತೆ, ಮೈಸೂರು, ನ. 24-
ಅನಾದಿ ಕಾಲದಿಂದಲೂ ಕಾಡಿನಲ್ಲಿ ಬದುಕು ಕಂಡುಕೊಂಡಿರುವ ಗಿರಿಜನರನ್ನು ಈಗ ಬಲವಂತವಾಗಿ ಒಕ್ಕಲೆಬ್ಬಿಸುತ್ತಿಲ್ಲ. ಈ ಹಿಂದೆ ಆಸೆ, ಆಮಿಷವೊಡ್ಡಿ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿರುವವರ ಬದುಕು ಮೂರಾಬಟ್ಟೆಯಾಗಿದೆ. ಸರ್ಕಾರ ಮನೆ ಹಾಗೂ ಜಮೀನು ಕೊಟ್ಟಿದೆ. ಆದರೆ ಅವರ ಹಕ್ಕುಗಳನ್ನು ಕಸಿದುಕೊಂಡಿದೆ. ಎಲ್ಲ ಹಾಡಿಗಳು ಪೂರ್ಣವಾಗಿ ಸ್ಥಳಾಂತರಗೊಂಡಿಲ್ಲ. ಇದರ ದುಷ್ಪರಿಣಾಮ ಆದಿವಾಸಿಗಳ ಬದುಕಿನ ಮೇಲಾಗುತ್ತಿದೆ.
ಹೆಗ್ಗಡದೇವನಕೋಟೆ ತಾಲೂಕು ಸೊಳ್ಳೇಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಸ್ತಮಾ, ಕ್ಷಯ, ಮದ್ಯವ್ಯಸನ, ಕೂಲಿ ಸಿಗದಿರುವುದು, ಮಾನಸಿಕ ತೋಳಲಾಟ ಮತ್ತಿತರ ಕಾರಣಗಳಿಂದ 15 ಮಂದಿ ಸಾವಿಗೀಡಾಗಿರುವುದು ಇದಕ್ಕೊಂದು ನಿದರ್ಶನ.
ಕಾಕನಕೋಟೆ ಅರಣ್ಯ ಪ್ರದೇಶ ವ್ಯಾಪ್ತಿಯ ಬಳ್ಳೆ ಹಾಡಿ, ಮಾಳದ ಹಾಡಿ, ಕೆರೆ ಹಾಡಿ, ನಾಗರಹೊಳೆ, ಗೋಣಿಗದ್ದೆ, ದೊಮ್ಮನಕಟ್ಟೆ ಮೊದಲಾದ ಕಡೆಗಳಿಂದ ಆದಿವಾಸಿಗಳನ್ನು ಸೊಳ್ಳೇಪುರ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅವರಿಗೆ ಅಲ್ಲಿ ಶಾಲೆ, ಅಂಗನವಾಡಿ ಕೇಂದ್ರ, ಆಸ್ಪತ್ರೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಇರಲು ಮನೆಗಳನ್ನು ಕಟ್ಟಿಸಿಕೊಡಲಾಗಿದೆ. ಜಮೀನು ಕೂಡ ನೀಡಲಾಗಿದೆ.
ಆದಿವಾಸಿಗಳು ತಲೆತಲಾಂತರದಿಂದಲೂ ಕಾಡಿನ ನಡುವೆಯೇ ವಾಸಿಸುತ್ತಿದ್ದವರು. ಗೆಡ್ಡೆ, ಗೆಣಸು ತಿಂದು ಬದುಕಿದವರು. ವ್ಯವಸಾಯ ಮಾಡಿ ಗೊತ್ತಿಲ್ಲ. ಈಗ ಪುನರ್ವಸತಿ ಕೇಂದ್ರದ ಬಳಿ ನೀಡಿರುವ ಜಮೀನಿನಲ್ಲಿ ವ್ಯವಸಾಯ ಮಾಡಲು ಹೋದರೆ ಕೈಗೆ ಹತ್ತುತ್ತಿಲ್ಲ. ಅಕ್ಕಪಕ್ಕದವರು ಸದಾ ಕೂಲಿಗೆ ಕರೆಯುವುದಿಲ್ಲ. ಹೀಗಾಗಿ ಜೀವನ ನಿರ್ವಹಣೆ ಕಷ್ಟವಾಗಿ, ಕೇರಳ ಹಾಗೂ ಕೊಡಗಿನ ಕಾಫಿ ತೋಟಗಳಿಗೆ ಕೂಲಿಗೆ ಹೋಗಿ ಒಂದಷ್ಟು ಸಂಪಾದನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ಆದರೆ ಅವರಿಗೆ ಇದಕ್ಕಿಂತ ಹೆಚ್ಚಾಗಿ ನಾಡಿನ ಜೀವನಕ್ಕೆ ಹೊಂದಿಕೊಳ್ಳಲು ಆಗುತ್ತಿರುವ ತೊಂದರೆ. ಏಕೆಂದರೆ ಇಡೀ ಹಾಡಿಗಳು ಪೂರ್ಣವಾಗಿ ಸ್ಥಳಾಂತರಗೊಂಡಿಲ್ಲ. ಆದಿವಾಸಿಗಳು ಹಾಡಿಯ ಯಜಮಾನ ಇಲ್ಲದೇ ಯಾವುದೇ ಪೂಜೆ, ಪುನಸ್ಕಾರ, ಆಚರಣೆ ಮಾಡುವುದಿಲ್ಲ. ಹೀಗಾಗಿ ಅವರು ಹಿಂದಿದ್ದ ಹಾಡಿಗಳು ಹಾಗೂ ಪುನರ್ವಸತಿ ಕೇಂದ್ರದ ನಡುವೆ ಅಲೆಯುತ್ತಾ ತ್ರಿಶಂಕು ಸ್ಥಿತಿಗೆ ದೂಡಲ್ಪಟ್ಟಿದ್ದಾರೆ. ಕೆಲವೆಡೆ ಆದಿವಾಸಿಗಳು ಮೃತಪಟ್ಟರೆ ಶವಸಂಸ್ಕಾರಕ್ಕೂ ಜಾಗವಿಲ್ಲದೇ ಪರಿಪಾಟಲು ಪಡುತ್ತಿದ್ದಾರೆ. ಸಕಾಲದಲ್ಲಿ ಆರೋಗ್ಯ ಸೌಲಭ್ಯ ಸಿಗದೇ ಪರದಾಡುತ್ತಿದ್ದಾರೆ. ಹುಣಸೂರು ತಾಲೂಕಿನಲ್ಲಿ ಶವಸಂಸ್ಕಾರಕ್ಕೂ ಜಾಗ ಸಿಗದೇ ಪರದಾಡಿದ್ದು, ನಾಗಾಪುರ ಪುನರ್ವಸತಿ ಕೇಂದ್ರದ ಬಾಣಂತಿ ಹಾಗೂ ಮಗು ಸಾವಿನ ಪ್ರಕರಣ ಇದಕ್ಕೆ ನಿದರ್ಶನ.
ಸಾವಿಗೀಡಾದವರು
-ಕರಿಯನ ಪತ್ನಿ ಜಯಮ್ಮ (45)
-ಜೆ.ಟಿ. ಬಸವನ ಪತ್ನಿ ಕಮಲಮ್ಮ (45)
-ರಾಮನ ಪತ್ನಿ ಭೋಜಮ್ಮ (40)
-ಗೋವಿಂದಪ್ಪ (65)
-ಕೂಸನ ಪತ್ನಿ ಪುಟ್ಟಿ (60)
-ರಾಮನ ಪುತ್ರ ರಾಜ (45)
-ರಾಮನ ಪುತ್ರ ಕರಿಯ (50)
-ಕಾಳಯ್ಯನ ಪುತ್ರ ಬಸವ (40)
-ಶಿವಣ್ಣನ ಪತ್ನಿ ತಾಯಮ್ಮ (35)
-ಕಾಳಯ್ಯನ ಪುತ್ರ ಕರಿಯ (50)
-ಚಲುವನ ಪುತ್ರ ಚಲುವ (55)
-ಮರಿ ಪತ್ನಿ ನಾಗಿ (30)
-ಮಾದನ ಪುತ್ರ ಬೊಮ್ಮ (45)
-ಚಿಕ್ಕನ ಪತ್ನಿ ಬೊಮ್ಮಮ್ಮ (80)
-ಕೂಸನ ಪುತ್ರಿ ಅನಿತಾ (12)
ನಾವು ಬ್ರಹ್ಮಗಿರಿ, ಎನ್. ಬೇಗೂರು ಮತ್ತಿತರ ಕಡೆಯಿಂದ ಸ್ಥಳಾಂತರಗೊಂಡವರು. ಯರವರು, ಸೋಲಿಗರು, ಜೇನುಕುರುಬರು ಇದ್ದಾರೆ. ಸರ್ಕಾರ ಮನೆ, ಜಮೀನು ಕೊಟ್ಟಿದೆ. ಆದರೆ ನಮಗೆ ಸಾಮೂಹಿಕ ಅರಣ್ಯ ಹಕ್ಕು ಹಾಗೂ ವೈಯಕ್ತಿಕ ಅರಣ್ಯ ಹಕ್ಕುಗಳನ್ನು ನೀಡಿಲ್ಲ. ಇದರಿಂದ ಯಾರಾದರೂ ಸತ್ತರೆ ಹೂಳುವುದಕ್ಕೆ ತೊಂದರೆಯಾಗುತ್ತಿದೆ. ಕೆಲವೊಮ್ಮೆ ಕೂಲಿಯೂ ಸಿಗುವುದಿಲ್ಲ. ಸೌದೆಗೆ ತೊಂದರೆಯಾಗುತ್ತಿದೆ.
-ಬಸವರಾಜು, ಬಸವಗಿರಿ ಎ ಹಾಡಿ
ಆದಿವಾಸಿಗಳಿಗೆ ಸೌಲಭ್ಯಗಳಿಗಿಂತ ತಾವು ನಂಬಿರುವ ಸಂಪ್ರದಾಯದ ಆಚರಣೆ ಮುಖ್ಯ. ಅದಕ್ಕೆ ಅವಕಾಶ ಸಿಗದಿದ್ದರಿಂದ ತೊಳಲಾಟದಲ್ಲಿಯೇ ಕೆಲವರು ಮದ್ಯವ್ಯಸನಿಗಳಾಗಿ ಮೃತಪಟ್ಟಿದ್ದಾರೆ. ಸರ್ಕಾರ ಆದಿವಾಸಿಗಳಿಗೆ ಸೌಲಭ್ಯ ಕಲ್ಪಿಸುವುದರ ಜತೆಗೆ ಅರಣ್ಯ ಹಕ್ಕು ಕಾಯ್ದೆ 2006ರ ಅನ್ವಯ ಸಾಮೂಹಿಕ ಅರಣ್ಯ ಹಕ್ಕು ಹಾಗೂ ವೈಯಕ್ತಿಕ ಅರಣ್ಯ ಹಕ್ಕುಗಳನ್ನು ನೀಡಬೇಕು.
-ನಂಜುಂಡಯ್ಯ, ಮುಖ್ಯಸ್ಥರು, ನಿಸರ್ಗ ಫೌಂಡೇಷನ್, ಎಚ್.ಡಿ.ಕೋಟೆ
ಸರಿಯಾಗಿ ಕೂಲಿ ಸಿಕ್ತಾ ಇಲ್ಲ. ಜಮೀನಿನಲ್ಲಿ ವ್ಯವಸಾಯ ಮಾಡಿದ್ರೆ ಸುತ್ತಮುತ್ತಲಿನ ಹಳ್ಳಿಗಳ ದನಗಳ ಕಾಟ. ನಮ್ಮ ಹಾಡಿಲಿ ಒಬ್ಬರ ಹಿಂದೆ ಒಬ್ಬರಂತೆ ಹದಿನೈದ್ ಜನ ಸತ್ತಿರೋದು ನಿಜ. ವಯಸ್ಸಾದೋರು ಒಬ್ರೋ, ಇಬ್ರೋ ಅಷ್ಟೆಯಾ. ಮಿಕ್ಕೋರು ಚೆನ್ನಾಗಿದ್ರು. ಒಂದು ದಿನ ಸತ್ತೋರನ್ನು ನೋಡಕ್ ಬಂದ ಇನ್ನೊಬ್ಬರು ಸತ್ತೋದ್ರು. ವಾರಕ್ಕೊಂದು ದಿನ ಆರೋಗ್ಯ ವ್ಯಾನ್ ಬತ್ತದೆ. ಆದ್ರೆ ಹಾಡಿ ಜನ ಕೂಲಿಗೆ ಹೋಗಿರ್ತಾರೆ.
-ಬಸವ, ಯಜಮಾನ, ಸೊಳ್ಳೇಪುರ ಸಿ ಹಾಡಿ
ನಮ್ಮ ಗಮನಕ್ಕೆ ಬಂದಿರುವುದು ಒಂದು ಪ್ರಕರಣ ಮಾತ್ರ. ವಾಸು ಎಂಬವರಿಗೆ ಕ್ಷಯ ರೋಗ ತಗುಲಿತ್ತು. ಉಳಿದ ಪ್ರಕರಣಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.
-ಡಾ.ಪ್ರಜ್ವಲ್ ಕುಮಾರ್, ಪ್ರಭಾರ ತಾಲೂಕು ವೈದ್ಯಾಧಿಕಾರಿ, ಎಚ್.ಡಿ. ಕೋಟೆ
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

