ಪ್ರಧಾನ ಸುದ್ದಿ

'ಅನ್ನಭಾಗ್ಯ' ಮಾರಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಕೇಸ್

Published On :

ನವದೆಹಲಿ: ಅನ್ನಭಾಗ್ಯ ಯೋಜನೆಯಡಿ ಪಡೆದ ಪಡಿತರವನ್ನು ಮಾರಾಟ ಮಾಡಿಕೊಳ್ಳುವವರ ವಿರುದ್ಧ ಪಡಿತರ ಚೀಟಿ ಮುಟ್ಟುಗೋಲು ಹಾಕಿಕೊಳ್ಳುವುದರ ಜತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕಾನೂನು ರೂಪಿಸುವ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೇಂದ್ರ ಆಹಾರ ಇಲಾಖೆ ಆಹಾರ ಭದ್ರತಾ ಕಾಯ್ದೆ ಜಾರಿ ಕುರಿತಂತೆ ಆಯೋಜಿಸಿದ್ದ 'ರಾಜ್ಯ ಆಹಾರ ಸಚಿವರ ಸಭೆ' ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಪಡೆದ ಪಡಿತರ ದುರುಪಯೋಗ ತಡೆಯಲು ನಕಲಿ ಕಾರ್ಡ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ನಕಲಿ ಕಾರ್ಡ್ ಪಡೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಬಹುತೇಕ ಜಾರಿ ಮಾಡಿದ್ದೇವೆ. ಆಹಾರ ಭದ್ರತಾ ಕಾಯ್ದೆ ನವೆಂಬರ್ ಮೊದಲ ವಾರದಿಂದ ಔಪಚಾರಿಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.
ಆಹಾರ ಭದ್ರತಾ ಕಾಯ್ದೆ ಜಾರಿ ಆದ ನಂತರ ಅಕ್ಕಿ ಕೊರತೆ ಸಮಸ್ಯೆ ನೀಗಲಿದೆ. ರಾಜ್ಯದ ಮೇಲಿನ ಆರ್ಥಿಕ ಹೊರೆಯೂ ತಗ್ಗಲಿದೆ. ನಿರ್ವಹಣೆ ಜವಾಬ್ದಾರಿ ಹೆಚ್ಚಲಿದೆ. ರಾಜ್ಯದಲ್ಲಿ ಗೋದಾಮುಗಳ ಕೊರತೆ ಇದೆ. ಕೇಂದ್ರ ಸರ್ಕಾರದ ಗಮನಕ್ಕೆ ಈ ವಿಷಯ ತರಲಾಗಿದೆ. ರಾಜ್ಯ ಸರ್ಕಾರವೂ ಆದ್ಯತೆ ಮೇಲೆ ಗೋದಾಮುಗಳನ್ನು ನಿರ್ಮಿಸುತ್ತಿದೆ ಎಂದರು.
ಆಯಾ ಪ್ರದೇಶದ ಆಹಾರ ಪದ್ಧತಿಗನುಗುಣವಾಗಿ ಆಹಾರ ಧಾನ್ಯ ವಿತರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಜೋಳ, ದಕ್ಷಿಣ ಕರ್ನಾಟಕ ಭಾಗದಲ್ಲಿ ರಾಗಿಯನ್ನು ಶೀಘ್ರ ವಿತರಿಸಲಾಗುತ್ತದೆ. ಮೂರು ಜನರ ಕುಟುಂಬಕ್ಕೆ ತಲಾ 10 ಕೆ.ಜಿ.ಯಂತೆ 30 ಕೆ.ಜಿ. ಆಹಾರ ಧಾನ್ಯ ನೀಡಲಾಗುತ್ತದೆ. ಮೂರಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ 30 ಕೆ.ಜಿ. ನಂತರ ತಲಾ 5 ಕೆ.ಜಿ. ಆಹಾರ ಧಾನ್ಯ ನೀಡಲು ನಿರ್ಧರಿಸಲಾಗಿದೆ ಎಂದರು.

ವೆಚ್ಚದ ಹೊರೆ ಭರಿಸಲು ಕ್ರಮ: ಕೆ.ವಿ. ಥಾಮಸ್
ಆಹಾರ ಭದ್ರತಾ ಕಾಯ್ದೆ ಅನುಷ್ಠಾನದಿಂದಾಗಿ ರಾಜ್ಯಗಳ ಮೇಲಾಗುವ ಆರ್ಥಿಕ ಹೊರೆಯನ್ನು ಭರಿಸುವ ಕುರಿತು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ಸಮಿತಿ ರಚಿಸಲಿದೆ. ಸಮಿತಿ ವರದಿ ಆಧರಿಸಿ ವೆಚ್ಚವನ್ನು ಭರಿಸುವ ಕುರಿತು ನಿರ್ಧಾರ ಕೈಗೊಳ್ಳಲಿದೆ. ದೆಹಲಿಯಲ್ಲಿ ಮಂಗಳವಾರ ಕೇಂದ್ರ ಆಹಾರ ಇಲಾಖೆ ಆಯೋಜಿಸಿದ್ದ ಎಲ್ಲ ರಾಜ್ಯಗಳ ಆಹಾರ ಸಚಿವರು ಮತ್ತು ಇಲಾಖೆ ಕಾರ್ಯದರ್ಶಿಗಳ ಸಭೆಯಲ್ಲಿ ಕೇಂದ್ರ ಆಹಾರ ಸಚಿವ ಕೆ.ವಿ. ಥಾಮಸ್ ಈ ವಿಷಯ ತಿಳಿಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ಆಹಾರ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಬಹುತೇಕ ಸಚಿವರು, ಕಾಯ್ದೆ ಜಾರಿಯಿಂದ ರಾಜ್ಯಗಳ ಮೇಲಾಗುವ ಆರ್ಥಿಕ ಹೊರೆ ಬಗ್ಗೆ ಪ್ರಸ್ತಾಪಿಸಿದರು. ಪಡಿತರ ನಿರ್ವಹಣೆ, ಕಮಿಷನ್ ಹಾಗೂ ಸಾರಿಗೆ ವೆಚ್ಚ ಸೇರಿದಂತೆ ಹೆಚ್ಚುವರಿ ವೆಚ್ಚವನ್ನು ಕೇಂದ್ರವೇ ಭರಿಸಬೇಕು ಎಂಬ ಬೇಡಿಕೆಯನ್ನು ಇಟ್ಟರು. ಈ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸಚಿವರು ಸಮಿತಿ ರಚಿಸಿ, ವರದಿ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.