ದಸರಾ ಉದ್ಘಾಟನೆಗೆ ಸಿಎಂ ಹಾಜರು
ಕ.ಪ್ರ.ವಾರ್ತೆ, ಮೈಸೂರು, ಅ. 2-
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹಾಕಿದ ಸಂಪ್ರದಾಯ ಪಾಲನೆಗೆ ಮುಂದಾಗಿದ್ದಾರೆ.
ಸಾಮಾನ್ಯವಾಗಿ ವಿಜಯದಶಮಿಯಂದು ನಡೆಯುವ ಜಂಬೂಸವಾರಿಯಲ್ಲಿ ಮುಖ್ಯಮಂತ್ರಿ ಭಾಗವಹಿಸುತ್ತಿದ್ದರು. ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ನಂತರ ಅರಮನೆಯ ಒಳಾವರಣದಲ್ಲಿ ನಿರ್ಮಿಸುವ ವಿಶೇಷ ವೇದಿಕೆಯಲ್ಲಿ ನಿಂತು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡುತ್ತಿದ್ದರು. ರಾಜ್ಯಪಾಲರು ಸಂಜೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿನಲ್ಲಿ ಮುಖ್ಯ ಅತಿಥಿಯಾಗಿ, ಗೌರವ ವಂದನೆ ಸ್ವೀಕರಿಸುತ್ತಿದ್ದರು.
ಚುನಾಯಿತ ಸರ್ಕಾರಗಳು ಇಲ್ಲದಿದ್ದಾಗ ರಾಷ್ಟ್ರಪತಿ ಆಡಳಿತದಲ್ಲಿ ರಾಜ್ಯಾಧಿಕಾರ ನಡೆಸುವ ರಾಜ್ಯಪಾಲರೇ ಜಂಬೂ ಸವಾರಿಗೆ ಚಾಲನೆ ನೀಡುವುದು ಹಾಗೂ ಪಂಜಿನ ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸುತ್ತಾರೆ. 1989ರಲ್ಲಿ ಜನತಾಪಕ್ಷದ ಆಂತರಿಕ ಕಚ್ಚಾಟದಿಂದ ಎಸ್.ಆರ್. ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಪತನವಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ಆಗ ರಾಜ್ಯಪಾಲರಾಗಿದ್ದ ಪಿ. ವೆಂಕಟಸುಬ್ಬಯ್ಯ ಅವರು ಈ ಎರಡೂ ಕಾರ್ಯಗಳನ್ನು ನೆರವೇರಿಸಿದ್ದರು. ಅದೇ ರೀತಿ 2007ರಲ್ಲಿಯೂ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವಿದ್ದಾಗ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್ ಈ ಹೊಣೆಗಾರಿರೆಹೊತ್ತಿದ್ದರು.
ಮೊದಲೆಲ್ಲಾ ದಸರಾ ಮಹೋತ್ಸವವನ್ನು ಚಾಮುಂಡಿಬೆಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಉದ್ಘಾಟಿಸುತ್ತಿದ್ದರು. ನಂತರ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು, ವಿಚಾರವಾದಿಗಳಿಂದ ಉದ್ಘಾಟಿಸುವ ಪರಿಪಾಠ ಬೆಳೆಯಿತು. ಕಳೆದ ಆರು ವರ್ಷಗಳಿಂದ ಡಾ. ಬಾಲಗಂಗಾಧರನಾಥ ಸ್ವಾಮೀಜಿ, ಡಾ. ಶಿವಕುಮಾರ ಸ್ವಾಮೀಜಿ, ಶ್ರೀ ಶ್ರೀ ರವಿಶಂಕರ್ ಗುರೂಜಿ, ಡಾ. ವೀರೇಂದ್ರ ಹೆಗ್ಗಡೆ, ಶ್ರೀ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಪಾದರು, ಶ್ರೀ ಸಿದ್ದೇಶ್ವರ ಸ್ವಾಮೀಜಿ- ಹೀಗೆ ಧಾರ್ಮಿಕ ಕ್ಷೇತ್ರದ ವ್ಯಕ್ತಿಗಳೇ ಉದ್ಘಾಟಿಸಿದರು. ಈ ಬಾರಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ದಸರೆಗೆ ಚಾಲನೆ ನೀಡಲಿದ್ದಾರೆ.
ಬಿಎಸ್ ವೈ ಹಾಕಿದ ಸಂಪ್ರದಾಯ: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ದಸರೆಯ ಉದ್ಘಾಟನೆಯಲ್ಲಿ ಭಾಗವಹಿಸುವ ಮೂಲಕ ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದರು. ಮೆರವಣಿಗೆಯಲ್ಲೂ ಭಾಗವಹಿಸಿದ್ದರು. ಅವರಿಗೆ ಆಪ್ತರಾದ ಶೋಭಾ ಕರಂದ್ಲಾಜೆ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರಿಂದ ಭಾಗವಹಿಸಿರಬಹುದು ಎಂದು ಹೇಳಲಾಗಿತ್ತು. ಆದರೆ ನಂತರವೂ ಎಸ್.ಎ. ರಾಮದಾಸ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೂ ಆರಂಭಿಸಿದ ಸಂಪ್ರದಾಯವನ್ನು ಮುಂದುವರಿಸಿದ್ದರು. ಅವರ ಉತ್ತರಾಧಿಕಾರಿಯಾಗಿದ್ದ ಡಿ.ವಿ. ಸದಾನಂದಗೌಡರು, ನಂತರ ಸಿಎಂ ಆದ ಜಗದೀಶ್ ಶೆಟ್ಟರ್ ಅವರೂ ದಸರೆ ಉದ್ಘಾಟನೆಯಲ್ಲೂ ಭಾಗವಹಿಸಿದ್ದರು. ಈಗ ಹಾಲಿ ಸಿಎಂ ಸಿದ್ದರಾಮಯ್ಯ ಅವರೂ ಭಾಗವಹಿಸುತ್ತಿದ್ದಾರೆ.
ಸಿಎಂ ಭಾಗವಹಿಸುವ ಕಾರ್ಯಕ್ರಮಗಳು: ಅ.5 ರಂದು ಬೆಳಗ್ಗೆ 10.44ಕ್ಕೆ ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿದೇವಿಯ ಅಗ್ರಪೂಜೆಯೊಂದಿಗೆ ದಸರೆಗೆ ಚಾಲನೆ ಸಿಗಲಿದ್ದು, ಸಾಹಿತಿ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸುವರು. ಸಿಎಂ ಸಿದ್ದರಾಮಯ್ಯ, ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ, ಪ್ರಕಾಶ್ ಹುಕ್ಕೇರಿ ಭಾಗವಹಿಸುವರು. ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸುವರು.
ಅದೇ ದಿನ ಸಂಜೆ 4-30ಕ್ಕೆ ದಸರಾ ಕ್ರೀಡಾಕೂಟ ಉದ್ಘಾಟನೆ, ಸಂಜೆ 6.30ಕ್ಕೆ ದಸರಾ ದೀಪಾಲಂಕಾರ ಉದ್ಘಾಟನೆಯಲ್ಲೂ ಭಾಗವಹಿಸುವರು.
ಇದೇ ದಿನ ಸಂಜೆ 6ಕ್ಕೆ ಅರಮನೆ ಆವರಣದಲ್ಲಿ ದಸರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಿರಿಯ ರಂಗಕಲಾವಿದ ಏಣಗಿ ಬಾಳಪ್ಪ ಚಾಲನೆ ನೀಡಲಿದ್ದು, ಸಿಎಂ ಸಿದ್ದರಾಮಯ್ಯ, ಮೇಲ್ಮನೆ ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಿಧಾನಸಭೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಉಮಾಶ್ರೀ, ಡಾ.ಎಚ್.ಸಿ. ಮಹದೇವಪ್ಪ ಭಾಗವಹಿಸುವರು. ಶಾಸಕ ಎಂ.ಕೆ. ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅ.7ರಂದು ಸಂಜೆ 7ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಯುವದಸರೆಗೆ ಸಿದ್ದರಾಮಯ್ಯ ಚಾಲನೆ ನೀಡುವರು.
ಅ.14 ರಂದು ಮಧ್ಯಾಹ್ನ 1.12ಕ್ಕೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಸಲ್ಲಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಮೆರವಣಿಗೆಗೆ ಚಾಲನೆ ನೀಡುವರು. ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ, ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಭಾಗವಹಿಸುವರು. ಅದೇ ದಿನ ಸಂಜೆ 7ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಕವಾಯತು ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸುವರು. ಸಿಎಂ ಸಿದ್ದರಾಮಯ್ಯ, ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ ಭಾಗವಹಿಸುವರು.
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

