ದಸರಾ ಆರೂವರೆ ಕೋಟಿ ಕನ್ನಡಿಗರ ಹಬ್ಬ
ಮೈಸೂರು: ದಸರೆ ಎಲ್ಲ ಜಾತಿ, ಧರ್ಮದವರಿಗೆ ಸೇರಿದ ಜಾತ್ಯತೀತ ಹಬ್ಬ. ಆರೂವರೆ ಕೋಟಿ ಕನ್ನಡಿಗರ ಹಬ್ಬ. ಕೇವಲ ಮೈಸೂರಿಗೆ ಸೀಮಿತವಾದುದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮುಂಡಿಬೆಟ್ಟದಲ್ಲಿ ಶನಿವಾರ ನಡೆದ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿಜಯನಗರದ ಅರಸರು ದಸರೆ ಆಚರಿಸುತ್ತಿದ್ದರು. ವಿಜಯನಗರದ ಪತನಾನಂತರ ಮೈಸೂರು ಅರಸರಾದ ರಾಜ ಒಡೆಯರ್ ಅವರು 1610 ರಲ್ಲಿ ಶ್ರೀರಂಗಪಟ್ಟಣದಲ್ಲಿ ಆರಂಭಿಸಿ, ನಂತರ ಮೈಸೂರಿಗೆ ಸ್ಥಳಾಂತರಿಸಿದರು. ಮೈಸೂರು ಅರಸು ಜನಪರ ಮತ್ತು ಪ್ರಗತಿಪರ ಚಿಂತನೆಯನ್ನು ಹೊಂದಿದ್ದರು ಎಂದರು. 20ನೇ ಶತಮಾನದ ಆದಿ ಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿಗೆ ಸದಾ ನೆನಪಿನಲ್ಲಿಡುವ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್, ಎಂ. ವಿಶ್ವೇಶ್ವರಯ್ಯ ಅವರ ನೆರವಿನಿಂದ ಮಾದರಿ ರಾಜ್ಯ ಮಾಡಿದ್ದಾರೆ ಎಂದರು.
ಈ ಬಾರಿ ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂದ ಕಾವೇರಿ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ನಮಗೂ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಈಗ ಯಾವುದೇ ಜಗಳ ಇಲ್ಲ. ಈ ರೀತಿ ಜಗಳ ತಪ್ಪಿಸಿದ ಚಾಮುಂಡೇಶ್ವರಿಗೆ ಸಹಸ್ರ ನಮಸ್ಕಾರ. ಇದೇ ರೀತಿ ಮಳೆಯಾದರೆ ಸಮಸ್ಯೆ ಇರಲ್ಲ. ಹೀಗಾಗಿ ಮಳೆಯಾಗಲಿ ಎಂದು ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು. ಹಿಂದೆ ಕೆಲವು ವರ್ಷ ಮಳೆಯಾಗಿಲ್ಲ ಎಂದು ದಸರೆ ನಿಲ್ಲಿಸಲಾಗಿತ್ತು. ಆದರೆ ಈ ಬಾರಿ ಮಳೆ ಉತ್ತಮವಾಗಿ ಆಗಿದೆ. ಕಾವೇರಿ ಕಣಿವೆ ಮಾತ್ರವಲ್ಲದೇ ಕೃಷ್ಣ ಕಣಿವೆಯ ಜಲಾಶಯಗಳು ತುಂಬಿವೆ. ಮಳೆಯಾಗದಿದ್ದ ಪ್ರದೇಶಗಳಲ್ಲೂ ಸೆಪ್ಟೆಂಬರ್ನಲ್ಲಿ ಮಳೆ ಬಿದ್ದಿದೆ. ಇದೇ ರೀತಿ ಉತ್ತಮವಾಗಿ ಮಳೆ- ಬೆಳೆಯಾದಲ್ಲಿ ದೇಶದಲ್ಲಿ ಕರ್ನಾಟಕವನ್ನು ಮುಂಚೂಣಿ ರಾಜ್ಯದ ಸಾಲಿಗೆ ತಂದು ನಿಲ್ಲಿಸಬಹುದು ಎಂದರು.
ಐದು ಜಿಲ್ಲೆಗಳ ಪ್ರವಾಸಿ ಜಾಲತಾಣ: ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳ ಪ್ರವಾಸಿ ತಾಣಗಳ ಜಾಲ ನಿರ್ಮಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಸೂಚಿಸಲಾಗಿದೆ. ಈ ಸಂಬಂಧ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ. ಮನುಷ್ಯ- ಮನುಷ್ಯರ ನಡುವೆ ದ್ವೇಷ- ಅಸೂಯೆ ಇರಬಾರದು. ಎಲ್ಲಾ ಧರ್ಮಗಳ ನಡುವೆ ಸೌಹಾರ್ದಯುತ ವಾತಾವರಣ, ಸಾಮರಸ್ಯ ಇರಬೇಕು. ಆದರೆ ಕೆಲವು ಕಿಡಿಗೇಡಿಗಳು ಇದನ್ನು ಹಾಳು ಮಾಡಲು ಪ್ರಯತ್ನಿಸುತ್ತಿವೆ. ಅವರಿಗೆ ಒಳ್ಳೆಯ ಬುದ್ದಿ ಕೊಡಲಿ. ಎಲ್ಲರೂ ಅಣ್ಣ- ತಮ್ಮಂದಿರಂತೆ ಬಾಳಲಿ ಎಂದರು. ಹಸಿವು ಮುಕ್ತ ರಾಜ್ಯ ಆಗಬೇಕೆಂಬುದು ನನ್ನ ಅಶಯ. ದೇಶದಲ್ಲಿ ಒಂದು ಹೊತ್ತಿನ ಊಟಕ್ಕೂ ಪರಿತಪಿಸುವ ಜನರಿದ್ದಾರೆ. ದೇಶವಾಗಲಿ ಅಥವಾ ರಾಜ್ಯವಾಗಲಿ ಹಸಿವು ಮುಕ್ತವಾಗಬೇಕೆಂಬುದು ನನ್ನ ಆಶಯ. ಅದಕ್ಕಾಗಿ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅರ್ಧ ಗಂಟೆಯಲ್ಲಿ ಅನ್ನಭಾಗ್ಯ ಯೋಜನೆ ಘೋಷಿಸಿದೆ. ಕೆಜಿಗೆ 1 ರಂತೆ 30 ಕೆಜಿ ಅಕ್ಕಿಯನ್ನು ಬಡ ಕುಟುಂಬಗಳಿಗೆ ವಿತರಿಸುವ ಯೋಜನೆ ಜಾರಿಗೊಳಿಸಲಾಯಿತು. ಇದರಿಂದ 4200 ಕೋಟಿ ವೆಚ್ಚವಾಗುತ್ತಿದೆ ಎಂದರು.
ಭದ್ರತೆಯ ನೆಪದಲ್ಲಿ ಅಪಮಾನ: ಹೊರ ನಡೆದ ಶಾಸಕರು
ಮೈಸೂರು: ಭದ್ರತೆಯ ನೆಪದಲ್ಲಿ ಅವಮಾನ ಮಾಡಲಾಗಿದೆ ಎಂದು ಮೈಸೂರಿನ ಮೂವರು ಶಾಸಕರು ದಸರಾ ಉದ್ಘಾಟನಾ ಕಾರ್ಯಕ್ರಮದಿಂದ ಹೊರ ನಡೆದ ಘಟನೆ ನಡೆಯಿತು. ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್, ಎಚ್.ಡಿ. ಕೋಟೆ ಶಾಸಕ ಎಸ್. ಚಿಕ್ಕಮಾದು, ಚಾಮರಾಜ ಕ್ಷೇತ್ರದ ಶಾಸಕ ವಾಸು ಅವರು ಕಾರ್ಯಕ್ರಮಕ್ಕೆ ಆಗಮಿಸಿದಾಗ, ವೇದಿಕೆಯ ಬಲಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಪೊಲೀಸರು ತಪಾಸಣೆ ಮಾಡಿದರು. ಸಾ.ರಾ.ಮಹೇಶ್ ಅವರ ಪ್ಯಾಂಟ್ ಜೇಬನ್ನು ತಡಕಾಡಿದರು. ಇದರಿಂದ ಸಿಟ್ಟಿಗೆದ್ದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಕ್ಷಮೆ ಕೇಳಿದರೂ ತಣ್ಣಗಾಗದೇ ವೇದಿಕೆಯಿಂದ ಹೊರ ನಡೆದರು.
ಚಲನಚಿತ್ರೋತ್ಸವಕ್ಕೆ ತಾರಾ ಮೆರುಗು
ದಸರಾ ಚಲನಚಿತ್ರೋತ್ಸವಕ್ಕೆ ಮೈಸೂರಿನ ಕಲಾಮಂದಿರದಲ್ಲಿ (ಎಂ.ಪಿ. ಶಂಕರ್ ವೇದಿಕೆ) ಚಾಲನೆ ನೀಡಲಾಯಿತು. ವಸತಿ ಸಚಿವ ಹಾಗೂ ಹಿರಿಯ ನಟ ಡಾ.ಎಂ.ಎಚ್. ಅಂಬರೀಶ್, ಸಿಎಂ ಸಿದ್ದರಾಮಯ್ಯ ಜತೆಗೆ ನಟ ಉಪೇಂದ್ರ, ದರ್ಶನ್ ತೂಗುದೀಪ, ವಿನೋದ್ರಾಜ್ ಸೇರಿದಂತೆ ಇತರೇ ಕಲಾವಿದರು ಮೆರುಗು ತಂದಿದ್ದರು. ಇದೇ ವೇಳೆ ಚಿತ್ರರಂಗದ ಹಿರಿಯ ಕಲಾವಿದರಾದ ಕೆ.ಎಸ್. ಅಶ್ವತ್ಥ್, ಮೈಸೂರು ಲೋಕೇಶ್, ಎಂ.ಪಿ. ಶಂಕರ್, ರತ್ನಾಕರ್ ಕುಟುಂಬದವರಿಗೆ, ಗೌರಿಶಂಕರ್, ರೇಣುಕಾಪ್ರಸಾದ್, ಬಿ.ಆರ್. ವೆಂಕಚಾಚಲ, ಜಯರಾಮ್ ಅವರನ್ನು ದಸರಾ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿದ್ದ ಕಲಾವಿದರಾದ ಡಾ.ಬಿ. ಸರೋಜಾದೇವಿ, ಲೀಲಾವತಿ, ತಾರಾ, ಉಪೇಂದ್ರ, ಪ್ರಿಯಾಂಕ, ದರ್ಶನ್, ವಿನೋದ್ರಾಜ್, ಸಂಗೀತ ನಿರ್ದೇಶಕರಾದ ವಿ. ಹರಿಕೃಷ್ಣ, ಗುರುಕಿರಣ್ ಅವರನ್ನೂ ಸಹ ಸನ್ಮಾನಿಸಲಾಯಿತು.
14ರಂದು ಸಮಾರೋಪ
ಅಶ್ವಯಜ ಪ್ರಥಮ ದಿನದಂದು ಆರಂಭವಾಗುವ ನವರಾತ್ರಿ ಉತ್ಸವವು ವಿಜಯದಶಮಿಯಂದು ಆಕರ್ಷಕ ಜಂಬೂ ಸವಾರಿಯೊಂದಿಗೆ (ಅ.14) ಮುಕ್ತಾಯವಾಗುತ್ತದೆ. ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆಯ ಪ್ರತೀಕವಾಗಿ ಈ ನಾಡಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವಿಜಯನಗರ ರಾಜರು ಆರಂಭಿಸಿದ ಈ ದಸರೆಗೆ 403 ವರ್ಷಗಳ ಇತಿಹಾಸವಿದೆ. ವಿಜಯನಗರ ಅರಸರ ಪತನ ನಂತರ ಮೈಸೂರು ಯದುವಂಶದ ಅರಸರು 1610ರಿಂದ ಈ ಉತ್ಸವವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನು ನಾಡಹಬ್ಬವಾಗಿ ಪರಿವರ್ತಿಸಿ, ಸರ್ಕಾರದ ವತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಜಾಲಿ ರೈಡ್ ಮಾಡಿದ ದಾವಣಗೆರೆಯ ಗಂಗಮ್ಮ
ದಸರಾ ಅಂಗವಾಗಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಹಾರಾಜ ಜಾಲಿ ರೈಡ್ನಲ್ಲಿ ದಾವಣಗೆರೆಯ ಗಂಗಮ್ಮ ಭಾಗವಹಿಸಿ ಗಮನ ಸೆಳೆದರು. 13 ಮಕ್ಕಳು, 20 ಮೊಮ್ಮಕ್ಕಳು, ಮರಿ ಮಕ್ಕಳು ಸೇರಿ 50 ಮಂದಿ ಕುಟುಂಬದ ಹಿರಿ ತಲೆ ಗಂಗಮ್ಮ ಮಹಾರಾಜ ಲಘು ವಿಮಾನದಲ್ಲಿ ಮೊದಲು ಪ್ರಯಾಣ ಮಾಡಿದರು. ಕಳೆದ ವರ್ಷವೇ ಜಾಲಿ ರೈಡ್ ಮಾಡಬೇಕು ಎಂಬ ಆಸೆ ಕಡೆಗಳಿಗೆಯಲ್ಲಿ ತಪ್ಪಿ ಹೋಗಿತ್ತು. ಈಗ ಅವರ ಮೊಮ್ಮಗಳು ಮೈಸೂರಿನ ಜಯಶ್ರೀ ಅವರು ಮೊದಲು ಟಿಕೆಟ್ ಬುಕ್ ಮಾಡಿ ಈ ಬಾರಿ ಗಂಗಜ್ಜಿ ಆಸೆಯನ್ನು ಈಡೇರಿಸಿದರು. ಶನಿವಾರ ಮಧ್ಯಾಹ್ನ ಮೊಮ್ಮಕ್ಕಳ ಜತೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಗಂಗಮ್ಮ ಕಾರ್ಯಕ್ರಮದ ವೇಳೆ ಹಾಜರಿದ್ದು ದೀಪ ಬೆಳಗಿಸಿದರು.
ಉದ್ಘಾಟನೆಗೂ ಮೊದಲೇ ಕಂಬಾರರಿಗೆ ಸನ್ಮಾನ!
ಕಾರ್ಯಕ್ರಮ ಆಯೋಜಕರ ಅವಾಂತರದಿಂದ ಉದ್ಘಾಟನೆಗೂ ಮೊದಲೇ ಡಾ. ಚಂದ್ರಶೇಖರ ಕಂಬಾರರನ್ನು ಸನ್ಮಾನಿಸಲು ಹೋಗಿದ್ದು ಛಾಯಾಗ್ರಾಹಕರ ಪ್ರತಿಭಟನೆಗೆ ಕಾರಣವಾಯಿತು. ಸಾಮಾನ್ಯವಾಗಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ದಸರೆಗೆ ಚಾಲನೆ ನೀಡಿದ ಬಳಿಕ ವೇದಿಕೆಯ ಕಾರ್ಯಕ್ರಮ ಆರಂಭವಾಗುತ್ತದೆ. ಉದ್ಘಾಟಕರ ಭಾಷಣ ಮುಗಿದ ನಂತರ ಸನ್ಮಾನಿಸಲಾಗುತ್ತದೆ. ಆದರೆ ಶನಿವಾರ ಉದ್ಘಾಟನೆಗೂ ಮೊದಲೇ ವೇದಿಕೆಯ ಕಾರ್ಯಕ್ರಮ ಆರಂಭವಾಯಿತು. ಸ್ವಾಗತಿಸಲು ನಿಂತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್ಝುಳಕಿ ಕಂಬಾರರನ್ನು ಆಹ್ವಾನಿಸಿದ ಕೂಡಲೇ ಆಯೋಜಕರು ಸನ್ಮಾನಕ್ಕೆ ಮುಂದಾದರು. ಆಗ ವಿರೋಧ ವ್ಯಕ್ತವಾದಾಗ ನೂಕು ನುಗ್ಗಲು ಉಂಟಾಯಿತು. ಸಿಎಂ ಸಿದ್ದರಾಮಯ್ಯ ಬಂದು ಪರಿಸ್ಥಿತಿ ತಿಳಿಗೊಳಿಸಿದ ನಂತರ ವೇದಿಕೆಯಲ್ಲಿ ಸ್ವಾಗತ ಮುಂದುವರಿದು, ಗಣ್ಯರು ಮತ್ತೊಮ್ಮೆ ಕಂಬಾರರನ್ನು ಸನ್ಮಾನಿಸಿದರು.
ಮಾ. ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

