ಮರೆಯಾಯ್ತು ಗಣಿ; ಹಸಿರಾಯ್ತು ಗುಡ್ಡ!
ಬಳ್ಳಾರಿ: ಗಣಿಗಾರಿಕೆಯಿಂದ ಬೋಳು ಬೋಳಾಗಿದ್ದ ಬೆಟ್ಟ, ಗುಡ್ಡಗಳು ಇದೀಗ ಹಸಿರು ಹೊದ್ದು ನಿಂತಿವೆ!
ಇದು ಅಚ್ಚರಿಯಾದರೂ ಸತ್ಯ. ಪರಿಸರ ಪುನಶ್ಚೇತನ ಮಾಡಲೇಬೇಕೆಂಬ ಸುಪ್ರೀಂ ಕೋರ್ಟ್ ಕಟ್ಟಾಜ್ಞೆಯ ಫಲವಿದು. ಹಾಗಾಗಿ, ಬಳ್ಳಾರಿ ಜಿಲ್ಲೆಯ 'ಮಲೆನಾಡು' ಎಂಬ ಖ್ಯಾತಿ ಪಡೆದಿರುವ ಸಂಡೂರಿನ ಗುಡ್ಡಗಳು, ಅರಣ್ಯ ಪ್ರದೇಶಗಳಲ್ಲಿ ವನ್ಯ ಸಂಕುಲ ಹಾಗೂ ಸಸ್ಯಗಳು ಹೆಚ್ಚಿವೆ. ಸಂಡೂರಿನ ಮೈನ್ಸ್ ಗುಡ್ಡಗಳು ಸಸ್ಯರಾಶಿಯಿಂದ ಸಮೃದ್ಧಿಗೊಂಡಿದ್ದರೆ ಅತ್ತ ಗಣಿ ಧೂಳಿನಿಂದ ಸಂಪೂರ್ಣ ಕೆಂಪಾಗಿದ್ದ ಜಮೀನು ಈಗ ಸಸ್ಯರಾಶಿಯಿಂದ ನಳನಳಿಸುತ್ತಿದೆ. ಆದರೆ, ರಸ್ತೆಗಳು ಮಾತ್ರ ಸುಧಾರಿಸಿಲ್ಲ ಎಂಬುದು ಮಾತ್ರ ವಿಪರ್ಯಾಸ.
ಸಂಡೂರು ಎಂದಾಕ್ಷಣ ಕೇವಲ ಗಣಿ ಗುಡ್ಡಗಳು ನೆನಪಿಗೆ ಬರುತ್ತವೆ. ಬಳ್ಳಾರಿ ಜಿಲ್ಲೆಯ ಸಂಡೂರು, ಹೊಸಪೇಟೆ, ಬಳ್ಳಾರಿ ತಾಲೂಕಿನ ಕೆಲವು ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದ್ದರೂ, ಸಿಂಹಪಾಲು ಗಣಿಗಾರಿಕೆ ಸಂಡೂರಿನಲ್ಲಿಯೇ ನಡೆಯುತ್ತಿದೆ. ಇದರಿಂದಾಗಿ ಸಂಡೂರು ತಾಲೂಕಿನ ರಮಣೀಯವಾದ ಸಸ್ಯರಾಶಿಗೆ ಗಣಿಗಾರಿಕೆಯಿಂದ ಕುತ್ತು ಬಂದಿತ್ತು. ಇಲ್ಲಿ ಪ್ರಸಿದ್ಧ ಧಾರ್ಮಿಕ ಸ್ಥಳ ಕುಮಾರಸ್ವಾಮಿ ದೇವಸ್ಥಾನ ಇದ್ದರೂ, ಪ್ರವಾಸಿಗರು ಸಂಡೂರಿನತ್ತ ಹೋಗಬೇಕೆಂದರೆ ಗಣಿಗಾರಿಕೆ, ಗಣಿ ಲಾರಿಗಳ ಅಬ್ಬರ, ಕೆಂಧೂಳಿಗೆ ಭಯ ಬಿದ್ದು ಸಂಡೂರಿನಿಂದ ದೂರವೇ ಉಳಿದಿದ್ದರು. ಲೋಕಾಯುಕ್ತ ತನಿಖೆ, ಸಿಇಸಿ, ಸಿಬಿಐ ತನಿಖೆಯಿಂದ ಗಣಿಗಾರಿಕೆ ತಹಬಂದಿಗೆ ಬಂದಿರುವುದರಿಂದ ಗಣಿಗಾರಿಕೆ ಮೇಲೆ ಹಿಡಿತದಿಂದಾಗಿ ಸಂಡೂರಿನಲ್ಲಿ ಸಸ್ಯರಾಶಿ ಸಮೃದ್ಧವಾಗಿ ಬೆಳೆದಿದೆ.
ಸುಧಾರಿಸದ ರಸ್ತೆ; ನಿಲ್ಲದ ಲಾರಿ ಆರ್ಭಟ!
ಗಣಿಗಾರಿಕೆ ಸ್ಥಗಿತವಾಗಿ ಅಲ್ಲಿನ ಜನರು ನಿಟ್ಟುಸಿರುವ ಬಿಟ್ಟಿದ್ದು, ಇಲ್ಲಿವರೆಗೆ ಗಣಿ ನೆಚ್ಚಿಕೊಂಡ ಕೈಗಳು ಕೃಷಿಯತ್ತ ಆಸಕ್ತಿವಹಿಸಿ, ಉಳುಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ರಸ್ತೆಗಳು ಮಾತ್ರ ಇನ್ನೂ ಸುಧಾರಿಸಿಲ್ಲ. ಬಳ್ಳಾರಿ-ಸಂಡೂರು ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದರೂ ಪೂರ್ಣವಾಗಿಲ್ಲ. ಕೆಟ್ಟರೂ ಬುದ್ಧಿ ಬಂದಿಲ್ಲ ಎನ್ನುವಂತೆ ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳ ಪ್ರಾಣಕ್ಕೆ ಕುತ್ತು ತರುವ ರೀತಿಯಲ್ಲಿ ನಿಯಮಗಳ ಪಾಲನೆ ಮಾಡದೆ, ಅದಿರು ಸಾಗಾಟದ ಲಾರಿಗಳ ಆರ್ಭಟ ಇದ್ದೇ ಇದೆ. ನಿಗದಿತ ವೇಗ ಎನ್ನುವುದೇ ಅದಿರು ಲಾರಿಗಳಿಗೆ ಇಲ್ಲವಾಗಿದೆ. ಸಂಬಂಧಪಟ್ಟ ಇಲಾಖೆ ಲಾರಿಗಳ ವೇಗಕ್ಕೆ ಕಡಿವಾಣ ಹಾಕಬೇಕಿದೆ. ಗಣಿಗಾರಿಕೆಯಿಂದ ಹಾನಿಯಾಗಿರುವ ಪ್ರದೇಶದ ಅಭಿವೃದ್ಧಿಗೆ ಆರ್ ಆ್ಯಂಡ್ ಆರ್ ಯೋಜನೆಯಡಿ ಎಸ್‌ಪಿವಿ (ಸ್ಪೆಷನ್ ಪರ್ಪಸ್ ವೆಹಿಕಲ್) ಮಾಡಿದ್ದು, ಈ ಮೂಲಕ ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇಂತಹ ಯೋಜನೆ ಯಾವಾಗ ಅನುಷ್ಠಾನವಾಗುತ್ತದೆ ಎಂದು ಗಣಿ ಪ್ರದೇಶದ ಜನರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಪರಿಸರ ಪುನಶ್ಚೇತನ
ಕೆಂಪನೆಯ ಗುಡ್ಡಗಳು ಮಾಯವಾಗಿ, ಹಸಿರು ಗುಡ್ಡಗಳು ಈಗ ಎಲ್ಲೆಡೆ ಕಂಗೊಳಿಸುತ್ತಿವೆ. ಸಂಡೂರಿನ ಅರಣ್ಯ ಪ್ರದೇಶದಲ್ಲಿದ್ದ ನೂರಾರು ಜಾತಿಯ ಔಷಧಿ ಸಸ್ಯಗಳು ಕೂಡ ಗಣಿಗಾರಿಕೆ ಅಬ್ಬರದಿಂದ ಕೆಂಪಗಾಗಿದ್ದವು. ಇನ್ನು ಗಣಿಗಾರಿಕೆ ಶಬ್ದಕ್ಕೆ ಪ್ರಾಣಿಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಗಣಿಗಾರಿಕೆಯಿಂದ ದೇಶ ಸಂಪತ್ತು ನಾಶವಾಗಿದ್ದಲ್ಲದೆ, ಪರಿಸರ, ವನ್ಯಪ್ರಾಣಿಗಳು, ಸಸ್ಯರಾಶಿಗೂ ಕುತ್ತು ಬಂದಿತ್ತು. ಎಗ್ಗಿಲ್ಲದ ಗಣಿಗಾರಿಕೆಗೆ ಬ್ರೇಕ್ ಬಿದ್ದಿದ್ದರಿಂದ ಸಂಡೂರಿನಲ್ಲಿ ಬೆಟ್ಟ ಗುಡ್ಡಗಳಲ್ಲಿನ ನೈಸರ್ಗಿಕ ಪುನಃಶ್ಚೇತನ, ಪುನರ್ ನಿರ್ಮಾಣ ಕಾರ್ಯದಿಂದ ಪರಿಸರ ಸಂಪತ್ತು ವೃದ್ಧಿಸುತ್ತಿದೆ. ಗಣಿಗಾರಿಕೆ ಪ್ರದೇಶದಲ್ಲಿ ಆಯಾ ಕಂಪನಿಗಳು ಪುನಶ್ಚೇತನ, ಪುನರ್ ನಿರ್ಮಾಣ ಕಾರ್ಯ ಮಾಡುತ್ತಿದೆ.
ಹೆಚ್ಚಿದ ಸಸ್ಯರಾಶಿ, ಪ್ರಾಣಿ ಸಂಕುಲ
ಗಣಿಗಾರಿಕೆ ಅಬ್ಬರದ ಪೂರ್ವದಲ್ಲಿ ಸಂಡೂರು ದಟ್ಟವಾದ ಅರಣ್ಯ ಪ್ರದೇಶದಿಂದ ಕೂಡಿತ್ತು. ಇದರಿಂದಾಗಿ ಸಸ್ಯರಾಶಿ, ಪ್ರಾಣಿ ಸಂಕುಲಕ್ಕೆ ಬರವಿರಲಿಲ್ಲ. ಆದರೆ ಗಣಿಗಾರಿಕೆಯಿಂದ ಅದು ಕಡಿಮೆಯಾಗಿತ್ತು. ಕೆಲಕಾಲ ಗಣಿಗಾರಿಕೆ ಸ್ಥಗಿತವಾಗಿದ್ದರಿಂದ ಸಂಡೂರು ಭಾಗದ ಪ್ರದೇಶದಲ್ಲಿ ಚಿರತೆ, ಕರಡಿ, ಕಾಡು ಹಂದಿಗಳ ಸಂಚಾರ, ನವಿಲುಗಳು ಸೇರಿದಂತೆ ಇತರೆ ಪ್ರಾಣಿಗಳ ಸಂತತಿ ವೃದ್ಧಿಯಾಗಿದೆ. ಇದಕ್ಕೆ ಪ್ರಾಣಿಗಳ ಕಾಲುಗಳ ಹೆಜ್ಜೆ ಗುರುತು ಸಾಕ್ಷಿ. ಅರಣ್ಯ ಇಲಾಖೆ ಅಧಿಕಾರಿಗಳು ಹೆಜ್ಜೆ ಗುರುತಿಸುವ ಮೂಲಕ ಪ್ರಾಣಿಗಳು ಸಂಖ್ಯೆ ಹೆಚ್ಚಾಗಿರುವ ಬಗ್ಗೆ ತಿಳಿಸುತ್ತಾರೆ. ಅದರಂತೆ ಆಡುಸೋಗೆ(ಅಸ್ತಮಾ ರೋಗಕ್ಕೆ), ಸುಂಗದಿ ಬಳ್ಳಿ(ರಕ್ತ ಶುದ್ಧಿಗೆ), ನೆಲನೆಲ್ಲಿ, ಧೂಪದ ಗಡಿಗಳು, ಗುಲಗಂಜಿ, ಕೆಂಪು ಗುಲಗಂಜಿ, ಶ್ರೀಗಂಧ ಹೀಗೆ ಅಸಂಖ್ಯಾತ ಔಷಧಿ ಸಸ್ಯಗಳು ಇಲ್ಲಿ ಹೆಚ್ಚಿವೆ.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

