ವಿಧವೆಯರಿಂದ ಪೂಜೆ ಕುದ್ರೋಳಿ ಹೊಸ ಹೆಜ್ಜೆ

ಕನ್ನಡಪ್ರಭ ವಾರ್ತೆ ಮಂಗಳೂರು ಅ.6-
'ಒಂದೇ ಜಾತಿ, ಒಂದೇ ಕುಲ, ಒಂದೇ ದೇವರು' ಎಂದು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣಗುರು ಪ್ರತಿಷ್ಠಾಪಿಸಿದ ಕುದ್ರೋಳಿ ಶ್ರೀಗೋಕರ್ಣನಾಥನಿಗೆ ಭಾನುವಾರ ಮೊದಲ ಬಾರಿಗೆ ವಿಧವೆಯಿಂದ ಗರ್ಭಗುಡಿ ಪೂಜೆ ನೆರವೇರಿತು.
ಆ ಮೂಲಕ ಸಮಾಜದಿಂದ ತಿರಸ್ಕರಿಸಲ್ಪಡುವ ವಿಧವೆಯರಿಗೂ ಪೂಜಿಸುವ ಅವಕಾಶ ಕಲ್ಪಿಸಿ ಐತಿಹಾಸಿಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದಂತಾಗಿದೆ. ಇದರೊಂದಿಗೆ, ಮುಂದೆ ಕರಾವಳಿ ಮತ್ತು ಮುಂಬೈನಲ್ಲಿರುವ ಬಿಲ್ಲವ ಸಮಾಜದ ಎಲ್ಲ 249 ನಾರಾಯಣಗುರು ಮಂದಿರಗಳಲ್ಲಿ ವಿಧವೆಯರನ್ನೇ ಪೂಜೆಗೆ ನೇಮಿಸುವುದಾಗಿ ಇದರ ರೂವಾರಿ, ಮಾಜಿ ಸಚಿವ ಜನಾರ್ದನ ಪೂಜಾರಿ ಘೋಷಿಸಿದ್ದಾರೆ.
ಪೂರ್ಣಕುಂಭ ಸ್ವಾಗತ: ಹಳದಿ ಮಿಶ್ರಿತ ಜರಿ ಸೀರೆ, ತುಂಬು ತೋಳಿನ ರವಿಕೆ ತೊಟ್ಟು ಪೂಜಾ ಧಿರಿಸು ಧರಿಸಿದ ಬಂಟ್ವಾಳ ಮೂಡಾದ ಲಕ್ಷ್ಮೀ ಹಾಗೂ ಪುತ್ತೂರು ಬನ್ನೂರಿನ ಇಂದಿರಾ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ ಕೇರಳ ಚೆಂಡೆ ಮೂಲಕ ಪೂರ್ಣಕುಂಭ ಸ್ವಾಗತ ಕೋರಲಾಯಿತು.
ನಂತರ ನಾರಾಯಣಗುರು, ಶನಿ ದೇವರು, ಗಣಪತಿ, ಸುಬ್ರಹ್ಮಣ್ಯ, ಕೃಷ್ಣ, ಕಾಲಭೈರವ, ಅನ್ನಪೂರ್ಣೇಶ್ವರಿ, ನವಗ್ರಹ, ಭಗವಾನ್ ಹನುಮಾನ್ ಮಂದಿರದಲ್ಲಿ ಹಾಗೂ ನವರಾತ್ರಿ ಪ್ರಯುಕ್ತ ಪ್ರತಿಷ್ಠಾಪಿಸಲಾದ ಗಣಪತಿ, ಶಾರದೆ ಸಹಿತ ನವದುರ್ಗೆಯರಿಗೆ ಪೂಜೆ ನೆರವೇರಿಸಿದರು.
ಕೊನೆಗೆ, ಗರ್ಭಗುಡಿಗೆ ತೆರಳಿ ಗೋಕರ್ಣನಾಥನಿಗೆ ಪುಷ್ಪಾರ್ಚನೆ ನೆರವೇರಿಸಿ ಮಂಗಳಾರತಿ ಬೆಳಗಿದರು.
ದತ್ತಾತ್ರೇಯ ಪ್ರತಿಷ್ಠೆ: ದೇವಸ್ಥಾನದ ಆವರಣದಲ್ಲಿರುವ ಗುಡಿಯಲ್ಲಿ ದತ್ತಾತ್ರೇಯ ವಿಗ್ರಹವನ್ನು ವಿಧವೆಯರಿಂದ ಪ್ರತಿಷ್ಠಾಪಿಸಲಾಯಿತು. ಪ್ರತಿಷ್ಠೆ ಮಾಡಿದ ಬಳಿಕ ಅರ್ಚನೆ, ನೈವೇದ್ಯ ನೆರವೇರಿಸಿ ಆರತಿ ಬೆಳಗಿದರು.
ಕುದ್ರೋಳಿ ಕ್ಷೇತ್ರದಲ್ಲಿ ಶಿವಲಿಂಗ ಸಹಿತ ಪರಿಹಾರ ದೇವರಿಗೆ ವಿಧವೆಯರಿಂದಲೇ ನಿತ್ಯ ಪೂಜೆ ನೆರವೇರಲಿದೆ. ಲಕ್ಷ್ಮೀಗೆ ಮೂರು ದಿನ ಪೂಜೆಯ ತರಬೇತಿ ನೀಡಲಾಗಿದ್ದು, ಇಂದಿರಾಗೆ ನಾಲ್ಕು ತಿಂಗಳು ಬಿ.ಸಿ.ರೋಡ್ ನಾರಾಯಣಗುರು ಮಂದಿರದಲ್ಲಿ ಆಗಮ ಶಾಸ್ತ್ರ ಪಾಠ ಮಾಡಲಾಗಿದೆ. ದೇವಸ್ಥಾನದಲ್ಲಿ ಪೂಜೆ ನೆರವೇರಿಸುವುದರಿಂದ ಇವರ ಹೆಸರಿನ ಮುಂದೆ 'ಶಾಂತಿ' ಸೇರ್ಪಡೆಯಾಗಲಿದೆ. ಲಕ್ಷ್ಮೀ ಶಾಂತಿ ಮತ್ತು ಇಂದಿರಾ ಶಾಂತಿ ಕ್ರಮೇಣ ದೇವಸ್ಥಾನದಲ್ಲಿ ನಡೆಯುವ ಇನ್ನಿತರ ವೈದಿಕ ಸೇವಾ ಪಾರಂಗತರಾಗಲಿದ್ದಾರೆ.
ವಿಧವೆಯರಿಗೆ ಆಹ್ವಾನ: ಈಗಾಗಲೇ ಬೆಳ್ತಂಗಡಿ ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರು ಆಗಮ ಶಾಸ್ತ್ರ ಅಭ್ಯಾಸ ಮಾಡಿದ್ದು, ಪಂಚಾಯ್ತಿ ಸದಸ್ಯೆಯಾಗಿರುವುದರಿಂದ ಈಗಲೇ ದೇವಸ್ಥಾನ ಪೂಜೆಗೆ ಬರುತ್ತಿಲ್ಲ. ಸದಸ್ಯತ್ವದ ಅವಧಿ ಮುಗಿದ ಬಳಿಕ ಅವರೂ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಯಾವುದೇ ಜಾತಿಯ ವಿಧವೆ ಮಹಿಳೆಯರು ಅರ್ಚಕ ವೃತ್ತಿಗೆ ಬರಬಹುದು. ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಪೂಜಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
'ವಿಧವೆಯರಿಗೆ ದೇವಸ್ಥಾನದಲ್ಲಿ ಪೂಜೆಗೆ ಅವಕಾಶ ನೀಡಿರುವ ಕ್ರಮ ಸಮಾಜದಲ್ಲಿ ಹೊಸ ಮೇಲ್ಪಂಕ್ತಿಗೆ ಕಾರಣವಾಗಲಿದೆ.
ಇದನ್ನು ವಿರೋಧಿಸುವವರಿಗೆ ಏನೂ ಹೇಳಲಾರೆ. ಜೀವಿತದಲ್ಲಿ ವಿಧವೆ ಯಾರಿಗೂ ತಪ್ಪಿಸಲಸಾಧ್ಯ. ಹೀಗಿರುವಾಗ ವಿಧವೆಯರ ಬಗ್ಗೆ ಪೂಜ್ಯ ಭಾವನೆ ಸಮಾಜದಲ್ಲಿ ಮೂಡಿಬರಬೇಕು. ಅರ್ಚಕರೇ ದೇವರಲ್ಲ, ಅವರನ್ನು ಪೂಜ್ಯ ಭಾವನೆಯಲ್ಲಿ ನೋಡಬೇಕು. ವಿಧವೆಯರ ಬಗ್ಗೆ ಮಾತೃ ಗೌರವ ತೋರಿಸಬೇಕು' ಎಂದರು.
ಮಹಿಳಾ ಅರ್ಚಕರು ದೇವಸ್ಥಾನದ ಪೂಜೆ ನೆರವೇರಿಸುವುದು ರಾಜ್ಯದಲ್ಲಿದೆ. ಆದರೆ ವಿಧವೆಯರು ಗರ್ಭಗುಡಿಗೆ ಹೋಗಿ ದೇವರನ್ನು ಅರ್ಚಿಸುವ ಕ್ರಮ ಇಲ್ಲ. ಕುದ್ರೋಳಿಯಲ್ಲಿ ಇದಕ್ಕೂ ಅವಕಾಶ ನೀಡುವ ಮೂಲಕ ಸಮಾಜದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಧವೆಯರಿಗೆ ಗೌರವಾನ್ವಿತ ಸ್ಥಾನ ನೀಡಲಾಗಿದೆ. ಆ ಮೂಲಕ ಮಾನವರೆಲ್ಲರೂ ಒಂದೇ ಎನ್ನುವ ನಾರಾಯಣಗುರು ಸಂದೇಶ ಅನುಷ್ಠಾನಗೊಂಡಂತಾಗಿದೆ.
ಬೇರೆಡೆ ಈ ರೀತಿ ಆಗಲಿ: ಪೂಜಾರಿ
ಮುಜರಾಯಿ ದೇಗುಲಗಳಲ್ಲಿ ಕುದ್ರೋಳಿ ಮಾದರಿಯಂತೆ ವಿಧವೆಯರನ್ನು ಅರ್ಚಕರಾಗಿ ನೇಮಿಸಲಾಗುವುದೇ? ಸರ್ಕಾರಕ್ಕೆ ಈ ಕುರಿತು ಪ್ರಸ್ತಾಪ ಹೋಗಿಲ್ಲ. ಕುದ್ರೋಳಿಯಲ್ಲಿ ನಡೆದ ಕ್ರಾಂತಿಯನ್ನು ಅನುಷ್ಠಾನಕ್ಕೆ ತಂದರೆ ಉತ್ತಮ ಎಂಬ ಇಂಗಿತ ಜನಾರ್ದನ ಪೂಜಾರಿ ಅವರದು. ಕುದ್ರೋಳಿಯ ಸಾಮಾಜಿಕ ಕ್ರಾಂತಿ ನೋಡಿ ಕ್ರಮ ಕೈಗೊಳ್ಳಲು ಸಿಎಂ ಸಮರ್ಥರು. ಇಲ್ಲಿ ಅರ್ಚಕರಾಗಿ ವಿಧವೆಯರನ್ನು ನೇಮಿಸಿದ ವಿಚಾರ ಈಗಾಗಲೇ ಸರ್ಕಾರದ ಗಮನಕ್ಕೆ ಬಂದಿದೆ. ಇನ್ನು ಅನುಷ್ಠಾನಗೊಳಿಸುವುದು, ಬಿಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದರು ಪೂಜಾರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


