ಕಾಲುಬಾಯಿ ಪರಿಹಾರ; ಆಸೆ-ಭಾಷೆ-ಮೋಸ
ಕನ್ನಡಪ್ರಭ ವಾರ್ತೆ ಬೆಂಗಳೂರು ಅ.12
ಸರ್ಕಾರ ಕಾಲುಬಾಯಿ ರೋಗದಿಂದ ಅಸುನೀಗಿರುವ ಹಸುಗಳಿಗೆ ನೀಡಲು ನಿರ್ಧರಿಸಿದ್ದ ಪರಿಹಾರಕ್ಕೆ ದಸರಾ ಡಿಸ್ಕೌಂಟ್ ಘೋಷಿಸಿದೆ!ಮೃತ ಹಸುಗಳಿಗೆ ಸಿಗೋ ಪರಿಹಾರ 16,400 ಮಾತ್ರ. ಇದು ಸರ್ಕಾರಿ ಆದೇಶ. ಇದೇ ಅಧಿಕೃತ. ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರವೊಂದು. ಪಶುಸಂಗೋಪನೆ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದು ಇನ್ನೊಂದು. ಸರ್ಕಾರಿ ಆದೇಶದಿಂದ ಹೊರಬಿದ್ದದ್ದು ಮತ್ತೊಂದು.
ಸಚಿವ ಸಂಪುಟ ಸಭೆಯನಂತರ ಸಚಿವರು ಘೋಷಿಸಿದ ಪರಿಹಾರದ ಮೊತ್ತ ಕೇವಲ ಒಂದೇ ದಿನದಲ್ಲಿ 8,600 ದಸರಾ ಡಿಸ್ಕೌಂಟ್ನೊಂದಿಗೆ ಘೋಷಣೆಯಾಗಿದೆ! ರಾಜ್ಯ ಸರ್ಕಾರ ಘೋಷಣೆ ಮಾಡುವುದು ಒಂದು, ಕಾರ್ಯಗತ ಮಾಡುವುದು ಮತ್ತೊಂದು ಎಂದು ಪ್ರತಿಪಕ್ಷಗಳು ದೂರುತ್ತಲೇ ಇವೆ. ಹಸುಗಳಿಗೆ ಪರಿಹಾರ ನೀಡುವ ಪ್ರಕರಣದಲ್ಲಿ ಸರ್ಕಾರದ ಆದೇಶವೇ ಇದನ್ನು ಸಾಬೀತುಪಡಿಸಿದೆ.
ರಾಜ್ಯದಲ್ಲಿ ಕಾಲುಬಾಯಿ ರೋಗದಿಂದ ಮರಣಹೊಂದಿದ ಹಸುಗಳ ಮಾಲೀಕರಿಗೆ 25 ಸಾವಿರ ಪರಿಹಾರ ನೀಡುವುದಾಗಿ ಸಚಿವ ಸಂಪುಟ ಸಭೆಯಲ್ಲಿ ಶುಕ್ರವಾರ ನಿರ್ಧಾರವಾಯಿತು ಎಂದು ಪಶುಸಂಗೋಪನೆ ಖಾತೆ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದರು. ಆದರೆ, ಸರ್ಕಾರಿ ಆದೇಶದಲ್ಲಿ ಪರಿಹಾರ ಮೊತ್ತ ಕಡಿತವಾಗಿದೆ. ಸಚಿವ ಸಂಪುಟದ ನಂತರ ಅ.11ರಂದೇ ಹೊರಬಿದ್ದಿರುವ ಸರ್ಕಾರಿ ಆದೇಶ (ಪಸಂಮೀ 85 ಪಪಾಯೋ 2013)ದ ಪ್ರಕಾರ ಕಾಲುಬಾಯಿ ರೋಗದಿಂದ ಹಸು ಕಳೆದುಕೊಂಡವರಿಗೆ ಸಿಗುವ ಪರಿಹಾರ 16,400 ಮಾತ್ರ.
ಪಶು ಸಂಗೋಪನೆ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕಾಲುಬಾಯಿ ಜ್ವರ ರೋಗ ಮತ್ತು ಗಂಟಲು ರೋಗ ಉದ್ರೇಕಗೊಂಡು ಮರಣ ಹೊಂದಿದ ಜಾನುವಾರುಗಳಲ್ಲಿ ಪ್ರತಿ ಹೈನು- ರಾಸಿಗೆ (ದನ/ಎಮ್ಮೆ) ಗರಿಷ್ಠ 25 ಸಾವಿರ, ಕರು/ಮಣಕ್ಕೆ ಗರಿಷ್ಠ 10 ಸಾವಿರ ಮತ್ತು ಎತ್ತು/ಕೋಣಗಳಿಗೆ ಗರಿಷ್ಠ 25 ಸಾವಿರ ಹಾಗೂ ಗಂಡು ಕರುಗಳು/ಹೋರಿಗಳಿಗೆ ಗರಿಷ್ಠ 10 ಸಾವಿರ ಪರಿಹಾರ ನೀಡಬಹುದು ಎಂದು ತಿಳಿಸಲಾಗಿದೆ. ಇದಕ್ಕಾಗಿ 5 ಕೋಟಿ ಹಣ ಬಿಡುಗಡೆ ಮಾಡಲು ಕೋರಿಕೊಳ್ಳಲಾಗಿದೆ. ಇದು ನಡವಳಿಗೆ ಮಾತ್ರ ಸೀಮಿತವಾಗಿದೆ.
ಸರ್ಕಾರದ ಆದೇಶ ಪ್ರಕಾರ, ಕಾಲುಬಾಯಿ ಜ್ವರ ರೋಗದಿಂದ ಮರಣ ಹೊಂದಿದ ರಾಸುಗಳ ಮಾಲೀಕರಿಗೆ ಪರಿಹಾರ ನೀಡಲು 5 ಕೋಟಿ ಅನುದಾನವನ್ನು ರಾಜ್ಯ ಸಂಚಿತ ನಿಧಿ ಅಡಿಯಲ್ಲಿ ಮಂಜೂರು ಮಾಡಿ, ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಇದರಂತೆ, ಪ್ರಕೃತಿ ವಿಕೋಪ ಪರಿಹಾರ ಕಾರ್ಯಕ್ರಮದಡಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನೈಸರ್ಗಿಕ ವಿಕೋಪದಿಂದ ಜಾನುವಾರುಗಳ ನಷ್ಟವಾದಾಗ ನೀಡುತ್ತಿರುವ ಪರಿಹಾರವನ್ನೇ ಕಾಲುಬಾಯಿ ಜ್ವರದಿಂದ ಮರಣಹೊಂದಿದ ರಾಸುಗಳಿಗೆ ನೀಡತಕ್ಕದ್ದು. ಅಂದರೆ, ಪ್ರತಿ ದನ/ಎಮ್ಮೆಗೆ (ಹಾಲಿನ ರಾಸುಗಳಿಗೆ) 16,400, ಉಳುಮೆ ಕೆಲಸಕ್ಕೆ ಬಳಸುವ ಎತ್ತು ಇತ್ಯಾದಿ ಜಾನುವಾರುಗಳಿಗೆ 15 ಸಾವಿರ ಮತ್ತು ಕರುಗಳಿಗೆ 10 ಸಾವಿರ ಪರಿಹಾರ ನೀಡಬೇಕು ಎಂದು ಸರ್ಕಾರಿ ಆದೇಶದಲ್ಲಿ ಸೂಚಿಸಲಾಗಿದೆ.
ಹೊಸ ಡೆಡ್ಲೈನ್
ಬೆಂಗಳೂರು: ಸರ್ಕಾರ ಕಾಲುಬಾಯಿ ರೋಗದ ಪರಿಹಾರಕ್ಕಾಗಿ ಪ್ರಕೃತಿ ವಿಕೋಪ ಪರಿಹಾರದಡಿ 5 ಕೋಟಿ ಮಾತ್ರ ಮಂಜೂರು ಮಾಡಿದ್ದು, ಇದು ಏನೋನೂ ಸಾಲದು. 10 ದಿನದಲ್ಲಿ ಅರ್ಹರಿಗೆ ಪರಿಹಾರ ಬಿಡುಗಡೆ ಮಾಡದೇ ಇದ್ದಲ್ಲಿ ಪಾದಯಾತ್ರೆ ನಡೆಸುವುದಾಗಿ ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಸರ್ಕಾರದ ಬಳಿ ಮಾಹಿತಿ ಇಲ್ಲದಿದ್ದರೆ ನಾನು ಮಾಹಿತಿ ನೀಡುತ್ತೇನೆ. ಯಾವ ಮಾಲೀಕ ಎಷ್ಟು ಹಸು ಕಳೆದುಕೊಂಡಿದ್ದಾನೆ ಎಂಬ ಮಾಹಿತಿ ನನ್ನಲ್ಲಿದೆ. ಪಶುಸಂಗೋಪನೆ ಸಚಿವ ಟಿ.ಬಿ. ಜಯಚಂದ್ರ ಇನ್ನೂ ಮಾಹಿತಿ ಪಡೆಯಬೇಕು ಎನ್ನುತ್ತಿದ್ದಾರೆ. ಮಾಹಿತಿ ಪಡೆದುಕೊಳ್ಳುವುದು ಕಷ್ಟವೇ? ಕಾಂಗ್ರೆಸ್ ಸರ್ಕಾರ ಈ ಪರಿಹಾರದಲ್ಲೂ ಸಣ್ಣ ರಾಜಕಾರಣ ಮಾಡುವುದು ಸ್ಪಷ್ಟವಾಗುತ್ತಿದೆ.
ಕಾಂಗ್ರೆಸ್ನವರು ಹಸು ಕಳೆದುಕೊಂಡಿದ್ದರೆ ಪರಿಹಾರ ಸಿಗುತ್ತದೆ. ಅವರೇನಾದರೂ ಬಿಜೆಪಿ, ಜೆಡಿಎಸ್ ಬೆಂಬಲಿಗರಾಗಿದ್ದರೆ ಅವರಿಗ ಪರಿಹಾರ ಸಿಗುವುದು ಕಷ್ಟ. ಇಂತಹ ಸಣ್ಣ ರಾಜಕೀಯ ಮಾಡುವುದು ಬೇಡ ಎಂದರು.
ಜೆಡಿಎಸ್ ಪಾದಯಾತ್ರೆ ರಾಜಕಾರಣ, ಚುನಾವಣೆಗಾಗಿ ಎಂದು ಅವರು ಟೀಕಿಸಿದ್ದಾರೆ. ವಿಟ್ಲೇನಹಳ್ಳಿ ಪ್ರಕರಣ ನಡೆದಿದ್ದು 2001ರ ಅಕ್ಟೋಬರ್ 1ರಂದು. ದೇವೇಗೌಡರು ಪಾದಯಾತ್ರೆ ಮಾಡಿದ್ದು ಅ.26ರಂದು. ಕನಕಪುರ ಸಂಸದ ಚಂದ್ರಶೇಖರ ಮೂರ್ತಿ ಮರಣ ಹೊಂದಿದ್ದು ನ.22ರಂದು. ಚಂದ್ರಶೇಖರ ಮೂರ್ತಿ ಅವರು ಸಾಯುತ್ತಾರೆ ಎಂದು ಜೆಡಿಎಸ್ ನಾಯಕರಿಗೆ ಕನಸು ಬಿದ್ದಿತ್ತೇ? ಸುಮ್ಮನೆ ಜನರನ್ನು ದಾರಿತಪ್ಪಿಸುತ್ತಾರೆ. ಮಂತ್ರಿಯಾಗಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಕಾಂಗ್ರೆಸ್ನವರು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದು, ಕೃಷ್ಣೆ ಎಡೆಗೆ ನಡಿಗೆ ಮಾಡಿದ್ದು ವೈರಾಗ್ಯಕ್ಕೋ ರಾಜಕೀಯಕ್ಕೋ? ಇದನ್ನು ಜಯಚಂದ್ರ ಅರಿತುಕೊಳ್ಳಬೇಕು. ತೆಂಗಿನ ಗಿಡಕ್ಕೆ ನುಸಿ ಬಂದಾಗ ಪಲ್ಸ್ ಪೋಲಿಯೋದಂತೆ ಕಾರ್ಯಕ್ರಮ ಎನ್ನುತ್ತಾರೆ. ಕಾಲುಬಾಯಿ ರೋಗಕ್ಕೂ ಪಲ್ಸ್ ಪೋಲಿಯೋ ಅನ್ನುತ್ತಾರೆ. ಜಾನುವಾರುಗಳ ಬಗ್ಗೆ ಮಾಹಿತಿಯೇ ಇಲ್ಲ. ಮಾಹಿತಿ ಇಟ್ಟುಕೊಳ್ಳುವ ಯೋಗ್ಯತೆಯೇ ಇಲ್ಲ. ಇವರಿಗೆ ಜನ ಅಧಿಕಾರ ನೀಡಿದ್ದು ಕೆಲಸ ಮಾಡುವುದಕ್ಕೆ, ಮಜಾ ಮಾಡುವುದಕ್ಕಲ್ಲ ಎಂದರು.
ಅನ್ನಭಾಗ್ಯ, ಮೊಟ್ಟೆಭಾಗ್ಯ ಎಂದೆಲ್ಲ ಹೇಳುತ್ತಿದ್ದಾರೆ. ರೈತರಿಗೆ ಪರಿಹಾರ ನೀಡಲು ಈ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ರೈತ ಭಾಗ್ಯ ಎಂದೂ ಮಾಡಿಬಿಡಲಿ. ರೈತರಿಗೆ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಸರ್ಕಾರದಿಂದಲೇ ಊಟ ಕೊಡಲಿ ಎಂದು ಲೇವಡಿ ಮಾಡಿದರು. ನಾನು ಯಾವುದಕ್ಕೂ ರಾಜಕೀಯ ಮಾಡುತ್ತಿಲ್ಲ. ಪ್ರತಿಪಕ್ಷ ನಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು. ಸರ್ಕಾರ ಬರೀ ಘೋಷಣೆಯಲ್ಲೇ ಇದೆ. ಅಡಕೆ ಪರಿಹಾರವಾಗಿ 33 ಕೋಟಿ ನೀಡುವುದಾಗಿ, ನಂತರ 73 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಅವರು ಹೇಳಿದ್ದರು. ಈವರೆಗೆ ಹಣ ಬಿಡುಗಡೆ ಆಗಿಲ್ಲ. ಎಲ್ಲದ್ದಕ್ಕೂ 10 ದಿನ ಕಾಯುತ್ತೇನೆ. ಸರ್ಕಾರ ಸೂಕ್ತವಾಗಿ ಪರಿಹಾರ ಬಿಡುಗಡೆ ಮಾಡದಿದ್ದರೆ ಪಾದಯಾತ್ರೆ, ಮುಂದಿನ ಹೋರಾಟ ನಿರ್ಧರಿಸುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದರು.
ರಾಜ್ಯ ಸರ್ಕಾರ ಮಾಧ್ಯಮದಲ್ಲಿ ಬರುತ್ತಿರುವ ರೈತರ ಸಮಸ್ಯೆಯ ವರದಿಗಳನ್ನೂ ಪರಿಗಣಿಸುತ್ತಿಲ್ಲ. ಮಾಧ್ಯಮ ಕಾರ್ಯದರ್ಶಿ ಎಂದು ಕ್ಯಾಬಿನೆಟ್ ರ್ಯಾಂಕ್ ಕೊಟ್ಟು ಇಟ್ಟುಕೊಂಡಿದ್ದಾರೆ. ಅವರು ಮಾಧ್ಯಮದ ವರದಿಗಳನ್ನೇ ನೋಡುತ್ತಿಲ್ಲ. ಇಂತಹವರಿಗೆ ಸಂಬಳ ಏಕೆ? ಕ್ಯಾಬಿನೆಟ್ ರ್ಯಾಂಕ್ ಏಕೆ? ಮಾಧ್ಯಮದ ವರದಿಯನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ ಎಂದರೆ ಸರ್ಕಾರದ ನಿರ್ಲಕ್ಷ್ಯ ಅರಿವಾಗುತ್ತದೆ ಎಂದರು.
ರಮೇಶ್ಕುಮಾರ್ ಅವರು ಸಿದ್ದರಾಮಯ್ಯ ಅವರನ್ನು ವಿಧಾನಸಭೆಯಲ್ಲಿ ಹಾಡಿ-ಹೊಗಳಿದ್ದರು. ಬೆಲೆ ಆಯೋಗವನ್ನು ರಚನೆ ಮಾಡಿ ದೇಶದಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾರೆ ಎಂದಿದ್ದರು. ಒಂದು ಬಾರಿ ಪಾವಗಡದಲ್ಲಿ ನೆಲಗಡಲೆ ಬೆಳೆ ರೈತರ ಸಂಕಷ್ಟವನ್ನು ತಿಳಿದು ಬರಲಿ. ಆಗ ಎಂತಹ ಸಾಧನೆ ಎಂಬುದು ಅರಿವಾಗುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

