ಪ್ರಧಾನ ಸುದ್ದಿ

ಕೆಪಿಸಿಸಿ ಕಾರ್ಯಕಾರಿಣಿಯಲ್ಲಿ ಭಿನ್ನಸೂಚಿ

Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.14-
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಕೆಪಿಸಿಸಿಯ ಮೊದಲ ಕಾರ್ಯಕಾರಿಣಿ ಸಭೆಯಲ್ಲೇ ಭಿನ್ನಮತ ಸ್ಫೋಟಕ್ಕೆ ವೇದಿಕೆ ಸಿದ್ಧಗೊಂಡಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅಧ್ಯಕ್ಷತೆಯಲ್ಲಿ ಅ.19ರಂದು ಕೆಪಿಸಿಸಿ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ. ಸರ್ಕಾರ ಹಾಗೂ ಪಕ್ಷದ ನಡುವೆ ಸೃಷ್ಟಿಯಾಗಿರುವ ಭಿನ್ನ ಧೋರಣೆ ಅನಾವರಣವಾಗಬಹುದೆಂಬ ಕಾರಣಕ್ಕೆ ಮುಂದೂಡುತ್ತಲೇ ಬಂದಿದ್ದ ಸಭೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.
ಪಂಚರಾಜ್ಯಗಳ ಚುನಾವಣೆ ಹಾಗೂ ಸದ್ಯದಲ್ಲೇ ಎದುರಾಗುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಗದ್ದಲಕ್ಕೆ ಅವಕಾಶ ನೀಡಬಾರದು ಎಂದು ರಾಜ್ಯ ಮುಖಂಡರಿಗೆ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ. ಆದರೂ ತಮ್ಮ ಬೆಂಬಲಿಗ ಶಾಸಕರ ಮೂಲಕ ಅಸಮಾಧಾನ ಸ್ಫೋಟಿಸುವುದಕ್ಕೆ ನಾಯಕರು ಪರಸ್ಪರ ಚಾಲನೆ ನೀಡಿದ್ದಾರೆ.
ಈ ಸಭೆಯಲ್ಲಿ ಲೋಕಸಭಾ ಚುನಾವಣಾ ತಯಾರಿಯೇ ಪ್ರಧಾನ ವಿಷಯ. ಆದರೆ ನಿಗಮ- ಮಂಡಳಿ ನೇಮಕ ವಿಳಂಬ, ಪೊಲೀಸ್ ವರ್ಗಾವಣೆಯಲ್ಲಿ ಶಾಸಕರ ಮಾತಿಗೆ ಗೌರವ ನೀಡದೇ ಇರುವುದು, ಕಾರ್ಯಕರ್ತರ ನಿರ್ಲಕ್ಷ್ಯದ ಬಗ್ಗೆ ಮೂಲ ಕಾಂಗ್ರೆಸ್ ಬಣ ಪ್ರಸ್ತಾಪ ಮಾಡಲು ನಿರ್ಧರಿಸಿದೆ.
ಎಲ್ಲದಕ್ಕಿಂತ ಹೆಚ್ಚಾಗಿ ಸರ್ಕಾರವನ್ನು ಆವರಿಸಿಕೊಂಡಿರುವ 'ಜೆಡಿಎಸ್ ಹ್ಯಾಂಗ್ ಓವರ್‌' ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದಕ್ಕೆ ಕಾಂಗ್ರೆಸ್ ಶಾಸಕರು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಜೆಡಿಎಸ್ ಆಡಳಿತ ವೈಖರಿ ಇದೆ. ವರ್ಗಾವರ್ಗಿ, ನಿಗಮ- ಮಂಡಳಿ ನೇಮಕದಿಂದ ಹಿಡಿದು ಎಲ್ಲ ವಿಚಾರಗಳಲ್ಲಿ ಸರ್ಕಾರ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಂತೆ ವರ್ತಿಸುತ್ತಿದೆ. ಇದರಿಂದ ನಮಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ಉತ್ತರ ಕರ್ನಾಟಕ ಭಾಗದ ಶಾಸಕರೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಎಲ್ಲದಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯನವರು ಪದೇ ಪದೇ ನಾನು ಇನ್ನು ಮುಂದೆ ಚುನಾವಣಾ ರಾಜಕೀಯದಲ್ಲಿ ಇರುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಎದುರಾಗುತ್ತಿರುವ ಸಂದರ್ಭದಲ್ಲಿ ಸರ್ಕಾರದ ಮುಖ್ಯಸ್ಥರೇ ಈ ಹೇಳಿಕೆ ನೀಡಿದರೆ, ಯುದ್ಧಕ್ಕೆ ಮುನ್ನವೇ ಶಸ್ತ್ರಸನ್ಯಾಸ ಕೈಗೊಂಡಂತಾಗುತ್ತದೆ. 
ತಮ್ಮ ಗುರಿ ಈಡೇರಿದ ನಂತರ ಪಕ್ಷದ ಹಂಗೇನು? ಎಂಬಂತೆ ಅವರು ವರ್ತಿಸುತ್ತಿರುವ ಬಗ್ಗೆ ಆಕ್ಷೇಪ ಎತ್ತಲು ಕೆಲ ಶಾಸಕರು ಮುಂದಾಗಿದ್ದಾರೆ.

ಟೋಪಿ ಪ್ರಸಂಗ: ಇದು ಪಕ್ಷದ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಯಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಷ್ಠ ಸಚಿವರು ಹಾಗೂ ಶಾಸಕರು ಬೇರೆಯದೇ ದಾಳ ಉರುಳಿಸಲು ಮುಂದಾಗಿದ್ದಾರೆ. ಒಂದೊಮ್ಮೆ ಕಾರ್ಯಕಾರಿಣಿ ಸಭೆಯಲ್ಲಿ ಸರ್ಕಾರದ ಟೀಕೆ ನಡೆದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರ ಇತ್ತೀಚಿನ ಹೇಳಿಕೆ ಬಗ್ಗೆ ಪ್ರಸ್ತಾಪಿಸಲು ಅವರು ಮುಂದಾಗಿದ್ದಾರೆ.
ನಗರ- ಗ್ರಾಮೀಣ ಎಂಬ ಭೇದವಿಲ್ಲದೆ ಸರ್ಕಾರದ ಬಗ್ಗೆ ಒಳ್ಳೆ ಅಭಿಪ್ರಾಯವಿದೆ. ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನೆಲ್ಲ ಈಡೇರಿಸಲಾಗುತ್ತಿದೆ. ಜನ ಸ್ಥಿರ ಸರ್ಕಾರ ಬಯಸುತ್ತಿರುವ ಸಂದರ್ಭದಲ್ಲಿ ಪಕ್ಷದ ಕೆಲ ಮುಖಂಡರ ಹೇಳಿಕೆಗಳು ಆಕ್ಷೇಪಾರ್ಹ ಎಂದು ದಿಗ್ವಿಜಯ್ ಸಿಂಗ್ ಅವರ ಗಮನ ಸೆಳೆಯಲು ಚಿಂತನೆ ನಡೆಸಲಾಗಿದೆ.
ಅದರಲ್ಲೂ ವಿಶೇಷವಾಗಿ ಡಾ. ಪರಮೇಶ್ವರ ಅವರು ನೀಡಿರುವ 'ಟೋಪಿ' ಹೇಳಿಕೆ ಹಾಗೂ ಸಚಿವರ ಮೌಲ್ಯಮಾಪನದ ಬಗ್ಗೆ ಸಿದ್ದರಾಮಯ್ಯ ಅವರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆ ಇದೆ. ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ಇತ್ತೀಚೆಗಷ್ಟೇ ಸಮನ್ವಯ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವ ಶಾಸಕ ಡಿ.ಕೆ. ಶಿವಕುಮಾರ್ ಅವರ ನಡೆ ಕುತೂಹಲ ಮೂಡಿಸಿದೆ. ಈ ಸಭೆಯಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರೂ ಭಾಗವಹಿಸುತ್ತಿದ್ದಾರೆ.

ಲಾಡ್ ಪ್ರಸ್ತಾಪವಿಲ್ಲ
ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್ ಲಾಡ್ ರಾಜಿನಾಮೆ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ಪ್ರಸ್ತಾಪ ಮಾಡದೇ ಇರುವುದಕ್ಕೆ ಕಾಂಗ್ರೆಸ್‌ನ ಬಹುತೇಕ ಮುಖಂಡರು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೆಪಿಸಿಸಿ ಹಾಗೂ ಸರ್ಕಾರದ ನಡುವೆ ಈಗಾಗಲೇ ಒಮ್ಮತ ವ್ಯಕ್ತವಾಗಿದ್ದು, ಲಾಡ್ ರಾಜಿನಾಮೆ ಅಗತ್ಯವಿಲ್ಲ ಎಂಬ ನಿರ್ಧಾರವನ್ನು ಹೈಕಮಾಂಡ್‌ಗೆ ರವಾನೆ ಮಾಡಲು ನಿರ್ಧರಿಸಲಾಗಿದೆ.

ಶಾಸಕರ ನಿಧಿ ವಿಳಂಬದ ಬಗ್ಗೆ ಆಕ್ಷೇಪ
ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದರೂ ಶಾಸಕರ ನಿಧಿಗೆ ಕೇವಲ ಒಂದು ಕಂತಿನ ಹಣ ಬಿಡುಗಡೆ ಮಾಡಿರುವ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲು ಶಾಸಕರು ನಿರ್ಧರಿಸಿದ್ದಾರೆ. ಶಾಸಕರ ನಿಧಿಗಾಗಿ ಪ್ರತಿ ವರ್ಷ ಸರ್ಕಾರ 2 ಕೋಟಿ ಸರ್ಕಾರ ನಿಗದಿ ಮಾಡಿದೆ. ಆದರೆ ಈ ಪೈಕಿ ಕೇವಲ 25 ಲಕ್ಷ ಮಾತ್ರ ಬಿಡುಗಡೆಯಾಗಿದೆ. ಈ ಬಗ್ಗೆ ಪದೇ ಪದೇ ಪ್ರಸ್ತಾಪ ಮಾಡಿದರೂ ಪ್ರಯೋಜನವಾಗಿಲ್ಲ. ಇದು ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರ ಕೋಪಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.