ರೇಲ್ವೆ ನೌಕರರಿಗೆ ಹಬ್ಬದ ಬಂಪರ್

ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಅ.15
ರೇಲ್ವೆ ಇಲಾಖೆ ನೌಕರರಿಗೆ ಕೇಂದ್ರ ಸರ್ಕಾರ ದೀಪಾವಳಿ ಉಡುಗೊರೆ ನೀಡಿದೆ. ಹಲವು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಮನ್ನಣೆ ನೀಡಿದ್ದು ಸಿ ಮತ್ತು ಡಿ ಗ್ರೂಪ್ ನೌಕರರ ಮೂಲ ವೇತನದಲ್ಲಿ ಶೇ.10ರಿಂದ 20ರಷ್ಟು ಹೆಚ್ಚಳ ಹಾಗೂ ಸಂಬಳ ಬೋನಸ್ನಲ್ಲೂ ಏರಿಕೆ ಮಾಡಲು ನಿರ್ಧರಿಸಿದೆ. ಮುಂದಿನ ತಿಂಗಳಿನಿಂದ ಪರಿಷ್ಕೃತ ವೇತನ ಜಾರಿಯಾಗಲಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಮೂಲ ವೇತನ ಹೆಚ್ಚಳದ ಇಲಾಖೆಯ ಕ್ರಮಕ್ಕೆ ಈಗಾಗಲೇ ಆರ್ಥಿಕ ಇಲಾಖೆ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಅಧಿಕೃತ ಸಮ್ಮತಿ ದೊರೆತಿದೆ. ಸುಮಾರು 25 ವರ್ಷಗಳಿಂದ ಯಾವುದೇ ಬಡ್ತಿ ಇಲ್ಲದೆ ಮತ್ತು ಮೂಲವೇತನ ಹೆಚ್ಚಳವಿಲ್ಲದೆ ನೌಕರರು ಕಾರ್ಯನಿರ್ವಹಿಸುತ್ತಿದ್ದರು. ಅವರ ಹಿತ ಕಾಪಾಡಲು ಇಲಾಖೆ ಈ ಕ್ರಮ ಕೈಗೊಂಡಿದೆ. ಸಿ ಮತ್ತು ಡಿ ಗ್ರೂಪ್ ಸುಮಾರು 6 ಲಕ್ಷಕ್ಕೂ ಹೆಚ್ಚು ನೌಕರರಿಗೆ ಇದು ಲಾಭವಾಗಲಿದೆ ಎಂದರು.
30 ಸಾವಿರ ಹುದ್ದೆ ಭರ್ತಿ: ಇಲಾಖೆಯಲ್ಲಿ ಕಳೆದ 3 ವರ್ಷಗಳಿಂದ ಸುಮಾರು 60 ಸಾವಿರ ಹುದ್ದೆಗಳು ಖಾಲಿಯಾಗಿವೆ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ ವಿವಿಧ ಗ್ರೂಪ್ನ 30 ಸಾವಿರ ನೌಕರರ ಹುದ್ದೆಗಳಿಗೆ ಭರ್ತಿ ಪಕ್ರಿಯೆ ಶೀಘ್ರದಲ್ಲಿ ಆರಂಭಿಸಲಾಗುವುದು. ವಿವಿಧ ಹುದ್ದೆಗಳಿಗೆ ಆಯ್ಕೆಗಾಗಿ ಆಯಾ ರೇಲ್ವೆ ವಿಭಾಗ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ದೇಶದ 16 ರೇಲ್ವೆ ವಿಭಾಗ ಕೇಂದ್ರಗಳಲ್ಲಿ ಒಂದೇ ದಿನ ಪರೀಕ್ಷೆ ನಡೆಸಲಾಗುವುದು. ಡಿ ಗ್ರೂಪ್ ನೌಕರರ ಹುದ್ದೆಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.
ಬೋನಸ್ ಏರಿಕೆ
ಮೂಲವೇತನ ಹೆಚ್ಚಳದ ಜತೆಗೆ ಸಿ ಮತ್ತು ಡಿ ಗ್ರೂಪ್ ನೌಕರರ ಬೋನಸ್ನಲ್ಲೂ ಭರ್ಜರಿ ಕೊಡುಗೆ ನೀಡಲಾಗಿದೆ. ಇದುವರೆಗೂ 30ರಿಂದ 73 ದಿನಗಳವರೆಗೆ ಮಾತ್ರ ನೀಡಲಾಗುತ್ತಿದ್ದ ಸಂಬಳ ಬೋನಸ್ನ್ನು ಈಗ 78 ದಿನಕ್ಕೆ ಹೆಚ್ಚಳ ಮಾಡಲಾಗಿದೆ. ವೇತನ ಹೆಚ್ಚಳದಿಂದ 1600 ಕೋಟಿ ಮತ್ತು ಸಂಬಳ ಬೋನಸ್ನಿಂದ 800 ಕೋಟಿ ಸೇರಿ ರೇಲ್ವೆ ಇಲಾಖೆಗೆ ಒಟ್ಟು 2400 ಕೋಟಿ ಹೊರೆಯಾಗಲಿದೆ. ಒಂದು ವೇಳೆ ಅವರು ಹೋರಾಟಕ್ಕೆ ಇಳಿದರೆ ಪ್ರತಿನಿತ್ಯ 300 ಕೋಟಿ ನಷ್ಟವಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯೂ ಇದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


