ಕೆಎಸ್ಸಿಎ ಚುನಾವಣೆಗೆ ಸ್ಪರ್ಧಿಸಲ್ಲ

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್ಸಿಎ) ಆಡಳಿತ ಚುಕ್ಕಾಣಿ ಹಿಡಿದಿದ್ದ ಖ್ಯಾತ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಹಾಗೂ ರಾಹುಲ್ ದ್ರಾವಿಡ್ ಅವರು ಈ ಬಾರಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಶುಕ್ರವಾರ ಘೋಷಿಸಿದ್ದಾರೆ.
ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂರು ವರ್ಷಗಳ ಸಾಧನಾ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಈ ಅಚ್ಚರಿಯ ವಿಷಯವನ್ನು ಅವರು ಬಹಿರಂಗಪಡಿಸಿದರು. ಕೆಎಸ್ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ, ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹಾಗೂ ಸಮಿತಿ ಸದಸ್ಯ ರಾಹುಲ್ ದ್ರಾವಿಡ್ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು. ನಾವು ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಅಧಿಕಾರಕ್ಕೆ ಬಂದೆವು. ಅದೇ ನಿಟ್ಟಿನಲ್ಲಿ ಅಭಿವೃದ್ಧಿಯನ್ನೂ ಮಾಡಿದ್ದೇವೆ. ಆದರೆ, ನಮ್ಮ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿರುವುದು ಬೇಸರ ಉಂಟುಮಾಡಿದೆ ಎಂದರು.
ಇದರಿಂದ ಬೇಸತ್ತು ಚುನಾವಣೆಯಿಂದ ಹಿಂದೆ ಸರಿಯುತ್ತಿಲ್ಲ. ಈಗಲೂ ನಾವು ಟೀಕೆಗಳಿಗೆ ಸೂಕ್ತ ಉತ್ತರ ನೀಡಲು ನಾವು ಸಿದ್ಧರಿದ್ದೇವೆ.ಆದರೆ, ಹೊಸ ಸಮಿತಿ ಬರಲಿ, ಉತ್ತಮ ಬೆಳವಣಿಗೆಯಾಗಲಿ ಎಂಬ ನಿರೀಕ್ಷೆಯಿಂದ ಹಿಂದೆ ಸರಿಯುತ್ತಿರುವುದಾಗಿ' ಕುಂಬ್ಳೆ ಸ್ಪಷ್ಟಪಡಿಸಿದರು.
ನವೆಂಬರ್ 21, 2010ರಂದು ಕುಂಬ್ಳೆ, ಶ್ರೀನಾಥ್ ಅವರು ವೆಂಕಟೇಶ್ ಪ್ರಸಾದ್ ಅವರೊಂದಿಗೆ ಕೆಎಸ್ಸಿಎಯಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಭಾರತ ತಂಡದ ಮಾಜಿ ಆಲ್ರೌಂಡರ್ ರೋಜರ್ ಬಿನ್ನಿ ಹಾಗೂ ಉದ್ಯಮಿ ಸದಾನಂದ ಮಯ್ಯ ಅವರನ್ನೊಳಗೊಂಡ ಕುಂಬ್ಳೆ ಪಡೆ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ತಂಡವನ್ನು ಚುನಾವಣೆಯಲ್ಲಿ ಸೋಲಿಸಿ ಅಧಿಕಾರ ಹಿಡಿದಿತ್ತು.
ಈಗ ಆಡಳಿತ ಮುಗಿಯುತ್ತಾ ಬಂದಿದ್ದು, ಈಗಾಗಲೇ ಚುನಾವಣೆ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಚುನಾವಣೆಯನ್ನು ಮುಂದೂಡಲಾಗಿದ್ದು, ಬರುವ ತಿಂಗಳು ಚುನಾವಣೆ ನಡೆಯುವ ನಿರೀಕ್ಷೆಯಿದ್ದು ಜನವರಿಯಲ್ಲಿ ಹೊಸ ಸಮಿತಿ ಆಡಳಿತ ಚುಕ್ಕಾಣಿಯನ್ನು ಹಿಡಿಯಲಿದೆ.
'ಕ್ರಿಕೆಟ್ ಆಟಗಾರರಾಗಿ ಕಳೆದ ಮೂರು ವರ್ಷಗಳಲ್ಲಿ ನಾವು ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ. ನಮ್ಮ ಪ್ರಮುಖ ಗುರಿ ರಾಜ್ಯದಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕ್ರಿಕೆಟ್ಗೆ ಸಂಬಂಧಿಸಿದ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದಾಗಿತ್ತು. ಅದನ್ನು ಸಾಧಿಸಿದ್ದೇವೆ. ಮುಂದೆ ಯಾರೇ ಅಧಿಕಾರಕ್ಕೆ ಬಂದರೂ, ರಾಜ್ಯದಲ್ಲಿ ಕ್ರಿಕೆಟ್ ಅಭಿವೃದ್ಧಿ ಹಿತದೃಷ್ಟಿಯಿಂದ ನಾವು ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ' ಎಂದು ಕುಂಬ್ಳೆ ತಿಳಿಸಿದರು.
ರಾಜ್ಯದಲ್ಲಿ ಸಕ್ರಿಯ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ವದಂತಿಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯನ್ನು ಕುಂಬ್ಳೆ ನಿರಾಕರಿಸಲೂ ಇಲ್ಲ. ರಾಜಕೀಯ ಪ್ರವೇಶಿಸುತ್ತೇನೆ ಎಂದು ಸ್ಪಷ್ಟಪಡಿಸಲೂ ಇಲ್ಲ.
'ಕೇವಲ ಒಂದು ಅವಧಿಯಲ್ಲಿ ಅಧಿಕಾರ ನಡೆಸುವುದು ನಮ್ಮೆಲ್ಲರ ಆಸಕ್ತಿಯಾಗಿತ್ತು. ಈ ಅವಧಿಯಲ್ಲಿ ನಾವು ಒಂದು ಆಶಾವಾದದೊಂದಿಗೆ ಅಧಿಕಾರ ಹಿಡಿದಿದ್ದೆವು. ಮುಂದೆ ಬರುವವರೂ ಸಹ ಆಶಾವಾದಿಗಳಾಗಿರುತ್ತಾರೆ' ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ಜಾವಗಲ್ ಶ್ರೀನಾಥ್ ಹೇಳಿದರು.
ವಿಂಡೀಸ್ ಎ ವಿರುದ್ಧದ ಸರಣಿ ಬಿಸಿಸಿಐ ತೀರ್ಮಾನ: ರಾಜ್ಯದಲ್ಲಿನ ಉತ್ತಮ ಮೂಲಭೂತ ಸೌಕರ್ಯಗಳನ್ನು ಮನಗಂಡಿರುವ ಬಿಸಿಸಿಐ, ವೆಸ್ಟ್ ಇಂಡೀಸ್ ಎ ಮತ್ತು ಭಾರತ ಎ ತಂಡಗಳ ನಡುವೆ ನಡೆದ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಯನ್ನು ಕರ್ನಾಟಕದಲ್ಲಿ ನಡೆಸಲು ತೀರ್ಮಾನಿಸಿತ್ತು.
'ಸರಣಿ ನಡೆಸಿದ್ದರಿಂದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಜಹೀರ್ ಖಾನ್ ಹಾಗೂ ಚೇತೇಶ್ವರ ಪೂಜಾರ ಸೇರಿದಂತೆ ಇತರ ಆಟಗಾರರು ಪಾಲ್ಗೊಂಡಿದ್ದರಿಂದ ಮೈಸೂರು, ಶಿವಮೊಗ್ಗ ಹಾಗೂ ಹುಬ್ಬಳ್ಳಿಯಲ್ಲಿ ಯುವ ಪೀಳಿಗೆಗೆ ಸ್ಫೂರ್ತಿ ತುಂಬಿದಂತಾಯಿತು. ಈ ಮೂರು ನಗರಗಳಿಂದ ಕನಿಷ್ಠ 25 ಯುವ ಆಟಗಾರರು ಸ್ಫೂರ್ತಿ ಪಡೆದರೂ ಅದು ನಮ್ಮ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಲಿದೆ' ಎಂದು ಶ್ರೀನಾಥ್ ತಿಳಿಸಿದರು.
'ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಅಂಗಣದ ನವೀಕರಣ ಸೇರಿದಂತೆ, ಮೈಸೂರು, ಶಿವಮೊಗ್ಗ ಹಾಗೂ ಹುಬ್ಬಳ್ಳಿ ನಗರಗಳು ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸಬಲ್ಲ ಸಾಮರ್ಥ್ಯ ಹೊಂದಿವೆ. ಅದೇ ರೀತಿ ಬೆಳಗಾವಿ ಹಾಗೂ ರಾಯಚೂರಿನಲ್ಲಿ ಕ್ರೀಡಾಂಗಣಗಳು ಇನ್ನೇನು ಸಿದ್ಧಗೊಳ್ಳುವ ಹಂತದಲ್ಲಿವೆ' ಎಂದರು.
ಸಚಿನ್ಗೆ ಅಭಿನಂದನೆ: ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಮೂವರೂ ಆಟಗಾರರು ಅಭಿನಂದನೆ ಸಲ್ಲಿಸಿದರು.
ಕಾರಣ ಏನಿರಬಹುದು?
ಚುನಾವಣೆ ಹತ್ತಿರವಾಗಿರುವ ಈ ಸಂದರ್ಭದಲ್ಲಿ ಕಳೆದ ಎರಡು ತಿಂಗಳಿಂದ ಕ್ರಿಕೆಟ್ ಸಂಸ್ಥೆಯಲ್ಲಿ ಕುಂಬ್ಳೆ ಪಡೆಗೆ ಬೆಂಬಲವಿಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ತಾವು ಸೋಲುವುದು ಖಚಿತ ಎಂಬುದನ್ನು ಕುಂಬ್ಳೆ ಪಡೆ ಅರಿತುಕೊಂಡಿದೆ. ಹೀಗಾಗಿ ಚುನಾವಣೆಯಿಂದ ಹಿಂದೆ ಸರಿದಿದೆ ಎಂಬ ವದಂತಿಗಳು ಕೆಎಸ್ಸಿಎ ಸುತ್ತ ಕೇಳಿಬಂದಿವೆ. ಬೃಜೇಶ್ ಪಟೇಲ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಉದ್ಯಮಿ ವಿಜಯ್ ಮಲ್ಯ ಒಂದಾಗಿರುವುದು ಕುಂಬ್ಳೆ ಪಡೆಯಲ್ಲಿ ಭೀತಿಯನ್ನುಂಟುಮಾಡಿದೆ ಎಂಬ ಮಾತುಗಳು ಕೆಎಸ್ಸಿಎ ವಲಯದಲ್ಲಿ ಕೇಳಿಬಂದಿವೆ. ತಮ್ಮದೇ ಒಂದು ಬಣ ನಿರ್ಮಿಸಿಕೊಂಡು ಇತರರನ್ನು ದೂರವಿರಿಸಿದ್ದು ಕುಂಬ್ಳೆಗೆ ವಿರೋಧಿಗಳು ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.ಹೀಗಾಗಿ ಚುನಾವಣೆಯಲ್ಲಿ ಇತರೆ ಸದಸ್ಯರ ಬೆಂಬಲದಿಂದ ಕುಂಬ್ಳೆ ಪಡೆ ವಂಚಿತವಾಗಿದೆ ಎಂಬ ದೂರುಗಳು ಕೇಳಿಬಂದಿವೆ.
ಪಾಂಟಿಂಗ್ಗೆ ಕುಂಬ್ಳೆ ಟಾಂಗ್
ಬೆಂಗಳೂರು: ಮಂಕಿಗೇಟ್ ಪ್ರಕರಣದಲ್ಲಿ ಸಚಿನ್ ಪಾತ್ರವನ್ನು ಪ್ರಶ್ನಿಸಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ಗೆ ಭಾರತ ಮಾಜಿ ನಾಯಕ ಅನಿಲ್ ಕುಂಬ್ಳೆ ಟಾಂಗ್ ನೀಡಿದ್ದಾರೆ.
ಪಾಂಟಿಂಗ್ ತಮ್ಮ ದ ಕ್ಲೋಸ್ ಆಫ್ ಪ್ಲೇ ಪುಸ್ತಕದಲ್ಲಿ ಆಸೀಸ್ನ ಆ್ಯಂಡ್ರೂ ಸೈಮಂಡ್ಸ್ ವಿರುದ್ಧ ಹರ್ಭಜನ್ ಸಿಂಗ್ ಜನಾಂಗೀಯ ನಿಂಧನೆ ಮಾಡಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಸಚಿನ್ ಏಕೆ ಹರ್ಭಜನ್ ಅವರನ್ನು ರಕ್ಷಿಸಿದರು ಎಂದು ಪ್ರಶ್ನಿಸಿದ್ದರು.
ಸಿಡ್ನಿಯಲ್ಲಿ ಈ ಪ್ರಕರಣ ನಡೆದು 5 ವರ್ಷಗಳಾಗಿವೆ. ಆಗಿನಿಂದ ಈಗಿನವರೆಗೂ ಸಾಕಷ್ಟು ಹೇಳಿಕೆಗಳು ಕೇಳಿ ಬಂದಿವೆ. ಆ ವಿಚಾರವಾಗಿ ಈಗ ನಾನು ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ. ಎಲ್ಲರು ಈ ವಿಚಾರವನ್ನು ಮರೆತಿದ್ದಾರೆ. ಈ ಪ್ರಕರಣದಲ್ಲಿ ಏನಾಯಿತು ಎಂದು ತಿಳಿದುಕೊಳ್ಳಬೇಕಾದರೆ ನನ್ನ ಪುಸ್ತಕ ಹೊರ ಬರುವವರೆಗೂ ಕಾಯಬೇಕಾಗಿದೆ ಎಂದು ಕುಬ್ಳೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿನ್ ಜತೆ ಆಡಿದ್ದೇ ನನ್ನ ವೃತ್ತಿ ಜೀವನದಲ್ಲಿ ಒಂದು ಸಾಧನೆ. ಅಂತಹ ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆ ಪಡುತ್ತೇನೆ
-ಜಾವಗಲ್ ಶ್ರೀನಾಥ್
ಸಚಿನ್ ಅವರೊಂದಿಗೆ ಕ್ರಿಕೆಟ್ ಆಡಿದ್ದೇನೆ ಎಂಬ ಹೆಮ್ಮೆ ನನ್ನಲ್ಲಿದೆ. ಸಚಿನ್ ಅವರ ಕೊನೆಯ ಎರಡು ಪಂದ್ಯಗಳನ್ನು ನಾವು ಸಂಭ್ರಮಿಸಬೇಕು
-ಅನಿಲ್ ಕುಂಬ್ಳೆ
ಸಚಿನ್ ಅವರೊಂದಿಗೆ ಕ್ರಿಕೆಟ್ ಆಡಿದ್ದು ಅವಿಸ್ಮರಣೀಯ. ಭವಿಷ್ಯದಲ್ಲಿ ಸಚಿನ್ ಜತೆ ಕ್ರಿಕೆಟ್ ಆಡಿದ ಕುರಿತು ನಾನು ನನ್ನ ಮೊಮ್ಮಕ್ಕಳಿಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ
-ರಾಹುಲ್ ದ್ರಾವಿಡ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


