ಪ್ರಧಾನ ಸುದ್ದಿ

ಚಿದುಗೆ ಅಹವಾಲು

ಚಿದುಗೆ ಅಹವಾಲು
Published On :

ನವದೆಹಲಿ: ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಉದ್ಯಮಿ ಕುಮಾರಮಂಗಲಂ ಬಿರ್ಲಾ ಶುಕ್ರವಾರ ಸಂಜೆ ವಿತ್ತ ಸಚಿವ ಪಿ.ಚಿದಂಬರಂ ಅವರನ್ನು ಭೇಟಿಯಾಗಿದ್ದಾರೆ. ಬಳಿಕ ಮಾತನಾಡಿದ ಅವರು, ಹಿಂಡಾಲ್ಕೋ ಕಂಪನಿ ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ಎಫ್‌ಐಆರ್ ಕುರಿತು ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
'ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ವಿಚಾರವನ್ನು ವಿತ್ತ ಸಚಿವರ ಮುಂದೆ ಪ್ರಸ್ತಾಪಿಸಿದ್ದೇನೆ. ನಾವು ಅನೇಕ ಉದ್ದಿಮೆ ನಡೆಸುತ್ತಿದ್ದೇವೆ. ಹಾಗಾಗಿ ಇತರ ವಿಚಾರಗಳೂ ಮಾತುಕತೆ ವೇಳೆ ಚರ್ಚಿಸಿದ್ದೇವೆ' ಎಂದು ಅವರು ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಕಂಪನಿಯು ಬ್ಯಾಂಕಿಂಗ್ ಸೇವೆ ಆರಂಭಿಸಲು ಸಲ್ಲಿಸಿರುವ ಅರ್ಜಿಯ ಮೇಲೆ ಈ ಎಫ್‌ಐಆರ್ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿರ್ಲಾ ಭರವಸೆ ವ್ಯಕ್ತಪಡಿಸಿದ್ದಾರೆ.
ಮೂಲಗಳ ಪ್ರಕಾರ, ಬಿರ್ಲಾ ವಿರುದ್ಧದ ಎಫ್‌ಐಆರ್‌ನಿಂದ ಸೃಷ್ಟಿಯಾದ ಆತಂಕ ನಿವಾರಣೆಗೆ ಪ್ರಧಾನಿ ಸಿಂಗ್  ಅವರು ವಾಣಿಜ್ಯ ಸಚಿವ ಆನಂದ್ ಶರ್ಮಾ ಹಾಗೂ ವಿತ್ತ ಸಚಿವ ಪಿ. ಚಿದಂಬರಂ ಅವರಿಗೆ ಉದ್ಯಮಿಗಳ ಜತೆಗೆ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿರ್ಲಾ- ಚಿದು ಭೇಟಿ ನಡೆದಿದೆ ಎನ್ನಲಾಗಿದೆ. ಈ  ವೇಳೆ ಬಿರ್ಲಾ ಅವರು ಎಫ್‌ಐಆರ್ ಸೇರಿದಂತೆ ಅನೇಕ ವಿಚಾರಗಳ ಕುರಿತು ಚಿದು ಜತೆ ಚರ್ಚೆ ನಡೆಸಿದ್ದಾರೆ.
ಉದ್ಯಮಿಗಳ ಕಳವಳ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ಖ್ಯಾತ ಉದ್ಯಮಿ ಕುಮಾರಮಂಗಲಂ ಬಿರ್ಲಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸುತ್ತಿದ್ದಂತೆ ಔದ್ಯಮಿಕ ವಲಯದಲ್ಲಿ 'ಹೂಡಿಕೆದಾರರ ಭಾವನೆಗೆ ಧಕ್ಕೆಯಾಗುವ' ಆತಂಕ ವ್ಯಕ್ತವಾಗಿದೆ.
ವಾಣಿಜ್ಯ ಸಚಿವ ಆನಂದ್ ಶರ್ಮಾ ಮಾತ್ರವಲ್ಲದೆ ಅನೇಕ ಕೈಗಾರಿಕೋದ್ಯಮಿಗಳು ಕೂಡ ಬಿರ್ಲಾ ವಿರುದ್ಧದ ಎಫ್‌ಐಆರ್ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ಉದ್ಯಮಿಗಳು ಭಾರತದಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಬಿರ್ಲಾ ವಿರುದ್ಧ ಎಫ್‌ಐಆರ್‌ಗೆ ಸಂಬಂಧಿಸಿ ಉದ್ದಿಮೆದಾರರ ಒಕ್ಕೂಟ(ಸಿಐಐ) ಕೂಡ ಕಳವಳ ವ್ಯಕ್ತಪಡಿಸಿದೆ.

ಖ್ಯಾತ ಕೈಗಾರಿಕೋದ್ಯಮಿಗಳ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಈ ರೀತಿಯ ಕ್ರಮಗಳಿಂದ ಔದ್ಯಮಿಕ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು ಎಂದಿದೆ ಸಿಐಐ.
'ಈ ನೆಲದ ಕಾನೂನಿನಂತೆ ಯಾವುದೇ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸಿಬಿಐಗಿದೆ. ಆದರೆ, ಖ್ಯಾತ ಕೈಗಾರಿಕೋದ್ಯಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಆರೋಪಗಳ ಕುರಿತು ಸಾಕಷ್ಟು ಪರಿಶೀಲನೆ ನಡೆಸಬೇಕು ಎಂದು ಸಿಐಐ ಅಧ್ಯಕ್ಷ ಕ್ರಿಶ್ ಗೋಪಾಲಕೃಷ್ಣನ್ ಹೇಳಿದ್ದಾರೆ.
ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿ ಗೌರವಗಳಿಸಲು ಹಲವು ವರ್ಷಗಳೇ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸಿದ್ಧ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಎಂದು ಕುಮಾರಮಂಗಲಂ ಹೆಸರೆತ್ತದೆ ಗೋಪಾಲಕೃಷ್ಣನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇಂಡಿಯಾ ಇಂಕ್: ಉದ್ಯಮಿಗಳ ಒಕ್ಕೂಟವಾದ ಇಂಡಿಯಾ ಇಂಕ್ ಕೂಡ ಬಿರ್ಲಾ ವಿರುದ್ಧದ ಎಫ್‌ಐಆರ್ ಕುರಿತು ಆತಂಕ ವ್ಯಕ್ತಪಡಿಸಿದೆ. ಇದು ದೇಶದ ಹೂಡಿಕೆಯ ವಾತಾವರಣದ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.

ಎಫ್‌ಐಆರ್ ದಾಖಲಿಸಿದ್ದರಿಂದ ಹಿಂಜರಿಕೆ ಏನೂ ಆಗಿಲ್ಲ. ನಮ್ಮ ಕಡೆಯಿಂದ ಯಾವುದೇ ತಪ್ಪಾಗಿಲ್ಲ. ಹೀಗಾಗಿ ನಾವು ಯಾಕೆ ಚಿಂತೆ ಮಾಡಬೇಕು?. ಹಣಕಾಸು ಸಚಿವರ ಜತೆ ಈ ಬಗ್ಗೆ ಚರ್ಚೆ ನಡೆಸಿದ್ದೇನೆ.
-ಕುಮಾರಮಂಗಲಂ ಬಿರ್ಲಾ, ಬಿರ್ಲಾ ಸಮೂಹ ಸಂಸ್ಥೆ ಅಧ್ಯಕ್ಷ

ಬಿರ್ಲಾ ಒಬ್ಬ ಗೌರವಾನ್ವಿತ ಕೈಗಾರಿಕೋದ್ಯಮಿ. ಸೂಕ್ತ ಸಾಕ್ಷ್ಯಾಧಾರವಿಲ್ಲದೆ ಅವರ ಮೇಲೆ ಆರೋಪ ಮಾಡಿರುವುದರಿಂದ ವಿದೇಶಿ ಹೂಡಿಕೆದಾರರ ದೃಷ್ಟಿಯಲ್ಲಿ ಹಾಗೂ ದೇಶದ ಉದ್ಯಮಿಗಳ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ.
-ನಾರಾಯಣಮೂರ್ತಿ, ಇನ್ಫೋಸಿಸ್ ಮುಖ್ಯಸ್ಥ

'ಪ್ರಭಾವ ಬೀರುವ ಯತ್ನ'
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ ಕೈಗಾರಿಕೋದ್ಯಮಿ ಕುಮಾರ ಮಂಗಲಂ ಬಿರ್ಲಾ ಪರ ಹೇಳಿಕೆ ನೀಡಿರುವ ವಾಣಿಜ್ಯ ಸಚಿವ ಆನಂದ್ ಶರ್ಮಾ ಅವರ ಕ್ರಮಕ್ಕೆ ಸಿಪಿಎಂನಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಇದು ಪ್ರಕರಣದ ಮೇಲೆ ಪ್ರಭಾವ ಬೀರುವ ಲಜ್ಜೆಗೇಡಿ ಪ್ರಯತ್ನ ಎಂದು ಸಿಪಿಎಂ ಆಕ್ರೋಶ ವ್ಯಕ್ತಪಡಿಸಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ಉದ್ಯಮಿಯೊಬ್ಬರನ್ನು ವಾಣಿಜ್ಯ ಸಚಿವ ಆನಂದ್ ಶರ್ಮಾ ನಿರಪರಾಧಿ ಎಂದಿರುವುದು ಆಘಾತಕಾರಿ. ಇದು ಪ್ರಕರಣದ ಮೇಲೆ ಪ್ರಭಾವ ಬೀರುವ ಲಜ್ಜಾಹೀನ ನಡೆಯಷ್ಟೇ ಅಲ್ಲ, ಸಿಬಿಐಗೆ ಭಯ ಹುಟ್ಟಿಸುವ ಯತ್ನವೂ ಆಗಿದೆ ಎಂದು ಸಿಪಿಎಂ ಆರೋಪಿಸಿದೆ.

ಸಮರ್ಥನೆಗೆ ವಿಫಲ
ಮೊದಲ ಬಾರಿ ಅರ್ಜಿ ತಿರಸ್ಕೃತಗೊಂಡಿದ್ದರೂ ಎರಡನೇ ಬಾರಿಗೆ ಹಿಂಡಾಲ್ಕೋ ಕಂಪನಿಗೆ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಮಾಡಿದ ಸಂಬಂಧ ವಿವರಣೆ ನೀಡಲು ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪಾರಖ್ ವಿಫಲರಾಗಿದ್ದಾರೆ ಎಂದು ಸಿಬಿಐ ಹೇಳಿದೆ. ಪಾರಖ್ ವಿರುದ್ಧ ಪ್ರಕರಣ ದಾಖಲಿಸುವ ಮೊದಲು ಅವರ ವಿಚಾರಣೆ ನಡೆಸಲಾಗಿತ್ತು. ಆದರೆ, ಈ ವೇಳೆ ಹಿಂಡಾಲ್ಕೋ ಅರ್ಜಿಯನ್ನು ತಿರಸ್ಕರಿಸಿದ ನಿರ್ಧಾರವನ್ನು ಬದಲಿಸುವ ನಿಲುವಿನ ಕುರಿತು ಪ್ರಶ್ನಿಸಲಾಗಿತ್ತು. ಆದರೆ, ಅವರು ಸೂಕ್ತ ಉತ್ತರ ನೀಡುವಲ್ಲಿ ವಿಫಲವಾಗಿದ್ದರು. ಹಿಂಡಾಲ್ಕೋ ಕಂಪನಿಯ ಅರ್ಜಿಯನ್ನು 2005ರಲ್ಲಿ ತಿರಸ್ಕರಿಸಲಾಗಿತ್ತು. ಆ ಬಳಿಕ ಬಿರ್ಲಾ ಅವರು ಪಾರಖ್‌ಗೆ 2 ಪತ್ರ ಬರೆದಿದ್ದರು. ಜತೆಗೆ ವೈಯಕ್ತಿಕವಾಗಿ ಪಾರಖ್‌ರನ್ನು ಭೇಟಿ ಕೂಡ ಮಾಡಿದ್ದರು. ಆ ಬಳಿಕವೇ ಪಾರಖ್ ತಮ್ಮ ನಿಲುವು ಬದಲಿಸಿದ್ದಾರೆ. ಹಿಂಡಾಲ್ಕೋಗೆ ಕಲ್ಲಿದ್ದಲು ಬ್ಲಾಕ್ ಮಂಜೂರಾಗುವಂತೆ ನೋಡಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಸಾರ್ವಜನಿಕ ಸಂಸ್ಥೆಗಳಾದ ನೈವೇಲಿ ಲಿಗ್ನೈಟ್ ಮತ್ತು ಮಹಾನಂದಿ ಕೋಲ್ ಫೀಲ್ಡ್ಸ್‌ಗೆ ಹಂಚಿಕೆ ಮಾಡಲಾಗಿದ್ದ ಒಡಿಶಾದ ತಲಬಿರಾ-1, 2ನೇ ಬ್ಲಾಕ್‌ನಲ್ಲಿ ಹಿಂಡಾಲ್ಕೋಗೆ ಪಾಲು ನೀಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.