ಪ್ರಧಾನ ಸುದ್ದಿ

ಸೌಜನ್ಯಾ ಪ್ರಕರಣ ಸಿಬಿಐ ಅಗತ್ಯವಿಲ್ಲ

Published On :

ಬೆಂಗಳೂರು: ಸೌಜನ್ಯಾ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸಿಐಡಿಯ ವಿವಿಧ ವಿಭಾಗಗಳು ಹಾಗೂ ಪ್ರಕರಣದ ತನಿಖೆ ಕುರಿತು ಪರಿಶೀಲನೆ ಬಳಿಕ ಮಾತನಾಡಿದರು. ಈ ಪ್ರಕರಣ ಜರುಗಿದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್  ಅಧಿಕಾರದಲ್ಲಿರಲಿಲ್ಲ. ಪ್ರಕರಣದ ತನಿಖಾಧಿಕಾರಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ವಸಂತ ಬಂಗೇರ ಸದನದಲ್ಲಿ ವಿಷಯ ಪ್ರಸ್ತಾಪಿಸಿದ ನಂತರ ತನಿಖಾಧಿಕಾರಿಯನ್ನೂ ಬದಲಾಯಿಸಿದ್ದೇವೆ ಎಂದು ಹೇಳಿದರು.       
ಯಾರ ಒತ್ತಡವೂ ಇಲ್ಲ: ತನಿಖೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಯಾರ ಒತ್ತಡವೂ ಇಲ್ಲ. ನಾನಾಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ ಹಸ್ತಕ್ಷೇಪ ನಡೆಸುತ್ತಿಲ್ಲ. ನಿಮ್ಮ ಮೇಲೆ ಬೇರೆ ಯಾರದ್ದಾದರೂ ಒತ್ತಡವಿದೆಯೇ ಎಂದು ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳ ಬಳಿ ಪ್ರಸ್ತಾಪಿಸಿದ್ದೇನೆ. ಸರ್ಕಾರದ ಒಳಗಿನಿಂದ ಅಥವಾ ಹೊರಗಿನಿಂದ ಯಾವುದೇ ಒತ್ತಡವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದರು.
ಈ ಪ್ರಕರಣದ ತನಿಖೆಗೆ ಚುರುಕಿನಿಂದ ನಡೆಯುತ್ತಿದೆ. ಸದ್ಯದಲ್ಲೇ ಅಧಿಕಾರಿಗಳು ವರದಿ ನೀಡುತ್ತಾರೆ. ಬಳಿಕ ಬಹಿರಂಗವಾಗಿಯೇ ಈ ಬಗ್ಗೆ ಚರ್ಚೆ ನಡೆಸೋಣ ಎಂದು ಹೇಳಿದರು.
ಚರ್ಚೆ: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಇರುವ ಸಜಾಬಂಧಿಗಳನ್ನು ಪರಿವರ್ತನೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದೆ ಇದೆ. ಈ ಬಗ್ಗೆ ಹಿಂದಿನ ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಕೈದಿಗಳ ಬಿಡುಗಡೆ ವಿಚಾರದಲ್ಲಿ ಸರ್ಕಾರಕ್ಕೆ ಕೇವಲ ಶಿಫಾರಸು ಅಧಿಕಾರ ಮಾತ್ರ ಇದೆ. ಇದಕ್ಕೆ ಅಂತಿಮವಾಗಿ ರಾಜ್ಯಪಾಲರ ಅಂಕಿತ ಬೇಕು. ಆದರೆ ಈ ಸಂಬಂಧ ಸ್ಪಷ್ಟ ಮಾರ್ಗದರ್ಶಿ ಸೂತ್ರ ರಚಿಸುವಂತೆ ಅವರು ಸೂಚನೆ ನೀಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ವಿವರಿಸಿದರು.
ಶಿಂದೆ ಪತ್ರ; ಪರಿಶೀಲಿಸಿ ಸಮಿತಿ ರಚನೆ
ಭಯೋತ್ಪಾದನೆ ಸಂಬಂಧ ಅಮಾಯಕ ಅಲ್ಪಸಂಖ್ಯಾತ ಯುವಕರ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂದೆ ಬರೆದ ಪತ್ರ ರಾಜ್ಯ ಸರ್ಕಾರಕ್ಕೆ ತಲುಪಿದ್ದು, ಅದರ ಆಧಾರದ ಮೇಲೆ ಸಮಿತಿ ರಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು. ಭಯೋತ್ಪಾದನಾ ಪ್ರಕರಣ ಎದುರಿಸುತ್ತಿರುವ ಅಮಾಯಕ ಯುವಕರ ವಿಚಾರಣೆಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವ ಬಗ್ಗೆ ಚುನಾವಣೆಗೆ ಮುನ್ನ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲೂ ಭರವಸೆ ನೀಡಲಾಗಿತ್ತು. ಈ ಸಂಬಂಧ ಸದ್ಯದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಭಯೋತ್ಪಾದನೆಗೆ ಸಂಬಂಧಿಸಿದ ಹಲವು ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಗಂಭೀರ ಪ್ರಕರಣ ಹೊರತು ಪಡಿಸಿ ಉಳಿದವುಗಳನ್ನು ಮಾತ್ರ ಸಮಿತಿ ಮುಂದೆ ತರಲಾಗುವುದು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.