ನೀವು ಸಾಕ್ಷ್ಯ ಕೊಟ್ಟೇ ಇಲ್ಲ!

ನವದೆಹಲಿ/ಇಸ್ಲಾಮಾಬಾದ್: ಮುಂಬೈ ದಾಳಿಯ ನಿಧಾನಗತಿಯ ವಿಚಾರಣೆಗೆ ಸಂಬಂಧಿಸಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಂದ ತರಾಟೆಗೊಳಗಾಗಿರುವ ಪಾಕಿಸ್ತಾನವೀಗ ಹೊಸ ನಾಟಕ ಶುರುಮಾಡಿದೆ. 26/11 ದಾಳಿಗೆ ಸಂಬಂಧಿಸಿ ಭಾರತ ಸೂಕ್ತ ಸಾಕ್ಷ್ಯಗಳನ್ನೇ ನೀಡಿಲ್ಲ ಎಂದು ಹೊಸ ವರಾತ ಆರಂಭಿಸಿದೆ.
ಪಾಕ್ನ ಈ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮುಂಬೈ ದಾಳಿಗೆ ಸಂಬಂಧಿಸಿದ ಶೇ. 99ರಷ್ಟು ಸಾಕ್ಷ್ಯ ಪಾಕಿಸ್ತಾನದಲ್ಲೇ ಇದೆ ಎಂದು ತರಾಟೆಗೆ ತೆಗೆದುಕೊಂಡಿದೆ.
ಮುಂಬೈ ದಾಳಿಯ ಇಡೀ ಯೋಜನೆ ಸಿದ್ಧವಾಗಿದ್ದು ಪಾಕ್ನೆಲದಲ್ಲಿ. ದಾಳಿಯಲ್ಲಿ ಪಾಲ್ಗೊಂಡಿದ್ದ ಉಗ್ರರೂ ಪಾಕಿಸ್ತಾನದವರು. ಅವರಿಗೆ ತರಬೇತಿ, ಹಣಕಾಸು ಸೌಲಭ್ಯ ಕಲ್ಪಿಸಿದ್ದೂ ಪಾಕ್ನಲ್ಲೆ. ಇದಲ್ಲದೆ, ದಾಳಿಗೆ ಸಂಬಂಧಿಸಿ ಭಾರತಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನದ ನ್ಯಾಯಾಂಗ ಆಯೋಗ ಕೇಳಿದ್ದ ಎಲ್ಲಾ ಮಾಹಿತಿಯನ್ನೂ ಅ.14- 15ರಂದು ನೀಡಲಾಗಿದೆ. ಪಾಕ್ಗೆ ಇನ್ನೇನು ಬೇಕು ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಸಯೀದ್ ಅಕ್ಬರುದ್ದೀನ್ ಕೇಳಿದ್ದಾರೆ. ಅಮೆರಿಕ ಭೇಟಿ ವೇಳೆ ಮುಂಬೈ ದಾಳಿಗೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಒಬಾಮ ಅವರು ಪಾಕ್ ಪ್ರಧಾನಿ ನವಾಜ್ ಷರೀಫ್ ಕಿವಿಹಿಂಡಿದ ಬೆನ್ನಲ್ಲೇ ಪಾಕಿಸ್ತಾನದ ವಿದೇಶಾಂಗ ವಕ್ತಾರ ಅಜೀಜ್ ಚೌದುರಿ ಭಾರತ ಸೂಕ್ತ ದಾಖಲೆಗಳನ್ನು ನೀಡೇ ಇಲ್ಲ ಎನ್ನುವ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹೇಳಿಕೆ ವಿವಾದದ ರೂಪ ಪಡೆಯುತ್ತಿದ್ದಂತೆ ಅಜೀಜ್ ಚೌದುರಿ ತಮ್ಮ ಹೇಳಿಕೆ ಬದಲಿಸಿದ್ದಾರೆ. ಮುಂಬೈ ದಾಳಿಯ ವಿಚಾರಣೆಯು ಭಾರತಕ್ಕೆ ಭೇಟಿ ನೀಡಿರುವ ನ್ಯಾಯಾಂಗ ಆಯೋಗದ ಮಾಹಿತಿಯನ್ನು ಅವಲಂಬಿಸಿದೆ ಎಂದು ಶನಿವಾರ ತಿಳಿಸಿದ್ದಾರೆ.
ಲಷ್ಕರ್ ಉಗ್ರನ ಹತ್ಯೆ
ಶ್ರೀನಗರ: ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯ ಗುಂಡಿಗೆ ಲಷ್ಕರ್ ಎ ತೊಯ್ಬಾದ ವಾಂಟೆಡ್ ಉಗ್ರ ಅಬ್ಬಾಸ್ ಅಹಮದ್ ರಿಶಿ ಬಲಿಯಾಗಿದ್ದಾನೆ. ಘಟನೆಯಲ್ಲಿ ನಾಗರಿಕರೊಬ್ಬರಿಗೆ ಗಾಯವಾಗಿದೆ. ಹುಸನ್ಪೊರಾ- ನಾಗಬಲ್ ಗ್ರಾಮದಲ್ಲಿ ಪೊಲೀಸರು ಹಾಗೂ ರಾಷ್ಟ್ರೀಯ ರೈಫಲ್ಸ್ನ ಜಂಟಿ ತಂಡ ಉಗ್ರರಿಗಾಗಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಆತ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


