ಗುಲ್ಬರ್ಗ-ಬೀದರ್ ರೈಲು; ರಾಜ್ಯದ ಪಾಲು?
ಕ.ಪ್ರ.ವಾರ್ತೆ, ಗುಲ್ಬರ್ಗ, ಅ. 28-
30 ವರ್ಷಗಳಿಂದ ತೆವಳುತ್ತಿರುವ ಗುಲ್ಬರ್ಗ- ಬೀದರ್ 110 ಕಿಮೀ ಉದ್ದದ ರೈಲು ಮಾರ್ಗ ನಿರ್ಮಾಣ ಕಾಮಗಾರಿ ತನ್ನ ವೇಗ ಹೆಚ್ಚಿಸಿಕೊಳ್ಳುವುದು ಯಾವಾಗ ಎಂಬುದು ಹೈ-ಕ ಭಾಗದ ಜನರನ್ನು ಕಾಡುತ್ತಿರುವ ಪ್ರಶ್ನೆ.
ಏಕೆಂದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲುದಾರಿಕೆಯಲ್ಲಿರುವ ಈ ಯೋಜನೆ 3 ದಶಕಗಳಿಂದ ಕುಂಟುತ್ತಲೇ ಸಾಗಿದೆ. ಈ ಮಾರ್ಗದ ಬೀದರ್ನಿಂದ ಹುಮನಾಬಾದ್ವರೆಗಿನ 48 ಕಿಮೀ ಮಾರ್ಗ ನಿರ್ಮಾಣ ಪೂರ್ಣಗೊಂಡರೂ ಗುಲ್ಬರ್ಗದಿಂದ ಕಾಮಗಾರಿ ಈಗಷ್ಟೇ ಶುರುವಾಗಿರುವುದರಿಂದ ಕಾಮಗಾರಿ ನಿರೀಕ್ಷೆಯಂತೆ ವೇಗ ಪಡೆಯದೆ ಈ ಭಾಗದ ಜನರ ರೇಲ್ವೆ ಸಂಪರ್ಕದ ಕನಸು ಕನಸಾಗಿಯೇ ಉಳಿಯುವಂತೆ ಮಾಡಿದೆ.
ಕೇಂದ್ರ- ರಾಜ್ಯ ಸಹಭಾಗಿತ್ವ: 3 ದಶಕಗಳಿಂದ ರೇಲ್ವೆ ಮಂತ್ರಾಲಯದ ಅಲಕ್ಷತನದಿಂದಾಗಿ ಮೂಲೆ ಸೇರಿದ್ದ ಈ ಯೋಜನೆಗೆ ಇದೀಗ ಕೇಂದ್ರ ರೇಲ್ವೆ ಸಚಿವರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹೆಚ್ಚಿನ ಆದ್ಯತೆ ನೀಡಿದ್ದರಿಂದ ಈ ಯೋಜನೆಯ ಕಾಮಗಾರಿಗಳೆಲ್ಲವೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ರೇಲ್ವೆ ಸಚಿವಾಲಯ ಹೂಡಿದಷ್ಟೇ ಸಮ ಮೊತ್ತದ ಹಣ ರಾಜ್ಯದಿಂದಲೂ ಹರಿದು ಬರಬೇಕು. ಆದರೆ, ರಾಜ್ಯ ತನ್ನ ಪಾಲಿನ ಹಣ ಕೊಡುವಲ್ಲಿ ತೋರುತ್ತಿರುವ ವಿಳಂಬತನದಿಂದಾಗಿ ಖರ್ಗೆಯವರೇ ರೇಲ್ವೆ ಸಚಿವರಾಗಿದ್ದರೂ ಸಹ ಈ ಕಾಮಗಾರಿ ನಿರೀಕ್ಷಿತ ವೇಗ ಪಡೆದುಕೊಳ್ಳಲಾಗುತ್ತಿಲ್ಲ.
881 ಕೋಟಿ ಮೊತ್ತದ ಈ ಯೋಜನೆ ಶುರುವಾಗಿ 3 ದಶಕದ ನಂತರ ಇದೀಗ 360 ಕೋಟಿ ವೆಚ್ಚವಾಗಿದೆ. ಕಳೆದ 4 ತಿಂಗಳಲ್ಲಿ ಖರ್ಗೆಯವರೇ ಈ ಯೋಜನೆಯ ಮೇಲಿರುವ ಕುರಿಕೋಟಾ- ನಾವದಗಿ ರೇಲ್ವೆ ನಿಲ್ದಾಣಗಳನ್ನು ಸೇರಿಸುವ ಬೆಣ್ಣೆತೊರಾ ನದಿ ಸೇತುವೆ ಕಾಮಗಾರಿ (12.60 ಕೋಟಿ) ಹಾಗೂ 1.5 ಕಿಮೀ ಉದ್ದದ ಮರಗುತ್ತಿ ಸುರಂಗ ಮಾರ್ಗ ನಿಮಾರ್ಣ (60 ಕೋಟಿ) ಯೋಜನೆಗೆ ಅಡಿಗಲ್ಲು ಇಡುವ ಮೂಲಕ ಯೋಜನೆಯ ಗತಿ ಬದಲಿಸುವ ಪ್ರಯತ್ನ ಮಾಡಿದ್ದಾರಾದರೂ ರಾಜ್ಯದ ಪಾಲಿನ ಹಣ ಸರಾಗವಾಗಿ ಹರಿದುಬಾರದೆ ಈ ಯೋಜನೆ ಕುಂಟುತ್ತಲೇ ಸಾಗಿದ್ದು ಕಟು ವಾಸ್ತವ.
ಯೋಜನೆಗೆ ರಾಜ್ಯದ ಪಾಲು 250 ಕೋಟಿ ಮಂಜೂರಾಗಬೇಕಿತ್ತು. ಆದರೆ ಬಿಡುಗಡೆಯಾಗಿದ್ದು ಕೇವಲ 100 ಕೋಟಿ. ಇನ್ನೂ 150 ಕೋಟಿ ಬಾಕಿ, ಬಜೆಟ್ ಘೋಷಣೆಗಿಂತಲೂ (10 ಕೋಟಿ) 6 ಪಟ್ಟು ಹೆಚ್ಚು (60 ಕೋಟಿ) ಹೆಚ್ಚು ಹಣ ನೀಡಲು ರೇಲ್ವೆ ಮುಂದಾಗಿದೆ. ಯೋಜನೆಯ ಮೇಲೆ ಹಣ ವೆಚ್ಚವಾದಂತೆ ಮಾಸಿಕ ಖರ್ಚು- ವೆಚ್ಚಕ್ಕೆ ತಕ್ಕಂತೆ ರಾಜ್ಯದ ಪಾಲಿನ ಹಣ ಹರಂದು ಬಂದಲ್ಲಿ ಯೋಜನೆಗೆ ವೇಗ ದೊರಕುತ್ತದೆ. ಹಣ ಬಾರದೆ ಹೋದಲ್ಲಿ ಯೋಜನೆ ಅಂದುಕೊಂಡಂತೆ 2015ರ ಮಾರ್ಚ್ನಲ್ಲಿ ಪೂರ್ಣಗೊಳ್ಳುವುದು ಅನಿಶ್ಚಿತ. ಕೇಂದ್ರದ ರೇಲ್ವೆ ಸಚಿವ ಖರ್ಗೆ ಕೃಪಾಕಟಾಕ್ಷಕ್ಕೆ ಪಾತ್ರವಾಗಿರೋ ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ ರಾಜ್ಯದ ಪಾಲಿನ ಹಣ ಹೊಂದಿಸುವುದು ಯಾವಾಗ ಎಂಬುದೇ ಯಕ್ಷ ಪ್ರಶ್ನೆ.
ಗುಲ್ಬರ್ಗದಲ್ಲಿ ನಡೆದ ದಕ್ಷಿಣ ಮಧ್ಯ ರೇಲ್ವೆಯ ಉನ್ನತಾಧಿಕಾರಿಗಳ ಸಭೆಯಲ್ಲಿಯೂ ಈ ವಿಚಾರ ಚರ್ಚೆಯಾಯಿತು. ಅಲ್ಲದೆ ರಾಜ್ಯದ ಪಾಲು 150 ಕೋಟಿ ಬಂದಲ್ಲಿ ಗುಲ್ಬರ್ಗ- ಹಳ್ಳಿಖೇಡ ಮಾರ್ಗ ನಿಮಾರ್ಣಕ್ಕೆ ಅನುಕೂಲ ಎಂಬ ಅಭಿಪ್ರಾಯ ಕೇಳಿಬಂತು.
ಆದರೆ, ರಾಜ್ಯದ ಪಾಲಿನ ಹಣ ಬಿಡುಗಡೆಯಲ್ಲಿನ ವಿಳಂಬತನ ಮಹತ್ವದ ಯೋಜನೆಯ ಪ್ರಗತಿಗೆ ಪೆಟ್ಟು ನೀಡುತ್ತಿರುವುದು ವಿಪರ್ಯಾಸ.
ಗುಲ್ಬರ್ಗ- ಬೀದರ್ ರೈಲು ಮಾರ್ಗದ ಪ್ರಾಮುಖ್ಯತೆ
- ಬೀದರ್, ಗುಲ್ಬರ್ಗ ಹಾಗೂ ನಾಂದೇಡ್ ಐತಿಹಾಸಿಕ ನಗರಗಳನ್ನು ಬೆಸೆಯುವ ಮಾರ್ಗ
- ಬೆಂಗಳೂರಿನಿಂದ ನವದೆಹಲಿಗೆ ಇರುವ ಅಂತರ 200 ಕಿಮೀ ನಷ್ಟು ತಗ್ಗಿಸುವ ಮಾರ್ಗ
- ನಾಂದೇಡ್ಗೆ ಸಾಗುವ ರೈಲುಗಳೆಲ್ಲದರ ಭವಿಷ್ಯದ ಮಹತ್ವದ ಮಾರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

