25 ಸಾವಿರ ಎಂಜಿನಿಯರ್ ಸೀಟು ಖಾಲಿ!
ಬೆಂಗಳೂರು: ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಸೀಟುಗಳು ಖಾಲಿ ಬಿದ್ದಿವೆ.
ಹದಿನೈದಕ್ಕೂ ಅಧಿಕ ಕಾಲೇಜುಗಳಲ್ಲಿ ಬೆರಳೆಣಿಕೆ ಸಂಖ್ಯೆಯ ವಿದ್ಯಾರ್ಥಿಗಳು ಕೂಡ ಪ್ರವೇಶ ಪಡೆದಿಲ್ಲ. ಆದಾಗ್ಯೂ ಎಐಸಿಟಿಇ, ತಾಂತ್ರಿಕ ಶಿಕ್ಷಣ ಇಲಾಖೆಯು ನೂತನ ಕಾಲೇಜುಗಳಿಗೆ ಅನುಮತಿ ನೀಡುತ್ತಿವೆ. ಒಂದೆಡೆ ಗುಣಮಟ್ಟದ ಎಂಜಿನಿಯರ್ಗಳ ಕೊರತೆಯ ಕಾರಣದಿಂದ ನೇರವಾಗಿ ಉದ್ಯೋಗ ಪಡೆಯುತ್ತಿರುವವರ ಪ್ರಮಾಣ ಶೇ.17ಕ್ಕೆ ಕುಸಿದಿದೆ. ಮತ್ತೊಂದೆಡೆ ಗುಣಮಟ್ಟದ ಬದಲು ಸಂಖ್ಯೆಗೆ ಹೆಚ್ಚಿನ ಆದ್ಯತೆ ನೀಡುವತ್ತ ರಾಜ್ಯದ ಉನ್ನತ ಶಿಕ್ಷಣ ಹೆಜ್ಜೆ ಇಡುತ್ತಿದೆ. ಕಳೆದ ಶೈಕ್ಷಣಿಕ ವರ್ಷಕ್ಕಿಂತ ಈ ಬಾರಿ ಸುಮಾರು 10 ಸಾವಿರ ಎಂಜಿನಿಯರಿಂಗ್ ಸೀಟುಗಳು ಹೆಚ್ಚಾಗಿದ್ದವು. ರಾಜ್ಯದಲ್ಲಿ ಲಭ್ಯವಿರುವ 96 ಸಾವಿರ ಎಂಜಿನಿಯರಿಂಗ್ ಸೀಟುಗಳಲ್ಲಿ 25 ಸಾವಿರಕ್ಕೂ ಅಧಿಕ ಸೀಟುಗಳು ಖಾಲಿ ಉಳಿದಿವೆ. ಇನ್ನು ಆಡಳಿತ ಮಂಡಳಿ ಕೋಟಾದಲ್ಲಿ ಖಾಲಿ ಉಳಿಯುವ ಸೀಟುಗಳ ಸಂಖ್ಯೆ ಸೇರಿಸಿದರೆ ಇನ್ನೊಂದಿಷ್ಟು ಸಾವಿರ ಹೆಚ್ಚಾಗುತ್ತದೆ. ಅತಿ ಕಡಿಮೆ ಪ್ರವೇಶ ಪಡೆದಿರುವ ಕಾಲೇಜುಗಳಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ನಂತಹ ಪ್ರಮುಖ ವಿಭಾಗಗಳಿವೆ. ಆದರೆ ಈ ವಿಭಾಗಗಳಿಗೆ ತಲಾ 1-2 ವಿದ್ಯಾರ್ಥಿಗಳು ಪ್ರವೇಶ ಪಡೆದ ದಾಖಲೆಯಿದೆ. ಇದರಿಂದ ಶೈಕ್ಷಣಿಕ ಗುಣಮಟ್ಟ ಹಾಗೂ ಸ್ಪರ್ಧೆ ಎನ್ನುವುದು ಮಾಯವಾಗಲಿದೆ. ವಿಚಿತ್ರವೆಂದರೆ ಇದ್ಯಾವುದೇ ಅಂಶವನ್ನು ಪರಿಗಣಿಸದೆ ಎಐಸಿಟಿಇ ಕಾಲೇಜು ನಿರ್ಮಿಸಲು ಮುಂದಾದವರಿಗೆ ಅನುಮತಿ ನೀಡಿರುವುದು ಆಶ್ಚರ್ಯಕರ.
ಸೀಟುಗಳು ಖಾಲಿ ಖಾಲಿ!: ಕಳೆದ ಶೈಕ್ಷಣಿಕ ವರ್ಷದಲ್ಲಿ ಸುಮಾರು 86 ಸಾವಿರ ಎಂಜಿನಿಯರಿಂಗ್ ಸೀಟುಗಳು ಲಭ್ಯವಿದ್ದವು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇದು 96,300ಕ್ಕೆ ತಲುಪಿತು. ಇದರಲ್ಲಿ ಶೇ.45ರಷ್ಟು ಸರ್ಕಾರಿ ಸೀಟು ಹಾಗೂ ಶೇ.5ರಷ್ಟು ಎಸ್ಎನ್ಕ್ಯೂ ಸೀಟುಗಳಿರುತ್ತವೆ. ಈ ಪ್ರಕಾರ ರಾಜ್ಯ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಕೌನ್ಸೆಲಿಂಗ್ ನಡೆಸಿತು.
ಸರ್ಕಾರಿ ಕೋಟಾದಲ್ಲಿಯೇ 3 ಸಾವಿರ ಸೀಟುಗಳು ಖಾಲಿ ಉಳಿದವು. ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಹಿಂತಿರುಗಿಸಿದ್ದ 10 ಸಾವಿರ ಸೀಟುಗಳಲ್ಲಿ 9 ಸಾವಿರ ಸೀಟುಗಳು ಹಾಗೆಯೇ ಉಳಿದವು. ಒಟ್ಟಾರೆ ಸರ್ಕಾರಿ ಕೋಟಾದ 12,235 ಸೀಟುಗಳು ಹಂಚಿಕೆಯಾಗದೆ ಉಳಿದುಕೊಂಡಿವೆ. ಇನ್ನು ಕಾಮೆಡ್- ಕೆನಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಾಮೆಡ್-ಕೆನ ಎಲ್ಲ ಹಂತದ ಕೌನ್ಸೆಲಿಂಗ್ ಬಳಿಕ 11,507 ಸೀಟುಗಳು ಹಾಗೆಯೇ ಉಳಿದುಕೊಂಡಿವೆ. ಈ ಲೆಕ್ಕಾಚಾರ ಸಿಗುವುದು ಕೇವಲ ಶೇ.75ರಷ್ಟು ಸೀಟಿಗೆ ಮಾತ್ರ. ಆಡಳಿತ ಮಂಡಳಿ ಕೋಟಾದ ಉಳಿದ ಶೇ.25 ಸೀಟುಗಳಲ್ಲಿ ಎಷ್ಟು ಹಂಚಿಕೆಯಾಗಿದೆ ಎನ್ನುವುದು ಇನ್ನಷ್ಟೆ ತಿಳಿಯಬೇಕಿದೆ. ರಾಜ್ಯದಲ್ಲಿರುವ 96 ಸಾವಿರ ಎಂಜಿನಿಯರ್ ಸೀಟುಗಳಲ್ಲಿ 25 ಸಾವಿರಕ್ಕೂ ಅಧಿಕ ಖಾಲಿ ಉಳಿದಿದೆ ಎಂದರೆ ಶೇ.26ಕ್ಕೂ ಅಧಿಕ ಸೀಟುಗಳುಹಂಚಿಕೆಯಾಗಿಲ್ಲ.
ಒಂದು, ಎರಡು ಮತ್ತೂ ಮೂರು....
ಬೆಂಗಳೂರಿನ ಶ್ರೀ ವಿದ್ಯಾ ವಿನಾಯಕ ಎಂಜಿನಿಯರಿಂಗ್ ಕಾಲೇಜಿನಲ್ಲಿ 240 ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡಲು ಎಐಸಿಟಿಇ ಅನುಮತಿ ನೀಡಿದೆ. ಇದರಲ್ಲಿ ಶೇ.50ರಷ್ಟು ಸೀಟುಗಳು ಸರ್ಕಾರಿ ಕೋಟಾಕ್ಕೆ ಬರುತ್ತದೆ. ಪ್ರಾಧಿಕಾರದ ಕೌನ್ಸೆಲಿಂಗ್ನಲ್ಲಿ ಕೇವಲ 6 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕ್ ವಿಭಾಗದಲ್ಲಿ ತಲಾ 2 ಹಾಗೂ ಸಿವಿಲ್, ಎಲೆಕ್ಟ್ರಾನಿಕ್ಸ್ನಲ್ಲಿ ತಲಾ ಒಬ್ಬ ವಿದ್ಯಾರ್ಥಿ ಮಾತ್ರ ಪ್ರವೇಶ ಪಡೆದಿದ್ದಾರೆ. ಈ ಕೆಳಗಿರುವ ಬಹುತೇಕ ಕಾಲೇಜುಗಳಲ್ಲಿನ ವಿಭಾಗವಾರು ವಿದ್ಯಾರ್ಥಿಗಳ ಸಂಖ್ಯೆ ಎರಡಂಕಿ ದಾಟುವುದಿಲ್ಲ.
ಕಾಲೇಜು --- ಹಂಚಿಕೆಯಾದ ಸೀಟುಗಳು --- ಒಟ್ಟು ಸರ್ಕಾರಿ ಸೀಟುಗಳು
ಶ್ರೀ ಬೇಲಿಮಠ ಮಹಾಸಂಸ್ಥಾನ ಕಾಲೇಜು, ನೆಲಮಂಗಲ 21 146
ಬಸವ ಅಕಾಡೆಮಿ ಆಫ್ ಎಂಜಿನಿಯರಿಂಗ್, ಬೆಂಗಳೂರು 24 116
ನಾಡಿಗೇರ್ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು 15 117
ಪ್ರಸನ್ನ ಎಂಜಿನಿಯರಿಂಗ್ ಕಾಲೇಜು, ಉಜಿರೆ 33 117
ಶ್ರೀ ಕೃಷ್ಣ ಸ್ಕೂಲ್ ಆಫ್ ಎಂಜಿನಿಯರಿಂಗ್, ಮುಲ್ಲೂರು 25 180
ನೀರಪ್ಪ ನಿಸ್ತಿ ಎಂಜಿನಿಯರಿಂಗ್ ಕಾಲೇಜು- ಯಾದಗಿರಿ 26 184
ಅಚ್ಯುತಾ ಎಂಜಿನಿಯರಿಂಗ್ ಕಾಲೇಜು, ಚಿಕ್ಕಬಳ್ಳಾಪುರ 37 146
ಆದರ್ಶ ಎಂಜಿನಿಯರಿಂಗ್ ಕಾಲೇಜು 19 150
ಶ್ರೀ ವಿದ್ಯಾ ವಿನಾಯಕ ಎಂಜಿನಿಯರಿಂಗ್ ಕಾಲೇಜು 6 120
- ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

