ಪ್ರಧಾನ ಸುದ್ದಿ

ಪ್ರಧಾನಿ ಸಿಂಗ್ ಹೊರಟರು ಜಿ-20 ಶೃಂಗಕ್ಕೆ

Published On :

ನವದೆಹಲಿ: ರಷ್ಯಾದಲ್ಲಿ ನಡೆಯಲಿರುವ 8ನೇ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮನಮೋಹನ ಸಿಂಗ್ ಅವರು ಬುಧವಾರ ರಷ್ಯಾದ ಸೈಂಟ್ಪೀಟರ್ಸ್ಬರ್ಗ್ಗೆ ಪ್ರಯಾಣ ಬೆಳೆಸಿದರು.
ಭಾರತ ಸೇರಿದಂತೆ ಬ್ರಿಕ್ಸ್ ದೇಶಗಳಲ್ಲಿನ ನಿಧಾನಗತಿಯ ಬೆಳವಣಿಗೆ ಹಾಗೂ ಅಮೆರಿಕದ ಹೂಡಿಕೆ ಉತ್ತೇಜನಾ ನೀತಿಗಳು ಗುರುವಾರದಿಂದ ಆರಂಭವಾಗಲಿರುವ ಈ ಎರಡು ದಿನಗಳ ಶೃಂಗದಲ್ಲಿ ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಭಾರತ, ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕ ದೇಶಗಳು ಸೇರಿಕೊಂಡು ಪರ್ಯಾಯ ಆರ್ಥಿಕ ಗುಂಪು( ಬ್ರಿಕ್ಸ್) ಕಟ್ಟಿಕೊಂಡಿದೆ. ಈ ಎಲ್ಲಾ ದೇಶಗಳು ದೇಶದ ನಿಧಾನಗತಿಯ ಬೆಳವಣಿಗೆ, ಕರೆನ್ಸಿ ಮೌಲ್ಯ ಕುಸಿತ ಹಾಗೂ ಬಹುದೊಡ್ಡ ಪ್ರಮಾಣದಲ್ಲಿ ಬಂಡವಾಳದ ಸಮಸ್ಯೆ ಎದುರಿಸುತ್ತಿವೆ. ಅಮೆರಿಕದ ಆರ್ಥಿಕ ಉತ್ತೇಜನಾ ನೀತಿಗಳಿಂದಾಗಿ ಭಾರತದಿಂದ ಬಹುದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೊರಹೋಗಿದೆ. ಇದರಿಂದ ಅಮೆರಿಕದ ಡಾಲರ್ ಎದುರು ಭಾರತೀಯ ರುಪಾಯಿ ಈಗಾಗಲೇ ತನ್ನ ಮೌಲ್ಯದ 5ನೇ ಒಂದರಷ್ಟನ್ನು ಕಳೆದುಕೊಂಡಿದೆ. ದಶಕದಲ್ಲಿ ಇದೇ ಮೊದಲ ಬಾರಿಗೆ ಭಾರತ ನಿಧಾನಗತಿಯ ಬೆಳವಣಿಗೆ ದಾಖಲಿಸಿದೆ. ಜಿಡಿಪಿಯು ಮೊದಲ ತ್ರೈಮಾಸಿಕದಲ್ಲಿ ಶೇ.4.4ರಷ್ಟು ಬೆಳವಣಿಗೆ ದಾಖಲಿಸಿದೆ. ಇದು 2009ರ ಬಳಿಕದ ಅತಿ ದೊಡ್ಡ ದುರ್ಬಲ ಸಾಧನೆಯಾಗಿದೆ. ಇದೇ ರೀತಿಯ ಸಮಸ್ಯೆ ಅಭಿವೃದ್ಧಿ ಹೊಂದುತ್ತಿರುವ ಬಹುತೇಕ ರಾಷ್ಟ್ರಗಳು ಎದುರಿಸುತ್ತಿದ್ದು, ಈ ವಿಚಾರಶೃಂಗದಲ್ಲಿ ಚರ್ಚೆಗೆ ಎಳೆತರುವ ನಿರೀಕ್ಷೆ ಇದೆ.

ಯಾವ್ಯಾವ ದೇಶ?
ಈ ಶೃಂಗದಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಭಾರತ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಪಾಲ್ಗೊಳ್ಳಲಿದೆ. ಜಿ20 ಜಗತ್ತಿನ ಶೇ.90 ರಷ್ಟು ಆರ್ಥಿಕತೆ, ಜಾಗತಿಕ ವ್ಯಾಪಾರದ ಶೇ. 75 ರಷ್ಟು ಪಾಲು ಹೊಂದಿದೆ. ಜಗತ್ತಿನ ಮೂರನೇ ಎರಡರಷ್ಟು ಜನಸಂಖ್ಯೆ ಈ ದೇಶಗಳಲ್ಲೇ ಇವೆ.

ಸಿರಿಯಾ ಕರಿನೆರಳು
ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳ ಮೇಲೆ ರಾಸಾಯನಿಕ ಅಸ್ತ್ರ ಬಳಸಿದ ಸಿರಿಯಾದ ಅಸಾದ್ ಸರ್ಕಾರದ ವಿರುದ್ಧ ದಾಳಿ ನಡೆಸುವ ವಿಚಾರ ಈಗಾಗಲೇ ರಷ್ಯಾ ಮತ್ತು ಅಮೆರಿಕ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದೆ. ಅಮೆರಿಕದ ಈ ನಿಲುವಿಗೆ ರಷ್ಯಾ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ. ಎರಡೂ ದೇಶಗಳ ಈ ಭಿನ್ನಾಭಿಪ್ರಾಯದ ಕರಿನೆರಳು ಜಿ-20 ಸಮಾವೇಶದ ಮೇಲೂ ಬೀರುವ ಸಾಧ್ಯತೆ ಇದೆ. ಸಭೆಯಲ್ಲಿ ಸಿರಿಯಾ ಮೇಲಿನ ಯುದ್ಧದ ವಿಚಾರ ಪ್ರಮುಖವಾಗಿ ಚರ್ಚೆಗೆ ಬರುವ ನಿರೀಕ್ಷೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.