ಮತ್ತೆ ಅಡ್ಡವಾಣಿ

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಸೆ.19ರೊಳಗೆ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಆರೆಸ್ಸೆಸ್ ಮತ್ತು ಬಿಜೆಪಿ ಕೆಲ ಮುಖಂಡರ ಪ್ರಯತ್ನಕ್ಕೆ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಮತ್ತೆ ತೊಡರುಗಾಲಾಗಿದ್ದಾರೆ.
ಐದು ರಾಜ್ಯಗಳ ಚುನಾವಣೆ ಫಲಿತಾಂಶ ಬರುವವರೆಗೂ ಪ್ರಧಾನಿ ಅಭ್ಯರ್ಥಿ ಘೋಷಿಸುವುದು ಬೇಡ ಎಂದು ಆಡ್ವಾಣಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಅಭ್ಯರ್ಥಿ ವಿಚಾರವಾಗಿ ಬುಧವಾರ ತಮ್ಮನ್ನು ಭೇಟಿಯಾದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೂ ಆಡ್ವಾಣಿ ಈ ವಿಚಾರವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಒಂದು ವೇಳೆ ಸೆ.19ರೊಳಗೆ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲೇ ಬೇಕೆಂದಿದ್ದರೆ ಆಡ್ವಾಣಿ ಅವರನ್ನು ಹೊರಗಿಟ್ಟೇ ಈ ನಿರ್ಧಾರ ತೆಗೆದುಕೊಳ್ಳುವುದು ರಾಜನಾಥ್ಸಿಂಗ್ ಅವರಿಗೆ ಅನಿವಾರ್ಯವಾಗಲಿದೆ.
ಸೆ.19ರೊಳಗಾಗಲಿ: ಸೆ.19ರೊಳಗೆ ಮೋದಿ ಅವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆನ್ನುವುದು ಆರೆಸ್ಸೆಸ್ ಹಾಗೂ ಬಿಜೆಪಿಯ ಕೆಲ ಮುಖಂಡರ ಒತ್ತಾಸೆ. ಆದರೆ, ಆಡ್ವಾಣಿ, ಸುಷ್ಮಾಸ್ವರಾಜ್ ಹಾಗೂ ಮುರಳಿ ಮನೋಹರ್ ಜೋಶಿ ಇದಕ್ಕೆ ಅಸಮ್ಮತಿ ಸೂಚಿಸಿದ್ದರು. ಈ ಸಂಬಂಧ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಕಳೆದ ವಾರವಷ್ಟೇ ಈ ಮೂವರ ಜತೆಗೆ ಮಾತುಕತೆ ನಡೆಸಿದ್ದರು. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ನಿರ್ಧಾರಕ್ಕೆ ಬೆಂಬಲಿಸುವಂತೆ ತಿಳಿಸಿದ್ದರು. ಆದರೆ, ಆಡ್ವಾಣಿ ಮಾತ್ರ ಪಟ್ಟು ಸಡಿಲಿಸಿರಲಿಲ್ಲ. ಪ್ರಧಾನಿ ಅಭ್ಯರ್ಥಿ ಆಯ್ಕೆ ಏನಿದ್ದರೂ ವಿಧಾನಸಭಾ ಚುನಾವಣೆ ಬಳಿಕವೇ ನಡೆಯಲಿ ಎಂದಿದ್ದರು.
ಗಡ್ಕರಿ ಬಳಿಕ ಸಿಂಗ್ ಭೇಟಿ: ಮೋದಿ ಅವರಿಗೆ ಪ್ರಧಾನಿ ಅಭ್ಯರ್ಥಿ ಪಟ್ಟ ನೀಡಲು ಉತ್ಸುಕತೆ ತೋರುತ್ತಿರುವ ಆರೆಸ್ಸೆಸ್ ಮಂಗಳವಾರವಷ್ಟೇ ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಆಡ್ವಾಣಿ ಮನೆಗೆ ಕಳುಹಿಸಿಕೊಡುವ ಮೂಲಕ ಮತ್ತೊಮ್ಮೆ ಮನವೊಲಿಕೆ ಪ್ರಯತ್ನ ನಡೆಸಿತ್ತು. ಇಷ್ಟಾದರೂ ಆಡ್ವಾಣಿ ಪಟ್ಟು ಸಡಿಲಿಸದಿದ್ದಾಗ ಬುಧವಾರ ಸಂಜೆ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಹಿರಿಯ ನಾಯಕನ ಮನೆಗೆ ಭೇಟಿ ನೀಡಿ ಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದರು. ಈ ವೇಳೆಯೂ ಆಡ್ವಾಣಿ ಅವರಿಂದ ಪ್ರಧಾನಿ ಅಭ್ಯರ್ಥಿ ಘೋಷಣೆಗೆ ಆಡ್ವಾಣಿ ಅವರಿಂದ ಯಾವುದೇ ಬೆಂಬಲದ ಭರವಸೆ ಸಿಕ್ಕಿಲ್ಲ.
ನಾಳೆ ಸಭೆ ಇಲ್ಲ?
ಆಡ್ವಾಣಿ ಅವರು ತಮ್ಮ ಪಟ್ಟು ಸಡಿಲಿಸದೇ ಹೋದರೆ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಆಯ್ಕೆ ತೀರ್ಮಾನ ತೆಗೆದುಕೊಳ್ಳುವುದು ಅನುಮಾನ ಎನ್ನಲಾಗಿದೆ. ಈ ಹಿಂದೆ ಹೇಳಿದಂತೆ ಸೆ.13ರಂದು ಸಂಸದೀಯ ಮಂಡಳಿ ಸಭೆ ನಡೆದರೂ ಆಡ್ವಾಣಿ ಗೈರಾಗಲಿದ್ದಾರೆ. ಇದು ಬಿಜೆಪಿ ಪಾಲಿಗೆ ಇರುಸುಮುರುಸು ಉಂಟು ಮಾಡಲಿದೆ. ಈ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಅವರು ಪಕ್ಷದ ಹಿರಿಯ ಮುಖಂಡರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ, ಮೋದಿ ಆಯ್ಕೆ ವಿಚಾರವನ್ನು ಹೇಗೆ ಘೋಷಿಸಬೇಕೆನ್ನುವ ನಿರ್ಧಾರವನ್ನು ಆರೆಸ್ಸೆಸ್ ರಾಜನಾಥ್ ಸಿಂಗ್ ವಿವೇಚನೆಗೆ ಬಿಟ್ಟಿದೆ.
19ರ ಮೊದಲೇ ಏಕೆ?
ಹಿಂದೂ ಕ್ಯಾಲೆಂಡರ್ ಪ್ರಕಾರ ಸೆ.19ರಂದು ಮಂಗಳಕರ ದಿನ ಮುಕ್ತಾಯವಾಗುತ್ತದೆ. ಇದೇ ಕಾರಣಕ್ಕೆ ಆರೆಸ್ಸೆಸ್ ಹಾಗೂ ಬಿಜೆಪಿಯ ಕೆಲ ಮುಖಂಡರು 19ರೊಳಗೆ ಮೋದಿ ಅವರಿಗೆ ಪ್ರಧಾನಿ ಅಭ್ಯರ್ಥಿ ಪಟ್ಟ ಸಿಗಲಿ ಎಂದು ಬಯಸಿದ್ದಾರೆ. ಆದರೆ, ಮೋದಿ ಬೆಂಬಲಿಗರು ಮಾತ್ರ ಸೆ.17ರೊಳಗೆ ಈ ಘೋಷಣೆ ಮಾಡಿ ಎಂದು ಒತ್ತಡ ಹೇರುತ್ತಿದ್ದಾರೆ. ಸೆ.17 ಮೋದಿ ಜನ್ಮದಿನ. ಇದಕ್ಕೂ ಮೊದಲೇ ಪ್ರಧಾನಿ ಅಭ್ಯರ್ಥಿ ಸ್ಥಾನ ಅವರಿಗೆ ಸಿಗಲಿ ಎಂಬುದು ಬೆಂಬಲಿಗರ ಬಯಕೆ.
ಇಂದು ಭೇಟಿ
ಪ್ರಧಾನಿ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿ ನಡೆಯುತ್ತಿರುವ ಬೆಳವಣಿಗೆ ಕುರಿತು ಚರ್ಚಿಸಲು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


