ಶ್ರೀಶಾಂತ್ಗೆ ಆಜೀವ ನಿಷೇಧ

ನವದೆಹಲಿ: ಭ್ರಷ್ಟ ಕ್ರಿಕೆಟಿಗರ ವಿರುದ್ಧ ತನ್ನ ಚಾಟಿ ಬೀಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಈ ಬಾರಿಯ ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ನಲ್ಲಿ ತೊಡಗಿದ್ದ ಆರೋಪ ಹೊತ್ತಿರುವ ಕ್ರಿಕೆಟಿಗ ಶ್ರೀಶಾಂತ್ ಅವರ ಮೇಲೆ ಆಜೀವ ನಿಷೇಧ ಹೇರಿದೆ.
ಪ್ರಕರಣದ ಕುರಿತಂತೆ, ತನಿಖೆ ನಡೆಸುವಂತೆ ಬಿಸಿಸಿಐ ನೇಮಿಸಿದ್ದ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಹಾಗೂ ಭದ್ರತೆ ವಿಭಾಗದ ಮುಖ್ಯಸ್ಥ ರವಿ ಸಾವ್ನೆ ಅವರುಳ್ಳ ಏಕಸದಸ್ಯ ಸಮಿತಿ, ನೀಡಿದ್ದ ತನಿಖಾ ವರದಿಯ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಶುಕ್ರವಾರ ನಡೆದಿದ್ದ ಶಿಸ್ತುಪಾಲನಾ ಸಮಿತಿಯ ಸಭೆಯಲ್ಲಿ, ವರದಿಯನ್ನು ಸಂಪೂರ್ಣವಾಗಿ ಪರಾಮರ್ಶಿಸಿ, ತಪ್ಪಿತಸ್ಥರ ವಿರುದ್ಧ ವರದಿಯಲ್ಲಿ ರವಿ ಅವರು ನೀಡಿರುವ ಶಿಫಾರಸಿನ ಆಧಾರದ ಮೇರೆಗೆ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಈ ಬಾರಿಯ ಐಪಿಎಲ್ನಲ್ಲಿ ಮಾಡಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೂವರು ಆಟಗಾರರಾದ ಶ್ರೀಶಾಂತ್, ಅಜಿತ್ ಚಂಡೀಲ ಹಾಗೂ ಅಂಕಿತ್ ಚವಾಣ್ ಭಾಗಿಯಾಗಿರುವುದಾಗಿ ಸಾಕ್ಷಿ ಸಮೇತ ದೃಢಪಡಿಸಿದ್ದ ದೆಹಲಿ ಪೊಲೀಸರು, ಈ ಮೂವರನ್ನೂ ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಹರ್ಮೀತ್ ಸಿಂಗ್ ಪಾರು: ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದ ಯುವ ಸ್ಪಿನ್ನರ್ ಹರ್ಮೀತ್ ಸಿಂಗ್ ಅವರ ವಿರುದ್ಧ ಯಾವುದೇ ಕ್ರಮವನ್ನು ಬಿಸಿಸಿಐ ಶಿಸ್ತುಪಾಲನಾ ಸಮಿತಿ ಕೈಗೊಂಡಿಲ್ಲ. ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ, ಹರ್ಮೀತ್ ಸಿಂಗ್ ಅವರ ವಿರುದ್ಧದ ಪ್ರಕರಣವನ್ನು ರವಿ ಸಾವ್ನಿ ಅವರ ತನಿಖಾ ವರದಿಯಲ್ಲಿ ಕೈಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ, ಹರ್ಮೀತ್ ಸಿಂಗ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಎಂದು ಸಂಜಯ್ ಪಟೇಲ್ ತಿಳಿಸಿದರು.
ಆದರೂ, ಸ್ಪಾಟ್ ಫಿಕ್ಸಿಂಗ್ ಬಗ್ಗೆ ತಮ್ಮನ್ನು ಬುಕಿಗಳು ಸಂಪರ್ಕಿಸಿದ್ದರೂ, ಅದನ್ನು ಬಿಸಿಸಿಐ ಗಮನಕ್ಕೆ ತಾರದೇ ಇದ್ದದ್ದನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ ಎಂದು ಪಟೇಲ್ ತಿಳಿಸಿದ್ದಾರೆ.
ಚಂಡೀಲ ವಿರುದ್ಧದ ಕ್ರಮ ಮುಂದಕ್ಕೆ: ಫಿಕ್ಸಿಂಗ್ ಜಾಲದಲ್ಲಿ ಇತರ ಕ್ರಿಕೆಟಿಗರನ್ನು ತಮ್ಮೊಂದಿಗೆ ಎಳೆದೊಯ್ದ ಗುರುತರ ಆರೋಪ ಹೊತ್ತಿರುವ ರಾಜಸ್ಥಾನ ರಾಯಲ್ಸ್ನ ಮತ್ತೊಬ್ಬ ಆಟಗಾರ ಅಜಿತ್ ಚಂಡೀಲ ಅವರನ್ನು ಪ್ರಮುಖ ಆರೋಪಿ ಎಂದು ಶಿಸ್ತುಪಾಲನಾ ಸಮಿತಿ ಘೋಷಿಸಿದೆ. ಆದರೆ, ಅವರ ವಿರುದ್ಧದ ಕ್ರಮವನ್ನು ಘೋಷಿಸದೇ, ಶಿಕ್ಷೆಯ ಪ್ರಕಟಣೆಯನ್ನು ಮುಂದೂಡಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಪಟೇಲ್, 'ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪ ಹೊತ್ತಿರುವ ಎಲ್ಲಾ ಆಟಗಾರರಿಗೆ ನಾವು ಬಿಸಿಸಿಐ ಶಿಸ್ತುಪಾಲನಾ ಸಮಿತಿ ಮುಂದೆ ಹಾಜರಾಗಿ ಅವರ ಪರ ವಾದ ಮಂಡಿಸಲು ಅವಕಾಶ ನೀಡಿದ್ದೇವೆ. ಚಂಡೀಲ ಅವರು ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವುದರಿಂದ, ಶಿಸ್ತುಪಾಲನಾ ಸಮಿತಿ ಮುಂದೆ ಅವರಿಗೆ ಹಾಜರಾಗಲು ಇನ್ನೂ ಅವಕಾಶ ಸಿಕ್ಕಿಲ್ಲ. ಹಾಗಾಗಿ, ಅವರಿಗೂ ತಮ್ಮ ವಾದ ಮಂಡಿಸಲು ಒಂದು ಅವಕಾಶ ನೀಡಲಾಗುತ್ತದೆ. ಅದಾದ ನಂತರವಷ್ಟೇ,ಅವರ ವಿರುದ್ಧದ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಅವರು ತಿಳಿಸಿದರು.
ಶ್ರೀಶಾಂತ್ ಹಾಜರ್: ಭ್ರಷ್ಟ ಕ್ರಿಕೆಟಿಗರ ವಿರುದ್ಧ ಶಿಸ್ತುಪಾಲನಾ ಸಮಿತಿ ಶಿಕ್ಷೆ ಪ್ರಕಟಿಸುವುದಕ್ಕೂ ಮುನ್ನ, ಶ್ರೀಶಾಂತ್ ಅವರು ಸಮಿತಿ ಸಭೆಗೆ ಆಗಮಿಸಿ, ತಮ್ಮ ಮೇಲಿನ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದರು. ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, 'ಶಿಸ್ತು ಸಮಿತಿಯ ಮುಂದೆ ನನ್ನ ಕಥೆ ಹೇಳಿಕೊಂಡಿದ್ದೇನೆ. ನ್ಯಾಯ ನನ್ನ ಪರವಾಗಿ ಬರಲಿದೆ ಎಂಬ ಆಶಯವಿದೆ' ಎಂದಿದ್ದರು.
ಆದರೆ, ಅಮಿತ್ ಸಿಂಗ್ ಅವರು ಶಿಸ್ತುಪಾಲನಾ ಸಮಿತಿಯ ಮುಂದೆ ಹಾಜರಾಗಿರಲಿಲ್ಲ. ಆದರೂ, ಅವರನ್ನು ತಪ್ಪಿತಸ್ಥ ಎಂದು (ರವಿ ಸಾವ್ನಿ ವರದಿಯ ಆಧಾರದ ಮೇಲೆ) ಶಿಸ್ತುಪಾಲನಾ ಸಮಿತಿ ನಿರ್ಧರಿಸಿತು.
ಮಹತ್ವದ ಬೆಳವಣಿಗೆ: ಶುಕ್ರವಾರ ನಡೆದ ಬಿಸಿಸಿಐ ಶಿಸ್ತುಪಾಲನಾ ಸಮಿತಿ ಸಭೆ ಮತ್ತೊಂದು ವಿಷಯಕ್ಕೂ ಮಹತ್ವ ಪಡೆದುಕೊಂಡಿತು. ಇತ್ತೀಚೆಗಷ್ಟೇ ಬಿಸಿಸಿಐ ಅಧ್ಯಕ್ಷ ಗಾದಿಯಿಂದ ದೂರ ಸರಿದಿದ್ದ ಎನ್. ಶ್ರೀನಿವಾಸನ್ ಅವರು ಸಭೆಯಲ್ಲಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದರು.
ತಮ್ಮ ಅಳಿಯ ಗುರುನಾಥ್ ಮೇಯಪ್ಪನ್ (ಚೆನ್ನೈ ಸೂಪರ್ ಕಿಂಗ್ಸ್ನ ಮುಖ್ಯಸ್ಥ) ಅವರು ಫಿಕ್ಸಿಂಗ್ನಲ್ಲಿ ಭಾಗಿಯಾದ ಆರೋಪ ಹೊತ್ತಿದ್ದ ಹಿನ್ನೆಲೆಯಲ್ಲಿ, ಕೆಲ ತಿಂಗಳುಗಳ ಹಿಂದೆಯಷ್ಟೇ ಅವರು ಬಿಸಿಸಿಐ ಅಧ್ಯಕ್ಷ ಗಾದಿಯಿಂದ ಹಿಂದೆ ಸರಿದಿದ್ದರು. ಅವರ ಜಾಗದಲ್ಲಿ ಜಗಮೋಹನ್ ದಾಲ್ಮಿಯಾ ಅವರು ಪ್ರಭಾರಿ ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದರು.
ಆದರೆ, ದಾಲ್ಮಿಯಾ ಅವರಿನ್ನೂ ಅಧ್ಯಕ್ಷರಾಗಿ ಮುಂದುವರಿದಿರುವಾಗಲೇ ಶ್ರೀನಿವಾಸನ್ ಅವರು, ಶಿಸ್ತುಪಾಲನಾ ಸಮಿತಿ ಸಭೆಗೆ ಹಾಜರಾಗಿದ್ದು ವಿಶೇಷ ಎನಿಸಿಕೊಂಡಿತ್ತು.
ಅಂಕಿತ್, ಹರ್ಮೀತ್ ಇರುಸು- ಮುರುಸು
ಶುಕ್ರವಾರ ನಡೆದ ಬಿಸಿಸಿಐ ಶಿಸ್ತುಪಾಲನಾ ಸಮಿತಿಯ ಸಭೆಯಲ್ಲಿ ಹಾಜರಾದ ಅಂಕಿತ್ ಚವಾಣ್ ಹಾಗೂ ಹರ್ಮೀತ್ ಸಿಂಗ್ಅವರು, ಸಮಿತಿ ಸದಸ್ಯರಿಂದ ಭಾರೀ ಮುಖಭಂಗ ಅನುಭವಿಸುವಂತಾಯಿತು.
ಸಮಿತಿ ಮುಂದೆ ತಮ್ಮ ವಾದವನ್ನು ಮಂಡಿಸಲು ಆಗಮಿಸಿದ್ದ ಅಂಕಿತ್ ಹಾಗೂ ಹರ್ಮೀತ್ ಸಿಂಗ್ ಅವರಿಬ್ಬರನ್ನೂ ಬಿಸಿಸಿಐ ನಿಕಟಪೂರ್ವ ಅಧ್ಯಕ್ಷ ಎನ್. ಶ್ರೀನಿವಾಸನ್, ಉಪಾಧ್ಯಕ್ಷ ಹಾಗೂ ಸಮಿತಿಯ ಹಿರಿಯ ಸದಸ್ಯರಾದ ಅರುಣ್ ಜೇಟ್ಲಿ, ನಿರಂಜನ್ ಶಾ ಹಾಗೂ ಇತರ ಸದಸ್ಯರು, ತೀಕ್ಣವಾದ ಪ್ರಶ್ನೆಗಳನ್ನು ಕೇಳಿದಾಗ, ಅಂಕಿತ್ ಹಾಗೂ ಹರ್ಮೀತ್ ಇಬ್ಬರೂ ತಬ್ಬಿಬ್ಬಾದರು.
'ಇಂಥ ಭ್ರಷ್ಟ ಆಟದಲ್ಲಿ ಪಾಲ್ಗೊಳ್ಳಲು ನೀವು ಹೇಗೆ ಮನಸ್ಸು ಮಾಡಿದಿರಿ?', ಎಂದು ಒಬ್ಬ ಸದಸ್ಯರು ಕೇಳಿದರೆ, ಮತ್ತೊಬ್ಬ ಸದಸ್ಯ, 'ನೀವು ಮಾಡಿಕೊಂಡ ಈ ಯಡವಟ್ಟಿನಿಂದ ನಿಮ್ಮ ತಂದೆ-ತಾಯಿ ಹಾಗೂ ಕುಟುಂಬ ಪಡುತ್ತಿರುವ ಕಷ್ಟಗಳ ಬಗ್ಗೆ ಅಂದಾಜು ಇರಲಿಲ್ಲವೇ?' ಎಂದು ಮತ್ತೊಬ್ಬ ಸದಸ್ಯರು ತಮ್ಮ ಪ್ರಶ್ನೆಯಿಂದ ಚುಚ್ಚಿದರು.
'ಅಜ್ಞಾತ ವ್ಯಕ್ತಿಗಳನ್ನು ಭೇಟಿ ಮಾಡುವುದರ ಬಗ್ಗೆ ಇದ್ದ ನಿರ್ಬಂಧಗಳನ್ನು ಮುರಿಯುವಾಗ ನಿಮಗೆ ಅಪರಾಧ ಪ್ರಜ್ಞೆ ಕಾಡಲಿಲ್ಲವಾ?' ಎಂಬುದು ಮತ್ತೊಬ್ಬ ಸದಸ್ಯರ ಪ್ರಶ್ನೆಯಾಗಿತ್ತು.
ಇದರಿಂದ, ಕೊಂಚ ವಿಚಲಿತರಾದ ಈ ಇಬ್ಬರೂ ಆಟಗಾರರು ತಮ್ಮ ಪಾಲಿನ ವಿಷಯಗಳನ್ನು ಸಮಿತಿಯ ಮುಂದಿಟ್ಟರು.
ವಿಚಾರಣೆ ವೇಳೆ, ಹರ್ಮೀತ್ ಸಿಂಗ್ ಅವರ ವಿರುದ್ಧ ಕೊಂಚ ತನ್ನ ನಿಲುವನ್ನು ಸಡಿಲಗೊಳಿಸಿದ ಸಮಿತಿಯ ಸದಸ್ಯರು, ಆತನ ವಯಸ್ಸು ಹಾಗೂ ಅನುನುಭವ, ಅಲ್ಲದೇ, ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಆತ ಕಾಲಿಟ್ಟದ್ದು - ಎಲ್ಲವನ್ನೂ ಪರಿಗಣಿಸಿತು ಎಂದು ಮೂಲಗಳು ತಿಳಿಸಿವೆ.
- ಅಮಿತ್ ಸಿಂಗ್ಗೆ ಐದು ವರ್ಷಗಳ ನಿಷೇಧ
- ಸಿದ್ಧಾರ್ಥ ತ್ರಿವೇದಿಗೆ ಒಂದು ವರ್ಷದ ಅಮಾನತು
- ಸಾಕ್ಷ್ಯಾಧಾರ ಕೊರತೆಯಿಂದ ಸ್ಪಿನ್ನರ್ ಹರ್ಮಿತ್ ಸಿಂಗ್ ಶಿಕ್ಷೆಯಿಂದ ಪಾರು
- ಇತರ ಕ್ರಿಕೆಟಿಗರಿಗೆ ಆಮಿಷ ಒಡ್ಡಿದ್ದರಿಂದ ಚಂಡೀಲಾ ಪ್ರಮುಖ ಆರೋಪಿ
- ಕ್ರಮ ಕೈಗೊಳ್ಳುವ ನಿರ್ಧಾರ ಮುಂದೂಡಿದ ಬಿಸಿಸಿಐ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


