ಬದಲಾವಣೆ ತನ್ನಿ

ಪಿಟಿಐ ರೇವಾರಿ(ಹರ್ಯಾಣ) ಸೆ.15-
'ದೇಶ ಬಲವರ್ಧನೆಗೊಂಡು ಅಭಿವೃದ್ಧಿ ಕಾಣಬೇಕೆ? ಹಾಗಿದ್ದರೆ ದೆಹಲಿಯಲ್ಲಿ ಸಮರ್ಥ ಸರ್ಕಾರ ಬೇಕು. ಎಲ್ಲರನ್ನೂ ಜತೆಗೆ ಮುನ್ನಡೆಸುವ ಸಮರ್ಥ ನಾಯಕತ್ವ ಬೇಕು'
- ಹೀಗೆಂದು ಸಾರಿದ್ದು ಬಿಜೆಪಿಯ ಪ್ರಧಾನಿ ಹುದ್ದೆ ಅಭ್ಯರ್ಥಿ ನರೇಂದ್ರ ಮೋದಿ. ಶುಕ್ರವಾರದ ಘೋಷಣೆ ಬಳಿಕ ಮೊದಲ ಬಾರಿಗೆ ಜಾಟ್ ಸಮುದಾಯದ ಜನರು ಬಾಹುಳ್ಯವಿರುವ ಹರ್ಯಾಣದ ರೇವಾರಿಯಲ್ಲಿ ಭಾನುವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
65 ನಿಮಿಷಗಳ ಭಾಷಣದಲ್ಲಿ ವಿವಿಧ ಹಂತಗಳಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಖಂಡತುಂಡವಾಗಿ ಟೀಕಿಸಿದರು. ಸಮರ್ಥಸರ್ಕಾರಕ್ಕಾಗಿ ಮುಂದಿನ ಚುನಾವಣೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿಕೊಂಡರು.
ಸೈನಿಕರಿಂದ ಕಲಿಯಬೇಕು: ಜಾತ್ಯತೀತ ವ್ಯವಸ್ಥೆಯನ್ನು ಸೈನಿಕರಿಂದ ಕಲಿಯಬೇಕು ಎಂದು ನರೇಂದ್ರ ಮೋದಿ ಕೊಂಡಾಡಿದರು. ರಾಜಕಾರಣಿಗಳು ದೇಶವನ್ನು ಜಾತಿ ಹೆಸರಿನಲ್ಲಿ ಒಡೆಯುತ್ತಾರೆ. ಆದರೆ ದೇಶ ಕಾಯುವ ವೀರ ಯೋಧರಿಂದ ರಾಜಕಾರಣಿಗಳು ಪಾಠ ಕಲಿಯಬೇಕಿದೆ. ಮತ ಬ್ಯಾಂಕ್ ರಾಜಕಾರಣದಿಂದ ದೇಶ ಒಡೆಯುವುದೇ ರಾಜಕಾರಣಿಗಳ ಕೆಲಸ ಎಂದು ಮೋದಿ ಟೀಕಿಸಿದರು.
ಸಮಸ್ಯೆ ಗಡಿಯಲ್ಲಲ್ಲ, ದಿಲ್ಲಿಯಲ್ಲಿ: ಗಡಿಯಲ್ಲಿನ ಭದ್ರತೆಯನ್ನು ಯುಪಿಎ ಸರ್ಕಾರ ನಿರ್ಲಕ್ಷಿಸಿದೆ. ಜತೆಗೆ ಸೇನೆಯಲ್ಲಿಯೂ ಯಾವುದೇ ಕೊರತೆ ಇಲ್ಲ. ಆದರೆ ನಿಜವಾದ ಕೊರತೆ ಇರುವುದು ದಿಲ್ಲಿಯಲ್ಲಿ. ನಮ್ಮ ದೇಶದ ಒಳಕ್ಕೆ ನುಗ್ಗಿದ ಪಾಕಿಸ್ತಾನ ಮತ್ತು ಚೀನಾ ಸೈನಿಕರನ್ನು ಹೊಡೆದಟ್ಟುವ ಬಗ್ಗೆ ಕಠಿಣ ನಿಲವು ತಾಳಲು ನಾಯಕರು ವಿಫಲರಾಗಿದ್ದಾರೆ ಎಂದು ಮೋದಿ ಲೇವಡಿ ಮಾಡಿದರು. ಸಮರ್ಥ, ದೇಶಭಕ್ತಿಯುಳ್ಳ ಮತ್ತು ಜನಹಿತ ಸರ್ಕಾರ ಇದ್ದರೆ ಇಂಥ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.
ಬೇಕೀಗ ಬದಲಾವಣೆ: ಸಮರ್ಥ ಮತ್ತು ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವ ನಾಯಕತ್ವ ಈಗ ದೇಶಕ್ಕೆ ಅಗತ್ಯವಾಗಿದೆ ಎಂದಿದ್ದಾರೆ ನರೇಂದ್ರ ಮೋದಿ. ಮುಂದಿನ ಚುನಾವಣೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಬೇಕು. ಇದಕ್ಕಾಗಿ ಅವರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಬೇಕು ಎಂದರು.
1000077332 ಗೂಗಲ್ನಲ್ಲಿ ಮೋದಿಗಾಗಿ ಹುಡುಕಿದವರ ಸಂಖ್ಯೆ
ಗೂಗಲ್ನಲ್ಲಿ ಹೆಚ್ಚು ಹುಡುಕಾಟ ನಡೆಯುವುದು ಯಾರಿಗೆ ಗೊತ್ತೇ? ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಗ್ಗೆ. ಅವರು ಈ ನಿಟ್ಟಿನಲ್ಲಿ ಎಲ್ಲ ದಾಖಲೆಗಳನ್ನು ಮುರಿದಿದ್ದಾರೆ. ಗೂಗಲ್ನಲ್ಲಿ ಹುಡುಕಾಟಕ್ಕೆ ಒಳಪಡುವ ಎಲ್ಲ ರಾಜಕೀಯ ನಾಯಕರ ದಾಖಲೆಗಳನ್ನೂ ಮೋದಿ ಮುರಿದಿದ್ದಾರೆ. 100 ಕೋಟಿಗೂ ಅಧಿಕ ಬಾರಿ ಮೋದಿಯವರ ಬಗ್ಗೆ ಜಾಲತಾಣದಲ್ಲಿ ಜನರು ಹುಡುಕಾಟ ನಡೆಸಿದ್ದಾರೆ.
ಅದೂ ಒಂದೇ ದಿನದಲ್ಲಿ! ಈ ಹಿಂದೆ, ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆದಿದ್ದ ಸಂದರ್ಭದಲ್ಲಿ ಬರಾಕ್ ಒಬಾಮ ಬಗ್ಗೆ ಹುಡುಕಾಟ ನಡೆಸಲಾಗಿತ್ತು. 98,77,532 ಬಾರಿ ಒಬಾಮ ಬಗ್ಗೆ ಜನರು ಹುಡುಕಾಟ ನಡೆಸಿದ್ದರು.
ಪಾಕಿಸ್ತಾನಿಗಳೇ ಬಾಂಬ್ ಬೇಡ
ಭಯೋತ್ಪಾದನೆಯನ್ನು ತ್ಯಜಿಸಿ ಎಂದು ಪಾಕಿಸ್ತಾನಕ್ಕೆ ನರೇಂದ್ರ ಮೋದಿ ಮನವಿ ಮಾಡಿದರು. ಕಳೆದ 60 ವರ್ಷಗಳಲ್ಲಿ ಪಾಕಿಸ್ತಾನ ಬಂದೂಕು, ಬಾಂಬ್ಗಳನ್ನು ಮನ ಬಂದಂತೆ ಬಳಕೆ ಮಾಡಿದೆ. ಅದರಿಂದ ಆ ದೇಶ ಏನಾದರೂ ಅಭಿವೃದ್ಧಿ ಕಂಡಿತೇ ಎಂದು ಪ್ರಶ್ನಿಸಿದರು. ಭಯೋತ್ಪಾದನೆ ಮತ್ತು ಅದಕ್ಕೆ ಸಂಬಂಧಿಸಿದ ಕೃತ್ಯಗಳಿಗೆ ಪೋಷಣೆ ನೀಡುವುದನ್ನು ಪಾಕಿಸ್ತಾನ ನಿಲ್ಲಿಸಿದರೆ ಕೇವಲ ಹತ್ತು ವರ್ಷಗಳಲ್ಲಿ ಅದೊಂದು ಸಂಪದ್ಭರಿತ ರಾಷ್ಟ್ರವಾಗಲಿದೆ ಎಂದರು.
ಕೇಂದ್ರದ್ದು ಮೌನವೇ ಉತ್ತರ
ಪ್ರತಿನಿತ್ಯವೂ ಕೇಂದ್ರ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುತ್ತಿದೆ. ಒಂದೆಡೆಯಿಂದ ಚೀನಾ ದೇಶದೊಳಕ್ಕೆ ಸೇನೆಯನ್ನು ನುಗ್ಗಿಸುತ್ತಿದ್ದರೆ, ಪಾಕಿಸ್ತಾನದ ಸೈನಿಕರು ಗಡಿಯಾಚೆಯಿಂದ ಕದನ ವಿರಾಮ ಉಲ್ಲಂಘಿಸುತ್ತಿದ್ದರೆ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಏನೂ ಆಗುತ್ತಿಲ್ಲ ಎಂಬಂತೆ ಮೌನದಿಂದ ಇರುತ್ತದೆ. ಚೀನಾ ಸೇನೆ ಅರುಣಾಚಲ ಪ್ರದೇಶವನ್ನು ತನ್ನದು ಎನ್ನುತ್ತಿದೆ. ಆದರೂ ಕೇಂದ್ರ ಸರ್ಕಾರ ಮೌನವಹಿಸಿ ಕುಳಿತಿದೆ.
ಹೇಳಿಕೆ ಬದಲಾವಣೆ ಏಕೆ?
ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಪಾಕಿಸ್ತಾನ ಸೈನಿಕರು ದೇಶದ ಯೋಧರನ್ನು ಹತ್ಯೆ ಮಾಡಿದ್ದಕ್ಕೆ ನೀಡಿದ್ದ ಹೇಳಿಕೆಯನ್ನು ಮೋದಿ ಖಂಡಿಸಿದರು. ಇದು ನಿಜಕ್ಕೂ ನಮ್ಮ ಸೈನಿಕರ ಮನಸ್ಸಿಗೆ ನೋವು ತಂದಿದೆ ಎಂದರು. ಬಿಹಾರದ ನಿತೀಶ್ ಸರ್ಕಾರದ ಸಚಿವ ನೀಡಿದ್ದ ಹೇಳಿಕೆಯನ್ನು ಖಂಡಿಸಿದರು.
ಮೋದಿ-ಆಡ್ವಾಣಿ ಕದನ ವಿರಾಮ?
ನರೇಂದ್ರ ಮೋದಿ ಮತ್ತು ಆಡ್ವಾಣಿ ರಾಜಿಯಾದರೇ? ಅದಕ್ಕೆ ಪೂರಕವಾಗಿರುವ ಬೆಳವಣಿಗೆ ನವದೆಹಲಿಯಲ್ಲಿ ನಡೆದಿದೆ. ಕೇಂದ್ರದ ಮಾಜಿ ಸಚಿವ ರಾಮ್ ಜೇಠ್ಮಲಾನಿ ನಿವಾಸದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆಡ್ವಾಣಿ ಮತ್ತು ಮೋದಿ ಭಾಗವಹಿಸಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಇಬ್ಬರೂ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಅನಂತಮೂರ್ತಿ ಹೇಳ್ತಾರೆ...
ಮೋದಿ ಆಳುವ ನಾಡಲ್ಲಿ ಬದುಕಲಾರೆ
ಒಂದೊಮ್ಮೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾಗುವುದಾದರೆ ನಾನು ಬದುಕಿರಲು ಇಷ್ಟಪಡುವುದಿಲ್ಲ. ಮಾಧ್ಯಮಗಳು ಮೋದಿ ಅವರನ್ನು ಅತಿಯಾಗಿ ವೈಭವೀಕರಿಸುತ್ತಿವೆ. ಕೋಮುವಾದಿ ವ್ಯಕ್ತಿಗೆ ಈ ದೇಶವನ್ನು ಆಳಲು ಅರ್ಹತೆ ಇಲ್ಲ. ನನಗಂತೂ ಮೋದಿ ಪ್ರಧಾನಿಯಾಗುವುದು ಸುತಾರಾಂ ಇಷ್ಟವೇ ಇಲ್ಲ. ಹೀಗಾಗಿ ಜಾತ್ಯತೀತ ಸಂಘಟನೆಗಳು ಮೋದಿ ವಿರುದ್ಧ ಚುರುಕಾಗಿ ಸಂಘಟಿತರಾಗಬೇಕು.
ಜನ ಹೇಳ್ತಾರೆ...
ಪ್ರಗತಿ, ಆಡಳಿತ ಹಾಗೂ ಸಂಸ್ಕೃತಿ ರಕ್ಷಣೆ ದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿಯಾಗಬೇಕಾದ್ದು ಇಂದಿನ ಅಗತ್ಯ. ಮೋದಿಯೇ ಪ್ರಧಾನಿ ಆಗಬೇಕೆಂಬುದು ನನ್ನ ಅಪೇಕ್ಷೆ. ರಾಹುಲ್ ಗಾಂಧಿ ಪ್ರಧಾನಿಯಾದರೂ ಅಥವಾ ಮೋದಿ ಬಿಟ್ಟು ಬೇರೆ ಯಾರೇ ಪ್ರಧಾನಿಯಾದರೂ ನಾನು ಮಾತ್ರ ಈ ದೇಶದಲ್ಲೇ ಇರುತ್ತೇನೆ.
- ಎಂ.ಚಿದಾನಂದಮೂರ್ತಿ, ಸಂಶೋಧಕ
ನರೇಂದ್ರ ಮೋದಿ ಪ್ರಧಾನಿಯಾದರೆ ದೇಶದ್ರೋಹಿಗಳು, ಭಯೋತ್ಪಾದಕರು ದೇಶ ಬಿಟ್ಟು ಹೋಗುವುದು ಅನಿವಾರ್ಯವಾಗುತ್ತದೆ. ದೇಶ ಬಿಟ್ಟು ಹೋಗಲು ಅನಂತಮೂರ್ತಿಯವರೇನು
ಭಯೋತ್ಪಾದಕರಾ?
- ಸಿ.ಟಿ.ರವಿ, ಬಿಜೆಪಿ ನಾಯಕ
ಅಬ್ಬಾ, ಹಾಗಾದರೆ ನರೇಂದ್ರ ಮೋದಿ ಪ್ರಧಾನಿ ಆಗೇ ಆಗಲಿ...
- ಶಿಶಿರ್ ಹೆಗಡೆ
ಅವರ ಜತೆ ಗೋವಿಂದರಾವ್, ಮರುಳು ಸಿದ್ದಯ್ಯ, ಕಾರ್ನಾಡ್ ಅವರು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನಕ್ಕೆ ಹೋಗಲಿ.
- ಆನಂದ ಚಂದ್ರಶೇಖರ್
ಈಗಲೇ ಅವರು ವೀಸಾಗೆ ಏಕೆ ಅರ್ಜಿ ಸಲ್ಲಿಸಬಾರದು?
- ಮಹೇಶ್ ಸಂಗೊಳ್ಳಿ
ಪಾಶ್ಚಾತ್ಯ ದೇಶದ ವೀಸಾಗೆ ಪ್ರಯತ್ನಿಸಲಿ, ಸೋನಿಯಾ ಸಹಾಯ ಮಾಡಬಹುದು.
- ಅರವಿಂದ ಶೆಣೈ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


