ಅದಿರು ರಫ್ತು; ಸಂಸದೀಯ ವರದಿ ಶಿಫಾರಸು ಅವೈಜ್ಞಾನಿಕ
ಕ.ಪ್ರ. ವಾರ್ತೆ, ಬೆಂಗಳೂರು, ಸೆ.18-
ಕಬ್ಬಿಣದ ಅದಿರು ರಫ್ತು ನಿಲ್ಲಿಸಬೇಕೆನ್ನುವ ಕೇಂದ್ರ ಸಂಸದೀಯ ಸಮಿತಿ ವರದಿ ಶಿಫಾರಸುಗಳು ಅವೈಜ್ಞಾನಿಕ ಎಂದು ಇಂಡಿಯನ್ ಮಿನರಲ್ ಇಂಡಸ್ಟ್ರೀಸ್ ಫೆಡರೇಷನ್ (ಎಫ್ಐಎಂಐ) ಹೇಳಿದೆ.
ಸಮಿತಿ ಸದಸ್ಯರು ಬರೀ ಕಬ್ಬಿಣ ಗಣಿಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಸಲಹೆಗಳನ್ನು ಪಡೆದು ವರದಿ ತಯಾರಿಸಿದೆ ಎಂದು (ಎಫ್ಐಎಂಐ) ಒಕ್ಕೂಟದ ಅಧ್ಯಕ್ಷ ಎಚ್.ಸಿ. ಡಾಗಾ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಸದೀಯ ಸಮಿತಿ ಸದಸ್ಯರು ಕೈಗಾರಿಕೆ, ವಾಣಿಜ್ಯ, ಹಣಕಾಸು ಮತ್ತು ಗಣಿಗಾರಿಕೆಗೆ ಸಂಬಂಧಿಸಿದ ಇಲಾಖೆಗಳನ್ನು ಸಂಪರ್ಕಿಸದೆ ಕೇವಲ ಕಬ್ಬಿಣ ಗಣಿಗಾರಿಕೆ ಬಗ್ಗೆ ಮಾಹಿತಿ ಪಡೆದಿದೆ. ಇದನ್ನಾಧರಿಸಿ 25ವರ್ಷಗಳ ನಂತರ ದೇಶದಲ್ಲಿ ಅದಿರು ಲಭ್ಯವಾಗುವುದಿಲ್ಲ. ಆದ್ದರಿಂದ ಅದಿರು ರಫ್ತು ನಿಲ್ಲಿಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೆ, ಇದು ಸಂಪೂರ್ಣ ಅವೈಜ್ಞಾನಿಕ ಎಂದು ಅವರು ಡಾಗಾ ವಿವರಿಸಿದರು.
ಗೋವಾದಲ್ಲಿ 1961ರಲ್ಲಿ ಬರೀ 1961 ಮಿಲಿಯನ್ ಟನ್ ಅದಿರು ಸಿಗುತ್ತದೆ ಎಂದು ಸರ್ವೆ ವರದಿ ಹೇಳಿತ್ತು. ಆದರೆ, ಈ ತಕನ ಅಲ್ಲಿ 1000 ಮಿಲಿಯನ್ ಟನ್ ಅದಿರು ಹೊರತೆಗೆಯಲಾಗಿದೆ.
ಇದೇ ರೀತಿ ರಾಜ್ಯದ ತುಮಕೂರು, ಚಿತ್ರದುರ್ಗದಲ್ಲೂ ಉತ್ತಮ ನಿಕ್ಷೇಪಗಳಿದ್ದು, ಅವುಗಳನ್ನು ಉತ್ತಮ ತಂತ್ರಜ್ಞಾನದೊಂದಿಗೆ ಸಂಸ್ಕರಿಸಬೇಕು. ಹಾಗೆಯೇ ಅದಿರ ರಫ್ತು ಮಾಡಲು ಉತ್ತೇಜನಕಾರಿ ನೀತಿಗಳನ್ನು ಜಾರಿಗೊಳಿಸಬೇಕೆಂದು ಅವರು ತಿಳಿಸಿದರು.
ದೇಶದಲ್ಲಿ ಐರನ್, ಬಾಕ್ಸೈಟ್, ಕೋಲ್, ಡೋಲಮೈಟ್, ಗಿಪ್ಸಮ್, ಲೈಮ್ಸ್ಟೋನ್ ನಿಕ್ಷೆಪಗಳು ವಿಶಾಲವಾಗಿವೆ. ಅಲ್ಲದೆ ಇಂಧನ ರೂಪದ ತೋರಿಯಮ್, ಸೆಲೆನಿಯಮ್ ಹಾಗೂ ಲಿಥಿಲಿಯಂ ಸೇರಿದಂತೆ ಅನೇಕ ಅದಿರುಗಳಿಗೆ ಭಾರೀ ಬೇಡಿಕೆ ಬರುತ್ತಿದೆ. ಸದ್ಯ ಈ ಅದಿರಿನಿಂದ ಸಿಗುವ ಆದಾಯ ಕಡಿಮೆ ಇದ್ದರೂ ಸರ್ಕಾರ ಸೂಕ್ತ ರೀತಿಯಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಿದರೆ, 15ವರ್ಷಗಳಲ್ಲಿ ಉತ್ತಮ ಆದಾಯ ಗಳಿಸಬಹುದು ಎಂದು ಅವರು ವಿವರಿಸಿದರು.
ಸದ್ಯದ ಆರ್ಥಿಕ ಸ್ಥಿತಿ ಸುಧಾರಿಸಲು ಇರುವ ಪ್ರಮುಖ ಮಾರ್ಗಗಳಲ್ಲಿ ಗಣಿಗಾರಿಕೆ ಕ್ಷೇತ್ರ ಕೂಡ ಒಂದಾಗಿದೆ. ಆದರೆ, ಕಬ್ಬಿಣದ ಅದಿರು ರಫ್ತು ಕಡಿಮೆಗೊಳಿಸಿದ್ದರಿಂದ ವಿದೇಶಿ ವಿನಿಮಯ ಕುಸಿಯಿತು. ಸಹಜವಾಗಿಯೇ ದೇಶದ ಆರ್ಥಿಕ ಸ್ಥಿತಿ ಕೂಡ ಅಲ್ಲಾಡುವಂತಾಯಿತು ಎಂದು ಡಾಗಾ ಹೇಳಿದರು.
ಇಂದಿನಿಂದ ಸಮ್ಮೇಳನ ಆರಂಭ: ಇಂಡಿಯನ್ ಮಿನರಲ್ ಇಂಡಸ್ಟ್ರೀಸ್ ಫೆಡರೇಷನ್ ಸೆ.19ರಿಂದ 21ರವರೆಗೆ ಗಣಿಗಾರಿಕೆ ಕುರಿತು ನಗರದಲ್ಲಿ ಸಮ್ಮೇಳನ ಹಾಗೂ ವಾಣಿಜ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಡಾಗಾ ವಿವರಿಸಿದರು.
ನಗರದ ಹೊರ ವಲಯದಲ್ಲಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಸಮ್ಮೇಳನ ನಡೆಯಲಿದ್ದು, ಕೇಂದ್ರ ಸರ್ಕಾರದ ಗಣಿ ಸಚಿವಾಲಯ ಇದರ ಪ್ರಾಯೋಜಕತ್ವ ವಹಿಸಿದೆ. ಇದು ನೀತಿ ರೂಪಿಸುವವರಿಗೆ, ತಂತ್ರಜ್ಞರಿಗೆ, ಭೂ ವಿಜ್ಞಾನಿಗಳಿಗೆ ಹಾಗೂ ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲಾ ವೃತ್ತಿಪರರಿಗೂ ಚರ್ಚೆಯ ವೇದಿಕೆಯಾಗಲಿದೆ ಎಂದರು. ಒಕ್ಕೂಡದ ಪ್ರಧಾನ ಕಾರ್ಯದರ್ಶಿ ಶರ್ಮಾ ಹಾರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

