ಪ್ರಧಾನ ಸುದ್ದಿ

ಹೈದರಾಬಾದ್ ಸ್ಫೋಟ: ಶಂಕಿತ ಉಗ್ರನ ವಿರುದ್ಧ ಕದ್ರಿ ಠಾಣೆಯಲ್ಲಿ ಕೇಸ್!

Published On :

ಕ.ಪ್ರ.ವಾರ್ತೆ ಮಂಗಳೂರು ಸೆ. 25-
ಹೈದರಾಬಾದ್ ದಿಲ್‌ಸುಖ್‌ನಗರ ಸ್ಫೋಟದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಉಗ್ರ ಇಬ್ರಾಹಿಂ ಖಲೀಲ್ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೀಗ ದಾಖಲಾಗಿದೆ! ಪಾಸ್‌ಪೋರ್ಟ್ ಪರಿಶೀಲನೆ ನಡೆಸದ ಪೊಲೀಸ್ ವಿರುದ್ಧ ಈಗ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
ದಿಲ್‌ಸುಖ್‌ನಗರದಲ್ಲಿ ಫೆ.22ರಂದು ನಡೆದ ಸ್ಫೋಟದಲ್ಲಿ ಮಂಗಳೂರು ನಂಟಿನ ಕುರಿತು ಜೂ.7ರಂದು 'ಕನ್ನಡಪ್ರಭ'ದಲ್ಲಿ 'ಅಕ್ರಮ ಪಾಸ್‌ಪೋರ್ಟ್ ಪಡೆದವ ಈಗ ಉಗ್ರ' ಎಂಬ 'ಸ್ಫೋಟಕ' ವರದಿ ಪ್ರಕಟವಾಗಿತ್ತು.
 ಪಾಸ್‌ಪೋರ್ಟ್‌ಗೆ ನಕಲಿ ವಿಳಾಸ ನೀಡಿರುವುದು ವಿಚಾರಣೆಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಇಬ್ರಾಹಿಂ ಖಲೀಲ್ ವಿರುದ್ಧ ಕದ್ರಿ ಠಾಣೆಯಲ್ಲಿ ಸೆ.15ರಂದು 420, 425, 465, 468, 471 ಮೋಸ, ವಂಚನೆ, ಪಾಸ್‌ಪೋರ್ಟ್ ಕಾಯ್ದೆ 1967ರ ಅಡಿ ಸೆ.12 (ಬಿ) ಪ್ರಕರಣ ದಾಖಲಿಸಲಾಗಿದೆ. ಪಾಸ್‌ಪೋರ್ಟ್ ಪರಿಶೀಲಿಸದೇ ಕರ್ತವ್ಯ ಲೋಪ ಎಸಗಿದ ಪೊಲೀಸ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಈ ನಡುವೆ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸಹಸಂಸ್ಥಾಪಕ, ಮಂಗಳೂರು, ಭಟ್ಕಳದಿಂದ ಕಾರ್ಯಾಚರಿಸುತ್ತಿದ್ದ ಯಾಸೀನ್ ಭಟ್ಕಳ್, ದಿಲ್‌ಸುಖ್‌ನಗರ ಸ್ಫೋಟದಲ್ಲಿ ತನ್ನ ಕೈವಾಡವಿದೆ ಎಂದು ತನಿಖಾಧಿಕಾರಿಗಳ ಮುಂದೆ ಖುದ್ದು ಹೇಳುವ ಮೂಲಕ ಮಂಗಳೂರು ನಂಟನ್ನು ಒಪ್ಪಿಕೊಡಿದ್ದಾನೆ.
 
ಸ್ಫೋಟ ಸ್ಥಳದಲ್ಲಿ ಸಿಕ್ಕಿದ ಉಗ್ರನ ಫೋಟೊ: ದಿಲ್‌ಸುಖ್‌ನಗರ ಸ್ಫೋಟ ನಡೆದ ಸ್ಥಳದಲ್ಲಿ ಶಂಕಿತ ವ್ಯಕ್ತಿ ಫೋಟೊ ಎನ್‌ಐಎಗೆ ಲಭಿಸಿತ್ತು. ಸ್ಫೋಟದಲ್ಲಿ ಬಂಧಿತರಾಗಿದ್ದ ಮಕ್ಬೂಲ್ ಮತ್ತು ಇಮ್ರಾನ್ ಖಾನ್ ಪೂರಕ ಮಾಹಿತಿ ನೀಡಿದ್ದರು. ಎಲ್ಲ ಪಾಸ್‌ಪೋರ್ಟ್‌ಗಳ ಕ್ರಾಸ್ ಚೆಕ್ ಮಾಡಿ ಫೋಟೋ ಸಾಮ್ಯತೆ ಪರಿಶೀಲಿಸಿದಾಗ ಇಬ್ರಾಹಿಂ ಖಲೀಲ್ ಹೆಸರಲ್ಲಿ ಮಂಗಳೂರಲ್ಲಿ ಪಾಸ್‌ಪೋರ್ಟ್ ಮಾಡಿರುವುದು ಬೆಳಕಿಗೆ ಬಂದಿತ್ತು.
ಎನ್‌ಐಎ ಅಧಿಕಾರಿಗಳ ತಂಡ ಮಂಗಳೂರು ಕಮಿಷನರ್ ಕಚೇರಿಯ ಸ್ಪೆಷಲ್ ಬ್ರಾಂಚ್‌ಗೆ ಬಂದು ಪಾಸ್‌ಪೋರ್ಟ್ ವಿವರ ಪಡೆದಿತ್ತು. ಕಚೇರಿಯಲ್ಲಿಯೇ ಪಾಸ್‌ಪೋರ್ಟ್ ವಿವರದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಕೊಂಡೊಯ್ದಿದ್ದರು.   ಈ ಪಾಸ್‌ಪೋರ್ಟ್ ಬಳಸಿದ ವ್ಯಕ್ತಿ ಹೊರದೇಶಕ್ಕೆ ಹೋಗಿಲ್ಲ, ಭಾರತದಲ್ಲಿಯೇ ಇದ್ದಾನೆ ಎಂಬುದು ಖಚಿತವಾಗಿತ್ತು. ಅದರಂತೆ ಎಲ್ಲ ಏರ್‌ಪೋರ್ಟ್‌ಗಳಲ್ಲಿಯೂ ಖಲೀಲ್ ಪಾಸ್‌ಪೋರ್ಟ್ ಬಗ್ಗೆ ಲುಕ್‌ಔಟ್ ನೋಟಿಸ್ ಕೂಡಾ ಜಾರಿ ಮಾಡಿದ್ದರು.

ತನಿಖೆಗೆ ಆದೇಶ: ಪಾಸ್‌ಪೋರ್ಟ್‌ನಲ್ಲಿರುವ ವಿಳಾಸ ಅಸಲಿಯೇ ಎಂಬ ಕುರಿತು ತನಿಖೆ ನಡೆಸಿ ಮಾಹಿತಿ ನೀಡುವಂತೆ ಎನ್‌ಐಎ ಮಂಗಳೂರು ಪೊಲೀಸ್ ಕಮಿಷನರ್‌ಗೆ ಸೂಚಿಸಿತ್ತು. ಅದರಂತೆ ಡಿಸಿಪಿಗೆ ತನಿಖೆ ಹೊಣೆಯನ್ನೂ ವಹಿಸಿದ್ದರು.
ಪಾಸ್‌ಪೋರ್ಟ್ ಅರ್ಜಿಯಲ್ಲಿ 'ಇಬ್ರಾಹಿಂ ಖಲೀಲ್, ಸನ್ ಆಫ್ ಖಲೀಲ್ ಇಸ್ಮಾಯಿಲ್, ಬೆಂದೂರ್‌ವೆಲ್ ರೋಸಾ ಕಾಟೇಜ್‌' ವಿಳಾಸ ಇತ್ತು. ವಿಳಾಸ ಹುಡುಕಿಕೊಂಡು ಹೋದ ಪೊಲೀಸ್ ಅಧಿಕಾರಿಗಳಿಗೆ ಅಲ್ಲಿ ಅಂಥ ಮನೆಯೇ ಇರಲಿಲ್ಲ ಎಂಬುದು ಖಚಿತವಾಯಿತು.

ಶಾಲೆ ಸರ್ಟಿಫಿಕೇಟ್ ಬೋಗಸ್: ಬದ್ರಿಯಾ ಶಾಲೆಯಲ್ಲಿ ಹತ್ತನೇ ತರಗತಿ ಕಲಿತಿರುವ ಸರ್ಟಿಫಿಕೇಟ್ ಖಲೀಲ್ ನೀಡಿದ್ದ. ಅಲ್ಲಿಗೂ ಹೋದ ಪೊಲೀಸರಿಗೆ ಇಬ್ರಾಹಿಂ ಖಲೀಲ್ ಎಂಬ ಹುಡುಗ ಓದಿರಲೇ ಇಲ್ಲ ಎಂಬ ವಿಚಾರ ತಿಳಿದು ಬಂದಿದೆ.

ಪಿಯು ವಿದ್ಯಾರ್ಥಿನಿ ನಂಬರ್!: ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಅದು ಕೆಲಸ ಮಾಡುತ್ತಿರಲಿಲ್ಲ. ವಿಳಾಸ ಪತ್ತೆ ಹಚ್ಚಿದಾಗ ಬಲ್ಮಠ ಪಿಯು ಕಾಲೇಜ್ ವಿದ್ಯಾರ್ಥಿನಿಯದಾಗಿತ್ತು. ಆಕೆ ತನಗೆ ಮತ್ತು ತಾಯಿ ಹೆಸರಲ್ಲಿ ಎರಡು ಸಿಮ್ ಖರೀದಿಸಿದ್ದಳು. ಎರಡು ಮೊಬೈಲ್ ಬಳಸಿದರೆ ವೆಚ್ಚ ಎಂದು ತನ್ನ ಸಿಮ್ ಎಸೆದು, ತಾಯಿ ಮೊಬೈಲ್ ಮಾತ್ರ ಬಳಸುತ್ತಿದ್ದಳು. ಆದರೆ ಎಸೆದ ಸಿಮ್ ಶಂಕಿತ ಉಗ್ರನ ಕೈ ಸೇರಿತ್ತು!

 ಪೊಲೀಸ್ ತಪ್ಪಿತಸ್ಥ: ತನಿಖಾ ವರದಿ
ತನಿಖೆ ನಡೆಸಿದಾಗ ಪೊಲೀಸ್ ಲಕ್ಷ್ಮಣ್ ಕರ್ತವ್ಯ ಲೋಪವೆಸಗಿರುವುದು ಕಂಡು ಬಂದ ಕುರಿತು ತನಿಖಾಧಿಕಾರಿ, ಪೊಲೀಸ್ ಕಮಿಷನರ್‌ಗೆ ವರದಿ ನೀಡಿದ್ದರು. ಜತೆಗೆ ಸುಳ್ಳು ವಿಳಾಸ ನೀಡಿದ ಇಬ್ರಾಹಿಂ ಖಲೀಲ್ ಮತ್ತು ಸಹಕರಿಸಿದವರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಿದ್ದರು.

ವಿಳಾಸ ಪರಿಶೀಲನೆ ನಡೆಸಿಲ್ಲ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ನಕಲಿ ವಿಳಾಸ ನೀಡಿದ ಇಬ್ರಾಹಿಂ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
-ಮನೀಶ್ ಕರ್ಬಿಕರ್, ಕಮಿಷನರ್

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.