ರು. 593.11 ಕೋಟಿ ಅನುದಾನ: ಕೇಂದ್ರಕ್ಕೆ ಮನವಿ
ಬೆಂಗಳೂರು: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರಾಜ್ಯದಲ್ಲಿ ರು. 2724.37 ಕೋಟಿ ನಷ್ಟವಾಗಿದ್ದು, ರಾಜ್ಯ ಬರ ಪರಿಹಾರ ನಿಧಿಗೆ ರು. 593.11 ಕೋಟಿ ಅನುದಾನ ಬಿಡುಗಡೆ ಸೇರಿದಂತೆ ಹೆಚ್ಚಿನ ನೆರವಿಗಾಗಿ ರಾಜ್ಯ ಸರ್ಕಾರ ಕೇಂದ್ರದ ಮನವಿ ಸಲ್ಲಿಸಿದೆ.
ಮಳೆಯಿಂದ ತೊಂದರೆಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೇಂದ್ರ ತಂಡದ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಮನವಿ ಸಲ್ಲಿಸಿದ್ದಾರೆ.
ರಾಜ್ಯ ಬರ ಪರಿಹಾರ ನಿಧಿಯಲ್ಲಿ ಕೇಂದ್ರ ಹಾಗೂ ರಾಜ್ಯದ ಪಾಲನ್ನು ಒಳಗೊಂಡಂತೆ ಕೇವಲ ರು. 186.33 ಕೋಟಿ ಮಾತ್ರ ಲಭ್ಯವಿದೆ. ಈ ಪೈಕಿ ಶೇ.5ರಷ್ಟನ್ನು ಅಂದರೆ ರು. 9.31 ಕೋಟಿಯನ್ನು ಪರಿಹಾರ ಕಾರ್ಯಾಚರಣೆಗೆ ವೆಚ್ಚ ಮಾಡಲಾಗಿದೆ. ಕೇಂದ್ರದಿಂದ ರು. 69.87 ಕೋಟಿಯನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗಿದ್ದು, ಸದ್ಯಕ್ಕೆ ರು. 47.58 ಕೋಟಿ ಮಾತ್ರ ನಿಧಿಯಲ್ಲಿ ಲಭ್ಯವಿದೆ ಎಂಬ ವಿವರವನ್ನು ಕೇಂದ್ರಕ್ಕೆ ನೀಡಿದ್ದಾರೆ.
ಜೂನ್ 18ರಿಂದ ಸೆಪ್ಟಂಬರ್ 13ರ ಅವಧಿಯಲ್ಲಿ ರಾಜ್ಯದ 98 ತಾಲೂಕುಗಳಲ್ಲಿ ವಾಡಿಕೆ ಮಳೆಗಿಂತ ಶೇ.20ರಷ್ಟು ಹೆಚ್ಚು ಮಳೆಯಾಗಿದೆ. 57 ತಾಲೂಕುಗಳಲ್ಲಿ ಶೇ.0-20 ರಷ್ಟು ಮಳೆಯಾಗಿದೆ. 2 ತಾಲೂಕುಗಳಲ್ಲಿ ವಾಡಿಕೆಗಿಂತ ಶೇ.20ರಷ್ಟು ಕಡಿಮೆ ಮಳೆಯಾಗಿದೆ.
ಏಪ್ರಿಲ್ನಿಂದ ಇಲ್ಲಿಯವರೆಗೆ 119 ಮಂದಿ ಪ್ರಾಣ ಕಳೆದುಕೊಂಡಿದ್ದು, 259 ಮಂದಿ ತಮ್ಮ ಕಣ್ಣು, ಕೈ, ಕಾಲು ಕಳೆದುಕೊಂಡಿದ್ದಾರೆ. 286 ಪಶುಗಳು ಸಾವನಪ್ಪಿದ್ದು, 32 ಲಕ್ಷ ನಷ್ಟವಾಗಿದೆ. 11536 ಮನೆಗಳು ಹಾನಿಗೊಂಡಿದ್ದು, 54.59 ಕೋಟಿ ಹಾನಿಯಾಗಿದೆ. 1,33,572 ಹೆಕ್ಟೇರ್ ಪ್ರದೇಶದಲ್ಲಿ ರು. 320.03 ಕೋಟಿ ಕೃಷಿ ಉತ್ಪನ್ನಗಳು ಹಾನಿಯಾಗಿವೆ. 1,16,024 ಹೆಕ್ಟೇರ್ ಪ್ರದೇಶದಲ್ಲಿನ 1846.44 ಕೋಟಿ ಮೌಲ್ಯದ ತೋಟಗಾರಿಕಾ ಉತ್ಪನ್ನಗಳು ಹಾನಿಗೊಂಡಿವೆ. ಕೊಳೆ ರೋಗದಿಂದ 88,408 ಹೆಕ್ಟೇರ್ ಪ್ರದೇಶದಲ್ಲಿನ ರು. 1607.29 ಕೋಟಿ ಬೆಳೆ ಹಾನಿಯಾಗಿದೆ. 5764 ಕಿಮೀ ವ್ಯಾಪ್ತಿಯ ರಸ್ತೆ ಹಾನಿ ಬಗ್ಗೆ ಸಿಎಂ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

