ಪ್ರಧಾನ ಸುದ್ದಿ

ಎಂಬತ್ತು, ಕುಗ್ಗಿಲ್ಲ ದೇವೇಗೌಡರ ಗತ್ತು

ಎಂಬತ್ತು, ಕುಗ್ಗಿಲ್ಲ ದೇವೇಗೌಡರ ಗತ್ತು
Published On :

24x7 ರಾಜಕಾರಣಿ ಗೌಡರು. ಕ್ಷೇತ್ರದಲ್ಲಿ ಅವರ ಪ್ರಚಾರದ ವೈಖರಿಯೇ ಬೇರೆ. ಇಲ್ಲಿ ಆರೋಪ, ಆವೇಶ ಇರಲ್ಲ. ಹಿರಿಯರನ್ನು ಆಪ್ತವಾಗಿ ಮಾತನಾಡಿಸುತ್ತ, ಯೋಗಕ್ಷೇವು ವಿಚಾರಿಸುತ್ತ, ತಮ್ಮ ಗೆಲುವಿನ ಅಗತ್ಯ ಪ್ರತಿಪಾದಿಸುತ್ತಾರೆ. 'ಕನ್ನಡಪ್ರಭ'  ಅವರೊಂದಿಗೆ ಕಳೆದ ಒಂದಿಡೀ ದಿನದ ಚಿತ್ರಣ.

ಕನ್ನಡಪ್ರಭ ವಾರ್ತೆ    ಹಾಸನ    ಏ.4
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಪ್ರಾಯ 80. ಇನ್ನೂ ಚುನಾವಣೆ ಎದುರಿಸುವ ರಣೋತ್ಸಾಹ ಕುಗ್ಗಿಲ್ಲ. ಅವರಿಗೆ ಡೆಲ್ಲಿ ನಾಯಕರೂ ಒಂದೇ... ತನ್ನೂರಿನ ರೈತನೂ ಒಂದೇ... ಸೂರ್ಯ ಮೂಡುವ ಮುನ್ನವೇ ಹಳ್ಳಿಯಿಂದ ನೇರವಾಗಿ ತಮ್ಮ ಕೋಣೆಗೇ ಬಂದಿದ್ದ ರೈತ ರಾಮಪ್ಪನ ಹೆಗಲ ಮೇಲೆ ರಾಮಪ್ಪನವರ ಹೆಗಲ ಮೇಲೆ ಕೈ ಹಾಕಿಕೊಂಡೇ 'ದೊಡ್ಡಗೌಡರು' ತೃತೀಯ ರಂಗದ ಮುಖಂಡರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು!
ದೂರದ ಉತ್ತರಪ್ರದೇಶದ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್, ಪಶ್ಚಿಮ ಬಂಗಾಳದ ಸೀತಾರಾಂ ಯೆಚೂರಿ, ಹೈದರಾಬಾದ್‌ನಲ್ಲಿರುವ ವೈಎಸ್‌ಆರ್ ಪಕ್ಷದ ಜಗನ್‌ಮೋಹನ್ ರೆಡ್ಡಿ ಅವರೊಂದಿಗೆ ಮಾತನಾಡಿ ಮುಗಿಯುತ್ತಲೇ, 'ಈಗ ನಾನು ಗೆಲ್ಲುವುದರ ಜೊತೆ 15 ಸೀಟುಗಳನ್ನು ಗೆಲ್ಲಿಸಿಕೊಳ್ಳುವ ಅಗತ್ಯತೆ ಎದುರಾಗಿದೆ. ಅದಕ್ಕಾಗಿ ರಾಜ್ಯಾದ್ಯಂತ ಸುತ್ತಾಡಬೇಕು. ಹಾಸನದಲ್ಲಿ ಹೆಚ್ಚು ಪ್ರಚಾರ ಮಾಡಲು ಸಾಧ್ಯವಿಲ್ಲ. ಹಾಗಾಗಿ ರಾಮಪ್ಪ...  ನೀನು ಊರಲ್ಲಿ ಇದ್ದು ಓಡಾಡಿಕೊಂಡು ಓಟ್ ಹಾಕಿಸು' ಎಂದು ಪ್ರೀತಿಯಿಂದಲೇ ತಾಕೀತು ಮಾಡಿದರು.
ಹಾಸನದ ಕೆ.ಆರ್. ಪುರಂ ಬಡಾವಣೆಯ ತಮ್ಮ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಗೌಡರು, ಬೆಳಗ್ಗೆ 6.40 ರಿಂದ ಇಪ್ಪತ್ತು ನಿಮಿಷ  ಯೋಗ, ಧ್ಯಾನ ಮಾಡಿದರು. ಅರ್ಧ ಗಂಟೆ ತೃತೀಯ ರಂಗದ ಮುಖಂಡರೊಡನೆ 'ದೂರಾ'ಲೋಚನೆ.   

7.30ಕ್ಕೆ ಬನಿಯನ್ ಮತ್ತು ಪಂಚೆಯಲ್ಲಿ ಹೊರಬಂದು, ಕಾಫಿ ಕುಡಿಯುತ್ತಲೇ ಕನ್ನಡ, ಇಂಗ್ಲೀಷ್ ಪತ್ರಿಕೆಗಳನ್ನು ಓದಿದರು. ಜತೆಯಲ್ಲೇ ಪಕ್ಷದ ಶಾಸಕರಾದ ಪಟೇಲ್ ಶಿವರಾಂ, ಎಚ್.ಎಸ್. ಪ್ರಕಾಶ್, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮತ್ತಿತರ ಮುಖಂಡರು, ಕಾರ್ಯಕರ್ತರೊಂದಿಗೆ ಚುನಾವಣೆ ಪ್ರಚಾರದ ವೈಖರಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ.
ಮಾತುಗಳಿಗೆ ಬೇಸರ: 9.10ಕ್ಕೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತು. ನಂತರ ಸ್ನಾನ ಮುಗಿಸಿ ಬರುತ್ತಿದ್ದಂತೆ ತಿಂಡಿಗೆ ಕರೆ. ಉಪ್ಪಿಟ್ಟು, ದೋಸೆಯನ್ನು ಆಸ್ವಾದಿಸುತ್ತ ಸೇವಿಸಿದರು. ಸಾವಿರಾರು ಸಂಖ್ಯೆಯಲ್ಲಿ ಮನೆ ಬಳಿ ಜಮಾಯಿಸಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ 30 ನಿಮಿಷಗಳ ಪುಟ್ಟ ಭಾಷಣ. 'ಈಗಿನ ಚುನಾವಣೆ ಪ್ರಚಾರ ಫಿಶ್ ಮಾರ್ಕೆಟ್ ಆಗಿದೆ. ಜನರಿಗೆ ಮಾದರಿ, ಆದರ್ಶವಾಗಿ ಇರಬೇಕಾದ ಜನರೇ ತುಟಿ ಮೀರಿದ ಮಾತುಗಳನ್ನು ಮಾತನಾಡುತ್ತಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವಕ್ಕೆ ಮಾದರಿಯಂತೂ ಆಗಲು ಸಾಧ್ಯವಿಲ್ಲ' ಎನ್ನುತ್ತಿದ್ದಂತೆ, ಗ್ರಾಮೀಣ ಪ್ರದೇಶ ಹಿರಿಯ ಕಾರ್ಯಕರ್ತರೊಬ್ಬರು, 'ನಿನ್ನ ಸಾವನ್ನು ಬಯಸುತ್ತಿದ್ದರಲ್ಲಾ.. ಅವ್ರಗೆ ದೇವ್ರು ಒಳ್ಳೇದ್ ಮಾಡ್ತಾನಾ...' ಎಂದು ಜೋರಾಗಿ ಅಳಲು ಶುರು ಮಾಡಿದರು. ಇದರಿಂದ ಇಡೀ ಸಭೆ ಸ್ತಬ್ಧ, ಕೆಲ ಕ್ಷಣ ಮೌನ. ಅಲ್ಲಿಗೆ ಮಾತು ನಿಲ್ಲಿಸಿ ಗೌಡರು ಮನೆಯೊಳಕ್ಕೆ ಕಾಲಿಡುತ್ತಿದ್ದಂತೆ, ಕಾರ್ಯಕರ್ತರೂ ಚದುರಿದರು.
ಅಷ್ಟೊತ್ತಿಗಾಗಲೇ ಸೂರ್ಯ ನೆತ್ತಿಗೇರಿದ್ದ. ಮಧ್ಯಾಹ್ನ 12.30ಕ್ಕೆ ಕಾರು ಏರಿದ ಗೌಡರು, ಹಾಸನ ತಾಲೂಕು ಉದಯಪುರ, ಶಾಂತಿಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಊರ ಮುಖಂಡರ ಹೆಸರು ಹಿಡಿದು ಮಾತನಾಡಿಸುವ ಸಲುಗೆ. ಊರವರಿಗೂ ಅಷ್ಟೇ ಏಕವಚನದಲ್ಲಿ ಮಾತನಾಡಿಸುವಷ್ಟು ಆತ್ಮೀಯತೆ. 'ಹಿಂದಲಟ್ಟಿ ಜವರಪ್ಪನ ಮಗ ಏನ್ ಮಾಡುತ್ತಾನೆ, ಡಿಗ್ರಿ ಮುಗಿಸಿದನಾ...' ಎಂದು ಆತ್ಮೀಯವಾಗಿ ವಿಚಾರಿಸಿದರು. 'ಅವನು ಬೆಂಗಳೂರು ಸೇರ್ ಕಂಡವ್ನೆ. ಕೆಇಬಿಲಿ ರೇವಣ್ಣ ಕೆಲ್ಸ ಕೊಡಿಸವ್ನೆ' ಎಂದು  ಗ್ರಾಮಸ್ಥರು ಉತ್ತರಿಸಿದರು. ಹೀಗೆ ಅಲ್ಲಿನ ಪ್ರಮುಖರು, ಅವರ ಕುಟುಂಬದ ಯೋಗಕ್ಷೇವು ವಿಚಾರಿಸಿದ ಗೌಡರು, 'ನಾನು ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದೆಲ್ಲಾ ಬುರುಡೆ ಭಾಷಣ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ' ಎಂದು ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರು.
ನಮ್ಮದೇ ಸರ್ಕಾರ: ಚನ್ನರಾಯಪಟ್ಟಣದ ಪ್ರವಾಸಿ ಮಂದಿರದಲ್ಲಿ ಒಂದು ಚಪಾತಿ ಸೇವಿಸಿ, ಹಿರಿಸಾವೆ ಮತ್ತಿತರ ಗ್ರಾಮಗಳಿಗೆ ತೆರಳಿದರು. ರಾಜಕೀಯದ ಜತೆಗೆ ಮಳೆ, ಬೆಳೆ ಕುರಿತಾಗಿಯೂ ರೈತರೊಂದಿಗೆ ಮಾತುಕತೆ. 'ತೇವಾಂಶದ ಕೊರತೆಯಿಂದ ತೆಂಗಿನ ಮರಗಳ ಸುಳಿ ಒಣಗಿ ಹೋಗಿವೆ. ಪರಿಹಾರ ಸಿಕ್ಕಿಲ್ಲ' ಎಂಬ ನೋವಿಗೆ, 'ನಾಶವಾದ ತೆಂಗಿನ ತೋಟಗಳಿಗೆ ಖುದ್ದು ಭೇಟಿ ನೀಡಿ, ಪರಿಹಾರ ನೀಡಲು ಕೇಂದ್ರ ಮತ್ತು ರಾಜ್ಯಗಳನ್ನು ಆಗ್ರಹಿಸಿದ್ದೇನೆ. ಅಧ್ಯಯನ ನಡೆಸಿದ ಹೋದ ತಜ್ಞರ ತಂಡ ವರದಿ ಸಲ್ಲಿಸಿದೆ. ಪರಿಹಾರ ನೀಡಿಲ್ಲ. ಮುಂದೆ ಕೇಂದ್ರದಲ್ಲಿ ನಮ್ಮದೇ ಸರ್ಕಾರ ಬರುತ್ತದೆ. ಪರಿಹಾರ ಕೊಡಿಸೋಣ' ಎಂದು ಭರವಸೆ ನೀಡಿದರು. ರಾತ್ರಿ 8ರವರೆಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳನ್ನು ಸುತ್ತಿದ ಗೌಡರು, ಬೆಂಗಳೂರಿಗೆ ತೆರಳಿದರು.





ಬೆಳಗ್ಗೆ
6.40-7    ಯೋಗ, ಧ್ಯಾನ.
7-7.30    ತೃತೀಯ ರಂಗದ ಮುಖಂಡರೊಡನೆ ದೂರವಾಣಿಯಲ್ಲಿ ಮಾತುಕತೆ
9.30    ಸ್ನಾನ, ತಿಂಡಿ
10-12    ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರೊಂದಿಗೆ ಮಾತುಕತೆ
ಮಧ್ಯಾಹ್ನ
12- 2    ಗ್ರಾಮಗಳಿಗೆ ಭೇಟಿ
2.00    ಲಘು ಉಪಹಾರ
2.30- 8    ಗ್ರಾಮಗಳಿಗೆ ಭೇಟಿ ಪ್ರಚಾರ, ಗ್ರಾಮಸ್ಥರೊಡನೆ ಸಂವಾದ.
ರಾತ್ರಿ
9.25    ಬೆಂಗಳೂರಿನ ನಿವಾಸದಲ್ಲಿ ಊಟ
10-11.25    ವಿವಿಧೆಡೆಗಳಿಂದ ಬಂದಿದ್ದ ಮುಖಂಡರು, ಗಣ್ಯರೊಂದಿಗೆ ಮಾತುಕತೆ
11.30    ನಿದ್ದೆ

- ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.