ಪ್ರಧಾನ ಸುದ್ದಿ

ಮನೆ ಗೆಲ್ಲದವ ಮಾರು ಗೆಲ್ಲುವನೆ? ಮೋದಿ ವಿರುದ್ಧ ಟೀಕಾಸ್ತ್ರ

ಮನೆ ಗೆಲ್ಲದವ ಮಾರು ಗೆಲ್ಲುವನೆ? ಮೋದಿ ವಿರುದ್ಧ ಟೀಕಾಸ್ತ್ರ
Published On :

ರಾಜ್ಯದ ಕೋಲಾರ, ಮೈಸೂರಿನ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಸೋನಿಯಾ ವಾಗ್ದಾಳಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ನೇರವಾಗಿ ಮುಗಿಬಿದ್ದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ತಮ್ಮ ರಾಜ್ಯವನ್ನೇ ಅಭಿವೃದ್ಧಿ ಮಾಡಲಾಗದವರು ದೇಶವನ್ನು ಉದ್ಧಾರ ಮಾಡುವರೇ ಎಂದು ಪ್ರಶ್ನಿಸಿದ್ದಾರೆ.
ಕೋಲಾರ/ಮೈಸೂರು: ಪಕ್ಷದ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಕೋಲಾರ ಹಾಗೂ ಮೈಸೂರಿನಲ್ಲಿ ಬುಧವಾರ ಮಾತನಾಡಿದ ಸೋನಿಯಾಗಾಂಧಿ, ತಮ್ಮ ಮಾತಿನುದ್ದಕ್ಕೂ ಮೋದಿಯವರನ್ನೇ ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿದರು. 'ಗುಜರಾತ್‌ನಂಥ ದುರಾಡಳಿತವನ್ನು ಬೇರೆಲ್ಲಿಯೂ ನೋಡಲು ಸಾಧ್ಯವಿಲ್ಲ. ಅಂಥವರು ದೇಶದ ಪ್ರಧಾನಿಯಾದರೆ ಇನ್ನೆಂಥ ಆಡಳಿತ ನಿರೀಕ್ಷಿಸಬಹುದು' ಎಂದು ತರಾಟೆಗೆ ತೆಗೆದುಕೊಂಡರು.

ಯುಪಿಎ ಸರ್ಕಾರದ ಹತ್ತು ವರ್ಷಗಳ ಅಭಿವೃದ್ಧಿ ಕಂಡು ಬಿಜೆಪಿ ನಾಯಕರಿಗೆ ಹೊಟ್ಟೆ ಉರಿಯುತ್ತಿದೆ. ಅವರಿಗೆ ಸಂಕಟ ತಾಳಿಕೊಳ್ಳಲು ಆಗುತ್ತಿಲ್ಲ.
ಮೋದಿ ಬಂದ ಮೇಲೆ ಗುಜರಾತ್‌ನಲ್ಲಿ 4879 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳಾ ದೌರ್ಜನ್ಯ ನಿಂತಿಲ್ಲ. ಕೈಗಾರಿಕೆಗಳು ಮುಚ್ಚಿವೆ.
ಪೊಲೀಸ್ ಪಡೆಗೆ ಶೇ.25 ಮಹಿಳಾ ಸಿಬ್ಬಂದಿ ನೇಮಕ ಕಾಂಗ್ರೆಸ್ ಆಶಯ. ದೂರದೃಷ್ಟಿ ಯೋಜನೆಗಳನ್ನು ಯುಪಿಎ ನೀಡಿದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದು, ಡಾ.ಜಿ.ಪರಮೇಶ್ವರ ಅತ್ಯುತ್ತಮ ರೀತಿಯಲ್ಲಿ ಪಕ್ಷ ಸಂಘಟಿಸುತ್ತಿದ್ದಾರೆ.
ಕೋಲಾರ ಅಭ್ಯರ್ಥಿ ಮುನಿಯಪ್ಪ, ಪುತ್ರಿ ರೂಪಾ ಶಶಿಧರ್, ಶಾಸಕ  ನಾರಾಯಣಸ್ವಾಮಿ ಸೇರಿ ಪ್ರಮುಖರು ಪೈಪೋಟಿಯಿಂದ ಸೋನಿಯಾ ಕಾಲಿಗೆರಗಿದರು.
ಮೈಸೂರು ಪ್ರಚಾರ ಸಭೆ ಮುಗಿಸಿದ ಸೋನಿಯಾ ಸಾರ್ವಜನಿಕರಿಗೆ ಹಸ್ತಲಾಘವ ನೀಡಿದರು. ಬಳಿಕ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿದರು.

ಕೋಲಾರ
-ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತವನ್ನು ಭ್ರಷ್ಟ ಮುಕ್ತ  ಮಾಡುವುದಾಗಿ ಮೋದಿ ಹೋದಲ್ಲೆಲ್ಲಾ ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಏನೆಲ್ಲಾ ಹಗರಣಗಳು ನಡೆದಿವೆ. ಗಣಿ ಅಕ್ರಮದ ಬಗ್ಗೆ ಲೋಕಾಯುಕ್ತ ವರದಿ  ಬಳಿಕ ಯಾರ್ಯಾರು ಜೈಲಿಗೆ ಹೋಗಿದ್ದಾರೆಂಬುದು ಗೊತ್ತು. ಆದರೂ ರಾಜ್ಯ ಪ್ರವಾಸ  ಸಂದರ್ಭದಲ್ಲಿ ಪಕ್ಕದಲ್ಲಿ ಭ್ರಷ್ಟರನ್ನಿಟ್ಟುಕೊಂಡು ಮತಯಾಚನೆ ಮಾಡಿದ್ದು ಸರಿಯೇ?
-ಜಾತ್ಯತೀತತೆ ಮಂತ್ರ ಪಠಿಸುವ ಜೆಡಿಎಸ್ ಅಧಿಕಾರಕ್ಕಾಗಿ ಮೂಲಭೂತವಾದಿಗಳ ಜತೆಗೂ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಆ ಪಕ್ಷ ಒಂದೊಂದು ಚುನಾವಣೆಯಲ್ಲಿ ಒಂದೊಂದು ನಿಲುವು ತಾಳುತ್ತದೆ.

ಮೈಸೂರು
-ಸ್ಥಿರ ಸರ್ಕಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಪ್ರಜಾಪ್ರಭುತ್ವ ಮತ್ತು ಸಮಾಜವಾದಗಳಲ್ಲಿ ಕಾಂಗ್ರೆಸ್‌ಗೆ ನಂಬಿಕೆ. ಆದರೆ ಮೂಲಭೂತ ವಾದವೇ ಬಿಜೆಪಿ ಗುರಿ. ಮೋದಿ ಆಪ್ತ ಅಮಿತ್ ಶಾ ಹೇಳಿಕೆಯೇ ಆ ಪಕ್ಷದ ಉದ್ದೇಶವನ್ನು ತೋರಿಸುತ್ತದೆ. ಎನ್‌ಡಿಎ ಅವಧಿಯಲ್ಲಿನ ವೈಫಲ್ಯಗಳನ್ನು ಮುಚ್ಚಿಡಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ.
-ದೇಶವನ್ನು ಹಸಿವು ಮುಕ್ತಗೊಳಿಸಲು ಕಾಂಗ್ರೆಸ್ ಆಹಾರ ಭದ್ರತಾ ಕಾಯ್ದೆಯಂತಹ ಹಲವು ಕಾರ್ಯಕ್ರಮಗಳನ್ನು ನೀಡಿದೆ. ಕಾಫಿ ಬೆಳೆಗಾರರಿಗಾಗಿ ರು. 4500 ಕೋಟಿ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ. ತಂಬಾಕು ಬೆಳೆ ಹರಾಜಿಗೆ ಹೈಟೆಕ್ ಕೇಂದ್ರ ತೆರೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.