ಪ್ರಧಾನ ಸುದ್ದಿ

ವಿವಾದಾತ್ಮಕ ಹೇಳಿಕೆ: ಸಂಕಷ್ಟ ದಲ್ಲಿ ಮುಲಾಯಂ, ಅಜಂ, ಅಜಿತ್‌ಸಿಂಗ್

ವಿವಾದಾತ್ಮಕ ಹೇಳಿಕೆ: ಸಂಕಷ್ಟ ದಲ್ಲಿ ಮುಲಾಯಂ, ಅಜಂ, ಅಜಿತ್‌ಸಿಂಗ್
Published On :

ನವದೆಹಲಿ: ಉತ್ತರಪ್ರದೇಶದಲ್ಲಿ ಕೆಲ ದಿನಗಳಿಂದ ರಾಜಕೀಯ ಮುಖಂಡರು ಒಂದರ ಹಿಂದೊಂದರಂತೆ ನೀಡುತ್ತಿರುವ ವಿವಾದಾತ್ಮಕ ಮತ್ತು ಅಸಭ್ಯ ಹೇಳಿಕೆ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂಸಿಂಗ್ ಯಾದವ್, ಮುಖಂಡ ಅಜಂಖಾನ್ ಹಾಗೂ ಆರ್‌ಎಲ್‌ಡಿ ಮುಖಂಡ ಅಜಿತ್ ಸಿಂಗ್ ಹೇಳಿಕೆಗೆ ಸಂಬಂಧಿಸಿ ಉತ್ತರಪ್ರದೇಶದ ಚುನಾವಣಾ ಅಧಿಕಾರಿಗಳಿಂದ ಆಯೋಗ ಬುಧವಾರ ವರದಿ ಕೇಳಿದೆ.

ಮುಖಂಡರು ಹೇಳಿದ್ದೇನು?
ಅಮಿತ್ ಶಾರಂಥವರು ಸಮಾಜವನ್ನು ವಿಭಜಿಸುವ ಭಾಷಣ ಮಾಡುತ್ತಾರೆ. ನಾವು ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತೇವೆ. ಅಮಿತ್ ಶಾರನ್ನು ನಾಶ ಮಾಡುತ್ತೇವೆ.
-ಮುಲಾಯಂಸಿಂಗ್ ಯಾದವ್

ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಗೆಲವು ತಂದುಕೊಟ್ಟವರು ಹಿಂದುಗಳಲ್ಲ, ಮುಸ್ಲಿಂ ಯೋಧರು!
-ಅಜಂಖಾನ್

ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರಪ್ರದೇಶ ಕೋಮುದಳ್ಳುರಿಯಿಂದ ಹೊತ್ತಿ ಉರಿಯಲಿದೆ. ಇದನ್ನು ತಡೆಯಲು ನಾವು ಮೋದಿ ಅವರನ್ನು ಸಮುದ್ರಕ್ಕೆ ಎಸೆಯಲೂ ಹೇಸುವುದಿಲ್ಲ.
-ಅಜಿತ್‌ಸಿಂಗ್

ಆಯೋಗಕ್ಕೆ ಬಿಜೆಪಿ ದೂರು
ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಮುಖಂಡರು ಅವಹೇಳನಕಾರಿ ಹಾಗೂ ಕೋಮುದ್ವೇಷ ಬಿತ್ತುವ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬುಧವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ಹಾಗೂ ಮುಖಂಡರಾದ ನಿರ್ಮಲಾ ಸೀತಾರಾಮನ್, ಜೆ.ಪಿ. ನಡ್ಡಾ ಅವರು ಚುನಾವಣಾ ಅಧಿಕಾರಿಗಳನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಈ ರೀತಿಯ ಹೇಳಿಕೆ ನೀಡುತ್ತಿರುವ ಮುಲಾಯಂ ಸಿಂಗ್, ಬೇಣಿಪ್ರಸಾದ್ ವರ್ಮಾ, ಅಜಂಖಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖಂಡರು ಮನವಿ ಮಾಡಿದ್ದಾರೆ. ಈ ನಡುವೆ, ಅಜಂಖಾನ್ ಅವರ ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿದ ಹೇಳಿಕೆಗೆ ಕಾಂಗ್ರೆಸ್ ಕೂಡ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಅಜಂಖಾನ್ ಸಮರ್ಥನೆ
ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿದ ಹೇಳಿಕೆ ಎಲ್ಲೆಡೆಯಿಂದ ತೀವ್ರ ಟೀಕೆಗೆ ಗುರಿಯಾಗುತ್ತಿದ್ದರೂ ಅಜಂಖಾನ್ ಮಾತ್ರ ಮೊಂಡು ವಾದ ಮುಂದುವರಿಸಿದ್ದಾರೆ. ದೇಶಕ್ಕೆ ಮುಸ್ಲಿಮರು ನೀಡಿದ ಕೊಡುಗೆ ಕುರಿತು ಯಾಕೆ ಮಾತನಾಡಬಾರದು ಎಂದು ಪ್ರಶ್ನಿಸಿದ್ದಾರೆ.

ಬಂಧನ ಭೀತಿ: ಹೈಕೋರ್ಟ್ ಮೊರೆ ಹೊಕ್ಕ ಅಮಿತ್ ಶಾ
ಅಲಹಾಬಾದ್:
ಪ್ರಚೋದನಾಕಾರಿ ಭಾಷಣದ ಆರೋಪದ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಆಪ್ತ ಅಮಿತ್ ಶಾ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ನ್ಯಾ.ಅರುಣ್ ಟಂಡನ್ ಮತ್ತು ನ್ಯಾ.ಸತೀಶ್‌ಚಂದ್ರ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶಾ ಅರ್ಜಿ ಕೈಗೆತ್ತಿಕೊಂಡ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಇದೇ ವೇಳೆ, ಶಾ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದ ಭಾಷಣದ ಸಿಡಿಯನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವಾರದ ಹಿಂದೆ ಶಾ ಅವರು ಬಿಜ್ನೂರ್ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಮುಜಾಫರನಗರ ಗಲಭೆ ಪ್ರತೀಕಾರ ತೀರಿಸಿಕೊಳ್ಳಲು ಬಿಜೆಪಿಗೆ ಮತಹಾಕಿ ಎಂದು ಶಾ  ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.