ಪ್ರಧಾನ ಸುದ್ದಿ

ಶೂಟೌಟ್‌ಗೆ ಸಿಬಿಐ ತನಿಖೆ ಇಲ್ಲ

ಶೂಟೌಟ್‌ಗೆ ಸಿಬಿಐ ತನಿಖೆ ಇಲ್ಲ
Published On :

ಬೆಂಗಳೂರು: ತನಿಕೋಡು ಶೂಟೌಟ್ ಕುರಿತು ಸಿಬಿಐ ತನಿಖೆ ನಡೆಸಲು ರಾಜ್ಯ ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ.
ಪ್ರಕರಣದ ಬಗ್ಗೆ ಸಿಬಿಐ ತನಿಖೆ ಅಗತ್ಯವಿಲ್ಲ. ಈಗಾಗಲೇ ಸಿಐಡಿ ಹಾಗೂ ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ದಕ್ಷ ಅಧಿಕಾರಿಗಳಿದ್ದಾರೆ. ಹೀಗಾಗಿ ಸಿಬಿಐ ತನಿಖೆ ಬೇಡ. ಇನ್ನು 2-3 ದಿನಗಳಲ್ಲಿ ಪ್ರಾಥಮಿಕ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇಲ್ನೋಟಕ್ಕೆ ತಪ್ಪು ಗ್ರಹಿಕೆಯಿಂದ ಆದ ಘಟನೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಹಂತದಲ್ಲಿ ನಾನು ಯಾವುದೇ ಹೇಳಿಕೆ ನೀಡಲು ಇಷ್ಟಪಡುವುದಿಲ್ಲ. ಪ್ರತಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವುದರಿಂದ ನಮ್ಮ ಇಲಾಖೆ ಅಧಿಕಾರಿಗಳನ್ನು ನೈತಿಕವಾಗಿ ಕುಗ್ಗಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
10 ಲಕ್ಷ ಪರಿಹಾರ (ಮಂಗಳೂರು ವರದಿ):  ತನಿಕೋಡು ಶೂಟೌಟ್ ಪ್ರಕರಣದಲ್ಲಿ ಸಾವನ್ನಪ್ಪಿದ ಮಂಗಳೂರಿನ ಜೋಕಟ್ಟೆ ನಿವಾಸಿ ಕಬೀರ್ ಕುಟುಂಬಕ್ಕೆ ರಾಜ್ಯ ಸರ್ಕಾರ ರು. 10 ಲಕ್ಷ ಘೋಷಣೆ ಮಾಡಿದೆ.
ಕಬೀರ್ ಸಾವಿನ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಹಾಗೂ ಮೃತಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಂಗಳವಾರ ಬೆಂಗಳೂರಿನಲ್ಲಿ ಗೃಹ ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮೃತ ಕುಟುಂಬಕ್ಕೆ ರು. 10 ಲಕ್ಷ ಪರಿಹಾರದ ಘೋಷಣೆ ಮಾಡಲಾಗಿದೆ ಎಂದು ವಾರ್ತಾ ಇಲಾಖೆ ಮೂಲಕ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸರ್ಕಾರದ ಕ್ರಮವನ್ನು ಟೀಕಿಸಿರುವ ಸಂಘ ಪರಿವಾರ, ಕಬೀರ್ ಎಂಬ ಕ್ರಿಮಿನಲ್ ಹಿನ್ನಲೆಯವನಿಗೆ ಸರ್ಕಾರ ಪರಿಹಾರ ನೀಡುವುದಾದರೆ ಗೋಕಳ್ಳರಿಂದ ನಷ್ಟವಾದ ಮಾಲೀಕರಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದೆ. ಶೂಟೌಟ್ ಪ್ರಕರಣವನ್ನು  ಸಿಬಿಐಗೆ ವಹಿಸುವುದೇ ಆದಲ್ಲಿ ಗೋ ಕಳ್ಳತನ, ಗೋಹತ್ಯೆ, ಗೋಸಾಗಾಟ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿಶ್ವಹಿಂದು ಪರಿಷತ್, ಬಜರಂಗದಳ ಮುಖಂಡರು ಒತ್ತಾಯಿಸಿದ್ದಾರೆ.
ಶೃಂಗೇರಿ ಚಲೋ: ತನಿಕೋಡು ಎನ್‌ಕೌಂಟರ್ ಖಂಡಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಏ. 24ರಂದು 'ಶೃಂಗೇರಿ ಚಲೋ' ಹಮ್ಮಿಕೊಂಡಿದೆ. ಪೊಲೀಸ್ ಇಲಾಖೆ ಹಾಗೂ ಸಂಘಪರಿವಾರದ ಸಂಘಟನೆಗಳು ಹುಟ್ಟು ಹಾಕಿರುವ ಪ್ರಕರಣ ಇದಾಗಿದೆ. ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಏ.24 ರಂದು ಬೆಳಿಗ್ಗೆ 10 ಗಂಟೆಗೆ ಶೃಂಗೇರಿಯ ಹಳೆ ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ಚಿಕ್ಕಮಗಳೂರಿನಲ್ಲಿ ತಿಳಿಸಿದ್ದಾರೆ.
ಸಗಣಿ ಮೆತ್ತಿದರು
ಮಂಗಳೂರು: 
ಶೂಟೌಟ್ ಪ್ರಕರಣ ಖಂಡಿಸಲು ಮಂಗಳವಾರ ಸುದ್ದಿಗೋಷ್ಠಿ ಕರೆದಿದ್ದ ಕೋಮುಸೌಹಾರ್ದ ವೇದಿಕೆ ಮುಖಂಡ ಸುರೇಶ್ ಭಟ್ ಬಾಕ್ರಬೈಲ್ ಮುಖಕ್ಕೆ ಇಬ್ಬರು ಸೆಗಣಿ ಮೆತ್ತಿದ್ದಾರೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.