ಪ್ರಧಾನ ಸುದ್ದಿ

ಮದ್ಯ ದುಬಾರಿ, ಖರೀದಿ ಕಷ್ಟ ರೀ...

Published On :

ಬೆಂಗಳೂರು: ರಾಜ್ಯ ಸರ್ಕಾರ ವಿಧಿಸಿದ ವ್ಯಾಟ್‌ನಿಂದ ಮದ್ಯ ದುಬಾರಿಯಾಗಿದ್ದು, ಮಾರಾಟದಲ್ಲಿ ಭಾರೀ ಕುಸಿತ ಉಂಟಾಗಿದೆ. ಜತೆಗೆ ಮದ್ಯ ಸೇವೆನೆ ಪ್ರಮಾಣ ಕೂಡ ಕಡಿಮೆಯಾಗಿದೆ.
ರಾಜ್ಯ ಸರ್ಕಾರ ಬಜೆಟ್ ನಿರ್ಧಾರದಂತೆ ಮದ್ಯದ ಮೇಲೆ ಶೇ.5.5ರಷ್ಟು ವ್ಯಾಟ್ ವಿಧಿಸಲಾಗುತ್ತಿದೆ. ಇದು ಮಾರ್ಚ್ 1ರಿಂದಲೇ ಜಾರಿಯಾಗಿದ್ದು, ಬಾರ್ ಮತ್ತು ರೆಸ್ಟೋರೆಂಟ್, ಲಾಡ್ಜ್ ಹಾಗೂ ಕ್ಲಬ್‌ಗಳಲ್ಲಿ ಮದ್ಯದ ಮೇಲೆ ಹೆಚ್ಚುವರಿ ದರ ವಿಧಿಸಲಾಗುತ್ತಿದೆ. ಆದರೆ ಇದನ್ನೇ ನೆಪ ಮಾಡಿಕೊಂಡು ಗಲ್ಲಿಗಲ್ಲಿಗಳ ವೈನ್ಸ್ ಸ್ಟೋರ್‌ಗಳು ಮದ್ಯವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ.  ರೆಸ್ಟೋರೆಂಟ್ ಮತ್ತು ಕ್ಲಬ್‌ಗಳಿಗೆ ವಿಧಿಸಿದ ವ್ಯಾಟ್ ತಮಗೂ ಅನ್ವಯಿಸುತ್ತಿದೆ ಎಂದು ವೈನ್ಸ್ ಸ್ಟೋರ್‌ಗಳು ಮದ್ಯದ ಮೇಲೆ 10ರಿಂದ 20ರವರೆಗೂ ಹೆಚ್ಚು ದರ ವಿಧಿಸುತ್ತಿವೆ. ಎಂಆರ್‌ಪಿ (ಗರಿಷ್ಠ ಬೆಲೆ)ಗಿಂತಲೂ ಹೆಚ್ಚು ಹಣ ಪಡೆದುಕೊಳ್ಳುತ್ತಿವೆ.
ಇದರಿಂದಾಗಿ ಮದ್ಯ ಖರೀದಿ ಪ್ರಮಾಣ ಕಡಿಮೆಯಾಗಿದ್ದು, ಮದ್ಯ ಸೇವನೆಯೂ ಇಳಿದಿದೆ. ಇದಲ್ಲದೆ ಚುನಾವಣೆ ಹಿನ್ನೆಲೆಯಲ್ಲಿ ಉತ್ಸವ, ಜಾತ್ರೆ, ಊರ ಹಬ್ಬಗಳು, ವಿಶೇಷ ಕಾರ್ಯಗಳು, ಪಾರ್ಟಿ, ಪ್ರವಾಸಗಳು ಮುಂದೂಡಿ ಮದ್ಯ ಖರೀದಿಸುವವರೇ ಕಡಿಮೆಯಾಗಿದ್ದಾರೆ.  ಇದೆಲ್ಲದರ ಜತೆಗೆ ಮದ್ಯ ಪೂರೈಕೆ, ಸಾಗಣೆ ಮತ್ತು ಮಾರಾಟದ ಮೇಲೆ ಚುನಾವಣಾ ಕಾಲದಲ್ಲಿ ಅಧಿಕಾರಿಗಳು ನಡೆಸಿದ ಕಟ್ಟುನಿಟ್ಟಿನ ಕ್ರಮದಿಂದಲೂ ಮದ್ಯ ಮಾರಾಟ ಕುಸಿದಿದೆ. ಏಕೆಂದರೆ, ಮದ್ಯದ ಅಂಗಡಿಗಳು ನಿಗದಿತ ಪ್ರಮಾಣಕ್ಕಿಂತ ಶೇ.50ರ ವರೆಗೂ ಮದ್ಯ ಮಾರಾಟ ಮಾಡಬಹುದಾಗಿತ್ತು. ಒಂದುವೇಳೆ ಅದಕ್ಕಿಂತ ಶೇ.1ರಷ್ಟು ಹೆಚ್ಚು ಮಾರಾಟವಾದರೂ ಆ ಅಂಗಡಿಗಳು ದಾಖಲೆ ಸಹಿತ ಇಲಾಖೆಗೆ ವಿವರ ನೀಡಕಿತ್ತು. ಹೀಗಾಗಿ ವೈನ್ಸ್ ಸ್ಟೋರ್‌ಗಳು ಮದ್ಯ ಮಾರಾಟಕ್ಕೆ ಹೆಚ್ಚು ಆಸಕ್ತಿ ತೋರಿಸಿಲ್ಲ. ಬದಲಾಗಿ ಮಾರಾಟವಾಗುತ್ತಿರುವ ಮದ್ಯಕ್ಕೆ ಹೆಚ್ಚಿನ ದರ ವಿಧಿಸಲಾರಂಭಿಸಿದವು. ಹೀಗಾಗಿ ಮದ್ಯ ಮಾರಾಟದಲ್ಲಿ ಒಟ್ಟಾರೆ ಶೇ.67ರಷ್ಟು ಕುಸಿತ ಕಂಡು ಬಂದಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಗುರಿ ಮೀರಿದೆ: ರಾಜ್ಯದಲ್ಲಿ ಮದ್ಯ ಮಾರಾಟದ ವಹಿವಾಟು ಕಳೆದವರ್ಷ ಪೂರ್ತಿ ಚೆನ್ನಾಗಿಯೇ ನಡೆದಿದೆ. ಇಲಾಖೆ ಗುರಿ ಮೀರಿ ಸಾಧನೆಯನ್ನೂ ಮಾಡಿದೆ. 2013- 14ನೇ ಹಣಕಾಸು ವರ್ಷದಲ್ಲಿ (ಈ ವರ್ಷದ ಮಾರ್ಚ್ 31ರವರೆಗೆ) ಇಲಾಖೆ ಮದ್ಯ ಮಾರಾಟದ ಗುರಿ 12,600 ಕೋಟಿ. ಆದರೆ, 12,717 ಕೋಟಿ ಸಂಗ್ರಹವಾಗಿದೆ.
ಒಂದೇ ತಿಂಗಳಲ್ಲಿ ಭಾರೀ ಕುಸಿತ: 2014- 15ನೇ ಸಾಲಿನ ಹಣಕಾಸು ವರ್ಷದ ಆರಂಭದಲ್ಲಿ ಅಂದರೆ ಚುನಾವಣಾ ನೀತಿ ಸಂಹಿತೆ ಶುರವಾಗುತ್ತಿದ್ದಂತೆ ಮದ್ಯ ಮಾರಾಟ ನೆಲ ಕಚ್ಚಲಾರಂಭಿಸಿದೆ. ಮಾರ್ಚ್‌ನಲ್ಲಿ ರಾಜ್ಯದಲ್ಲಿ ದೇಶಿಯ ಮದ್ಯ (ಐಎಂಎಲ್) 46.46ಲಕ್ಷ ಕೇಸ್‌ಗಳಷ್ಟು ಮಾರಾಟವಾಗಿತ್ತು. ಬಿಯರ್ 22.67ಲಕ್ಷ ಕೇಸ್ ಮಾರಾಟವಾಗಿತ್ತು.  ಆದರೆ, ಏಪ್ರಿಲ್‌ನಲ್ಲಿ ಐಎಂಎಲ್ 13.20ಲಕ್ಷ ಕೇಸ್ ಮಾರಾಟವಾಗಿದೆ. ಹಾಗೆಯೇ ಬಿಯರ್ 8.87ಲಕ್ಷ ಕೇಸ್ ಮಾತ್ರ ಹೋಗಿದೆ. ಈ ವಹಿವಾಟು ಇದು ಹಿಂದಿನ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ, ಶೇ.25ರಷ್ಟು ಕಡಿಮೆ.
ವ್ಯಾಟ್ ಜಾರಿ ನೆಪದಲ್ಲಿ ವೈನ್ಸ್ ಸ್ಟೋರ್‌ಗಳು ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದರೆ ನಮ್ಮ ಇಲಾಖೆ ವ್ಯವಸ್ಥೆ ಇನ್ನೂ ಭದ್ರವಾಗಬೇಕಾಗುತ್ತದೆ. ಇದಕ್ಕಿಂತ ಮುಖ್ಯವಾಗಿ ಮದ್ಯ ಖರೀದಿಸುವ ಗ್ರಾಹಕರು ಕೂಡ ನೈಜ ಬೆಲೆಗೆ ನೀಡುವಂತೆ ತಾಕೀತು ಮಾಡಬೇಕು. ಬಿಲ್ ಪಡೆಯಬೇಕು. ಇಲ್ಲದಿದ್ದರೆ ಕಷ್ಟ.
- ಹರಿದಾಸ್,
ಅಬಕಾರಿ ಜಂಟಿ ನಿರ್ದೇಶಕ

ಪಾನಪ್ರಿಯರ ಜೇಬಿಗೆ ಕತ್ತರಿ
ಸರ್ಕಾರದ ಆದೇಶದ ಪ್ರಕಾರ, ಶೇ.5.5 ವ್ಯಾಟ್ ವೈನ್ಸ್ ಸ್ಟೋರ್‌ಗಳಿಗೆ ಅನ್ವಯಿಸುವುದೇ ಇಲ್ಲ. ವ್ಯಾಟ್ ಅನ್ವಯಿಸುವುದು ಕೇವಲ ಸಿಲ್9 (ಬಾರ್ ಮತ್ತು ರೆಸ್ಟೋರೆಂಟ್), ಸಿಲ್7 (ಬಾರ್ ಮತ್ತು ಲಾಡ್ಜ್) ಹಾಗೂ ಸಿಲ್4(ಕ್ಲಬ್)ಗಳಿಗೆ ಮಾತ್ರ.
ಆದರೆ ಮದ್ಯ ಮಾರಾಟಗಾರರೆಲ್ಲಾ ಹೊಂದಾಣಿಕೆ ಮಾಡಿಕೊಂಡು ಸದ್ದಿಲ್ಲದೆ ಬೆಲೆ ಏರಿಕೆ ಮಾಡಿರುವ ಬಗ್ಗೆ ಶಂಕೆ ಇದೆ. ಹೀಗಾಗಿ ವೈನ್ಸ್ ಸ್ಟೋರ್‌ಗಳಲ್ಲಿ ಗರಿಷ್ಟ ಮಾರಾಟ ದರಕ್ಕೂ ಅಧಿಕ ವಸೂಲಿ ಮಾಡಲಾಗುತ್ತಿದೆ. ಇದನ್ನು ಮದ್ಯ ಪ್ರಿಯರು ಪ್ರಶ್ನಿಸಿದರೆ, ಸರ್ಕಾರವೇ ವ್ಯಾಟ್ ಜಾಸ್ತಿ ಮಾಡಿದೆ ಎನ್ನುತ್ತಿದ್ದಾರೆ. ಜತೆಗೆ ಚುನಾವಣೆ ಬಿಗಿ ಭದ್ರತೆಯಲ್ಲಿ ಮದ್ಯ ತರುವುದೇ ಕಷ್ಟವಾಗಿರುವುದರಿಂದ ಹೆಚ್ಚುವರಿ ಬೆಲೆ ಪಾವತಿಸಬೇಕೆಂದು ವೈನ್ಸ್ ಸ್ಟೋರ್ ಮಾಲೀಕರು ತಾಕೀತು ಮಾಡುತ್ತಿದ್ದಾರೆ. ಹೀಗಾಗಿ ಮದ್ಯಪ್ರಿಯರ ಜೇಬಿಗೆ ಕತ್ತರಿ ಬೀಳುತ್ತಿದೆ.


-ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.