ಇಲ್ಲೇನಿದ್ರೂ ಫೊಟೋ ಫಿನಿಷ್ ಅಷ್ಟೆ
ನಮಗಂತೂ ಚೆನ್ನಾಗಿ ವೋಟ್ ಆಗಿದೆ. ಯುವಕರು ಭರ್ಜರಿ ಸಪೋರ್ಟ್ ಮಾಡಿದ್ರು. ಆದ್ರೆ.. ಮತದಾನ ಪ್ರಕ್ರಿಯೆಯನ್ನು ಜೋರಾಗಿಯೇ ಸಮರ್ಥಿಸಿಕೊಳ್ಳುವ ಅಭ್ಯರ್ಥಿಗಳಿಗೆ 'ನಾವೇ ಗೆಲ್ತೇವೆ' ಎಂದು ಎದೆ ತಟ್ಟಿ ಹೇಳಲು ಮಾತ್ರ ಅದ್ಹೇಕೋ ಹಿಂಜರಿಕೆ.
ಕ.ಪ್ರ.ವಾರ್ತೆ ಬಾಗಲಕೋಟೆ ಏ.23
ನಮಗಂತೂ ಚೆನ್ನಾಗಿ ವೋಟ್ ಆಗಿದೆ. ಯುವಕರು ಭರ್ಜರಿ ಸಪೋರ್ಟ್ ಮಾಡಿದ್ರು. ಆದ್ರೆ.. ಏನೋ, ಎತ್ತ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಮತದಾನಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಬಾಯಿಂದ ಮೆಲ್ಲಗೆ ತೇಲಿ ಬರುತ್ತಿರುವ ಮಾತಿದು. ಮತದಾನ ಪ್ರಕ್ರಿಯೆಯನ್ನು ಜೋರಾಗಿಯೇ ಸಮರ್ಥಿಸಿಕೊಳ್ಳುವ ಅವರು ನಾವೇ ಗೆಲ್ತೇವೆ ಎಂದು ಹೇಳುವಲ್ಲಿ ಮಾತ್ರ ಅದ್ಹೇಕೋ ಹಿಂಜರಿಕೆ. ಏನೇ ಆದ್ರೂ ಫೋಟೊ ಫಿನಿಷ್ ಎಂಬ ಎರಡು ಶಬ್ದದ ಮಾತಿಗೆ ಶರಣಾಗುತ್ತಾರೆ.
ಮೋದಿ ಹವಾ ಬಳಸಿಕೊಂಡು ಹ್ಯಾಟ್ರಿಕ್ ಸಾಧಿಸುವ ಹಂಬಲ ಬಿಜೆಪಿಯದ್ದಾದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳ ಮಂಡಿಸಿ ಕೋಟೆಗೆ ಲಗ್ಗೆ ಹಾಕಲು ಕಾಂಗ್ರೆಸ್ ಕಾತರವಾಗಿತ್ತು. ಕಳೆದ ಬಾರಿಗಿಂತ ಈ ಬಾರಿ ಶೇ.5ರಷ್ಟು ಮತದಾನ ಹೆಚ್ಚಳವಾಗಿದ್ದು ಈ ತುತ್ತು ಯಾರ ತಟ್ಟೆಗೆ ಬಂದು ಬೀಳುತ್ತದೆ ಎಂಬ ಸಹಜ ಲೆಕ್ಕಾಚಾರಗಳಿಗೆ ಜಗುಲಿಗಳ ಮೇಲೆ ಹಾಳೆ, ಪೆನ್ನು ಹಿಡಿದು ಕುಳಿತವರು ಚುಕ್ತ ಮಾಡಿಲ್ಲ. ಇಷ್ಟೆಲ್ಲದರ ನಡುವೆ ಮೊದಲ ಬಾರಿಗೆ ಮತದಾನ ಮಾಡಿದ ಯುವಕರ ನಿರ್ಣಯಗಳು ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ.
ಅಬ್ಕಿ ಬಾರ್ ಹಮಾರಾ ಸರ್ಕಾರ್
ಲೋಕಸಭೆ ಚುನಾವಣೆಯ ಈ ಬಾರಿಯ ಮತದಾನ ಪ್ರಕ್ರಿಯೆಯಲ್ಲಿ ಫೇಸ್ಬುಕ್ನಂತಹ ಸಾಮಾಜಿಕ ತಾಣ ಪ್ರಮುಖ ಪಾತ್ರ ನಿರ್ವಹಿಸಿರುವುದು ಬಾಗಲಕೋಟೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಂಡು ಬಂತು. ಇದೇ ಮೊದಲ ಬಾರಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ 18 ವರ್ಷದ ಚಿಗುರು ಮೀಸೆ ಯುವಕರು ಫೇಸ್ ಬುಕ್ನಲ್ಲಿ ಅಕೌಂಟ್ ಹೊಂದಿದವರೇ ಆಗಿದ್ದರು. ಬಾಗಲಕೋಟೆ ತಾಲೂಕಿನ ಖಜ್ಜಿಡೋಣಿ ಗ್ರಾಮದ ಯುವಕ ಪರಶುರಾಮ ವ್ಯಕ್ತಪಡಿಸಿದ ಅಭಿಪ್ರಾಯ ಅಚ್ಚರಿ ಹುಟ್ಟಿಸುವಂತಿತ್ತು. ಈ ಬಾರಿ ಏನಿದ್ದರೂ ನಮ್ಮದೇ ಸರ್ಕಾರ. ಅಬ್ಕಿ ಬಾರ್ ಹಮಾರಾ ಸರ್ಕಾರ್ ಎನ್ನುತ್ತಲೇ ಬಿಜೆಪಿ ಬಗೆಗಿನ ತನ್ನ ಒಲವು ತೋರಿಸಿದ. ಹೆಚ್ಚು ಕಡಿಮೆ ಯುವಕರ ಅಭಿಪ್ರಾಯ ಇದೇ ತೆರನಾಗಿತ್ತು.
ಬಾಗಲಕೋಟೆ ಮತಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರ ಸಂಖ್ಯೆ 58 ಸಾವಿರದಷ್ಟಿದೆ. ಯುವತಿಯರೂ ಇದರಲ್ಲಿ ಸೇರಿದ್ದಾರೆ. ಬಹುತೇಕ ಕಾಲೇಜು ವಿದ್ಯಾರ್ಥಿಗಳು ಈ ಸಂಖ್ಯೆಯಲ್ಲಿ ಸಿಂಹಪಾಲು ಪಡೆದಿದ್ದಾರೆ. ಅಬ್ಕಿ ಬಾರ್ ಎನ್ನುವ ಅವರ ಮಾತುಗಳಲ್ಲಿ ಮೋದಿ ಸ್ಪಷ್ಟವಾಗಿದ್ದರು.
ಈ ಯುವಕರ ಮತದಾನದ ಫೋರ್ಸ್ ಎಷ್ಟರ ಮಟ್ಟಿಗೆ ಇತ್ತೆಂದರೆ ಅವರ ಮನೆಯಲ್ಲಿರುವ ಮತಗಳನ್ನು ಬಿಜೆಪಿಯತ್ತ ತಿರುಗಿಸಬಲ್ಲವರಾಗಿದ್ದರು. ನಮ್ಮ ಮನೆಯಲ್ಲಿ ಒಂದು ವೋಟು ಹೊರಗೆ ಹೋಗಿಲ್ಲವೆಂಬ ಹೆಗ್ಗಳಿಕೆ ಅವರದ್ದು.
ಕಾಂಗ್ರೆಸ್ ವಲಯ ಇದನ್ನು ಬೇರೆಯದೇ ರೀತಿಯಲ್ಲಿ ಅರ್ಥೈಸುತ್ತಿದೆ. ಯುವಕರಲ್ಲಿ ಮುಸ್ಲೀಮರೂ ಇದ್ದಾರೆ. ಈ ಅಬ್ಕಿ ಬಾರ್ ಹಮಾರ ಸರ್ಕಾರ್ ಘೋಷಣೆಗೆ ಯುವಕರು ಪೂರ್ಣ ಪ್ರಮಾಣದಲ್ಲಿ ಸ್ಪಂದಿಸಿಲ್ಲ. ಆದ್ರೂ ಈ ಸಂಗತಿ ತಳ್ಳಿ ಹಾಕುವಂತೆಯೂ ಇಲ್ಲವೆನ್ನುತ್ತಾರೆ. ಸರ್ವಜನ ಪಕ್ಷದ ಅಭ್ಯರ್ಥಿ ಶಂಕರ ಬಿದರಿ ಹಾಗೂ ಆಮ್ ಆದ್ಮಿ ಪಕ್ಷದ ಕುತುಬುದ್ದೀನ್ ಖಾಜಿ ಅವರನ್ನು ಕೂಡ ಕಡೆಗಣಿಸುವಂತಿಲ್ಲ. ಒಂದಿಷ್ಟು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ, ಈ ಮತಗಳು ಯಾರವು ಎಂಬುದರ ಆಳಕ್ಕೆ ಇಳಿದರೆ ಕಾಂಗ್ರೆಸ್ ಮನೆ ಲಘು ಕಂಪನಕ್ಕೆ ಒಳಗಾಗುತ್ತದೆ.
ಮೊದಲ ಬಾರಿ ಮತದಾನ ಮಾಡುವ ಅವಕಾಶ ಪಡೆದವರಿಂದ ಕ್ಷೇತ್ರದಲ್ಲಿ ಸೃಷ್ಟಿಯಾದ ಬಿಜೆಪಿ ಬಗೆಗಿನ ಟ್ರೆಂಡ್ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ನಿರಾಕರಿಸುವಂತಿಲ್ಲ.
-ಚಿಕ್ಕಪ್ಪನಹಳ್ಳಿ ಷಣ್ಮುಖ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

