ಪ್ರಧಾನ ಸುದ್ದಿ

33,333 ಮಕ್ಕಳು ಶಾಲೆ ಬಿಟ್ಟು ಹೊರಗುಳಿದವರು

Published On :

ಬಾಗಲಕೋಟೆ: ಇದೇನು ಲಕ್ಕಿ ನಂಬರ್ ಅಂದುಕೊಂಡಿರಾ ಅಥವಾ ಇಂಥದ್ದೊಂದು ನಂಬರನ್ನು ಮೊಬೈಲ್‌ಗೋ ಅಥವಾ ಲ್ಯಾಂಡ್‌ಲೈನ್‌ಗೋ ನೀಡಲು ಬಿಎಸ್‌ಎನ್‌ಎಲ್ ಹರಾಜು ಹಾಕುತ್ತಿರಬಹುದೇ ಎಂಬ ಗ್ರಹಿಕೆ ಏನಾದರೂ ನಿಮ್ಮಲ್ಲಿ ಮೂಡಿತೇ... ಇದಾವುದೂ ಅಲ್ಲ. ಕರ್ನಾಟಕ ರಾಜ್ಯದಲ್ಲಿ ಶಾಲೆ ಬಿಟ್ಟು ಪರಾರಿಯಾದ ಮಕ್ಕಳ ಸಂಖ್ಯೆಯಿದು. ಪ್ರಾಥಮಿಕ ಹಂತದಲ್ಲಿ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಶಾಲೆಯಿಂದ ಹೊರ ಹೋದ ಮಕ್ಕಳ ಲೆಕ್ಕ ಹಾಕಿದಾಗ ಈ ಅಂಕಿಗೆ ಬಂದು ನಿಂತಿದೆ. 34 ಶೈಕ್ಷಣಿಕ ಜಿಲ್ಲೆಗಳಲ್ಲಿ ತಲಾಶ್ ಮಾಡಿ ಶಾಲೆ ಬಿಟ್ಟ ಮಕ್ಕಳ ಇಂತಹದೊಂದು ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ತಯಾರು ಮಾಡಿದ್ದು, ಏನಾದರೂ ಮಾಡಿ ಅವರೆಲ್ಲರನ್ನು ಶಾಲೆಗೆ ಮರಳಿ ಕರೆ ತರಬೇಕೆಂಬ ವಿಶ್ವಾಸ ಹೊಂದಿದೆ.
ಶಾಲೆ ಬಿಟ್ಟ ಬಹುತೇಕ ಮಕ್ಕಳು ಗ್ಯಾರೇಜು, ಜಮೀನು, ಇತರೆ ದುಡಿಮೆಯಲ್ಲಿ ನಿರತರಾಗಿದ್ದಾರೆ. ಕೆಲವರಂತೂ ಸಮಾಜಘಾತಕ ಚಟುವಟಿಕೆಯತ್ತ ಮುಖ ಮಾಡಿ ಆತಂಕದ ಸಂದರ್ಭ ನೆನಪು ಮಾಡಿಸಿದ್ದಾರೆ. ಪೋಷಕರ ಮನವೊಲಿಸಿ ಇಂತಹ ಮಕ್ಕಳನ್ನು ಶಾಲೆಗೆ ಕರೆತಂದು ಪೂರಕ ಶೈಕ್ಷಣಿಕ ವಾತಾವರಣ ನಿರ್ಮಿಸುವ ಕೈಂಕರ್ಯಕ್ಕೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ರಾಜ್ಯಾದ್ಯಂತ 1529 ಚಿಣ್ಣರ ಅಂಗಳ ಕೇಂದ್ರಗಳನ್ನು ತೆರೆಯಲಾಗಿದ್ದು ರು. 1.62 ಕೋಟಿ ವೆಚ್ಚ ಮಾಡಲಾಗುತ್ತಿದೆ.
ಬಿಜಾಪುರ ಹೆಚ್ಚು: ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಬಿಜಾಪುರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ ಕೊಡಗು ಕಡೇ ಸ್ಥಾನ ಪಡೆದಿದೆ. ಬಿಜಾಪುರ ಜಿಲ್ಲೆಯಲ್ಲಿ 3600 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಕೊಡಗಿನಲ್ಲಿ ಕೇವಲ 94 ಮಕ್ಕಳಿದ್ದಾರೆ. ಉಳಿದಂತೆ ಬಳ್ಳಾರಿಯಲ್ಲಿ 3367, ಗುಲ್ಬರ್ಗದಲ್ಲಿ 2800, ಗದಗದಲ್ಲಿ 2313, ಕೊಪ್ಪಳದಲ್ಲಿ 2957, ಚಿತ್ರದುರ್ಗದಲ್ಲಿ 1500 ಮಕ್ಕಳು ಶಾಲೆಯಿಂದ ಪರಾರಿಯಾಗಿ ಶೈಕ್ಷಣಿಕ ಅಭಿವೃದ್ಧಿ ಕಡೆಗಣಿಸಿಕೊಂಡಿದ್ದಾರೆ.
ಚಿಣ್ಣರ ಅಂಗಳ: ಬೇಸಗೆ ರಜೆ ವೇಳೆ ಚಿಣ್ಣರ ಅಂಗಳ ಕೇಂದ್ರ ತೆರೆದು ಶಾಲೆ ಬಿಟ್ಟ ಮಕ್ಕಳನ್ನು ಶೈಕ್ಷಣಿಕ ವಾಹಿನಿಗೆ ಕರೆತರಲಾಗುತ್ತಿದೆ. ಇಂತಹ ಕೇಂದ್ರಗಳಿಗೆ ಒಬ್ಬ ಶಿಕ್ಷಕರು ಹಾಗೂ ಸ್ವಯಂ ಸೇವಕರ ನೇಮಕ ಮಾಡಿ ಪೂರಕ ಶೈಕ್ಷಣಿಕ ವಾತಾವರಣ ನಿರ್ಮಿಸಿ ಕಲಿಕೆಗೆ ಅಗತ್ಯವಾಗಿ ಬೇಕಾಗುವ ಪುಸ್ತಕ ಮುಂತಾದ ಪರಿಕರಗಳ ಪೂರೈಕೆ ಮಾಡಲಾಗುತ್ತದೆ. ಶಾಲೆಗಳಲ್ಲಿ ಹಾಲಿ ಇರುವ ಮಧ್ಯಾಹ್ನದ ಬಿಸಿಯೂಟದ ಸವಿ ಇಂತಹ ಮಕ್ಕಳಿಗೆ ವಿಶೇಷವಾಗಿ ಪ್ರಾಪ್ತವಾಗಲಿದೆ. ಆದರೆ ಶಾಲೆಗಳಲ್ಲಿ ರಾತ್ರಿ ವೇಳೆ ತಂಗಲು ಅವಕಾಶವಿಲ್ಲ. ಎಲ್ಲವೂ 3 ತಿಂಗಳ ವಿಶೇಷ ತರಬೇತಿಯ ವಸತಿ ರಹಿತ ಕೇಂದ್ರಗಳಾಗಿವೆ.


 ಚಿಕ್ಕಪ್ಪನಹಳ್ಳಿ ಷಣ್ಮುಖ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.