ಪ್ರಧಾನ ಸುದ್ದಿ

ಅನಂತ ಸಂಪತ್ತಿನ ಕೀಲಿ ಜಡ್ಜ್ 'ಕೈ'ಗೆ

ಅನಂತ ಸಂಪತ್ತಿನ ಕೀಲಿ ಜಡ್ಜ್ 'ಕೈ'ಗೆ
Published On :

ನವದೆಹಲಿ: ಕೇರಳದ ಪ್ರಸಿದ್ಧ ಅನಂತಪದ್ಮನಾಭ ದೇಗುಲದ ಆಡಳಿತದ ವಿಚಾರದಲ್ಲಿ ತಿರುವಾಂಕೂರು ರಾಜಮನೆತನಕ್ಕೆ ಸಂಪೂರ್ಣವಾಗಿ ಹಿನ್ನಡೆಯಾಗಿದೆ.
ನ್ಯಾಯಾಲಯದ ದಿನನಿತ್ಯದ ವ್ಯವಹಾರದಿಂದ ರಾಜಮನೆತನವನ್ನು ನ್ಯಾಯಾಲಯ ಸಂಪೂರ್ಣವಾಗಿ ಹೊರಗಿಟ್ಟಿದೆ. ಇನ್ನು ಮುಂದೆ ದೇಗುಲದ ಆಡಳಿತವು ರಾಜಮನೆತನದ ನಿಯಂತ್ರಣದಿಂದ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯ ಕೈಗೆ ಹೋಗಲಿದೆ. ಜತೆಗೆ, ದೇಗುಲದ ಆಸ್ತಿಯ ಸ್ವತಂತ್ರ ಆಡಿಟಿಂಗ್ ಮಾಜಿ ಸಿಎಜಿ ವಿನೋದ್ ರಾಯ್ ಮೇಲ್ವಿಚಾರಣೆಯಲ್ಲಿ ನಡೆಯಲಿದೆ.
ಬೆದರಿಕೆ ಹಾಕುವಂತಿಲ್ಲ: ಇದೇ ವೇಳೆ, ರಾಜಕುಟುಂಬದ ಸದಸ್ಯರು ಆಡಳಿತ ಮಂಡಳಿ ಸದಸ್ಯರಿಗೆ ಬೆದರಿಕೆ ಹಾಕುವಂತಿಲ್ಲ ಎಂದೂ ಸುಪ್ರೀಂಕೋರ್ಟ್ ಎಚ್ಚರಿಸಿದೆ. ಅಮಿಕಸ್ ಕ್ಯೂರಿ ಸಲ್ಲಿಸಿದ್ದ ವರದಿ ಸಂಬಂಧಿಸಿದ ವಿಚಾರಣೆ ವೇಳೆ ನ್ಯಾಯಾಲಯ ಈ ಎಚ್ಚರಿಕೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದ ಬಾಕಿ ವಿಚಾರಣೆಯನ್ನು ನ್ಯಾಯಾಲಯ ಮುಂದಿನ ವಾರ ಕೈಗೆತ್ತಿಕೊಳ್ಳಲಿದೆ.
ಸಮಿತಿಯಲ್ಲಿ ಯಾರ್ಯಾರು?: ದೇವಸ್ಥಾನದ ಆಡಳಿತ ನಿರ್ವಹಣೆಗೆ ನೂತನ ಸಮಿತಿ ನೇಮಿಸಿರುವ ನ್ಯಾಯಾಲಯ ತಿರುವನಂತಪುರ ಜಿಲ್ಲಾ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ದೇಗುಲದ ತಂತ್ರಿ ಸತೀಶ್ ನಂಬೂದರಿ ಹಾಗೂ ಮತ್ತಿಬ್ಬರು ಸದಸ್ಯರು ಸಮಿತಿಯಲ್ಲಿರಲಿದ್ದಾರೆ. ಇವರಲ್ಲಿ ಒಬ್ಬರನ್ನು ಸರ್ಕಾರವೇ ನಾಮನಿರ್ದೇಶನ ಮಾಡಲಿದೆ.
ಇದಲ್ಲದೆ, ಗುರುವಾಯೂರು ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ನಿವೃತ್ತ ಐಎಎಸ್ ಅಧಿಕಾರಿ ಸತೀಶ್ ಕುಮಾರ್ ಅವರನ್ನು ವ್ಯವಸ್ಥಾಪಕ ಅಧಿಕಾರಿಯಾಗಿ ನೇಮಿಸಲಾಗಿದೆ. ಸತೀಶ್ ಅವರು ದೇವಸ್ಥಾನದ ದಿನನಿತ್ಯದ ಕೆಲಸ ಕಾರ್ಯಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. ಒಮ್ಮೆ ಆಡಳಿತಾತ್ಮಕ ಸಮಿತಿ ದೇವಸ್ಥಾನದ ವ್ಯವಹಾರಗಳ ನೇತೃತ್ವವನ್ನು ವಹಿಸಿದ ಬಳಿಕ ಟ್ರಸ್ಟಿಗಳು ಸಮಿತಿ ತೆಗೆದುಕೊಂಡ ಯಾವುದೇ ನಿರ್ಧಾರಕ್ಕೆ ಬಾಧ್ಯಸ್ಥರಾಗುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ನ್ಯಾಯಾಲಯ ಹೇಳಿದ್ದೇನು?
-  ಪೂಜಾರಿಗಳು ಮತ್ತು ಇತರರ ದೈನಂದಿನ ಅವಶ್ಯಕತೆಗಳಿಗಾಗಿ ಸಾಮಗ್ರಿಗಳನ್ನು ತೆಗೆದಿಟ್ಟಿರುವ ಕಲಾರಾಗಳನ್ನು ಹೊರತುಪಡಿಸಿ ಉಳಿದೆಲ್ಲ ಕೋಣೆಗಳ ಕೀಲಿಯನ್ನು ಜಿಲ್ಲಾ ನ್ಯಾಯಾಧೀಶರಿಗೆ ಒಪ್ಪಿಸಬೇಕು.
-  ಉಳಿದ ಆಸ್ತಿಗಳಿಗೆ ಸಿಸಿಟಿವಿ ಮತ್ತು ಇತರೆ ವಿಧಾನಗಳ ಮೂಲಕ ರಕ್ಷಣೆ ನೀಡಬೇಕು.
-  ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ ವಸ್ತುಗಳ ಲೆಕ್ಕಾಚಾರ ಸರಿಯಾಗಿದೆಯೇ ಎನ್ನುವ ಕುರಿತು ವಾರಾಂತ್ಯದಲ್ಲಿ ಸಮಿತಿಯ ಮುಖ್ಯಸ್ಥರು ಪರಿಶೀಲನೆ ನಡೆಸಬೇಕು.
-  ದೇವಸ್ಥಾನದ ಶುಚಿತ್ವಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ದೇವಸ್ಥಾನದ ರಕ್ಷಣೆಗೆ ನಿಯೋಜಿಸಲ್ಪಟ್ಟಿರುವ ಪೊಲೀಸರಿಗೆ ಸರಿಯಾದ ಸೌಲಭ್ಯ ಒದಗಿಸಬೇಕು.
-  ನಿಗದಿತ ಕಾಲಮಿತಿಯೊಳಗೆ ದೇವಸ್ಥಾನದ ಟ್ಯಾಂಕ್‌ಗಳನ್ನು ಶುಚಿಗೊಳಿಸಬೇಕು.

ಸುರಂಗ ಮಾರ್ಗ ಪತ್ತೆ
ತಿರುವನಂತಪುರ:
ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಉತ್ತರಗೇಟ್‌ನಲ್ಲಿ ಗುರುವಾರ ಸುರಂಗಮಾರ್ಗವೊಂದು ಪತ್ತೆಯಾಗಿದೆ. ದೇವಸ್ಥಾನಕ್ಕೆ ಕಲ್ಪಿಸಲಾಗಿರುವ ಭದ್ರತೆ ಹೆಚ್ಚಿಸಲು ಬೇಲಿ ನಿರ್ಮಿಸಲೆಂದು ಪೊಲೀಸರು ಗುಂಡಿ ತೋಡುತ್ತಿದ್ದಾಗ ಈ ಸುರಂಗ ಮಾರ್ಗ ಪತ್ತೆಯಾಗಿದೆ. ಪುರಾತತ್ವ ಇಲಾಖೆಯ ನಿರ್ದೇಶಕ ಜಿ. ಪ್ರೇಮ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.