ಪ್ರಧಾನ ಸುದ್ದಿ

ಡಿ.1ಕ್ಕೆ 'ಕನ್ನಡಪ್ರಭ' ಪ್ರೇರಣೆ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಏ. 25
ಮುಖ್ಯಮಂತ್ರಿಯೊಬ್ಬರ ಗ್ರಾಮ ವಾಸ್ತವ್ಯದ ಬಳಿಕ ಕುಟುಂಬವೊಂದು ಅನುಭವಿಸಿದ ಪರಿಣಾಮಗಳ ಕಥೆಯಾಧರಿಸಿ ನಿರ್ಮಿಸಿರುವ ಎರಡು ರಾಷ್ಟ್ರಪ್ರಶಸ್ತಿ ಪುರಸ್ಕೃತ 'ಡಿಸೆಂಬರ್-1' ಕನ್ನಡ ಚಲನಚಿತ್ರ ಶುಕ್ರವಾರ ರಾಜ್ಯಾದ್ಯಂತ ತೆರೆ ಕಂಡಿದೆ.
ವಾಣಿಜ್ಯ ಚಿತ್ರಗಳ ಭರಾಟೆಯಲ್ಲಿ ಕಲಾತ್ಮಕ ಚಿತ್ರಗಳು ಬೋರ್ ಎನ್ನುವ ಭಾವನೆಯಿಂದ 'ಡಿಸೆಂಬರ್-1' ಸಂಪೂರ್ಣ ಭಿನ್ನವಾಗಿದೆ. ವಾಸ್ತವ ಘಟನೆಗೆ ಸಮೀಪವಿರುವ ಈ ಚಿತ್ರದಲ್ಲಿ ಕೊನೆಯವರೆಗೂ ಸರ್ಕಾರಿ ಯಂತ್ರದ ಚಟುವಟಿಕೆ, ಗಣ್ಯರ ಸಾಮಾಜಿಕ ಕಳಕಳಿಗೆ ಸಾಮಾನ್ಯರು ತೆರಬೇಕಾದ ಬೆಲೆ ಇತ್ಯಾದಿಗಳನ್ನು ಬಿಂಬಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಪಿ. ಶೇಷಾದ್ರಿ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಕನ್ನಡಪ್ರಭ' ಪ್ರೇರಣೆ: 2006ರಲ್ಲಿ ಮುಖ್ಯಮಂತ್ರಿಯೊಬ್ಬರ ವಿಶಿಷ್ಟ ಕಾರ್ಯಕ್ರಮ ಗ್ರಾಮ ವಾಸ್ತವ್ಯದ ನಂತರದ ಪರಿಣಾಮದ ಬಗ್ಗೆ 'ಕನ್ನಡಪ್ರಭ' ದಿನಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು. ಅದರ ಬೆನ್ನತ್ತಿದಾಗ ಮತ್ತಷ್ಟು ವಿವರಗಳು ಲಭಿಸಿದವು. ಇದು ಡಿಸೆಂಬರ್-1 ಚಿತ್ರ ನಿರ್ಮಾಣಕ್ಕೆ ಪ್ರೇರಣೆಯಾಯಿತು. ಮಚ್ಚು-ಲಾಂಗ್‌ಗಳನ್ನೇ ವೈಭವೀಕರಿಸುವ ಕಮರ್ಷಿಯಲ್ ಚಿತ್ರಗಳ ಭರಾಟೆಯಲ್ಲಿ ಕಲಾತ್ಮಕ ಚಿತ್ರಗಳು ಸೊರಗಿವೆ. ಪ್ರೇಕ್ಷಕರು ಕಲಾತ್ಮಕ ಚಿತ್ರಗಳನ್ನು ನೋಡಲು ಮುಂದಾಗಬೇಕು. ಆ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು.
ಅತ್ಯುತ್ತಮ ಕನ್ನಡ ಚಿತ್ರ ಹಾಗೂ ಅತ್ಯುತ್ತಮ ಚಿತ್ರಕಥೆಗೆ 61ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಡಿಸೆಂಬರ್-1 ಪಡೆದುಕೊಂಡಿದೆ. ಹುಬ್ಬಳ್ಳಿ ಸಮೀಪದ ಹೆಬಸೂರು ಹಾಗೂ ಶಿರಗುಪ್ಪಿಯಲ್ಲಿ ಬಹುತೇಕ ಚಿತ್ರೀಕರಣ ಆಗಿದೆ. ಈ ಮೊದಲಿನ ತಮ್ಮ ತುತ್ತೂರಿ, ವಿಮುಕ್ತಿ ಮುಂತಾದ 8 ಚಿತ್ರಗಳಿಗೂ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. ಉತ್ತರ ಕರ್ನಾಟಕ ಶೈಲಿಯ ಕಥೆಯಾಧಾರಿತ ಚಿತ್ರ ನಿರ್ಮಿಸಬೇಕೆಂಬ 14 ವರ್ಷಗಳ ಕನಸು ಈಗ ಈಡೇರಿದೆ. ಅತಿ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿರುವ ಚಿತ್ರವನ್ನು ಬೆಂಗಳೂರು, ಮೈಸೂರು, ಗುಲ್ಬರ್ಗ, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಜ್ಯದ 12 ಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಆಧರಿಸಿ, ಉಳಿದೆಡೆ ಬಿಡುಗಡೆ ಮಾಡಲಾಗುವುದು ಎಂದರು. ಬಸಂತಕುಮಾರ ಪಾಟೀಲ ನಿರ್ಮಿಸಿದ ಚಿತ್ರದಲ್ಲಿ ನಟಿ ನಿವೇದಿತಾ, ಶಶಿಕುಮಾರ್ ಹಾಗೂ ಎಚ್.ಜಿ. ದತ್ತಾತ್ರೇಯ ಅವರನ್ನು ಹೊರತುಪಡಿಸಿದರೆ ಉಳಿದೆಲ್ಲ ಕಲಾವಿದರೂ ಉತ್ತರ ಕರ್ನಾಟಕದವರೇ ಎಂದರು.
ಪ್ರಚಾರದ ತಂತ್ರ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಿಸೆಂಬರ್-1 ಚಿತ್ರದ ಕುರಿತಾಗಿ ಕೃತಿಚೌರ್ಯದ ಆರೋಪ ಹೊರಿಸಿದ್ದು, ಪ್ರಚಾರ ಪಡೆಯುವ ಕುತಂತ್ರವಷ್ಟೇ. ಚಿತ್ರವನ್ನು ನೋಡದೆ, ಕೃತಿಚೌರ್ಯ ಎಂದು ಆರೋಪಿಸುವುದರಲ್ಲಿ ಹುರುಳಿಲ್ಲ. 2006-07ರಲ್ಲಿ ಮುಖ್ಯಮಂತ್ರಿ 25 ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಅದರಲ್ಲಿ ಯಾವುದೋ ಒಂದು ಕುಟುಂಬವನ್ನು ಆಧರಿಸಿ ಓಂ ಪ್ರಕಾಶ ನಾಯಕ ಕಥೆ ಬರೆದಿರಬಹುದು. ನಾನೂ ಎಳೆಂಟು ಹಳ್ಳಿ ಸುತ್ತಾಡಿ, ಸಂಶೋಧನೆ ಮಾಡಿ ಕಥೆ ರಚಿಸಿದ್ದೇನೆ. ಮುಖ್ಯಮಂತ್ರಿಯೊಬ್ಬರ ಗ್ರಾಮ ವಾಸ್ತವ್ಯವೆಂದ ಮೇಲೆ ಆ ಹಳ್ಳಿಗೆ ರಸ್ತೆ, ಬೀದಿ ದೀಪ, ವಾಸ್ತವ್ಯ ಮಾಡುವ ಮನೆಗೆ ವಿದ್ಯುತ್ ಸಂಪರ್ಕ ಸಹಜ. ಓಂ ಪ್ರಕಾಶ್‌ರ ಕಥೆಯಲ್ಲಿ ಈ ಎಲ್ಲ ವಿಷಯ ಇರಬಹುದು. ಅಷ್ಟು ಮಾತ್ರಕ್ಕೆ ಕೃತಿಚೌರ್ಯದ ಆರೋಪ ಹೊರಿಸುವುದು ಸರಿಯಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.