ಒಪ್ಪಂದದಲ್ಲೇ ಡೀಮ್ಡ್ ಕರಾಮತ್ತು
ಬೆಂಗಳೂರು: ಡೀಮ್ಡ್ ವಿಶ್ವವಿದ್ಯಾಲಯಗಳ ಅಸಲಿ ರೂಪ ಹೊರಬಿದ್ದಿದ್ದು, ಸರ್ಕಾರದ ಜತೆಗಿನ ಒಪ್ಪಂದದಲ್ಲಿಯೇ ಕರಾಮತ್ತು ಮಾಡಲಾಗಿದೆ!
ರಾಜ್ಯದಲ್ಲಿರುವ 8 ವೈದ್ಯಕೀಯ ಡೀಮ್ಡ್ ವಿಶ್ವವಿದ್ಯಾಲಯಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವಾಗಲೇ ಹಿಂದಿನ ರಾಜ್ಯ ಸರ್ಕಾರ ಹಾಗೂ ವೈದ್ಯ ಶಿಕ್ಷಣ ಇಲಾಖೆ ಅಧಿಕಾರಿಗಳು ತಪ್ಪೆಸೆಗಿದ್ದಾರೆ. ಸರ್ಕಾರದ ಅಂದಿನ ನಿರ್ಲಕ್ಷ್ಯ ಹಾಗೂ ಬೇಜವಬ್ದಾರಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸುಮಾರು 200ಕ್ಕೂ ಅಧಿಕ ಸೀಟುಗಳು ಕೈತಪ್ಪುತ್ತಿವೆ. ವಿಚಿತ್ರವೆಂದರೆ ಇಂತಹ ಕರಾಮತ್ತಿನಲ್ಲಿ ಇರುವ ಕಾಲೇಜಿನ ಮುಖ್ಯಸ್ಥರೆಲ್ಲರೂ ಸಮಾಜವಾದ, ಸಮಾನತೆ ಹಾಗೂ ಬಡ ವಿದ್ಯಾರ್ಥಿಗಳ ಬಗ್ಗೆ ಗಂಟೆಗಟ್ಟಲೇ ಭಾಷಣ ಮಾಡುವವರೇ ಆಗಿದ್ದಾರೆ.
ಎಸ್.ಎಂ. ಕೃಷ್ಣ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಈ ಎಂಟು ಕಾಲೇಜುಗಳ ಸೀಟು ಹಂಚಿಕೆ ಬಗ್ಗೆ ಪ್ರತ್ಯೇಕ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದರ ಪ್ರಕಾರ 2010- 11 ಅಥವಾ ಮಾನ್ಯತೆ ಪಡೆದ ಬಳಿಕ ಕಾಲೇಜಿಗೆ ದೊರೆತ ವೈದ್ಯ ಸೀಟುಗಳಲ್ಲಿ ಶೇ.25ರಷ್ಟು ಮಾತ್ರ ಸರ್ಕಾರಕ್ಕೆ ಸಿಗುತ್ತದೆ.
ಒಪ್ಪಂದಕ್ಕೆ ಸಹಿ ಹಾಕುವಾಗ ಪ್ರಾಥಮಿಕ ಹಂತದಲ್ಲಿ ಕಾಲೇಜು ಮಾನ್ಯತೆ ಪಡೆದ ಸೀಟುಗಳಿಗೆ ಈ ಮೀಸಲು ಅನ್ವಯವಾಗುವುದೇ ಇಲ್ಲ. ಸರ್ಕಾರಕ್ಕೆ ಒಂದು ಸೀಟು ಕೂಡ ಶರಣು ಮಾಡುವ ಅಗತ್ಯವಿಲ್ಲ. ಹಿಂದಿನ ಸರ್ಕಾರ, ಮಾಜಿ ಸಚಿವರು ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರಭಾವಿಗಳು ಸೇರಿಕೊಂಡು ಒಪ್ಪಂದದಲ್ಲಿ ಇಂತಹದೊಂದು ಅಂಶವನ್ನು ಸೇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಫೆ.12ರಂದು ಈ ಕಾಲೇಜುಗಳ ವಿರುದ್ಧ ವೈದ್ಯಕೀಯ ಶಿಕ್ಷಣ ಇಲಾಖೆ ಹೊರಡಿಸಿದ್ದ ನೋಟಿಸ್ಗೆ ಬೆಲೆಯಿಲ್ಲದಂತಾಗಿದೆ. ನಮ್ಮನ್ನು ಪ್ರಶ್ನಿಸುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ಡೀಮ್ಡ್ ವಿವಿಗಳು ಖಡಕ್ ಉತ್ತರ ನೀಡಿವೆ.
ಉದ್ದೇಶಪೂರ್ವಕ ಸೇರ್ಪಡೆ: ಡೀಮ್ಡ್ ವಿವಿಗೆ ಮಾನ್ಯತೆ ನೀಡುವ ಕಾಯಿದೆಯಲ್ಲಿ ಈ ಮೀಸಲಿನ ಅಂಶ ಪ್ರಸ್ತಾಪವಾಗಿಲ್ಲ. ಸರ್ಕಾರಕ್ಕೆ ಹೆಚ್ಚಿನ ಸೀಟು ತಪ್ಪಿಸುವ ಸಲುವಾಗಿಯೇ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇನ್ನು ಕೆಲವು ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿ ಸಚಿವ ಸಂಪುಟದಲ್ಲಿಯೇ ಗುಟ್ಟಾಗಿ ತೀರ್ಮಾನ ಮಾಡಲಾಗಿದೆ. 2010-11ರ ಅವಧಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿರುವ 3 ಶಿಕ್ಷಣ ಸಂಸ್ಥೆಗಳ ಪ್ರತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದ್ದು ಈ ಒಪ್ಪಂದದಲ್ಲಿ ಶೇ.25ರ ಮೀಸಲು ವಿಚಾರದ ಬಗೆಗೆ ಸ್ಪಷ್ಟವಾಗಿ ಹೇಳಲಾಗಿದೆ.
ಒಪ್ಪಂದದ ಪ್ರತಿ ನೋಡಿದ ಪ್ರತಿಯೊಬ್ಬರಿಗೂ ಇದರ ಒಳಮರ್ಮ ಅರ್ಥವಾಗುತ್ತದೆ. ಇದೊಂದು ಒಪ್ಪಂದದಿಂದ ಪ್ರತಿ ಶಿಕ್ಷಣ ಸಂಸ್ಥೆಗಳು ಕೋಟ್ಯಂತರ ಕಮಾಯಿ ಮಾಡಬಹುದು. ಸರ್ಕಾರಕ್ಕೆ ನೀಡಬೇಕಿರುವ 200ಕ್ಕೂ ಅಧಿಕ ವೈದ್ಯ ಸೀಟುಗಳ ಮಾರುಕಟ್ಟೆ ಬೆಲೆ ಪ್ರತಿಯೊಬ್ಬರಿಗೂ ತಿಳಿದಿದೆ.
ಪರಿಹಾರವಿದ್ದರೂ ಸರ್ಕಾರದ ಮೌನ!: ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಗೊಳಿಸುವುದು ಸರ್ಕಾರಕ್ಕೆ ದೊಡ್ಡ ಕೆಲಸವಲ್ಲ. ಕಾನೂನು ಜಾರಿ ತಂದಾಗ ಯಾವುದೇ ಒಪ್ಪಂದಗಳು ಲೆಕ್ಕಕ್ಕೆ ಬರುವುದಿಲ್ಲ. ಇದೇ ಕಾರಣದಿಂದ 2006ರ ಕಾಯಿದೆಯನ್ನು ಡೀಮ್ಡ್ ವಿವಿಗಳು ವಿರೋಧಿಸುತ್ತಿವೆ. ಮತ್ತೊಂದೆಡೆ ಆ ಕಾಯಿದೆ ಜಾರಿ ಬರುವವರೆಗೆ ಶೇ.25ರಷ್ಟು ಸೀಟುಗಳನ್ನು ಪಡೆಯಲು ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುವ ಬಗೆಗೂ ಚಿಂತನೆ ನಡೆಸುತ್ತಿಲ್ಲ.
ಡೀಮ್ಡ್ ವಿವಿಗಳ ಜತೆ ಮಾಡಿಕೊಂಡಿರುವ ಒಪ್ಪಂದದಂತೆ ನೋಟಿಸ್ ನೀಡಲು ಸಾಧ್ಯವಿಲ್ಲ, ಸೀಟು ಪಡೆಯಲು ಸಾಧ್ಯವಿಲ್ಲ. ಅವರು ಹೇಳಿದಂತೆ ನಾವು ಕುಣಿಯಬೇಕು ಎಂಬ ಧಾಟಿಯಲ್ಲಿ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಶರಣ ಪ್ರಕಾಶ ಪಾಟೀಲ್, ಒಪ್ಪಂದದ ಕುರಿತಂತೆ ಕಾನೂನು ಅಭಿಪ್ರಾಯ ಕೇಳಲಾಗಿದೆ ಎಂದಿದ್ದಾರೆ.
-ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

