ಮೊಬೈಲ್ಗಾಗಿ ಮನೆ ಟಚ್ ಬಿಟ್ಟ!

ಕೊಪ್ಪಳ: ಪರೀಕ್ಷೆಯಲ್ಲಿ ಫೇಲಾಗಿ ಮನೆ ಬಿಟ್ಟ, ಬೈದರೆಂದು ಓಡಿ ಹೋದ, ಪ್ರೇಮಿಯೊಂದಿಗೆ ಪರಾರಿಯಾದ ಮಕ್ಕಳ ಬಗ್ಗೆ ಕೇಳಿದ್ದೀರಿ. ಆದರೆ, ದುಬಾರಿ ಟಚ್ ಸ್ಕ್ರೀನ್ ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕೆ ಸಿಟ್ಟು ಮಾಡಿಕೊಂಡು ಮನೆಯಿಂದ ಹೋದ ಮಗ ಇನ್ನೂ ಬಂದಿಲ್ಲ. ಅವನಿಗಾಗಿ ಹುಡುಕುತ್ತಿರುವ ಹೆತ್ತವರ ಕಣ್ಣಲ್ಲಿ ನೀರು ಇಂಗಿಲ್ಲ!
ಗಂಗಾವತಿ ತಾಲೂಕಿನ ಹಿರೇಜಂತಕಲ್ ಗ್ರಾಮದ ವಿರೂಪಾಕ್ಷಪ್ಪ, ಶಶಿರೇಖಾ ದಂಪತಿಯ ಎರಡನೇ ಪುತ್ರ ಶಶಿಕುಮಾರ್, ಮೊಬೈಲ್ಗಾಗಿ ಮನೆ ಬಿಟ್ಟು ಹೋದ ಹುಡುಗ. ಇನ್ನೂ 15ರ ಹರೆಯದ ಈತ ಸ್ನೇಹಿತನ ಬಳಿ ಇದ್ದಂಥ ಟಚ್ ಸ್ಕ್ರೀನ್ ಮೊಬೈಲ್ ಬೇಕೆಂದು ದುಂಬಾಲು ಬಿದ್ದ. ಮಗನ ಹಠಕ್ಕೆ ಮಣಿದ ಪೋಷಕರು ಆತನಿಗೆ 2 ಸಾವಿರ ಮೌಲ್ಯದ ಮೊಬೈಲ್ ಕೊಡಿಸಿದರು. ಇಷ್ಟಕ್ಕೇ ಸುಮ್ಮನಾಗದ ಶಿವಕುಮಾರ್, 12 ಸಾವಿರದ ಮೊಬೈಲ್ ಬೇಕೆಂದು ಗಂಟು ಬಿದ್ದಿದ್ದ. ಗದರಿಸಿದರೂ ಜಗ್ಗದೆ ಸ್ಕ್ರೀನ್ ಟಚ್ ಮೊಬೈಲ್ ಕೊಡಿಸಬೇಕೆಂದು ಹಠ ಮಾಡಿದ. ತಾನೇ ಸುಮ್ಮನಾಗುತ್ತಾನೆ ಎಂದು ಭಾವಿಸಿದ ಹೆತ್ತವರು ಸುಮ್ಮನಾಗಿದ್ದರು.
ಆದರೆ, ತಂದೆ ಕೊಡಿಸಿದ್ದ 2 ಸಾವಿರ ಮೌಲ್ಯದ ಮೊಬೈಲ್ನ್ನು ಕೇವಲ 200ಕ್ಕೆ ಮಾರಿ ಸಂಬಂಧಿಕರ ಮನೆಗೆ ಹೋದ ಶಶಿಕುಮಾರ್ನನ್ನು ಪಾಲಕರು ಮನವೊಲಿಸಿ ಕರೆ ತಂದರು. ಅದೇ ದಿನ ಮೊಬೈಲ್ಗಾಗಿ ಈತ ಮತ್ತೆ ಹಠ ಮಾಡಿದ. ಮನೆಯಲ್ಲಿದ್ದ 3 ಸಾವಿರ ನಗದನ್ನು ಎತ್ತಿಕೊಂಡು ಮಾ.30ರಂದು ನಸುಕಿನಲ್ಲಿ ಮನೆ ಬಿಟ್ಟು ಹೋಗಿದ್ದಾನೆ.
ಮಗನಿಗಾಗಿ ಹುಡುಕದ ಸ್ಥಳವಿಲ್ಲ: ತಂದೆ ವಿರೂಪಾಕ್ಷಪ್ಪ, ತಾಯಿ ಶಶಿರೇಖಾ ಮಗನಿಗಾಗಿ ಹುಡುಕದ ಸ್ಥಳವಿಲ್ಲ. ಸಂಬಂಧಿಕರಿಗೂ ಕರೆ ಮಾಡಿ ವಿಚಾರಿಸಿದ್ದಾರೆ. ಹಲವು ಕಡೆ ಸುತ್ತಾಡಿ ಕೇಳಿದ್ದಾರೆ. ವಿರೂಪಾಕ್ಷಪ್ಪ ಬೆಂಗಳೂರಿಗೂ ಹೋಗಿ ಹುಡುಕಾಡಿದ್ದಾರೆ. ಸುಳಿವೇ ಸಿಕ್ಕಿಲ್ಲ. ಹೀಗಾಗಿ ಹೆತ್ತವರ ವೇದನೆ ಈಗ ಹೇಳತೀರದಾಗಿದೆ. ಗಂಗಾವತಿ ನಗರ ಠಾಣೆಯಲ್ಲಿ ಮಗ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದಾರೆ.
ಎಲ್ಲಿದ್ದರೂ ಬಾ ಕಂದಾ
ನೀನು ಎಲ್ಲಿದ್ದರೂ ಫೋನ್ ಮಾಡು. ನಾವೇ ಬಂದು ಕರೆತರುತ್ತೇವೆ. ನಿನಗೆ ಇಷ್ಟವಾದ ಮೊಬೈಲ್ ಕೊಡಿಸುತ್ತೇವೆ ಎಂದು ತಂದೆ ವಿರೂಪಾಕ್ಷಪ್ಪ ಮಗನಿಗಾಗಿ ಕಣ್ಣೀರಿಡುತ್ತಿದ್ದಾರೆ. ತಮ್ಮ ಪುತ್ರ ಯಾರಿಗಾದರೂ ಕಂಡರೆ ಮೊ. 9731645913ಗೆ ಕರೆ ಮಾಡಿ ಮಾಹಿತಿ ನೀಡುವಂತೆಯೂ ಕೋರಿದ್ದಾರೆ.
2000 ಮೌಲ್ಯದ ಮೊಬೈಲ್ ಕೊಡಸಿದರೂ ಹಠ ಬಿಡದ ಮಗ
ಗೆಳೆಯ ಬಳಿ ಇದ್ದ 12000 ಮೌಲ್ಯದ ಟಚ್ ಸ್ಕ್ರೀನ್ ಮೊಬೈಲ್ ಬೇಕೆಂಬ ಆಸೆ
ಮೊಬೈಲ್ ಕೊಡಸದಿದ್ದಕ್ಕೆ 3000 ನಗದು ಎತ್ತಿಕೊಂಡು ಮನೆ ಬಿಟ್ಟ ಕುಲಪುತ್ರ
ದತ್ತು ಕಮ್ಮಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


