ಪ್ರಧಾನ ಸುದ್ದಿ

ಮೋದಿ ವಿಶೇಷ ಕೊಡುಗೆ ನೀಡಿಲ್ಲ

ಮೋದಿ ವಿಶೇಷ ಕೊಡುಗೆ ನೀಡಿಲ್ಲ
Published On :

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಚಿಕ್ಕಾಸಿಗೆ ಸಾವಿರಾರು ಎಕರೆ ಭೂಮಿ ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ತಿರುಗೇಟು ನೀಡಿದ್ದಾರೆ. ಮೋದಿ ಸರ್ಕಾರದಿಂದ ನಾವು ವಿಶೇಷ ಕೊಡುಗೆಯನ್ನೇನೂ ಪಡೆದಿಲ್ಲ. ನಾವು ಬಂಜರುಭೂಮಿಯನ್ನಷ್ಟೇ ಖರೀದಿ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಮೋದಿ ಅವರು ಟಾಫಿ(ಚಾಕಲೇಟ್) ದರದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಅದಾನಿ ಗ್ರೂಪ್‌ಗೆ ಹಂಚಿದ್ದಾರೆ ಎನ್ನುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದಾನಿ ಹೇಳಿದ್ದೇನು?
- ಒಟ್ಟು 15,946 ಎಕರೆಯಲ್ಲಿ ಮೋದಿ ಸರ್ಕಾರದ ಅವಧಿಯಲ್ಲಿ ಮೂರನೇ ಒಂದು ಭಾಗದಷ್ಟು ಭೂಮಿಯನ್ನಷ್ಟೇ ಸ್ವಾಧೀನಪಡಿಸಿಕೊಳ್ಳಲಾಗಿದೆ.
- ರೈತರಿಂದ ಒಂದೇ ಒಂದು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿಲ್ಲ. ಯಾರೂ ಕಛ್‌ನತ್ತ ತಲೆ ಹಾಕದಿದ್ದಾಗ ನಾವು ಅಲ್ಲಿಗೆ ಹೋದೆವು. ಕೃಷಿಗೆ ಯೋಗ್ಯವಲ್ಲದ ಬಂಜರು ಮತ್ತು ಮರಳುಭೂಮಿಯನ್ನು ನಾವು ಸ್ವಾಧೀನಪಡಿಸಿಕೊಂಡೆವು.
- 1993ರಲ್ಲಿ ನಾವು ಭೂಸ್ವಾಧೀನಕ್ಕೆ ಮುಂದಾದಾಗ ಆಗಿನ ಮುಖ್ಯಮಂತ್ರಿ ಚಿಮನ್‌ಭಾಯ್ ಪಟೇಲ್ ಅವರು ಪ್ರತಿ ಚದರ ಮೀಟರ್‌ಗೆ 10 ಪೈಸೆ ನಿಗದಿ ಮಾಡಿದ್ದರು. ಬಿಜೆಪಿ ನೇತೃತ್ವದ ಕೇಶುಭಾಯ್ ಪಟೇಲ್ ಮುಖ್ಯಮಂತ್ರಿಯಾದಾಗ ಪ್ರತಿ ಚದರ ಮೀಟರ್ ಭೂಮಿಯ ದರವನ್ನು 1ಕ್ಕೇರಿಸಿದರು. ನಂತರ ಬಂದ ಶಂಕರ್‌ಸಿಂಗ್ ವಘೇಲಾ ಅವರು ಪ್ರತಿ ಚದರ ಅಡಿಗೆ 1.50 ಪೈಸೆ ನಿಗದಿ ಮಾಡಿದರು.
- ಮೋದಿ ಸರ್ಕಾರದ ಅವಧಿಯಲ್ಲಿ ನಾವು 5 ಸಾವಿರ ಎಕರೆ ಭೂಮಿಯನ್ನಷ್ಟೇ ಸ್ವಾಧೀನಪಡಿಸಿಕೊಂಡಿದ್ದೇವೆ. ಈ ಅವಧಿಯಲ್ಲಿ ಪ್ರತಿ ಚದರ ಮೀಟರ್‌ಗೆ ಸರಾಸರಿ 15 ನಿಗದಿಪಡಿಸಲಾಯಿತು.
- ಮೋದಿ ಮುಖ್ಯಮಂತ್ರಿಯಾದದ್ದು 2001ರಲ್ಲಿ. ಆದರೆ, ನಾವು ಅವರ ಅಧಿಕಾರಾವಧಿಯಲ್ಲಿ ಮೊದಲ ಬಾರಿ ಭೂಮಿ ಪಡೆದದ್ದು 2006ರಲ್ಲಿ. ಯುಪಿಎ ಸರ್ಕಾರದ ಎಸ್‌ಇಝೆಡ್ ನೀತಿಯಂತೆ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಈ ಭೂಮಿ ನೀಡಲಾಗಿತ್ತು. ನಾವು 10 ಸಾವಿರ ಎಕರೆ ಭೂಮಿ ಕೇಳಿದ್ದೆವು. ಆದರೆ ಸಿಕ್ಕಿದ್ದು ಕೇವಲ 5 ಸಾವಿರ ಎಕರೆ.
- 20 ವರ್ಷದ ಹಿಂದೆ ನಾವು ಖರೀದಿಸಿದ ಬಂಜರು ಭೂಮಿಗೂ ಈಗಿನ ಮಾರುಕಟ್ಟೆ ದರಕ್ಕೂ ಜನ ಹೋಲಿಕೆ ಮಾಡುತ್ತಿದ್ದಾರೆ. ಈಗ ಈ ಜಾಗದಲ್ಲಿ ವಿದ್ಯುತ್, ರಸ್ತೆಯಂಥ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
- ಯಾರಿಗೋ ಸಹಾಯ ಮಾಡಲು ಮೋದಿ ಸರ್ಕಾರ ಯಾವುದೇ ನೀತಿ ನಿಯಮಾವಳಿಗನ್ನು ಉಲ್ಲಂಘಿಸಿಲ್ಲ. ನಮ್ಮ ಕಂಪನಿಗೂ ಯಾವುದೇ ವಿಶೇಷ ಸೌಲಭ್ಯ ಕಲ್ಪಿಸಲಾಗಿಲ್ಲ.
- ನಮ್ಮ ಯೋಜನೆಗಳಿಗೆ ಮಹಾರಾಷ್ಟ್ರ, ಛತ್ತೀಸ್‌ಗಡ, ಒಡಿಶಾ, ಹರ್ಯಾಣ ಮತ್ತು ರಾಜಸ್ಥಾನದಲ್ಲೂ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ.


ನಾವು ರಾಜಕೀಯ ಕೆಸರೆರಚಾಟದ ಭಾಗವಾಗಲು ಬಯಸುವುದಿಲ್ಲ. ಆದರೆ, ನಮ್ಮ ಬಗ್ಗೆ ಏನು ಬಿಂಬಿಸಲಾಗುತ್ತಿದೆಯೇ ಅದು ನಿಜವಲ್ಲ. ಸತ್ಯ ಬೇರೆಯೇ ಇದೆ. ನಮ್ಮ ಕಂಪನಿ ಕಡಿಮೆ ದರದಲ್ಲಿ ಖರೀದಿಸಿದ ಭೂಮಿಯನ್ನು ಮಾರಾಟ ಮಾಡುವ ಉದ್ದೇಶ ಇಟ್ಟುಕೊಂಡಿಲ್ಲ.
- ಗೌತಮ್ ಅದಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.