ಪ್ರಧಾನ ಸುದ್ದಿ

ರೆಡ್ಡಿ ಸಾಮ್ರಾಜ್ಯ ಕಟ್ಟಲು ನಿಂತ ಶ್ರೀರಾಮ!

ರೆಡ್ಡಿ ಸಾಮ್ರಾಜ್ಯ ಕಟ್ಟಲು ನಿಂತ ಶ್ರೀರಾಮ!
Published On :

ಬಳ್ಳಾರಿ: ಕುಸಿಯುತ್ತಿರುವ ರೆಡ್ಡಿ ಸಾಮ್ರಾಜ್ಯ ಉಳಿಸಿಕೊಳ್ಳಲು ಲೋಕಸಭೆ ಚುನಾವಣೆಯಲ್ಲಿ ಶ್ರೀರಾಮುಲು ಗೆಲವು ಅನಿವಾರ್ಯ. ಅದಕ್ಕಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಲೋಕಸಭೆ ಕಣಕ್ಕಿಳಿಯುವ ಧೈರ್ಯವನ್ನೂ ಅವರು ಮಾಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಿಂದ ಆರಂಭಿಸಿ, ಶ್ರೀರಾಮುಲು ಹಾಗೂ ರೆಡ್ಡಿ ಸೋದರರಿಗೆ ಅಧಿಕಾರದ ಹಿಡಿತ ಕೈತಪ್ಪುತ್ತಿದೆ. ರಾಜ್ಯ ರಾಜಕೀಯದ ಶಕ್ತಿ ಕೇಂದ್ರ ಆಗಿದ್ದವರು ಜಿಲ್ಲಾ ಮಟ್ಟದಲ್ಲೂ ಈಗ ದುರ್ಬಲರಾಗಿದ್ದಾರೆ. ಇದು ಸಹಜವಾಗಿ ಅವರ ಮನಸ್ಥಿತಿಯನ್ನೂ ಕುಗ್ಗಿಸಿದೆ. ಜನಾರ್ದನ ರೆಡ್ಡಿ ಜೈಲಿಗೆ ಹೋದರು. ಬಿಜೆಪಿಯಿಂದ ಶ್ರೀರಾಮುಲು ಹೊರ ಹೋಗಿ ಹೊಸ ಪಕ್ಷ ಕಟ್ಟಿದರು. ಆಪ್ತಮಿತ್ರ ಎಂದೇ ಸಂಬೋಧಿಸುತ್ತಿದ್ದ ತಮ್ಮ ಮಾಸ್ಟರ್ ಮೈಂಡ್ ಜತೆಗಿಲ್ಲದೆ ಶ್ರೀರಾಮುಲು ಕೂಡ ಮಂಕಾದರು. ಬಿಜೆಪಿಗೆ ಮರಳಿ ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ನಿರ್ಧರಿಸಿದರು.
ಶ್ರೀರಾಮುಲು ಗೆಲವು ಕೇವಲ ಅವರೊಬ್ಬರ ರಾಜಕೀಯ ಭವಿಷ್ಯದ ಪ್ರಶ್ನೆಯಲ್ಲ. ರೆಡ್ಡಿ ಸಹೋದರರು ಹಾಗೂ ಅವರ ಹಿಂಬಾಲಕರ ಭವಿಷ್ಯವನ್ನೂ ಬರೆಯಲಿದೆ. ಶ್ರೀರಾಮುಲು ಗೆಲವಿನಲ್ಲಿ ಒಂದಿಷ್ಟು ಜನರ ಒಳಿತು ಅಡಗಿದೆ. ಶ್ರೀರಾಮುಲು ಗೆದ್ದು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇದರಿಂದಾಗಿ ಶ್ರೀರಾಮುಲು ಗೆಲವಿನ ಹಿಂದೆ ಶ್ರೀರಾಮುಲು ಒಳಿತಲ್ಲ, ಸಾಕಷ್ಟು ಜನರ ಒಳಿತು ರಾಜಕೀಯ ಭವಿಷ್ಯ ಅಡಗಿದೆ. ಶ್ರೀರಾಮುಲು ಗೆಲವು ಸಾಧಿಸಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಸಮಾಧಾನದ ನಿಟ್ಟುಸಿರು ಬಿಟ್ಟಾರು. ಜೈಲಿನಿಂದ ಹೊರಬರುವ ವಿಚಾರ ಒತ್ತಟ್ಟಿಗಿರಲಿ, ಒಂದಿಷ್ಟು ರಾಜಕೀಯ ಶಕ್ತಿ ಸಿಗುವುದಂತೂ ಖಂಡಿತ ಎಂದು ನಿರೀಕ್ಷಿಸಲಾಗಿದೆ.
ಗೆದ್ದರೆ ಅಸ್ತಿತ್ವ, ಸೋತರೆ ಅತಂತ್ರ: ಶ್ರೀರಾಮುಲು ಗೆಲ್ಲುವುದರಿಂದ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯುವ ಉಪ ಚುನಾವಣೆಯಲ್ಲೂ ತಮ್ಮ ಬಲ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿರುವುದರಿಂದ, ಲೋಕಸಭೆ ಚುನಾವಣೆಯಲ್ಲಿ ಅವರು ಸೋತರೂ, ಗ್ರಾಮೀಣ ಕ್ಷೇತ್ರಕ್ಕೆ ಉಪಚುನಾವಣೆ ನಿಶ್ಚಿತ. ಅಲ್ಲಿ, ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ, ಗೆದ್ದರೆ, ಅಲ್ಲಿಗೆ ಶ್ರೀರಾಮುಲು ರಾಜಕೀಯ ಭವಿಷ್ಯ ಮುಗಿದಂತೆಯೇ ಎಂದು ವಿಶ್ಲೇಷಿಸಲಾಗಿದೆ. ಹೀಗಾಗಿ, ಶ್ರೀರಾಮುಲುಗೆ ಈ ಗೆಲವು ಅನಿವಾರ್ಯ. ಗೆದ್ದರೆ ಅದೇ ದೊಡ್ಡ ಆಸರೆ.
ಬಂಧಿತರಿಗೆ ಮುಕ್ತಿ ಸಿಗುವುದೇ?: ಶ್ರೀರಾಮುಲು ಚುನಾವಣೆಯಲ್ಲಿ ಗೆದ್ದರೆ, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬಂದರೆ ಅಕ್ರಮ ಗಣಿಗಾರಿಕೆ ಆರೋಪದಿಂದ ಜೈಲಿಗೆ ಹೋಗಿರುವ ಜನಾರ್ದನ ರೆಡ್ಡಿ, ಬೇಲೆಕೇರಿ ಅದಿರು ಪ್ರಕರಣದ ಆರೋಪದಲ್ಲಿ ಬಂಧಿತರಾಗಿರುವ ಶಾಸಕರಾದ ಟಿ.ಎಚ್. ಸುರೇಶ್‌ಬಾಬು, ಬಿ. ನಾಗೇಂದ್ರ ಹಾಗೂ ಬಿ.ಎಸ್. ಆನಂದ್ ಸಿಂಗ್ ಅವರನ್ನು ಹೊರಗೆ ತರಲು ಶತಾಯ ಗತಾಯ ಪ್ರಯತ್ನಿಸುವ ಸಾಧ್ಯತೆ ಇದೆ. ಮೇ 16ರಂದು ಬಹಿರಂಗವಾಗುವ ಮತದಾರರ ತೀರ್ಪು ರೆಡ್ಡಿ ಸಾಮ್ರಾಜ್ಯ ಮತ್ತೆ ಶಕ್ತವಾಗಲು ಕಾರಣವಾಗುವುದೋ ಅಥವಾ ಅವರ ರಾಜಕೀಯ ಭವಿಷ್ಯದ ಮೇಲೆ ಕರಿನೆರಳು ಚಾಚುವುದೋ ಎಂಬ ಕುತೂಹಲ ಹೆಚ್ಚಿಸಿದೆ.

ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.