ತೆರೆಮರೆಯಲ್ಲಿ ದೇವದಾಸಿ ಪದ್ಧತಿ ಜೀವಂತ
ದಾವಣಗೆರೆ: ದೇವದಾಸಿ... ಹೀಗೆಂದಾಕ್ಷಣವೇ ಕಣ್ಣುಗಳ ಮುಂದೆ ಬರುವುದು ಇಂತಹ ಅನಿಷ್ಟ ಪದ್ಧತಿಗೆ ಬಲಿಯಾದ ಬಯಲು ಸೀಮೆಯ ಪರಿಶಿಷ್ಟ ಅಮಾಯಕ ಹೆಣ್ಣು ಮಕ್ಕಳ ದುಸ್ಥಿತಿ. ಈ ಪದ್ಧತಿಯನ್ನು ತಡೆಗಟ್ಟಲು ಸರ್ಕಾರ ಕಾಯ್ದೆ ಕಟ್ಟಳೆಗಳನ್ನು ಜಾರಿ ಮಾಡಿದ್ದರೂ ತೆರೆಮರೆಯಲ್ಲಿ ಇನ್ನೂ ಜೀವಂತವಾಗಿದೆ.
ದಾವಣಗೆರೆ, ಧಾರವಾಡ, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಕೊಪ್ಪಳ, ರಾಯಚೂರು, ಬೀದರ, ವಿಜಾಪುರ, ಕೊಪ್ಪಳ, ಗುಲ್ಬರ್ಗಾ ಜಿಲ್ಲೆಗಳಲ್ಲಿ ದೇವದಾಸಿ ಪದ್ಧತಿ ಆಚರಣೆಯಲ್ಲಿದೆ. ಈ ಅನಿಷ್ಟ ಆಚರಣೆ, ಪದ್ಧತಿ ಕದ್ದುಮುಚ್ಚಿ ನಡೆಯುತ್ತಲೇ ಇದೆ. ಹರಪನಹಳ್ಳಿ ತಾ. ಉಚ್ಚಂಗಿದುರ್ಗ, ಸವದತ್ತಿ ಯಲ್ಲಮ್ಮ, ಕೊಪ್ಪಳದ ಹುಲಿಗೆಮ್ಮ, ಮೈಲಾರ, ಚಂದ್ರಗುತ್ತಿ ಹೀಗೆ ನಾನಾಕಡೆ ಮುತ್ತು ಕಟ್ಟುವ ಆಚರಣೆ ಕದ್ದು ಮುಚ್ಚಿ ಸಾಗುತ್ತಲೇ ಇದೆ.
ಮುಂದುವರಿದ ಪದ್ಧತಿ: ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾ. ಉಚ್ಚಂಗಿದುರ್ಗ ಮಧ್ಯ ಕರ್ನಾಟಕದಲ್ಲಿ ದೇವದಾಸಿ, ಲೇಸಿ, ಬಸವಿ ಮುತ್ತು ಕಟ್ಟುವ ಶಕ್ತಿ ಕೇಂದ್ರವಾಗಿದೆ. ಹಿಂದೆಲ್ಲಾ ಉಚ್ಚೆಂಗೆಲ್ಲಮ್ಮ ದೇವಸ್ಥಾನದ ಅರ್ಚಕರೇ ಮುತ್ತು ಕಟ್ಟುವ ಪದ್ಧತಿ ಇತ್ತು. 'ಕನ್ನಡಪ್ರಭ'ದಲ್ಲಿ ಕೆಲ ವರ್ಷಗಳ ಹಿಂದೆ ಈ ಆಚರಣೆ ಬಗ್ಗೆ ವರದಿ ಮಾಡಿದ್ದರ ಪರಿಣಾಮ ಗಣನೀಯವಾಗಿ ಅದು ನಿಂತಿದೆ. ಆದರೆ, ಮುತ್ತು ಕಟ್ಟುವುದು ಮಾತ್ರ ಇಂದಿಗೂ ನಿಂತಿಲ್ಲ.
ಹುಣ್ಣಿಮೆ ದಿನ, ಮಂಗಳವಾರ, ಶುಕ್ರವಾರ ಮುತ್ತು ಕಟ್ಟುವ ಪದ್ಧತಿ ಈಗ ನಡೆಯುತ್ತಿಲ್ಲ. ಹರಕೆ ಮುತ್ತು, ಗರತಿ ಮುತ್ತು ಕಟ್ಟುವ ಆಚರಣೆ ಇದ್ದರೂ ದೇವದಾಸಿ ಮುತ್ತನ್ನು ಉಚ್ಚಂಗಿ ಬೆಟ್ಟದಲ್ಲಿ ಕಟ್ಟುತ್ತಿಲ್ಲ. ಬದಲಾಗಿ ಐವರು ದೇವದಾಸಿಯರ ಸಮ್ಮುಖದಲ್ಲಿಯೆ ಯುವತಿ, ಅಪ್ರಾಪ್ತೆಯರಿಗೆ ಕದ್ದುಮುಚ್ಚಿ ದೇವದಾಸಿ ಮುತ್ತು ಕಟ್ಟಿಸಲಾಗುತ್ತಿದೆ. ದೇವದಾಸಿಯ ಸಂಕಷ್ಟ ಅನುಭವಿಸಿದ ಮಹಿಳೆಯರು ಇಂತಹ ಪದ್ಧತಿಗೆ ಮತ್ತೊಬ್ಬರನ್ನು ತಳ್ಳಲು ಒಪ್ಪುತ್ತಿಲ್ಲವೆಂಬುದೇ ಸದ್ಯಕ್ಕೆ ಸಮಾಧಾನದ ಸಂಗತಿ.
ಸಂಸಾರಕ್ಕೆ ಮಾನ್ಯತೆ ಇಲ್ಲ: ಈ ಅನಿಷ್ಟ ಪದ್ಧತಿಗೆ ಬಲಿಯಾದ ಮಹಿಳೆ ಕನಸು, ಮನಸಿನಲ್ಲೂ ಗಂಡ, ಮಕ್ಕಳು, ಸಂಸಾರವೆಂಬ ಕನಸು ಕಾಣುವಂತಿಲ್ಲ. ಒಂದು ವೇಳೆ ಗಂಡ, ಮಕ್ಕಳಾದರೂ ಅದಕ್ಕೆ ಸಂಸಾರವೆಂಬ ಮಾನ್ಯತೆಯನ್ನು ಸಮಾಜ ನೀಡುತ್ತಿಲ್ಲ. ದೇವದಾಸಿಯರ ಜೊತೆಗೆ ಸಂಸಾರ ಮಾಡಿದ ವ್ಯಕ್ತಿಯಿಂದ ಮಕ್ಕಳ ಭಾಗ್ಯ ದೊರಕಿದರೂ, ಆ ಮಕ್ಕಳಿಗೆ ಶಾಲೆಗೆ ಸೇರಿಸುವಾಗ ಅರ್ಜಿ ಕಾಲಂನಲ್ಲಿ ತಂದೆ ಹೆಸರಿನ ಬದಲು ದೇವದಾಸಿ ತಾಯಿಯ ಹೆಸರನ್ನೇ ಬರೆಯಬೇಕಾದ ಸ್ಥಿತಿ ಇದೆ.
43 ಸಾವಿರ ದೇವದಾಸಿಯರು
ಸರ್ಕಾರಿ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ 43 ಸಾವಿರ ದೇವದಾಸಿಯರಿದ್ದಾರೆ. ಆದರೆ, ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಕಾರ್ಯದರ್ಶಿ ರೇಣುಕಮ್ಮ ಹರಪನಹಳ್ಳಿ ಹೇಳುವ ಪ್ರಕಾರ ಸುಮಾರು 80 ಸಾವಿರಕ್ಕಿಂತಲೂ ಹೆಚ್ಚು ದೇವದಾಸಿ ಮಹಿಳೆಯರಿದ್ದು ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ ಎನ್ನುತ್ತಾರೆ.
ನಾಗರಾಜ ಎಸ್. ಬಡದಾಳ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

