ಆರು ಹೊಸ ವೈದ್ಯ ಕಾಲೇಜು ಆರಂಭ ಅನಿಶ್ಚಿತ
ಕ.ಪ್ರ.ವಾರ್ತೆ ಬೆಂಗಳೂರು ಏ. 29
ರಾಜ್ಯದಲ್ಲಿ 2014-15ನೇ ಸಾಲಿನಲ್ಲಿ ಆರಂಭವಾಗಬೇಕಿದ್ದ ಆರು ಸರ್ಕಾರಿ ವೈದ್ಯ ಕಾಲೇಜುಗಳು ಪ್ರಾರಂಭವಾಗುವುದು ಅನಿಶ್ಚಿತವಾಗಿದೆ.
ಗುಲ್ಬರ್ಗ, ಗದಗ, ಕಾರವಾರ, ಮಡಿಕೇರಿ, ಚಾಮರಾಜನಗರ ಹಾಗೂ ಕೊಪ್ಪಳ ಜಿಲ್ಲಾ ಕೇಂದ್ರಗಳಲ್ಲಿ ವೈದ್ಯ ಕಾಲೇಜುಗಳು ಈ ಸಾಲಿನಿಂದಲೇ ಆರಂಭವಾಗಬೇಕಿತ್ತು. ಆದರೆ ನೇಮಕ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಮುಂದಿನ 15 ದಿನದಲ್ಲಿ ಎಂಸಿಐ ಪರಿವೀಕ್ಷಣೆಗೆ ಆಗಮಿಸಲಿದೆ. ನೇಮಕ ಪ್ರಕ್ರಿಯೆ ಪೂರ್ಣಗೊಳ್ಳದೆ ಈ ಕಾಲೇಜುಗಳ ಆರಂಭಕ್ಕೆ ಸಮ್ಮತಿ ಸಿಗುವುದಿಲ್ಲ. ಹೀಗಾಗಿ ಈ ವರ್ಷ 900 ಹೆಚ್ಚು ವೈದ್ಯ ಸೀಟುಗಳು ಲಭ್ಯವಾಗುವ ಆಶಯಕ್ಕೆ ತಣ್ಣೀರು ಬಿದ್ದಂತಾಗಿದೆ.
ರಾಜ್ಯದಲ್ಲಿ ಆರು ಹೊಸ ವೈದ್ಯ ಕಾಲೇಜುಗಳನ್ನು ಈ ಸಾಲಿನಲ್ಲೇ ಪ್ರಾರಂಭಿಸಲು ಸರ್ಕಾರ ಸಕಲ ಸಿದ್ಧತೆ ನಡೆಸಿತ್ತು. ಎಲ್ಲ ಕಾಲೇಜುಗಳಿಗೆ ತಲಾ 29 ಕೋಟಿ ಬಿಡುಗಡೆ ಮಾಡಿ ಕಟ್ಟಡ ನಿರ್ಮಾಣವನ್ನೂ ಆರಂಭಿಸಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾದ್ದರಿಂದ ನೇಮಕ ಪ್ರಕ್ರಿಯೆಯಲ್ಲಿ ತೊಡಕಾಯಿತು. ಅದಕ್ಕೂ ಆಯೋಗದಿಂದ ಅನುಮತಿ ಪಡೆದುಕೊಂಡು ಪ್ರಕ್ರಿಯೆ ನಡೆಸಲಾಯಿತಾದರೂ ನೇಮಕ ವಿಷಯದಲ್ಲಿ ಬಂದಿರುವ ಆಕ್ಷೇಪಗಳು ಹೆಚ್ಚಾಗಿವೆ. ಇವೆಲ್ಲವನ್ನೂ ಪರಿಹರಿಸಲು ಸಮಯ ಬೇಕಾಗುತ್ತದೆ. ಹೀಗಾಗಿ ಈ ವರ್ಷವೇ ಆರು ಹೊಸ ವೈದ್ಯ ಕಾಲೇಜುಗಳು ಆರಂಭವಾಗುತ್ತವೆ ಎಂಬ ಬಗ್ಗೆ 'ಐ ಆ್ಯಮ್ ನಾಟ್ ಶೂರ್' ಎಂದು ವೈದ್ಯ ಶಿಕ್ಷಣ ಖಾತೆ ರಾಜ್ಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.
ಆರು ಹೊಸ ವೈದ್ಯ ಕಾಲೇಜುಗಳನ್ನು ಈ ವರ್ಷವೇ ಆರಂಭ ಮಾಡಬೇಕೆಂಬುದು ನಮ್ಮ ಉದ್ದೇಶ. ಆದರೆ, ನೇಮಕ ಪ್ರಕ್ರಿಯೆ ವಿಳಂಬವಾಗಿದೆ. ಅದರಲ್ಲೂ ರೋಸ್ಟರ್ ಪದ್ಧತಿಯ ಹುದ್ದೆ ತುಂಬಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಇಲಾಖೆ ಅಥವಾ ಗುತ್ತಿಗೆ ಮೂಲಕ ಈ ಹುದ್ದೆಗಳಿಗೆ ನೇಮಕ ಮಾಡುವ ಪ್ರಯತ್ನವೂ ನಡೆಯುತ್ತಿದೆ. ಈ ಸಾಲಿನಲ್ಲೇ ಕಾಲೇಜುಗಳು ಆರಂಭವಾಗಲು ಎಲ್ಲ ರೀತಿಯ ಪ್ರಕ್ರಿಯೆಗಳನ್ನೂ ಮಾಡುತ್ತಿದ್ದೇವೆ ಎಂದು ನುಡಿದರು.
ರಾಜ್ಯ ಸರ್ಕಾರ ಈ ಸಾಲಿನ ಬಜೆಟ್ನಲ್ಲಿ ಇನ್ನೂ 6 ಹೊಸ ವೈದ್ಯ ಕಾಲೇಜುಗಳನ್ನು ಘೋಷಿಸಿದ್ದು, ಅದರ ಪ್ರಾರಂಭಿಕ ಪ್ರಕ್ರಿಯೆಯನ್ನು ಇಲಾಖೆ ಆರಂಭಿಸಿದೆ. ಯಾದಗಿರಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಅಗತ್ಯ ಭೂಮಿಗೆ ಸಮಸ್ಯೆ ಇದ್ದು, ಇದು ಡಿಸೆಂಬರ್ ವೇಳೆಗೆ ನಿವಾರಣೆಯಾಗುವ ಸಾಧ್ಯತೆ ಇದೆ. ಇನ್ನು, ತುಮಕೂರು, ಚಿತ್ರದುರ್ಗ, ಹಾವೇರಿ, ಬಾಗಲಕೋಟೆಯಲ್ಲಿ ಭೂಮಿಗೆ ತೊಂದರೆ ಇಲ್ಲ. ತಲಾ 20 ಎಕರೆ ಭೂಮಿ ಲಭ್ಯವಿದ್ದು, ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಕಾಲೇಜುಗಳು ಆರಂಭವಾಗುವ ಸಾಧ್ಯತೆ ಇದೆ ಎಂದರು.
ರಾಜ್ಯದಲ್ಲಿ ಐದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣವಾಗಲಿದ್ದು, ಇದರಲ್ಲಿ ಬೆಳಗಾವಿ ಹಾಗೂ ಹುಬ್ಬಳ್ಳಿಯ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ಹಣ ನೀಡಲಿದೆ. ಗುಲ್ಬರ್ಗ, ಮೈಸೂರು, ಹುಬ್ಬಳ್ಳಿ, ಬಳ್ಳಾರಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ತಲಾ 150 ಕೋಟಿ ಭರಿಸಲಿದೆ. ಇದಕ್ಕೆ ಹಣಕಾಸು ಇಲಾಖೆ ಸಮ್ಮತಿಯೂ ದೊರೆತಿದೆ. ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕಾರ್ಡಿಯಾಲಜಿ, ನೆಫ್ರೋಲಜಿ, ನ್ಯೂರೋಲಜಿ, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಉನ್ನತ ವ್ಯವಸ್ಥೆಗಳು ಲಭ್ಯವಾಗಲಿದೆ. ಬೀದರ್ ಹಾಗೂ ರಾಯಚೂರು ವೈದ್ಯ ಕಾಲೇಜುಗಳಿಗೆ ಶಾಶ್ವತ ಮಾನ್ಯತೆ ಲಭ್ಯವಾಗಿದೆ ಎಂದೂ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಸದ್ಯದಲ್ಲೇ ಪಿಜಿ ಕೌನ್ಸೆಲಿಂಗ್
ಸುಪ್ರೀಂಕೋರ್ಟ್ ಆದೇಶದಂತೆ ಡೀಮ್ಡ್ ವಿಶ್ವವಿದ್ಯಾಲಯದ ಶೇ.25ರಷ್ಟು ಸೀಟುಗಳು ಸೇರಿದಂತೆ ಎಲ್ಲ ಸ್ನಾತಕೋತ್ತರ ವೈದ್ಯಪದವಿ ಸೀಟುಗಳಿಗೆ ಸದ್ಯದಲ್ಲೇ ಕೌನ್ಸೆಲಿಂಗ್ ಅನ್ನು ಆನ್ಲೈನ್ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲಾಗುತ್ತದೆ. ಪಿಜಿ ಸೀಟುಗಳ ಸಂಬಂಧ ಖಾಸಗಿಯವರೊಂದಿಗೆ ಒಪ್ಪಂದವೂ ಆಗಿದ್ದು, ಇದಕ್ಕೆ ಅಗತ್ಯ ಆದೇಶವನ್ನು ಒಂದೆರಡು ದಿನಗಳಲ್ಲಿ ಹೊರಡಿಸಲಾಗುತ್ತದೆ. ಈವರೆಗೆ ನ್ಯಾಯಾಲಯದ ತಡೆಯಾಜ್ಞೆ ಇದ್ದುದ್ದರಿಂದ ಪ್ರಕ್ರಿಯೆ ಪ್ರಾರಂಭವಾಗಿರಲಿಲ್ಲ. ಇದೀಗ ಎಲ್ಲವೂ ಮುಕ್ತವಾಗಿದ್ದು, ಕೌನ್ಸೆಲಿಂಗ್ ಪ್ರಾರಂಭವಾಗಲಿದೆ.
- ಡಾ. ಶರಣಪ್ರಕಾಶ ಪಾಟೀಲ್, ವೈದ್ಯ ಶಿಕ್ಷಣ ಖಾತೆ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

