ಲೆವಿ ಬದಲು ಬತ್ತ ಮಿಲ್ ಮಾಡಿಕೊಡುವ ಯೋಜನೆಗೆ ಒತ್ತು
ಕ.ಪ್ರ.ವಾರ್ತೆ ಬೆಂಗಳೂರು ಏ.30
ರಾಜ್ಯದಲ್ಲಿ ಅಕ್ಕಿ ಗಿರಣಿಗಳಿಂದ ಲೆವಿ ಸಂಗ್ರಹಿಸುವ ಬದಲು ಭತ್ತ ಮಿಲ್ ಮಾಡಿಕೊಡುವ ಪ್ರಕ್ರಿಯೆಗೆ ಸರ್ಕಾರ ಹೆಚ್ಚು ಒತ್ತು ಕೊಡಲಿದೆ. ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತ ಕೂಡಲೇ ಕಾರ್ಯ ಆರಂಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಲೆವಿ ವ್ಯವಸ್ಥೆಯಲ್ಲಿ ಅಕ್ಕಿಯನ್ನು ಪಡೆದುಕೊಳ್ಳುವಲ್ಲಿ ಕಾನೂನು ಮಾನ್ಯತೆ ಇಲ್ಲ. ಇದಕ್ಕಾಗಿ ಕಾನೂನು ತಿದ್ದುಪಡಿ ಮಾಡಲಾಗುತ್ತಿದ್ದು, ಅದು ತಿದ್ದುಪಡಿಯಾದರೆ ನಮಗೆ ಅಗತ್ಯಕ್ಕೆ ತಕ್ಕ ಪ್ರಮಾಣದಲ್ಲಿ ಅಕ್ಕಿಯನ್ನು ಲೆವಿ ಮೂಲಕ ಪಡೆದುಕೊಳ್ಳಬಹುದು. ಆದರೆ, ಲೆವಿಯ ಬದಲು ನಮಗೆ ಗಿರಣಿಯವರು ಭತ್ತ ಮಿಲ್ ಮಾಡಿಕೊಟ್ಟರೆ ನಮಗೆ ಹೆಚ್ಚು ಉಪಯೋಗ ಎಂದು ಬುಧವಾರ ತಿಳಿಸಿದರು.
ಅನ್ನಭಾಗ್ಯ ಯೋಜನೆಯ ಅಕ್ಕಿ ಬೇರೆಡೆ ಹರಿದಾಡುತ್ತಿರುವುದು ನಿಜ. ಬಹಳಷ್ಟು ಗಿರಣಿಗಳಲ್ಲಿ ಸೋನಾ ಮಸೂರಿ ಅಕ್ಕಿ ಇರುವುದರಿಂದ ಅದನ್ನು ಅವರು ಲೆವಿ ಮೂಲಕ ನೀಡಲು ಇಷ್ಟಪಡುವುದಿಲ್ಲ. ಹೀಗಾಗಿ, ಅನ್ನಭಾಗ್ಯ ಯೋಜನೆಯಲ್ಲೇ ಅವರಿಗೆ ಲಭ್ಯವಾಗುವ ಅಕ್ಕಿಯನ್ನು ನಮಗೆ ಕೊಡುವ ಸಾಧ್ಯತೆಗಳೂ ಇವೆ. ಇದರಿಂದ ಸರ್ಕಾರಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ. ಅದರ ಬದಲು ಭತ್ತ ಮಿಲ್ ಮಾಡಿಕೊಡುವುದು ಕಡ್ಡಾಯವಾದರೆ ಅನುಕೂಲ ಎಂದರು.
ಭತ್ತವನ್ನು 1800 ಬೆಂಬಲ ಬೆಲೆಯಲ್ಲಿ ರೈತರಿಂದ ಭತ್ತ ಖರೀದಿ ಮಾಡಲಾಗಿದ್ದು, ಪ್ರಸ್ತುತ 2.38 ಲಕ್ಷ ಮೆಟ್ರಿಕ್ಟನ್ ಭತ್ತ ನಮ್ಮ ಬಳಿ ಇದೆ. ಆದ್ದರಿಂದ ಕೇಂದ್ರ ಸರ್ಕಾರಕ್ಕೆ ನಾವು ಸಲ್ಲಿಸಿರುವ ಪ್ರಸ್ತಾವಕ್ಕೆ ಒಪ್ಪಿಗೆ ದೊರೆತರೆ, ಅಕ್ಕಿ ಗಿರಣಿಯವರು ಕಡ್ಡಾಯವಾಗಿ ನಾವು ಕೊಡುವ ಭತ್ತವನ್ನು ಮಿಲ್ ಮಾಡಿಕೊಡಬೇಕು.
ಅದಕ್ಕೆ ವೆಚ್ಚವನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸಲಿದೆ. ಈ ವ್ಯವಸ್ಥೆ ಛತ್ತೀಸ್ಗಡದಲ್ಲಿ ಇದೆ. ಅದನ್ನೇ ಇಲ್ಲಿಯೂ ಜಾರಿಗೆ ಕೇಂದ್ರದ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅದಕ್ಕೆ ಸಮ್ಮತಿ ಲಭಿಸಲಿದೆ ಎಂದರು.
ಭತ್ತವನ್ನು ಅಲ್ಲಿನ ಗಿರಣಿಗಳಲ್ಲೇ ಮಿಲ್ ಮಾಡಿಸುವುದರಿಂದ ಜಿಲ್ಲಾ ಕೇಂದ್ರಕ್ಕೆ ಸಾಗಣೆ ಮಾಡುವುದು ಸುಲಭ. ಸಾಗಣೆ ವೆಚ್ಚವೂ ಉಳಿಯುತ್ತದೆ. ಆದ್ದರಿಂದ ಭತ್ತ ಖರೀದಿಸುವ ಸುತ್ತಮುತ್ತಲಿನ ಪ್ರದೇಶದಲ್ಲೇ ಮಿಲ್ ಮಾಡಿಸುವ ಯೋಜನೆ ಸಿದ್ಧವಾಗುತ್ತಿದೆ ಎಂದರು.
ಜೋಳ, ರಾಗಿಯನ್ನು ಪಡಿತರ ವ್ಯವಸ್ಥೆಯಲ್ಲಿ ನೀಡಲಾಗುತ್ತಿದೆ. ಇದನ್ನು ನೇರವಾಗಿ ರೈತರಿಂದಲೇ ಖರೀದಿ ಮಾಡಲಾಗುತ್ತದೆ. ಇದೇ ವರ್ಷದಿಂದ ಬಿತ್ತನೆಗೆ ಮುನ್ನವೇ ಜೋಳ ಹಾಗೂ ರಾಗಿಗೆ ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರ ಘೋಷಿಸಲಿದೆ. ಇದರಿಂದ ರೈತರಿಗೆ ಭರವಸೆ ಲಭಿಸಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬೆಳೆಯನ್ನೂ ಬೆಳೆಯಲಿದ್ದಾರೆ. ಈ ಮೂಲಕ, ಅಕ್ಕಿಗಿಂತ ಹೆಚ್ಚು ಪೌಷ್ಟಿಕಕವಾದ ರಾಗಿ, ಜೋಳದ ಬೆಳೆ ಪ್ರೋತ್ಸಾಹಿಸಲಾಗುತ್ತದೆ. ರೇಷನ್ ಕಾರ್ಡ್ಗಳಲ್ಲಿ ಬೋಗಸ್ ಹಾಗೂ 'ಘೋಸ್ಟ್' ಕಾರ್ಡ್ಗಳನ್ನು ಪತ್ತೆ ಹಚ್ಚಲು ಹೊಸ ವಿಧಾನ ಅನುಸರಿಸಲು ಯೋಜಿಸಲಾಗುತ್ತಿದೆ. ಈ ಯೋಜನೆಯನ್ನು ಸದ್ಯದಲ್ಲಿಯೇ ಜಾರಿಗೆ ತರಲಾಗುತ್ತದೆ ಎಂದು ತಿಳಿಸಿದರು.
ನಗರ-ಪಟ್ಟಣದ ಬಡವರಿಗೆ ಊಟಭಾಗ್ಯ
ರಾಜ್ಯದ ನಗರ-ಪಟ್ಟಣ ಪ್ರದೇಶಗಳಲ್ಲಿ ಬಡವರಿಗೆ ಕೈಗೆಟಕುವ ದರದಲ್ಲಿ ಮಧ್ಯಾಹ್ನದ ಊಟ ಒದಗಿಸುವ ಹಿನ್ನೆಲೆಯಲ್ಲಿ 'ಅನ್ನಭಾಗ್ಯ' ಹೆಸರಿನಲ್ಲೇ ಹೊಟೇಲ್ ಅಥವಾ ಕ್ಯಾಂಟೀನ್ ಆರಂಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ತಮಿಳುನಾಡಿನ ಅಮ್ಮ ಕ್ಯಾಂಟೀನ್ಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಸಿದ್ದೂಸ್ ಕ್ಯಾಂಟೀನ್ ಎಂಬ ಹೆಸರನ್ನೂ ನಾವು ಯೋಜಿಸಿಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ. ಆದರೆ, ಅತಿಕಡಿಮೆ ಬೆಲೆಯಲ್ಲಿ ಹೊಟೇಲ್ ಆರಂಭಿಸುವುದಂತೂ ಖಾತರಿ. ಇದಕ್ಕೇ ಈಗಾಗಲೇ ಜನಪ್ರಿಯವಾಗಿರುವ ಅನ್ನಭಾಗ್ಯದ ಹೆಸರನ್ನೇ ಇಡುವ ಆಲೋಚನೆ ಇದೆ ಎಂದು ಸುದ್ದಿಗಾರರಿಗೆ ಬುಧವಾರ ಹೇಳಿದರು.
ಬೆಂಗಳೂರು ಅಥವಾ ಮೈಸೂರಿನಲ್ಲಿ ಪ್ರಾಯೋಗಿಕವಾಗಿ ಈ ಹೊಟೇಲ್ ಆರಂಭಿಸಲಾಗುವುದು. ಈ ಯೋಜನೆ ಇನ್ನೂ ತಯಾರಿಕೆ ಹಂತದಲ್ಲಿದೆ. ಇನ್ನೊಂದು ತಿಂಗಳಲ್ಲಿ ಪ್ರಾಯೋಗಿಕ ಹೊಟೇಲ್ ಕಾರ್ಯಾರಂಭಿಸಲಿದೆ. ಬಡವರು ಹಾಗೂ ವಲಸಿಗರನ್ನು ಕೇಂದ್ರೀಕರಿಸಲಾಗಿದ್ದು, ಬಸ್ ನಿಲ್ದಾಣ, ರೈಲು ನಿಲ್ದಾಣ, ಆಸ್ಪತ್ರೆಗಳಲ್ಲಿ ಈ ಹೊಟೇಲ್ ತೆರೆಯಲಾಗುತ್ತದೆ ಎಂದರು. ಕಡಿಮೆ ದರದಲ್ಲಿ ಮಧ್ಯಾಹ್ನದ ಊಟ ನೀಡುವ ಯೋಜನೆ ಇದಾಗಿದ್ದು, ಆಹಾರ ಇಲಾಖೆಯೇ ಇದನ್ನು ನಿರ್ವಹಣೆ ಮಾಡಲಿದೆ. ಇಸ್ಕಾನ್ನೊಂದಿಗೂ ಸಹಯೋಗಕ್ಕಾಗಿ ಮಾತುಕತೆ ನಡೆಸಲಾಗುತ್ತಿದೆ. ಇದಲ್ಲದೆ ಇತರರೊಂದಿಗೂ ಚರ್ಚಿಸಲಾಗುತ್ತದೆ. ಯಾವುದು ಉತ್ತಮವೋ ಅದನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

