ಪ್ರಧಾನ ಸುದ್ದಿ

ಅಯ್ಯೋ, ಮಹದೇವ ಇದೆಂಥಾ ಲೋಕಕಲ್ಯಾಣ?

ಅಯ್ಯೋ, ಮಹದೇವ ಇದೆಂಥಾ ಲೋಕಕಲ್ಯಾಣ?
Published On :

ಕನ್ನಡಪ್ರಭ ವಾರ್ತೆ  ಬೆಂಗಳೂರು  ಏ 30
ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಬಂಗಲೆ ನವೀಕರಣಕ್ಕೆ ಕಾಂಗ್ರೆಸ್ ವರಿಷ್ಠರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ಬಿಜೆಪಿಯೂ ಆಗ್ರಹಿಸಿದೆ.
2.5 ಕೋಟಿ ವೆಚ್ಚದಲ್ಲಿ ಸಚಿವರು ಸರ್ಕಾರಿ ಬಂಗಲೆ ನವೀಕರಿಸಿರುವ ವಿಚಾರ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್‌ನ ಒಂದು ವರ್ಗ ಈ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ರವಾನಿಸಿತ್ತು. ದೇಶಾದ್ಯಂತ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ಮೂಡುತ್ತಿರುವಾಗ ಇಂಥ ದುಂದು ಸರಿಯಲ್ಲ ಎಂಬ ಅಭಿಪ್ರಾಯ ಪಕ್ಷದ ಆಂತರಿಕ ವಲಯದಲ್ಲಿ ಮೂಡಿದೆ.
ಕಾಂಗ್ರೆಸ್ ಶಾಸಕರಿಂದಲೂ ವಿರೋಧ ವ್ಯಕ್ತವಾಗಿದೆ. ರಾಜ್ಯದ 130 ತಾಲೂಕುಗಳಲ್ಲಿ ಬರ ಇದೆ. ರೈತರ ಬೆಳೆ ಖರೀದಿಗೆ ಹಣವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೋಟ್ಯಂತರ ವೆಚ್ಚ ಮಾಡಿ ಬಂಗಲೆ ನವೀಕರಣ ಅಗತ್ಯವಿತ್ತೇ ಎಂಬ ಪ್ರಶ್ನೆ ಎತ್ತಿದ್ದಾರೆ.
ಸಚಿವರ ಮನೆ ನವೀಕರಣದ ವೆಚ್ಚದಲ್ಲಿ 225 ಆಶ್ರಯ ಮನೆಗೆ ಅನುದಾನ ಬಿಡುಗಡೆ ಮಾಡಬಹುದಿತ್ತು. ಸಾರ್ವಜನಿಕ ವಸತಿ ಕಾರ್ಯಕ್ರಮಕ್ಕೆ ಹಣ ಬಿಡುಗಡೆಯಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕೆ ಸುಮ್ಮನಿದ್ದಾರೆ? ಎಂಬ ಪ್ರಶ್ನೆ ಮುಖಂಡರನ್ನು ಕಾಡುತ್ತಿದೆ.
ಬಿಜೆಪಿ ಆಗ್ರಹ: ಈ ನಡುವೆ ಪ್ರಕರಣ ಸಂಬಂಧ ಸರ್ಕಾರ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. 'ನಾನು ಸಚಿವನಾಗಿದ್ದ ಸಂದರ್ಭದಲ್ಲಿ ನನ್ನ ಬಂಗಲೆಯ ನವೀಕರಿಸಿದ್ದರು. ಆಗ ಅಧಿಕಾರಿಗಳು 17 ಲಕ್ಷ ಬಿಲ್ ಮಾಡಿದ್ದರು. ಅಷ್ಟು ಖರ್ಚಾಗಿರುವ ಸಾಧ್ಯತೆ ಇಲ್ಲ ಎಂಬ ಕಾರಣಕ್ಕೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದೆ. ಲೋಕೋಪಯೋಗಿ ಸಚಿವರೂ ನವೀಕರಣ ವಿವಾದದ ಬಗ್ಗೆ ತನಿಖೆಗೆ ಆಗ್ರಹಿಸಲಿ' ಎಂದು ಮಾಜಿ ಸಚಿವ ಸುರೇಶ್‌ಕುಮಾರ್ ಸವಾಲೆಸೆದರು.
ಈ ಮನೆಯಲ್ಲಿ ಹಿಂದೆ ಸಿದ್ದರಾಮಯ್ಯ ನೆಲೆಸಿದ್ದರು. ವಿಧಾನಸೌಧದಲ್ಲಿ ಆಂಜನೇಯ, ಸರ್ಕಾರಿ ನಿವಾಸದಲ್ಲಿ ಮಹದೇವಪ್ಪ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಆದರೆ ಸಿಎಂ ಇವರಿಬ್ಬರು ತಮ್ಮ ಬೆಂಬಲಿಗರು ಎಂಬ ಕಾರಣಕ್ಕೆ ಸುಮ್ಮನಿದ್ದಾರೆ ಎಂದು ಬಿಜೆಪಿ ಮಾಧ್ಯಮ ವಿಭಾಗದ ಮುಖ್ಯಸ್ಥ ಎಸ್.ಪ್ರಕಾಶ್ ಟೀಕಿಸಿದ್ದಾರೆ.
'ತಬ್ಬಲಿ ಮಗು ಎದುರು ತನ್ನ ಮಗುವನ್ನು ಮುದ್ದಿಸಬಾರದು' ಎಂಬ ಗಾದೆ ಇದೆ. ರಾಜ್ಯ ಬರ, ನೀರಿನ ಸಮಸ್ಯೆಯಿಂದ ತತ್ತರಿಸುತ್ತಿರುವಾಗ ಸಚಿವರು ಬಂಗಲೆ ನವೀಕರಣಕ್ಕೆ ಕೋಟ್ಯಂತರ ರುಪಾಯಿ ಸುರಿದಿರುವುದು ಸರಿಯಲ್ಲ.
-ಸುರೇಶ್‌ಕುಮಾರ್, ಮಾಜಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.