ಪ್ರಧಾನ ಸುದ್ದಿ

ಎಲ್ಲರೂ ಒಗ್ಗೂಡಿ ಬೆಂಗಳೂರನ್ನು ಮಕ್ಕಳಿಗೆ ಸುರಕ್ಷಿತ ನಗರವಾಗಿಸೋಣ

ಎಲ್ಲರೂ ಒಗ್ಗೂಡಿ ಬೆಂಗಳೂರನ್ನು ಮಕ್ಕಳಿಗೆ ಸುರಕ್ಷಿತ ನಗರವಾಗಿಸೋಣ
Published On :

-ನಾವೆಲ್ಲ ಒಗ್ಗೂಡಿ ನಮ್ಮ ಬೆಂಗಳೂರನ್ನು ಮಕ್ಕಳಿಗೆ ಸುರಕ್ಷಿತ ನಗರವನ್ನಾಗಿಸೋಣ
-ಶಿಶುಕಾಮಿಗಳಿಗೆ ಕಠಿಣ ಸಂದೇಶ ರವಾನಿಸೋಣ: ಸಲಹೆ
ಬೆಂಗಳೂರು:
ರಾಜ್ಯ ಸರ್ಕಾರವಷ್ಟೇ ಅಲ್ಲ, ನಾಗರಿಕರಾದ ನಾವು ಕೂಡ ಮಕ್ಕಳ ಭದ್ರತೆ ವಿಷಯದಲ್ಲಿ ವಿಫಲರಾಗಿದ್ದೇವೆ ಎಂದು ರಾಜ್ಯಸಭಾ ಸದಸ್ಯ, ಉದ್ಯಮಿ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಎಲ್ಲ ಒಗ್ಗೂಡಿ ಬೆಂಗಳೂರನ್ನು ಮಕ್ಕಳಿಗೆ ಸುರಕ್ಷಿತ ನಗರವನ್ನಾಗಿ ಮಾರ್ಪಡಿಸೋಣ ಎಂದಿದ್ದಾರೆ.
ಮಕ್ಕಳ ವಿಚಾರದಲ್ಲಿನ ವೈಫಲ್ಯ ಇಲ್ಲಿಗೇ ನಿಲ್ಲಬೇಕು. ಮಕ್ಕಳ ಮೇಲೆ ನಡೆದ ಅಪರಾಧಗಳ ಎಲ್ಲ ಪ್ರಕರಣಗಳಲ್ಲಿ ತುರ್ತಾಗಿ ಸೂಕ್ತ, ಸಕಾಲಿಕ ಮತ್ತು ಸಮರ್ಪಕ ತನಿಖೆ ನಡೆಸಿ, ಅಂಥವುಗಳನ್ನು ಸ್ವಲ್ಪವೂ ಸಹಿಸಿಕೊಳ್ಳುವುದಿಲ್ಲ ಎಂಬ ಕಠಿಣ ಸಂದೇಶವನ್ನು ದುರುಳ ಅಪರಾಧಿಗಳಿಗೆ, ಶಿಶುಕಾಮಿಗಳಿಗೆ ನೀಡಬೇಕು.ಮಕ್ಕಳ ರಕ್ಷಣೆ, ಪೋಷಣೆ ಮತ್ತು ಹೊಣೆ ಸಮಾಜದ ಆದ್ಯ ಕರ್ತವ್ಯವೂ ಹೌದು. ಹೀಗಿರುವಾಗ, ಅವರ ವಿರುದ್ಧ ಮೇಲಿಂದ ಮೇಲೆ ದೌರ್ಜನ್ಯಗಳು, ಅಪರಾಧಗಳು, ಅತ್ಯಾಚಾರಗಳಂಥ ದುಷ್ಕೃತ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಲೇ ಇದ್ದರೆ, ಸರ್ಕಾರ ಮತ್ತು ಬೆಂಗಳೂರಿನ ನಾಗರಿಕರು, ಮಕ್ಕಳ ಸುರಕ್ಷತೆಯೆಡೆಗಿನ ನಮ್ಮ ದಾಯಿತ್ವವನ್ನು ನಿರ್ವಹಿಸುವಲ್ಲಿ ಪದೇಪದೆ ವಿಫಲರಾಗಿದ್ದೇವೆ ಎಂದು ಒಪ್ಪಿಕೊಳ್ಳಲೇಬೇಕು.
ವಿಬ್‌ಗ್ಯೊರ್ ಶಾಲೆಯಲ್ಲಿ 6 ವರ್ಷದ ಮಗುವಿನ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ, ದುಷ್ಕರ್ಮಿಗಳ ವಿರುದ್ಧ ಸರ್ಕಾರ ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಕ್ರಮತೆಗೆದುಕೊಳ್ಳಲು ವಿಫಲವಾಗಿದ್ದು ಮತ್ತು ನಂತರದಲ್ಲಿ ಆರೋಪಿಗಳಿಗೆ ಸಂಬಂಧಿಸಿ ಪೊಲೀಸರ ಗೊಂದಲಮಯ ಹೇಳಿಕೆಗಳು ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನೇ ನಲುಗಿಸಿದೆ.
ಆರೋಪಿಗಳ ಮೇಲೆ ಚಾರ್ಜ್‌ಶೀಟ್ ದಾಖಲಾಗಿರುವಾಗ, ಆ ಭೀಕರ ಪ್ರಕರಣದ ಜವಾಬ್ದಾರಿಯನ್ನು ಹೊರಬೇಕಾದ ಶಾಲಾ ಆಡಳಿತ ಮಂಡಳಿಯನ್ನು ಏಕೆ ಉತ್ತರದಾಯಿಯನ್ನಾಗಿಸಿಲ್ಲ? ಶಾಲಾವಧಿಯಲ್ಲಿ ಮಕ್ಕಳ ಸುರಕ್ಷೆ, ಶಾಲಾ ಆಡಳಿತ ಮಂಡಳಿ ಹೊಣೆ ಎಂಬು ದನ್ನು ತುಂಬಾ ಸ್ಪಷ್ಟವಾಗಿ, ಮೊನ್ನೆ ತಂಜಾವೂರು ಶಾಲಾ ದುರಂತದ ತೀರ್ಪಿನಲ್ಲಿ ನ್ಯಾಯಾಲಯವೂ ಹೇಳಿದೆ.

ಶಾಲಾ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯೇ ಶಾಲೆಯಲ್ಲಿ ನಡೆಯುವ ಅಪರಾಧ ಕೃತ್ಯಗಳಿಗೆ ಹೊಣೆಗಾರರು ಎಂಬುದಕ್ಕೆ ಬಹಳ ಸ್ಪಷ್ಟವಾಗಿ ಕಾನೂನು ಊರ್ಜಿತತೆಯನ್ನು ಈ ತೀರ್ಪು ನೀಡಿದೆ. ಈ ಇಂಗಿತವನ್ನು ಬೆಂಗಳೂರು ಪೊಲೀಸರು ಅರ್ಥ ಮಾಡಿಕೊಂಡು, ವಿಬ್ಗಯಾರ್ ಪ್ರಕರಣದಲ್ಲಿ ಕೂಡ, ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ತಪ್ಪಿಸಿಕೊಳ್ಳದಂತೆ, ಶಾಲಾ ಆವರಣದಲ್ಲಿ ನಡೆದ ಅಪರಾಧ ಕೃತ್ಯಕ್ಕೆ ಹೊಣೆಗಾರರನ್ನಾಗಿಸಬೇಕು.
ಶಾಲಾ ಆವರಣದಲ್ಲಿ ಒಂದು ಹೀನಾಯ ಅಪರಾಧ ನಡೆದು 15 ದಿನ ಕಳೆದರೂ ಪ್ರಿನ್ಸಿಪಾಲರ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲವೆಂದರೆ ಅದು ನಾಚಿಕೆಗೇಡಿನ ಸಂಗತಿಯಲ್ಲವೆ? ಅಪರಾಧ ಕೃತ್ಯದ ಬಗ್ಗೆ ಪ್ರಿನ್ಸಿಪಾಲರನ್ನು ಪೊಲೀಸರು ಪ್ರಶ್ನಿಸುವುದಾಗಲಿ, ಅವರ ವಿರುದ್ಧ ಕೇಸು ದಾಖಲಿಸುವುದಾಗಲಿ ನಡೆದಿಲ್ಲ.
ನನಗೆ ಮತ್ತು ಬೆಂಗಳೂರಿನ ಬಹಳಷ್ಟು ನಾಗರಿಕರಿಗೆ ಬೆಂಗಳೂರು ಪೊಲೀಸರ ಮೇಲೆ ಇನ್ನೂ ವಿಶ್ವಾಸವಿದೆ. ನಮ್ಮ ವಿಶ್ವಾಸಕ್ಕೆ ಕುಂದು ಬರದ ರೀತಿಯಲ್ಲಿ ಈ ಪ್ರಕರಣದ ಸಮಗ್ರ ಸಮರ್ಪಕ ತನಿಖೆ ನಡೆಸಿ ಶೀಘ್ರವಾಗಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಪ್ಪಿಸಬೇಕೆಂದು ನಾನು ತನಿಖಾಧಿಕಾರಿಯನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ ರಾಜೀವ್ ಚಂದ್ರಶೇಖರ್.
ಶಿಕ್ಷಣ ಸಚಿವರು ಉತ್ತರಿಸಲಿ: ಮಕ್ಕಳ ಸುರಕ್ಷತೆಗೆ ಏನು ಕ್ರಮ ತೆಗೆದುಕೊಳ್ಳಲಾಗಿತ್ತ್ತು ಮತ್ತು ಮುಂದೆ ಏನು ಕ್ರಮತೆಗೆದುಕೊಳ್ಳಲಾಗುವುದು ಎಂಬುದನ್ನು ನಮ್ಮ ಶಿಕ್ಷಣ ಮಂತ್ರಿಗಳೂ ಜನರಿಗೆ ಹೇಳಬೇಕು. ಸರ್ಕಾರಿ ಶಾಲೆಗಳೂ ಸೇರಿದಂತೆ ಶಾಲೆಗಳಲ್ಲಿ ಅಳವಡಿಸಿಕೊಳ್ಳಲಾದ ಹೊಸ ಸುರಕ್ಷತಾ ನಿಯಮಗಳು ಯಾವುವು? ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಲಯ ಶಿಕ್ಷಣಾಧಿಕಾರಿ ಏನೇನು ಕ್ರಮಕೈಗೊಂಡಿದ್ದಾರೆ? ಇನ್ನೊಮ್ಮೆ ಇಂಥ ದುರ್ಘಟನೆಗಳು
ಮರುಕಳಿಸದಿರಲು ಮತ್ತು ನಗರ ಹಾಗು ಶಾಲೆಗಳು ನಮ್ಮ ಮಕ್ಕಳಿಗೆ ಸುರಕ್ಷಿತವಾಗಿವೆ ಎಂಬುದನ್ನು ಖಚಿತಪಡಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು ಎಂಬುದನ್ನು ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ರಾಜ್ಯದ ನಾಗರಿಕರಿಗೆ ತಿಳಿಸಬೇಕು. ಶಾಲಾ ಅವಧಿಯಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರೆ ಹೆಣಗಾಡಬೇಕೊ? ಅಥವಾ ಶಿಕ್ಷಣ ಸಂಸ್ಥೆಗಳಿಗೆ ಅದರ ಜವಾಬ್ದಾರಿ ಇದೆಯೋ, ಇದ್ದಲ್ಲಿ ಅದನ್ನು ಖಚಿತಪಡಿಸಲು ಸರ್ಕಾರ ಏನು ಕ್ರಮತೆಗೆದುಕೊಳ್ಳುತ್ತಿದೆ? ಇಡೀ ರಾಜ್ಯದಲ್ಲಿ ಮಕ್ಕಳ ವಿರುದ್ಧದ ಅಪರಾಧ ಕೃತ್ಯಗಳನ್ನು  ಕಿಂಚಿತ್ತೂ ಸಹಿಸಿಕೊಳ್ಳಲಾಗುವುದಿಲ್ಲ ಎಂಬ ಕಠಿಣ ಸಂದೇಶವನ್ನು ಅಪರಾಧಿಗಳಿಗೆ ಮತ್ತು ಶಿಶುಕಾಮಿಗಳಿಗೆ ಸರ್ಕಾರ ರವಾನಿಸಬೇಕು.
ಇನ್ನು ತಡಮಾಡದೆ, ಈ ಕೆಲಸವನ್ನು ಕರ್ನಾಟಕ ಸರ್ಕಾರ ಆದಷ್ಟು ಶೀಘ್ರದಲ್ಲಿ ಮಾಡಬೇಕು ಎಂದು ರಾಜೀವ್ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.