ಪ್ರಧಾನ ಸುದ್ದಿ

ಕೊಳವೆ ಬಾವಿಗೆ ಬಿದ್ದ ಮತ್ತೊಬ್ಬ ಬಾಲಕ, ಅನಾಹುತಗಳಿಂದ ಪಾಠ ಕಲಿಯದ ಆಡಳಿತ

ಕೊಳವೆ ಬಾವಿಗೆ ಬಿದ್ದ ಮತ್ತೊಬ್ಬ ಬಾಲಕ, ಅನಾಹುತಗಳಿಂದ ಪಾಠ ಕಲಿಯದ ಆಡಳಿತ
Published On :

ಬಾಗಲಕೋಟೆ: ಅನಾಹುತಗಳಿಂದಲೂ ಆಡಳಿತಗಳು ಪಾಠ ಕಲಿಯುವುದಿಲ್ಲ ಎನ್ನುವುದಕ್ಕೆ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿರುವ ಮತ್ತೊಂದು ಕೊಳವೆ ಬಾವಿ ಅಚಾತುರ್ಯವೇ ಸಾಕ್ಷಿ. 6 ವರ್ಷದ ತಿಮ್ಮಣ್ಣ ಹನುಮಂತ ಹಟ್ಟಿ,  ಅವನ ಕುಟುಂಬಕ್ಕೇ ಸೇರಿದ ಹೊಲದಲ್ಲಿದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ದೊಡ್ಡಪ್ಪನ ಮಗನಿಗೆ ಕಬ್ಬಿನ ಗದ್ದೆ ತೋರಿಸಲು ಹೋಗಿದ್ದ ತಿಮ್ಮಣ್ಣ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದ್ದು, ಸುಮಾರು 160 ಅಡಿ ಆಳದಲ್ಲಿ ಸಿಲುಕಿದ್ದಾನೆ ಎಂದು ಶಂಕಿಸಲಾಗಿದೆ. ಬಾದಾಮಿ ತಾಲೂಕಿನ ಸೂಳೀಕೇರಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ದುರ್ಘಟನೆ ನಡೆದಿದೆ.  
ಹದಿನೈದು ದಿನದ ಹಿಂದೆ ಕೊರೆದಿದ್ದ ವಿಫಲ ಕೊಳವೆ ಬಾವಿ ಕಾಣುತ್ತಿದ್ದಂತೆ 'ನೋಡಣ್ಣ, ಬೋರ್ ಫೇಲ್ ಆಗಿದೆ' ಎಂದು ತೋರಿಸುತ್ತ ಹತ್ತಿರ ಹೋಗಿದ್ದಾನೆ. ಕ್ಷಣಾರ್ಧದಲ್ಲಿ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದ್ದಾನೆ. ಹೌಹಾರಿದ ದೊಡ್ಡಪ್ಪನ ಮಗ ಆನಂದ ಕೊಳವೆ ಬಾವಿ ಹತ್ತಿರ ಹೋಗಿ 'ತಿಮ್ಮಣ್ಣ' ಅಂತ ಹೆಸರು ಹಿಡಿದು ಕೂಗಿದ್ದು ಅದಕ್ಕೆ ಸ್ಪಂದಿಸಿದ್ದಾನೆ. ತಕ್ಷಣವೇ ಗ್ರಾಮಕ್ಕೆ ತೆರಳಿ ಮನೆಗೆ ವಿಷಯ ಮುಟ್ಟಿಸಿದ್ದಾನೆ.
ಸುದ್ದಿ ಜಿಲ್ಲಾಡಳಿತಕ್ಕೆ ತಲುಪಿ ಒಂದು ಗಂಟೆಯೊಳಗೆ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಜಿಲ್ಲಾಧಿಕಾರಿ ಮೇಘಣ್ಣವರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್, ಶಾಸಕರಾದ ಎಚ್.ವೈ.ಮೇಟಿ,ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನೇತೃತ್ವ ವಹಿಸಿದರು.

ತ್ವರಿತ ಕಾರ್ಯಾಚರಣೆ
ಅವಘಡ ನಡೆದ ಸ್ಥಳ ಬಾಗಲಕೋಟೆಯಿಂದ ಕೇವಲ 13 ಕಿ.ಮೀ ಇದ್ದುದರಿಂದ ರಕ್ಷಣಾ ಕಾರ್ಯಾಚರಣೆ ತುರ್ತಾಗಿ ಆರಂಭವಾಗಿದೆ. ವೈದ್ಯ ತಂಡ ಸ್ಥಳಕ್ಕೆ ಧಾವಿಸಿ ಕೊಳವೆ ಮೂಲಕ ಆಮ್ಲಜನಕ ಪೂರೈಸಿತು. ಆಮ್ಲಜನಕದ ಕೊಳವೆ ಸುಮಾರು 160 ಅಡಿ ಆಳಕ್ಕೆ ಹೋದಾಗ ಬಾಲಕ ಪೈಪುಗಳ ಹಿಡಿದಿದ್ದದ್ದರಿಂದ ಅದು ತುಂಡಾಗಿದೆ. ತಕ್ಷಣ ಪೊಲೀಸರು ಹಗ್ಗ ಬಿಟ್ಟಾಗ ಬಾಲಕ ಹಿಡಿದುಕೊಂಡಿದ್ದಾನೆ. ನಿಧಾನವಾಗಿ ಹಗ್ಗ ಮೇಲೆಳೆದಾಗ ಎರಡು ಅಡಿಗಳಷ್ಟು ಮೇಲೆ ಬಂದ ಬಾಲಕ ನಂತರ ಹಗ್ಗ ಕೈಬಿಟ್ಟು ಮತ್ತೆ ಮೂರ್ನಾಲ್ಕು ಅಡಿ ಕೆಳಕ್ಕೆ ಹೋಗಿದ್ದಾನೆ.

ಕ್ಯಾಮೆರಾದಲ್ಲಿ ದಾಖಲು
ಮಗು ಅಳುವ ಶಬ್ದ ಕೇಳಿದ್ದರಿಂದ ಪುಟ್ಟ ಸಿಸಿ ಕ್ಯಾಮೆರಾವನ್ನು ಕೊಳವೆ ಬಾವಿಯೊಳಗೆ ಬಿಟ್ಟು ಚಲನವಲನಗಳನ್ನು ವೀಕ್ಷಿಸಲಾಯಿತು. ಎರಡು ಬಾರಿ ಆತ ಹಗ್ಗ ಹಿಡಿದು ನಂತರ ಕೈ ಬಿಟ್ಟಿದ್ದಾನೆ. ಕೊಳವೆ ಬಾವಿಗೆ ಜಾರಿದ ರಭಸದಲ್ಲಿ ಸುಸ್ತಾಗಿರುವ ಸಾಧ್ಯತೆ ಹೆಚ್ಚಾಗಿದ್ದು ಹಗ್ಗದ ಸಹಾಯದಿಂದ ಮೇಲೆತ್ತುವುದು ಕಷ್ಟಸಾಧ್ಯವೆನ್ನುವುದು ಕಾರ್ಯಾಚರಣೆ ತಂಡಕ್ಕೆ ಸಂಜೆ ವೇಳೆಗೆ  ಮನವರಿಕೆಯಾಗಿದೆ. ರಾತ್ರಿವರೆಗೂ ಬಾಲಕ ಸ್ಪಂದಿಸುತ್ತಿದ್ದ. ಆತನ ಕೀರಲು ಧ್ವನಿ ಮಾತ್ರ ಕೇಳಿಸುತ್ತಿದೆ. ಈ ನಡುವೆ ಕೊಳವೆ ಬಾವಿಯಿಂದ ಎಂಟು ಅಡಿ ದೂರದಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಭೂಮಿ ಅಗೆಯುವ ಕೆಲಸ ಆರಂಭಿಸಿದ ಜಿಲ್ಲಾಡಳಿತ, ರಾತ್ರಿಯಿಡೀ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದೆ.

ವಿಶೇಷ ತಂಡ ರವಾನೆ
ಕೊಳವೆ ಬಾವಿಗೆ ಬಿದ್ದ ಮಗುವಿನ ರಕ್ಷಣೆಗೆ ವಿಶೇಷ ತಂಡ ಕಳುಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿಯವರು, ವಿಶೇಷ ತಂಡವನ್ನು ವಿಶೇಷ ವಿಮಾನದಲ್ಲಿ ಕಳುಹಿಸಿಕೊಡುವಂತೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.