ಮತ್ತೆ ಕಾಮುಕರ ಅಟ್ಟಹಾಸ

ಬೆಂಗಳೂರು/ರಾಮನಗರ: ರಾಜಧಾನಿಯಲ್ಲಿ ಕಾಮುಕರ ಅಟ್ಟಹಾಸ ಮುಂದುವರಿದಿದ್ದು, ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ಮತ್ತೆ ಮೂರು ಪ್ರಕರಣಗಳು ವರದಿಯಾಗಿವೆ. ಎಚ್ಎಸ್ಆರ್ ಬಡಾವಣೆಯಲ್ಲಿ ಕಂಪನಿ ಮುಖ್ಯಸ್ಥನೊಬ್ಬ ಉದ್ಯೋಗಿಗೆ ಹಾಗೂ ತಲಘಟ್ಟಪುರದಲ್ಲಿ ಶಾಲಾ ಶಿಕ್ಷಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮೈಕೋ ಬಡಾವಣೆಯ ಇನ್ನೊಂದು ಪ್ರಕರಣದಲ್ಲಿ ಮದುವೆಯಾಗುವುದಾಗಿ ನಂಬಿಸಿದ ಸ್ನೇಹಿತ ಲೈಂಗಿಕ ತೃಷೆ ತೀರಿಸಿಕೊಂಡು ಯುವತಿಗೆ ಕೈ ಕೊಟ್ಟಿದ್ದಾನೆ.
ಸಿಇಒನಿಂದ ದೌರ್ಜನ್ಯ: ಕೋರಮಂಗಲ ಬಳಿಯ ಜಕ್ಕಸಂದ್ರದಲ್ಲಿರುವ ಕ್ಲ್ಯಾಪ್ ಎಜ್ಯುಟೇನ್ಮೆಂಟ್ ಪ್ರೈ ಲಿಯ ಸಿಇಒ ಜನಾರ್ದನ ಗುಪ್ತಾ(40), ಎಚ್ಎಸ್ಆರ್ ಬಡಾವಣೆಯ ಹೊಟೇಲ್ವೊಂದರಲ್ಲಿ ಕಚೇರಿಯ ಉದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಇದೇ ಕಂಪನಿಯಲ್ಲಿ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೇಘಾಲಯ ಮೂಲದ ಯುವತಿಯನ್ನು ಕರೆದುಕೊಂಡು ಜು.30ರಂದು ಗುಪ್ತಾ, ಎಚ್ಎಸ್ಆರ್ ಬಡಾವಣೆ 3ನೇ ಸೆಕ್ಟರ್ನಲ್ಲಿರುವ ಪಾರಿಕಾ ಹೊಟೇಲ್ಗೆ ಊಟಕ್ಕೆ ಹೋಗಿದ್ದ. ಊಟ ಮುಗಿಸಿ ವಾಪಸ್ ಬರುವಾಗ ಹೊಟೇಲ್ನ ಲಿಫ್ಟ್ನಲ್ಲಿ ಯುವತಿಯನ್ನು ಎಳೆದಾಡಿ ಬಲವಂತವಾಗಿ ಚುಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ನೊಂದ ಯುವತಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಗೆ ದೂರು ನೀಡಿದ್ದಳು. ಆದರೆ, ಗುಪ್ತ ವಿರುದ್ಧ ಕಂಪನಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿರಲಿಲ್ಲ. ಬೇಸತ್ತ ಯುವತಿ ಸೋಮವಾರ ಎಚ್ಎಸ್ಆರ್ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿ ವಿರುದ್ಧ ಐಪಿಸಿ ಕಲಂ 354 ಹಾಗೂ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದ ಕಂಪನಿ ಮಾನವ ಸಂಪನ್ಮೂಲ ಅಧಿಕಾರಿ ವಿರುದ್ಧ ಐಪಿಸಿ ಕಲಂ 202 ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಗುಪ್ತ ತಲೆಮರೆಸಿಕೊಂಡಿದ್ದಾನೆ. ಆತನ ಜೆ.ಪಿ. ನಗರ ನಿವಾಸಕ್ಕೆ ತೆರಳಿ ಶೋಧ ನಡೆಸಲಾಗಿದೆ ಎಂದು ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕೆ.ವಿ.ಶರಶ್ಚಂದ್ರ ತಿಳಿಸಿದ್ದಾರೆ.
ನಂಬಿಸಿ ಅತ್ಯಾಚಾರ: ಮದುವೆಯಾಗುವುದಾಗಿ ಸ್ನೇಹಿತೆಯನ್ನು ನಂಬಿಸಿ ಲೈಂಗಿಕ ತೃಷೆ ತೀರಿಸಿಕೊಂಡು ಬೇರೆ ಯುವತಿಯೊಂದಿಗೆ ವಿವಾಹವಾದ ಎಲೆಕ್ಟ್ರೀಷಿಯನ್, ಕೆಂಗಲ್ ಹನುಮಂತಯ್ಯ ಬಡಾವಣೆ ನಿವಾಸಿ ವಿಜಯ್ಕುಮಾರ್(26) ವಿರುದ್ಧ ಮೈಕೋ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮಿಳುನಾಡಿನ ತಂಜಾವೂರು ಮೂಲದ ವಿಜಯ್ 2 ವರ್ಷಗಳ ಹಿಂದೆ ಅದೇ ಊರಿನ ಯುವತಿಯೊಂದಿಗೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಇಬ್ಬರೂ ತಂತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ಸ್ನೇಹಿತರಾಗಿದ್ದ ಇಬ್ಬರೂ ಪರಸ್ಪರ ಒಪ್ಪಿಗೆ ಮೇಲೆ ಮದುವೆಯಾಗಲೂ ನಿರ್ಧರಿಸಿದ್ದರು. ಈ ವೇಳೆ ವಿಜಯ್, ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಆದರೆ 2 ತಿಂಗಳ ಹಿಂದೆ ಹೇಳದೇ ಕೇಳದೆ ತಮಿಳುನಾಡಿಗೆ ತೆರಳಿ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ.
ಪ್ರಕರಣ ದಾಖಲಾಗಿದ್ದು, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಆರೋಪಿ ವಿಜಯ್ನನ್ನು ಬಂಧಿಸಲಾಗುವುದು ಎಂದು ಮೈಕೋ ಬಡಾವಣೆ ಎಸಿಪಿ ಓಬಳೇಳ್ ತಿಳಿಸಿದ್ದಾರೆ.
ಇನ್ನೊಂದು ಪ್ರಕರಣ
ವಿಬ್ಗ್ಯೊರ್ ಶಾಲೆಯ ಬಾಲಕಿ ಮೇಲಿನ ಅತ್ಯಾಚಾರ ಘಟನೆ ಮಾಸುವ ಮುನ್ನವೇ ತಲಘಟ್ಟಪುರದ ಗುಬ್ಬಲಾಳ ಬಳಿಯ ಮಾರುತಿ ವಿದ್ಯಾಮಂದಿರದಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 9 ವರ್ಷದ ಇನ್ನೊಬ್ಬ ಬಾಲಕಿ ದೌರ್ಜನ್ಯಕ್ಕೊಳಗಾಗಿದ್ದಾಳೆ. ಈ ಸಂಬಂಧ ಅಂಚೆ ಇಲಾಖೆ ನಿವೃತ್ತ ನೌಕರ, ಅತಿಥಿ ಶಿಕ್ಷಕ ಚಂದ್ರಮೌಳಿ(63) ಎಂಬಾತನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಎರಡು ತಿಂಗಳಿಂದ ಅತಿಥಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಕೆಲ ದಿನಗಳಿಂದ ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿ ಲೈಂಗಿಕವಾಗಿ, ದೈಹಿಕವಾಗಿ ಹಿಂಸಿಸುತ್ತಿದ್ದ.
ನೊಂದ ಬಾಲಕಿಯೊಬ್ಬಳು ಪೋಷಕರ ಬಳಿ ವಿಷಯ ತಿಳಿಸಿದ್ದಳು. ಹೀಗಾಗಿ ಪೋಷಕರು ಶಾಲೆಗೆ ತೆರಳಿ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಪೋಷಕರು ಠಾಣೆಗೆ ತೆರಳಿ ಮಂಗಳವಾರ ದೂರು ದಾಖಲಿಸಿದ್ದಾರೆ. ಪೋಕ್ಸೋ ಕಾಯಿದೆ ಹಾಗೂ ಐಪಿಸಿ ಕಲಂ 376 ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಂದ್ರಮೌಳಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಪೈಶಾಚಿಕ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಮುಖ್ಯ ಶಿಕ್ಷಕ ವಶಕ್ಕೆ: ಪ್ರಕರಣ ಸಂಬಂಧ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀಕಾಂತ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆಗೆ ಒಳಪಡಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್ವಾಲ್ ಅವರು ಮಾರುತಿ ವಿದ್ಯಾಮಂದಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


