ಪ್ರಧಾನ ಸುದ್ದಿ

ಯಪ್ಪೋ.. ಭೂಮಿ ಅಗ್ಯೋದು ನಿಲ್ಸರಪ್ಪೋ..

ಯಪ್ಪೋ.. ಭೂಮಿ ಅಗ್ಯೋದು ನಿಲ್ಸರಪ್ಪೋ..
Published On :

ಬಾಗಲಕೋಟೆ: 'ಯಪ್ಪೋ... ಭೂಮಿ ಅಗೆಯೋದು ನಿಲ್ಲಿಸ್ರಪ್ಪೋ. ನನ್ನ ಎದೆಗೆ ಹಾರೆ, ಗುದ್ದಲಿ ಹಾಕಿದಂಗೆ ಆಗುತ್ತೆ. ಮಗನ ಬದುಕಿಸಿ ಕೊಡ್ತೀನಂದ್ರೆ ಎಲ್ಲದಕ್ಕೂ ಸಿದ್ದ. ಅದು ನಿಮ್ಮ ಕೈಲಿ ಆಗೋಲ್ಲ. ನನ್ನ ಮಗ ನನ್ನ ಹೊಲದಾಗೇ ಇರ್ತಾನೆ. ಎಲ್ಲೂ ಹೋಗಲ್ಲ, ಗುಂಡಿ ತೋಡೋದು ನಿಲ್ಲಿಸಿ...'
ಕೊಳವೆ ಬಾವಿಯೊಳಗೆ ಬಿದ್ದ ತಿಮ್ಮಣ್ಣನ ತಂದೆ ಹಣಮಂತಪ್ಪ ಎದೆಬಡಿದುಕೊಂಡು ಅಧಿಕಾರಿಗಳನ್ನು ಗೋಗರೆಯುತ್ತಿದ್ದರೆ ಸುತ್ತ ಸೇರಿದ್ದ ಜನರ ಕಣ್ಣುಗಳಲ್ಲಿ ನೀರು. ತಮ್ಮ ಮನೆಗೆ ಯಾರೇ ಬಂದರೂ ಅವರೆದುರು ಹಣಮಂತಪ್ಪನ ಕೋರಿಕೆ ಒಂದೇ, 'ಕಾರ್ಯಾಚರಣೆ ನಿಲ್ಲಿಸಿ'
ತನ್ನ ಮಗ ಜೀವಂತವಾಗಿ ವಾಪಾಸ್ಸು ಬರುವುದು ಅಸಾಧ್ಯವೆಂಬ ತೀರ್ಮಾನಕ್ಕೆ ಬಂದಿರುವ ಹಣಮಂತಪ್ಪ, ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ತನಗಿರುವುದು ಏಳು ಎಕರೆ ಭೂಮಿ ಮಾತ್ರ. ಕಾರ್ಯಾಚರಣೆಯಿಂದ ಐದು ಎಕರೆ  ಹಾಳಾಗಿ ಹೋಗಿದೆ. ಗುಂಡಿಗಳ ಮುಚ್ಚಿ ಮತ್ತೆ ಬೇಸಾಯ ಮಾಡಲು ಕಷ್ಟ ಸಾಧ್ಯ. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗೋಸ್ಕರವಾದರೂ ಬದುಕು ಕಟ್ಟಿಕೊಳ್ತೇನೆ ದಯಮಾಡಿ ಕಾರ್ಯಾಚರಣೆ ನಿಲ್ಲಿಸಿ ಜಮೀನಿನಿಂದ ಹೊರ ಹೋಗಿ ಎಂದು ಅಂಗಾಲಾಚುತ್ತಿದ್ದಾರೆ.
ಮಗನನ್ನು ಕಳೆದುಕೊಂಡ ಅವರ ಮುಖದಲ್ಲೀಗ ಭವಿಷ್ಯದ ಭಯವಿತ್ತು. ಮಗ ತಿಮ್ಮಣ್ಣ ಕೊಳವೆ ಬಾವಿಗೆ ಜಾರಿ ಬೀಳುವ ಮುನ್ನ ಜಮೀನು ಕಬ್ಬಿನ ಫಸಲಿನಿಂದ ಹೊಳೆಯುತ್ತಿತ್ತು. ಈಗ ಜೆಸಿಬಿ ಯಂತ್ರಗಳು ಧೂಳೆಬ್ಬಿಸಿ ಆಳವಾದ ಗುಂಡಿ ಮಾಡಿವೆ. ತೆಗೆದ ಮಣ್ಣನ್ನು ಜಮೀನಿನ ಮತ್ತೊಂದು ಮೂಲೆಯಲ್ಲಿ ಹಾಕಿರುವುದರಿಂದ ಮಾನವ ನಿರ್ಮಿತ ಗುಡ್ಡಗಳು ಎದ್ದುನಿಂತಿವೆ.
ಕಾರ್ಯಾಚರಣೆ ಸ್ಥಳಕ್ಕೆ ಹೋಗದೆ ಮನೆಯಲ್ಲೇ ಇರುವ ಹಣಮಂತಪ್ಪ ಅವರಿಗೆ ಜಮೀನು ಹಾಳಾಗಿರುವ ಕುರಿತು ಬಂಧುಗಳು ಮಾಹಿತಿ ನೀಡಿದ್ದಾರೆ. ಅದನ್ನು ಕೇಳಿ ಇನ್ನಷ್ಟು ಕುಸಿದಿದ್ದಾರೆ. ಎರಡು ದಿನಗಳಿಂದ ಊಟ, ತಿಂಡಿ ಸೇವಿಸದೆ ನಿಶ್ಯಕ್ತನಾಗಿರುವ ಆತನನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
160 ಅಡಿ ಆಳದಲ್ಲಿ ಮಗು ಇರುವುದರಿಂದ ಹೆಚ್ಚು ಕಡಿಮೆ ಆರುನೂರು ಅಡಿ ಉದ್ದ ಜಮೀನು ಅಗೆಯಲಾಗುತ್ತಿದೆ. ಇದನ್ನು ಸರಿಪಡಿಸಿಕೊಳ್ಳಲು ಕನಿಷ್ಟ 10 ಲಕ್ಷ ಸಾಲ ಮಾಡಬೇಕಿದೆ. ಅಷ್ಟು ದುಡ್ಡು ಸುರಿದರೂ ಯಥಾಸ್ಥಿತಿಗೆ ಬರುತ್ತದೆ ಎಂಬುವ ನಂಬಿಕೆ ಅವರಿಗಿಲ್ಲ. ಹಾಗಾಗಿ  ಕಾರ್ಯಾಚರಣೆ ನಿಲ್ಲಿಸುವಂತೆ ಗೋಗರೆಯುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್, ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ್, ಜಿಲ್ಲಾಧಿಕಾರಿ ಮೇಘಣ್ಣವರ ಸ್ಥಳದಲ್ಲಿಯೇ ಬೀಡು ಬಿಟ್ಟು ಕಾರ್ಯಾಚರಣೆ ನೇತೃತ್ವ ವಹಿಸಿದ್ದಾರೆ. ಸಚಿವೆ ಉಮಾಶ್ರೀ, ಸಂಸದ ಪಿ.ಸಿ.ಗದ್ದಿಗೌಡರ್ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದರು.

ಗುಂಡಿ ಮುಚ್ಚಿಯೇ ಹೋಗಬೇಕು
ಗ್ರಾಮಸ್ಥರು ಸಭೆ ಮಾಡಿ ರೈತ ಹಣಮಂತನ ನೆರವಿಗೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ ಭೂಮಿಯನ್ನು ಆಳವಾಗಿ  ಅಗೆಯಲಾಗಿದೆ. ನಂತರ ಹಾಗೇ ಬಿಟ್ಟು ಹೋದಲ್ಲಿ ರೈತ ಜಮೀನನ್ನು ಯತಾಸ್ಥಿತಿಗೆ ತಂದು ಕೊಳ್ಳುವುದು ಕಷ್ಟ. ಹಾಗಾಗಿ ಕಾರ್ಯಾಚರಣೆ ಕೈಗೊಂಡ ಜಿಲ್ಲಾಡಳಿತವೇ ಗುಂಡಿ ಮುಚ್ಚಿ ಹೋಗಬೇಕು ಎಂಬ ನಿರ್ಣಯವನ್ನು  ಸಭೆ ಅಂಗೀಕರಿಸಿದೆ. ಹಾಗೊಂದು ವೇಳೆ ಗುಂಡಿ ಮುಚ್ಚದೆ ವಾಪಸ್ ಹೊರಟರೆ ಯಾವೊಂದು ವಾಹನವನ್ನು  ರಸ್ತೆಗೆ ಬರಲು ಬಿಡಬಾರದೆಂಬ ತೀರ್ಮಾನವನ್ನೂ ಸಹ ಸಭೆ ಕೈಗೊಂಡಿದೆ.


ಗದ್ದಿಗೌಡರ ಭೇಟಿ
ಸಂಸದ ಗದ್ದಿಗೌಡರ ಮಂಗಳವಾರ ರೈತ ಹಣಮಂತ ಅವರ ನಿವಾಸಕ್ಕೆ ಭೇಟಿ ನೀಡಿ  ಸಮಾಲೋಚನೆ ನಡೆಸಿದರು. ಅವರ ಮುಂದೆ ಹಣಮಂತ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಈ ಸಂಗತಿಯನ್ನು ಮಾಧ್ಯಮದವರ ಮುಂದೆ ಸ್ಪಷ್ಟಪಡಿಸಿದ ಗದ್ದಿಗೌಡರ, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಚರ್ಚಿಸುವುದಾಗಿ ಹೇಳಿದರು. ಅವನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಸಹಜವಾಗಿಯೇ ತನ್ನಲ್ಲಿರುವ ನೋವು  ತೋಡಿಕೊಂಡ' ಎಂದು ಗದ್ದಿಗೌಡರ ಹೇಳಿದರು. ಈ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್, 'ಹಣಮಂತ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಮನವಿ ಮಾಡಿಕೊಂಡ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಹಾಗೊಂದು ವೇಳೆ ಈ ಬಗೆಯ ಅಭಿಪ್ರಾಯ ವ್ಯಕ್ತವಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು' ಎಂದು ಸ್ಪಷ್ಟಪಡಿಸಿದರು.

 ಚಿಕ್ಕಪ್ಪನಹಳ್ಳಿ ಷಣ್ಮುಖ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.