ಪ್ರಧಾನ ಸುದ್ದಿ

ಸೋಮಾರಿ ಗ್ರಾಪಂಗಳ ಅನುದಾನಕ್ಕೆ ಕತ್ತರಿ

ಸೋಮಾರಿ ಗ್ರಾಪಂಗಳ ಅನುದಾನಕ್ಕೆ ಕತ್ತರಿ
Published On :

ಶಿವಮೊಗ್ಗ: ತೆರಿಗೆ ಹಾಗೂ ನೀರಿನ ಕರ ಸಂಗ್ರಹದಲ್ಲಿ ಉದಾಸೀನ ಮಾಡುವ ಗ್ರಾಮ ಪಂಚಾಯಿತಿಗಳ ಅನುದಾನ ಕಡಿತಗೊಳಿಸುವ ಮೂಲಕ ಸರ್ಕಾರ ಪಾಠ ಕಲಿಸಿದೆ. ಅಲ್ಲದೇ, ಉತ್ತಮವಾಗಿ ಕಾರ್ಯ ನಿರ್ವಹಿಸಿದ ಗ್ರಾಪಂಗಳಿಗೆ ಪುರಸ್ಕಾರ ನೀಡಲಾಗಿದ್ದು,  ಈ ಮೂಲಕ ತೆರಿಗೆ ಸಂಗ್ರಹಣೆ ಹೆಚ್ಚಿಸುವ ನಿಟ್ಟಿನಲ್ಲಿ ಕಠಿಣ ಹೆಜ್ಜೆ ಇರಿಸಿದೆ.
2013-14ನೇ ಸಾಲಿನ ಶಾಸನಬದ್ಧ ಅನುದಾನದ 4ನೇ ತ್ರೈಮಾಸಿಕ ಕಂತಿನ ಮೊತ್ತವನ್ನು 5629 ಗ್ರಾಪಂಗಳಿಗೆ ಈಗ ಬಿಡುಗಡೆ ಮಾಡಿರುವ ಸರ್ಕಾರ, ಈ ಕಠಿಣ ನಿಲುವು ಪ್ರಕಟಿಸಿದೆ.
ಹಿಂದೆಯೇ ಘೋಷಿಸಲಾಗಿತ್ತು: ಹಿಂದಿನ ಬಾಕಿ ಹೊರತುಪಡಿಸಿ ಶೇ. 50ರಷ್ಟೂ ಕರ ವಸೂಲಿ ಮಾಡದ ಗ್ರಾಮ ಪಂಚಾಯಿತಿಗೆ 4ನೇ ತ್ರೈಮಾಸಿಕ ಕಂತಿನ ಅನುದಾನ ತಡೆಹಿಡಿಯುವಂತೆ ಹಾಗೂ ತಡೆ ಹಿಡಿಯಲಾಗಿರುವ ಗ್ರಾಮ ಪಂಚಾಯಿತಿಯ ಅನುದಾನದ ಪಾಲಿನ ರು. 1 ಲಕ್ಷ ಹಣವನ್ನು ಅದೇ ತಾಲೂಕಿನಲ್ಲಿ ಒಳ್ಳೆಯ ಆಡಳಿತ ನೀಡಿರುವ ಗ್ರಾಮ ಪಂಚಾಯಿತಿಗೆ ನೀಡುವುದಾಗಿ ಸರ್ಕಾರ ಮುಂಚೆಯೇ ಘೋಷಿಸಿತ್ತು.
ನಂತರ ರಾಜ್ಯದಲ್ಲಿರುವ ಬರಗಾಲ ಪರಿಸ್ಥಿತಿ, ಜಿಲ್ಲೆಯ ಆರ್ಥಿಕ ಸಾಮಾಜಿಕ ಪರಿಸ್ಥಿತಿ ವರ್ಗೀಕರಣೆ ಇತ್ಯಾದಿ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಜಿಲ್ಲೆಯಗಳ ಸ್ಥಿತಿಗನುಗುಣವಾಗಿ ಶೇ. 50ರ ಡಿಸಿಬಿ ವಸೂಲಾತಿ ಸಡಿಲಿಸಿ ಜಿಲ್ಲಾವಾರು ಗುರಿಗಳನ್ನು ನೀಡಲಾಗಿತ್ತು.
ಜಿಲ್ಲಾ ಪಂಚಾಯಿತಿಗಳು ಸಲ್ಲಿಸಿರುವ ಅಂಕಿ-ಅಂಶಗಳ ಆಧಾರದ ಮೇಲೆ ಶೇಕಡಾವಾರು ತೆರಿಗೆ ವಸೂಲಾತಿಯಂತೆ ವರ್ಗೀಕರಿಸಿದ ಗ್ರಾಮ ಪಂಚಾಯಿತಿಗಳಿಗೆ ಈಗ ಅನುದಾನ ಬಿಡುಗಡೆ ಮಾಡಿದೆ. ನಿಗದಿಪಡಿಸಿರುವ ಗುರಿಗಿಂತ ಕಡಿಮೆ ತೆರಿಗೆ ವಸೂಲಾತಿ ಮಾಡಿರುವ ಗ್ರಾಮ ಪಂಚಾಯಿತಿಗಳ ಅನುದಾನದಿಂದ ರು. 1 ಲಕ್ಷ ಅನುದಾನ ಕಟಾಯಿಸಿ, ಗುರಿ ಸಾಧನೆ ಮಾಡಿರುವ ಗ್ರಾಮ ಪಂಚಾಯಿತಿಗಳಿಗೆ ಹಂಚಲಾಗಿದೆ.  ಹೆಚ್ಚುವರಿಯಾಗಿ ಬಂದಿರುವ ಅನುದಾನವನ್ನು ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸಿಕೊಳ್ಳುವಂತೆ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಸೂಚಿಸಿದೆ. ರಾಜ್ಯದ 30 ಜಿಲ್ಲೆಗಳಲ್ಲಿ 8 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ 1418 ಗ್ರಾಮ ಪಂಚಾಯಿತಿಗಳಿದ್ದರೆ, 8000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 4211 ಗ್ರಾಮ ಪಂಚಾಯಿತಿಗಳಿವೆ. 8 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಆದರೆ, ತೆರಿಗೆ ಗುರಿ ಸಾಧನೆ ರು. 1 ಲಕ್ಷ ಮೊತ್ತದ ಅನುದಾನಕ್ಕೆ ಕತ್ತರಿ ಹಾಕಲಾಗಿದೆ.

ಅನುದಾನ ಕಡಿತ: ಜಿಲ್ಲಾವಾರು ವಿವರ
ಬೆಂಗಳೂರು    33
ಬೆಂ.ಗ್ರಾ, ರಾಮನಗರ    53
ಕೋಲಾರ    64
ಚಿಕ್ಕಬಳ್ಳಾಪುರ    48
ತುಮಕೂರು    73
ಶಿವಮೊಗ್ಗ    89
ಚಿತ್ರದುರ್ಗ    93
ದಾವಣಗೆರೆ    114
ಮೈಸೂರು    50
ಮಂಡ್ಯ    100
ಹಾಸನ    132
ದಕ್ಷಿಣ ಕನ್ನಡ    6
ಚಿಕ್ಕಮಗಳೂರು    100
ಬಿಜಾಪುರ    163
ಬೆಳಗಾವಿ    117
ಉಡುಪಿ    2
ಚಾಮರಾಜನಗರ    26
ಕೊಡಗು    1
ಗದಗ    42
ಬಾಗಲಕೋಟೆ    57
ಉತ್ತರ ಕನ್ನಡ    19
ಧಾರವಾಡ    51
ರಾಯಚೂರು    82
ಕೊಪ್ಪಳ    62
ಬೀದರ್    87
ಬಳ್ಳಾರಿ    101
ಗುಲ್ಬರ್ಗ    62
ಯಾದಗಿರಿ    109
-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.