ಕೆಂಪುಕೋಟೆ ಮೇಲಿಂದ ನರೇಂದ್ರ ಮೋದಿ ಮಾತಿನ ಕಂಪು

ಬಡತನ ವಿರುದ್ಧ ಹೋರಾಟ
ಸಾರ್ಕ್ ರಾಷ್ಟ್ರಗಳು ಪರಸ್ಪರ ಕೊಲ್ಲುವ ಕೆಲಸ ಬಿಡಬೇಕು. ಜೀವನದ ಆನಂದ ಅನುಭವಿಸಬೇಕು. ಬಡತನದ ವಿರುದ್ಧ ಒಂದಾಗಿ ಹೋರಾಟ ನಡೆಸಬೇಕು. ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧವಾಗಬೇಕು. ಬಡತನ ಸಾರ್ಕ್ ರಾಷ್ಟ್ರಗಳ ಪಾಲಿನ ಸಮಾನ ಶತ್ರು. ಇದರ ವಿರುದ್ಧ ಒಂದಾಗಿ ಯುದ್ಧ ಘೋಷಿಸಬೇಕು. ಮಿತ್ರ ರಾಷ್ಟ್ರಗಳ ಈ ಹೋರಾಟಕ್ಕೆ ಭಾರತ ಯಾವುದೇ ರೀತಿಯ ಸಹಾಯಕ್ಕೂ ಸಿದ್ಧ. ಸಾರ್ಕ್ ರಾಷ್ಟ್ರಗಳು ಒಂದಾದರೆ ವಿಶ್ವದಲ್ಲಿ ತನ್ನದೇ ಆದ ವರ್ಚಸ್ಸು ನಿರ್ಮಿಸಿಕೊಳ್ಳಬಹುದು ಮತ್ತು ಹೊಸ ಶಕ್ತಿಯಾಗಿ ರೂಪುಗೊಳ್ಳಬಹುದು. ಈ ಹೋರಾಟಕ್ಕೆ ಸಂಬಂಧಿಸಿ ಸಾರ್ಕ್ ರಾಷ್ಟ್ರಗಳು ನೀತಿಯೊಂದನ್ನು ರೂಪಿಸಬೇಕು.
ಶೌಚಾಲಯ
ದೇಶದ ಎಲ್ಲ ಶಾಲೆಗಳಲ್ಲೂ ಶೌಚಾಲಯ ಇರಬೇಕು. ಅದರಲ್ಲೂ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕು. ಆಗ ಮಾತ್ರ ನಮ್ಮ ಹೆಣ್ಣುಮಕ್ಕಳು ಶಾಲೆ ತೊರೆಯುವುದನ್ನು ನಿಲ್ಲಿಸುತ್ತಾರೆ. ದೇಶದ ಎಲ್ಲ ಶಾಲೆಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಇದೆ ಎನ್ನುವ ವಿಶ್ವಾಸದೊಂದಿಗೆ ನಾವು ಮುಂದಿನ ವರ್ಷ ಇಲ್ಲಿ ನಿಲ್ಲೋಣ. ಸಂಸದರು ತಮ್ಮ ಪ್ರದೇಶಾಭಿವೃದ್ಧಿ ನಿಧಿ ಹಣವನ್ನು ಹಾಗೂ ಕಾರ್ಪೊರೇಟ್ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಗೆ ಸಂಬಂಧಿಸಿದ ನಿಧಿಯನ್ನು ಶೌಚಾಲಯ ನಿರ್ಮಿಸುವ ಕಾರ್ಯಕ್ಕಾಗಿ ಬಳಸುವಂತಾಗಲಿ. ನಾವೀಗ 21ನೇ ಶತಮಾನದಲ್ಲಿದ್ದೇವೆ. ಆದರೂ ನಮ್ಮ ತಾಯಿ-ಸಹೋದರಿಯರು ಬಯಲು ಶೌಚಾಲಯವನ್ನೇ ಅವಲಂಭಿಸಿರುವುದು ದುರದೃಷ್ಟಕರ. ನಾವು ನಮ್ಮ ತಾಯಿ-ಸಹೋದರಿಯರ ಗೌರವಕ್ಕಾಗಿ ಶೌಚಾಲಯ ನಿರ್ಮಿಸುವ ಕೆಲಸ ಮಾಡೋಣ.
ಬ್ರಾಂಡ್ ಇಂಡಿಯಾ
ಭಾರತದ ಯುವಶಕ್ತಿ ಅಗತ್ಯ ಕೌಶಲ್ಯ ಮತ್ತು ಬುದ್ಧಿಶಕ್ತಿಯನ್ನು ಹೊಂದಿದೆ. ಇದರ ಮೂಲಕ ಭಾರತವನ್ನು ವಿಶ್ವದ ರಫ್ತಿನ ಕೇಂದ್ರವಾಗಿ ಮಾಡಬಹುದು. ಯುವಕರು ಕೂಡ ಮೇಡ್ ಇನ್ ಇಂಡಿಯಾ ಬ್ರಾಂಡ್ ಅನ್ನು ವಿಶ್ವದ ಮೂಲೆ ಮೂಲೆಗೂ ತಲುಪಿಸಬೇಕು. ಆದರೆ, ಈ ವೇಳೆ ಎರಡು ವಿಚಾರ ಗಮನದಲ್ಲಿಟ್ಟುಕೊಳ್ಳಬೇಕು. ಉತ್ಪಾದಿಸುವ ವಸ್ತುಗಳಲ್ಲಿ ಶೂನ್ಯ ದೋಷ ಮತ್ತು ಶೂನ್ಯ ಅಡ್ಡಪರಿಣಾಮ ಕಾಯ್ದುಕೊಳ್ಳಬೇಕು.
ಪ್ರಧಾನಿಮಂತ್ರಿ ಜನ್‌ಧನ್ ಯೋಜನೆ
ಇಂದು ಪ್ರತಿಯೊಬ್ಬರಲ್ಲೂ ಮೊಬೈಲ್ ಇದೆ. ಆದರೆ, ಬ್ಯಾಂಕ್ ಖಾತೆ ಇಲ್ಲ. ಈ ಪರಿಸ್ಥಿತಿ ಬದಲಾಗಬೇಕು. ಆರ್ಥಿಕ ಅಭಿವೃದ್ಧಿ ಬಡವರಿಗೆ ಅನುಕೂಲ ಮಾಡಿಕೊಡುವಂತಿರಬೇಕು. ಅದಕ್ಕಾಗಿ ಪ್ರಧಾನಮಂತ್ರಿ ಜನ್‌ಧನ್ ಯೋಜನೆ ಘೋಷಿಸಲಾಗುತ್ತಿದೆ. ಅದರಂತೆ ಬ್ಯಾಂಕ್ ಖಾತೆ ಆರಂಭಿಸುವ ವ್ಯಕ್ತಿ ಡೆಬಿಟ್ ಕಾರ್ಡ್ ಪಡೆಯುತ್ತಾನೆ. ಜತೆಗೆ ಆತನ ಕುಟುಂಬಕ್ಕೆ ಒಂದು ಲಕ್ಷ ರುಪಾಯಿವರೆಗೆ ವಿಮಾ ಸುರಕ್ಷೆಯೂ ಸಿಗಲಿದೆ.
ಸಂಸದರ ಆದರ್ಶ ಗ್ರಾಮ ಯೋಜನೆ
ಪ್ರತಿ ಸಂಸದರೂ ತಮ್ಮ ಸಂಸತ್ ಕ್ಷೇತ್ರದಲ್ಲಿ ಮಾದರಿ ಗ್ರಾಮವೊಂದನ್ನು ಅಭಿವೃದ್ಧಿಪಡಿಸಬೇಕು. ಅದರಂತೆ ಸಂಸದರು 2016ರೊಳಗೆ ಒಂದು ಗ್ರಾಮವನ್ನು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಬೇಕು. 2019ರೊಳಗೆ ಪ್ರತಿ ಕ್ಷೇತ್ರದಲ್ಲಿ ಮತ್ತೆರಡು ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುವುದು. ದೇಶ ನಿರ್ಮಾಣ ಕಾರ್ಯ ಗ್ರಾಮಗಳಿಂದಲೇ ಆರಂಭವಾಗಬೇಕು. ಈ ಯೋಜನೆಯಲ್ಲಿ ರಾಜ್ಯಸಭಾ ಸದಸ್ಯರು, ಆಯಾ ರಾಜ್ಯಗಳ ಶಾಸಕರೂ ತೊಡಗಿಸಿಕೊಳ್ಳಬಹುದು. ಯೋಜನೆಯ ನೀಲನಕ್ಷೆಯನ್ನು ಜಯಪ್ರಕಾಶ ನಾರಾಯಣ ಅವರ ಜನ್ಮ ದಿನವಾದ ಅ.11 ರಂದು ಘೋಷಿಸಲಾಗುವುದು.
ಡಿಜಿಟಲ್ ಇಂಡಿಯಾ
ಈಗ ಭಾರತ ಐಟಿ ನಿಪುಣರ ದೇಶ. ಹಾಗಾಗಿ ನಾವು ಡಿಜಿಟಲ್ ಭಾರತದ ಕನಸು ಕಾಣುತ್ತಿದ್ದೇವೆ. ಗ್ರಾಮಗಳಿಗೂ ಬ್ರಾಡ್‌ಬ್ಯಾಂಡ್ ಸೌಲಭ್ಯ ಸಿಕ್ಕರೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಗಾಧವಾದುದನ್ನು ಸಾಧಿಸಲು ಸಾಧ್ಯ. ಇ-ಆಡಳಿತ ಅಂದರೆ ಪರಿಣಾಮಕಾರಿ ಆಡಳಿತ. ಒಂದು ವೇಳೆ ನಾವು ಈ ಕುರಿತು ಗಮನಹರಿಸಿದರೆ ಡಿಜಿಟಲ್ ಭಾರತ ವಿಶ್ವದ ಜತೆಗೆ ಹೆಜ್ಜೆ ಹಾಕುವುದು ಸಾಧ್ಯವಾಗಲಿದೆ.
ಅತ್ಯಾಚಾರ
ಅತ್ಯಾಚಾರ ಪ್ರಕರಣಗಳಿಂದಾಗಿ ನಾವು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಪ್ರತಿ ಪೋಷಕರೂ ಹೆಣ್ಣುಮಕ್ಕಳು ಮನೆಯಿಂದ ಹೊರಹೋಗುವಾಗ ಎಲ್ಲಿ ಹೋಗುತ್ತೀರಿ, ಎಷ್ಟು ಗಂಟೆಗೆ ಬರುತ್ತೀರಿ ಎಂದು ಕೇಳುತ್ತಾರೆ. ಅದರ ಬದಲು ಗಂಡು ಮಕ್ಕಳನ್ನು ನೀವೆಲ್ಲಿಗೆ ಹೋಗುತ್ತಿದ್ದೀರಿ, ಏನು ಮಾಡುತ್ತಿದ್ದೀರಿ, ನಿಮ್ಮ ಗೆಳೆಯರು ಯಾರು ಎಂದು ಕೇಳಬೇಕು. ಯಾಕೆಂದರೆ ಅತ್ಯಾಚಾರದಂಥ ಅಪರಾಧಗಳನ್ನು ಮಾಡುತ್ತಿರುವುದು ನಿಮ್ಮ ಗಂಡು ಮಕ್ಕಳೇ.
ಹಿಂಸಾಚಾರಕ್ಕೆ ತಡೆ
ದೇಶವನ್ನು ಸಹಮತದ ಆಧಾರದ ಮೇಲೆ ನಡೆಸಲುದ್ದೇಶಿಸುತ್ತೇನೆಯೇ ಹೊರತು ಸಂಸತ್ತಿನ ಬಲದ ಮೇಲಲ್ಲ. ಮುಂದಿನ 10 ವರ್ಷ ಜಾತಿ ಮತ್ತು ಕೋಮು ಹಿಂಸಾಚಾರದಿಂದ ದೇಶಮುಕ್ತವಾಗಬೇಕು. ದಾರಿ ತಪ್ಪಿ ನಕ್ಸಲಿಸಂ, ಭಯೋತ್ಪಾದನೆಗಿಳಿದಿರುವ ಯುವಕರು ಬಂದೂಕು ಕೆಳಗಿಟ್ಟು ಶಾಂತಿ, ಅಭಿವೃದ್ಧಿಯ ಮಾರ್ಗ ತುಳಿಯಬೇಕು.
ಯೋಜನಾ ಆಯೋಗ
ದೇಶದ ಆರ್ಥಿಕತೆಗೆ ದಶಕಗಳಿಂದ ಮಾರ್ಗದರ್ಶನ ನೀಡುತ್ತಿದ್ದ ಯೋಜನಾ ಆಯೋಗದ ಜಾಗದಲ್ಲಿ ಆಧುನಿಕ ಸಂಸ್ಥೆಯೊಂದನ್ನು ಹುಟ್ಟು ಹಾಕಲಾಗುವುದು. ಯೋಜನಾ ಆಯೋಗ ರಚನೆಯಾಗಿನ ಕಾಲ ಈಗಿಲ್ಲ. ಕಾಲ ಬದಲಾಗಿದೆ. ಶೀಘ್ರದಲ್ಲೇ ಸೃಜನಾತ್ಮಕವಾಗಿ ಯೋಚನೆ ಮಾಡುವ ಸಂಸ್ಥೆಯೊಂದನ್ನು ಯೋಜನಾ ಆಯೋಗದ ಜಾಗದಲ್ಲಿ ರಚಿಸಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


