ಮೋದಿ ಆಡಳಿತ ಮತ್ತಷ್ಟು ಬಿಗಿ

ನವದೆಹಲಿ: ಕನಿಷ್ಟ ಸರ್ಕಾರ, ಗರಿಷ್ಟ ಆಡಳಿತ ಘೋಷಣೆಯೊಂದಿಗೆ ಅಧಿಕಾರಕ್ಕೇರಿರುವ ಪ್ರಧಾನಿ ನರೇಂದ್ರ ಮೋದಿ ನಿಧಾನವಾಗಿ ಆಡಳಿತದ ಮೇಲಿನ ಹಿಡಿತ ಬಿಗಿಗೊಳಿಸಲು ಆರಂಭಿಸಿದ್ದಾರೆ.
ಉನ್ನತ ನೇಮಕ, ಪ್ರಮುಖ ನೀತಿಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳಲ್ಲಿ ಅಂತಿಮ ತೀರ್ಮಾನ ಪ್ರಧಾನಿಯೇ ತೆಗೆದುಕೊಳ್ಳುತ್ತಾರೆ. ಆಡಳಿತ ವಿಚಾರದಲ್ಲಿ ಮೋದಿ ಅನುಸರಿಸುತ್ತಿರುವ ಈ ಕಾರ್ಯ ವೈಖರಿ ಗೃಹ ಸಚಿವ ರಾಜನಾಥ್ ಸಿಂಗ್, ಸುಷ್ಮಾಸ್ವರಾಜ್ ರಂತಹ ಹಿರಿಯ ಮುಖಂಡರನ್ನು ಮೂಲೆಗುಂಪು ಮಾಡಿದಂತಾಗಿದೆ. ಮೇಲ್ನೋಟಕ್ಕೆ ಇದು ನಿಜವೆಂಬಂತೆ ಕಂಡರೂ, ತಮ್ಮ ಕನಸಿನ ಭಾರತ ಭಾರತವನ್ನು ಸಮರ್ಪಕವಾಗಿ ಸಾಕಾರಗೊಳಿಸುವುದು ಮೋದಿ ಉದ್ದೇಶ.
ಅದರಂತೆ ಆಡಳಿತವನ್ನು ಬಿಗಿಗೊಳಿಸುವ ಸಣ್ಣಪುಟ್ಟ ಕೆಲಸಕ್ಕೂ ನೇರವಾಗಿ ಕೈಹಾಕಲು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಐಎಎಸ್, ಐಪಿಎಸ್, ಸಿಎಸ್‌ಎಸ್ ಮತ್ತು ಸಿಬಿಐನ ಎ ಗ್ರೇಡ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮದ ದೂರಿನ ಕುರಿತ ನಿರ್ಧಾರವನ್ನೂ ಖುದ್ದಾಗಿ ತೆಗೆದುಕೊಳ್ಳಲಿದ್ದಾರೆ. ಅಂದರೆ ಉನ್ನತ ಅಧಿಕಾರಿಗಳ ಮೇಲಿನ ದೂರು ಪ್ರಧಾನಿ ನಿಗಾದಡಿಯಲ್ಲೇ ಇನ್ನು ಇತ್ಯರ್ಥಗೊಳ್ಳಲಿದೆ.
ಯುಪಿಎಸ್‌ಸಿ ನೇಮಕಗಳಿಗೆ ಸಂಬಂಧಿಸಿದ ವಿಚಾರಗಳಲ್ಲೂ ಮೋದಿ ಮಾತೇ ಅಂತಿಮವಾಗಲಿದೆ. ಸಿಬಿಐನ ಗ್ರೇಡ್ ಎ ಹುದ್ದೆಯ ನೇಮಕಕ್ಕೆ ಸಂಬಂಧಿಸಿ ನಿಯಮಾವಳಿ ರೂಪಿಸುವುದು, ಡಿಐಜಿ ಅಥವಾ ಅದಕ್ಕಿಂತ ಮೇಲ್ಮಟ್ಟದ ರ್ಯಾಂಕ್‌ನ ಅಧಿಕಾರಿಗಳನ್ನು ಇತರೆ ಸಂಸ್ಥೆಗಳಿಗೆ ಎರವಲು ನೀಡುವ ವಿಚಾರಗಳೂ ಪ್ರಧಾನಿಯ ಗಮನಕ್ಕೆ ಬಾರದೆ ಹೋಗುವಂತಿಲ್ಲ. ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರ ನೇಮಕ, ರಾಜಿನಾಮೆ ಮತ್ತು ವಜಾ ವಿಚಾರದಲ್ಲೂ ಮೋದಿ ಮಾತೇ ವೇದ ವಾಕ್ಯ. ಈ ವಿಚಾರದಲ್ಲಿ ಪ್ರಧಾನಿಯ ಕೈಯಲ್ಲೇ ಇರುವ ಸಿಬ್ಬಂದಿ ಮತ್ತು ನೇಮಕ ಸಚಿವಾಲಯದ ಅಧಿಕಾರಿಗಳಿಗೆ ಗೊಂದಲವಾಗದಂತೆ ಕೆಲಸಗಳ ಹಂಚಿಕೆಯನ್ನೂ ಮಾಡಲಾಗಿದೆ.
ಆರ್‌ಟಿಐ ತಿದ್ದುಪಡಿ
ಮಾಹಿತಿ ಹಕ್ಕು ಕಾಯ್ದೆ ತಿದ್ದುಪಡಿ, ಅಖಿಲ ಭಾರತ ಸೇವೆ, ಲೋಕಪಾಲ, ವಿಚಕ್ಷಣಾ ಆಯೋಗ, ಭ್ರಷ್ಟಾಚಾರ ತಡೆಗೆ ಸಂಬಂಧಿಸಿದ ನಿಯಮಾವಳಿ, ಲೋಕಪಾಲ ಕಾಯ್ದೆ ಮತ್ತು ಕೇಂದ್ರೀಯ ವಿಚಕ್ಷಣಾ ಆಯೋಗಕ್ಕೆ ಸಂಬಂಧಿಸಿದ ವಿಚಾರಗಳಲ್ಲೂ ಅಂತಿಮ ನಿರ್ಧಾರ ಮೋದಿ ಅವರದೇ.
ಇಂದಿರಾ ತಂತ್ರ
ಆಡಳಿತಕ್ಕೆ ಚುರುಕು ನೀಡುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅನುಸರಿಸುತ್ತಿದ್ದ ಕೆಲ ತಂತ್ರಗಳನ್ನು ಮೋದಿ ಅವರೂ ಅನುಸರಿಸುತ್ತಿದ್ದಾರೆ. ಇಂದಿರಾ ಮಾದರಿಯಲ್ಲೇ ಪ್ರಮುಖ ವಿಚಾರಗಳಿಗೆ ಸಂಬಂಧಿಸಿ ತ್ವರಿತಗತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ದಿಸೆಯಲ್ಲಿ ಪ್ರಧಾನಿ ಜತೆಗೆ ನೇರ ಚರ್ಚೆಗೆ ಹಿಂಜರಿಕೆ ಬೇಡ ಎನ್ನುವ ಸೂಚನೆಯನ್ನು ಮೋದಿ ಇತ್ತೀಚೆಗಷ್ಟೇ ಅಧಿಕಾರಿಗಳಿಗೆ ರವಾನಿಸಿದ್ದರು. ಆಡಳಿತಕ್ಕೆ ಸಂಬಂಧಿಸಿ ಉಪಯುಕ್ತ ಸಲಹೆಗಳಿದ್ದರೆ ಇ-ಮೇಲ್ ಅಥವಾ ದೂರವಾಣಿಗಳ ಮೂಲಕ ನೇರವಾಗಿ ನೀಡಬಹುದು ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


