ಮುಗಿಲಿಗೆ ಹಾರಿದ ಸೂರ್ಯನ ಕುದುರೆ

`ಎಂದೂ ಮುಗಿಯದ ಕತೆ ಬರೆದ ಅನಂತಮೂರ್ತಿ ಇಂದು `ಮೌನಿಯಾಗಿದ್ದಾರೆ.
ಸಂಪ್ರದಾಯವಾದಿಯ ಕರ್ಮಠತನದ ಹಠಮಾರಿತನವಾಗಲೀ, ಪರಂಪರೆಯ ಅರಿವಿಲ್ಲದ ಆಧುನಿಕತೆಯ ಸಿನಿಕತನವಾಗಲಿ ಎರಡೂ ತಿರಸ್ಕಾರ ಯೋಗ್ಯ ಎಂಬ ಚಿಂತನಾ ಚೈತನ್ಯ ಇಂದು ಜಡವಾಗಿದೆ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಇಂದು ಸಂಜೆ ವಿಧಿವಶರಾಗಿದ್ದಾರೆ.
ನಮ್ಮ ಕಾಲಘಟ್ಟದ ಶ್ರೇಷ್ಠ ಚಿಂತಕ ಅನಂತಮೂರ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಭಾರತೀಯ ಮನಸ್ಸಗಳನ್ನು ಸ್ವತಂತ್ರ ಚಿಂತನೆಗೆ ಒಡ್ಡಿಕೊಳ್ಳಲು ಹದಗೊಳಿಸಿದ ಲೇಖಕ. ಸಮಕಾಲೀನ ವಾಸ್ತವ ದ್ವಂದ್ವಗಳಿಗೆ ನಮ್ಮನ್ನು ಕೈ ಹಿಡಿಡು ಕರೆದೊಯ್ಯುವ ಆಪ್ತ ಸಂಗಾತಿ. ಏಕಕಾಲದಲ್ಲಿ ಒಳಗಿನರಂತೆ ಆಪ್ತರಾಗಿ, ಹೊರಗಿನವರಂತೆ ವಿಶ್ಲೇಷಣಾತ್ಮಕವಾಗಿ ಸಮಕಾಲೀನ ಸಮಸ್ಯೆಗಳ ಬಗ್ಗೆ ಚಿಂತಿಸುವ ಅನಂತಮೂರ್ತಿ ಕನ್ನಡ ಸಂಸ್ಕೃತಿ ಪರಂಪರೆ ಕಂಡ ವಿಶಿಷ್ಟ ಪ್ರತಿಭೆ.
ದಟ್ಟ ಮಲೆನಾಡು ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21ರಂದು ಜನಿಸಿದ ಅನಂತಮೂರ್ತಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮೇಳಿಗೆ, ಕೋಣಂದೂರು, ತೀರ್ಥಹಳ್ಳಿ ಶಾಲೆಗಳಲ್ಲಿ ಮಾಡಿದವರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಸೇರಿದ ಅವರಿ ಇದೇ ಸಂದರ್ಭದಲ್ಲಿ ಕಾಗೋಡು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅವರ ಜೀವನದ ಕ್ರಮಕ್ಕೆ ಒಂದು ದಿಕ್ಕು ಸಿಕ್ಕಿದ್ದು ಇದೇ ಸಂದರ್ಭದಲ್ಲಿ. ಲೋಹಿಯಾ, ಶಾಂತವೇರಿ ಗೋಪಾಲಗೌಡರ ಒಡನಾಟ, ಚಳವಳಿಯ ಕಾವು ಮಲೆನಾಡಿನ ಯುವಕನ ಒಳಗಿನ ಚಿಂತಕ, ಬರಹಗಾರನನ್ನು ಬಡಿದೆಬ್ಬಿಸಿತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜಾರ್ಜ್ ಫರ್ನಾಂಡಿಸ್ ಅವರಂತ ನಾಯಕರ ಸಾಂಗತ್ಯ ಅನಂತಮೂರ್ತಿ ಅವರಲ್ಲಿ ಇನ್ನಷ್ಟು ಸ್ಪಷ್ಟತೆ ಮೂಡಿಸಿತು.’
ANANTHAMURTHY
ಮೈಸೂರಿನಲ್ಲಿ ಬಿ.ಎ.(ಆನರ್ಸ್) ಎಂ.ಎ.(ಇಂಗ್ಲೀಷ್) ಇಂಗ್ಲೇಂಡ್ನ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಿಂದ ಪಿಹೆಚ್ಡಿ ಪದವಿ ಪಡದ ಅನಂತಮೂರ್ತಿ ಮೊದಲು ಉಪನ್ಯಾಸಕರಾಗಿ ಸೇರಿದ್ದು ಹಾಸನದ ಕಾಲೇಜಿಗೆ. ನಂತರ ಶಿವಮೊಗ್ಗ, ಸಾಗರದ ಕಾಲೇಜಿನಲ್ಲಿಯೂ ಉಪನ್ಯಾಸಕರಾಗಿದ್ದರು.
ಅನಂತಮೂರ್ತಿಯವರ ಮೊದಲ ಕತೆ ಎಂದೂ ಮುಗಿಯದ ಕತೆ. ಅವರ ಸೃಜನಶೀಲತೆಯ ಹುಡುಕಾಟ ಇಲ್ಲಿಂದಲೇ ಆರಂಭಗೊಂಡಿದೆ. ಬದುಕಿನ ನಿರಂತರತೆ ಹಾಗೂ ಅರ್ಥವಂತಿಕೆ ಎರಡರ ಹುಡುಕಾಟ ಇಲ್ಲಿದೆ.
ಒಮ್ಮೆ ಮಕ್ಕಳು, ಮೊಮ್ಮಕ್ಕಳಾಗಿದ್ದವರು ಈಗ ಅಜ್ಜ, ಅಜ್ಜಿಯರಾಗಿದ್ದಾರೆ. ಅವರೀಗ ತಮ್ಮ ಮೊಮ್ಮಕ್ಕಳಿಗೆ ಕತೆ ಹೇಳುತ್ತಿದ್ದಾರೆ. ಆ ಕತೆಯಾದರೂ ಯಾವುದು? ತಮ್ಮ ಅಜ್ಜ, ಅಜ್ಜಿಯರಿಂದ ಕೇಳಿದ ಕತೆ. ಬದುಕು ಮುಂದುವರೆದಂತೆ ಕತೆಯೂ ಮುಂದುವರೆಯುತ್ತದೆ. ಒಂದು ಕುಟುಂಬದ ಸಾಮಾನ್ಯ ಕತೆ ಇಡೀ ಬದುಕನ್ನ ಸೃಷ್ಟಿಯನ್ನು ಒಳಗೊಂಡು ಬೆಳೆಯುವ ಕ್ರಮ ಆಶ್ಚರ್ಯವಾಗಿದೆ. ಈ ಕತೆ ಕೊನೆ ಮುಟ್ಟಿದರೆ- ಬೆಳಕಾಗೊಲ್ಲ. ಕತ್ತಲಾಗಲ್ಲ, ಮರದಲ್ಲಿ ಹಣ್ಣಾಗಲ್ಲ, ಗಿಡದಲ್ಲಿ ಹೂವಾಗಲ್ಲ, ಮೊಮ್ಮಕ್ಕಳಿಗೆ ಕತೆ ಹೆಳೋ ಅಜ್ಜಿಯರೂ ಬದುಕೊಲ್ಲ.॒.
ತಮ್ಮ ಹೊಸ ರೀತಿಯ ಆಲೋಚನೆಯಿಂದ ಕನ್ನಡದ ಮನಸ್ಸುಗಳನ್ನು ಜೀವಂತವಾಗಿಟ್ಟ ಅನಂತಮೂರ್ತಿ ಆವರ ಆತ್ಮಕತೆ ಸುರಗಿ. ಇದಲ್ಲದೆ ಅವರು ಬರೆದಿರುವ ಏಳು ವಿಮರ್ಶಾ ಸಂಕಲನಗಳಲ್ಲಿ ಸಾಂಸ್ಕೃತಿಕ ವಾಗ್ವಾದಗಳನ್ನು, ಸಂವೇದನೆಯನ್ನು ಕೆರಳಿಸಿದ್ದಾರೆ. ವೈಚಾರಿಕತೆ, ಸಂಸ್ಕೃತಿ- ಪರಂಪರೆ- ನಂಬಿಕೆ ಬಗ್ಗೆ ಸುತ್ತಮುತ್ತಲಿನ ಪರಿಸರವನ್ನು ಹದಗೊಳಿಸುವ ಕಾಯಕವನ್ನು ಉದ್ದಕ್ಕೂ ಮಾಡಿಕೊಂಡ ಬಂದ ಅನಂತಮೂರ್ತಿ ಇಲ್ಲದ ಕನ್ನಡ ಸಾಂಸ್ಕೃತಿಕ ಪರಿಸರದಲ್ಲಿ ದೊಡ್ಡದೊಂದು ಶೂನ್ಯಸೃಷ್ಟಿಯಾಗಿದೆ.
ಮಲೆನಾಡಿನ ದಟ್ಟತೆಯಂತೆ ಅನಂತಮೂರ್ತಿ ಬದುಕು- ಬರಹ ದಟ್ಟ ಚಿಂತನೆಗಳಿಂದ ಕೂಡಿದೆ. ಅವು ಕೆಲವೊಮ್ಮೆ ಸ್ಪಷ್ಟವಾಗಿ, ಇನ್ನು ಕೆಲವೊಮ್ಮೆ ಅಸ್ಪಷ್ಟವಾಗಿ, ನಿಗೂಢವಾಗಿ, ರಹಸ್ಯವಾಗಿ ॒ಹೀಗೆ ಹಲವರಿಗೆ ಹಲವು ರೀತಿ ಕಾಣಿಸಿವೆ. ಕಂಡಷ್ಟು- ತುಂಬಿಕೊಂಡಷ್ಟು ಮುಗಿದೆ ಪ್ರತಿಭೆ ಇದೆ. ಅವರ ಎಲ್ಲಾ ವಿಚಾರಗಳು ನಮಗೆ ಒಪ್ಪಿಗೆಯಾಗಬೇಕಿಲ್ಲ. ಆದರೆ, ಅವರೊಂದಿಗೆ ಆನೇಕ ನೆಲೆಗಳಲ್ಲಿ ಭಿನ್ನಾಭಿಪ್ರಾಯಗಳು ಸಾಧ್ಯ. ಅವರ ವಿಚಾರಗಳನ್ನು ಪ್ರಶ್ನಿಸಬಹುದಿತ್ತು- ಈ ಹಿನ್ನಲೆಯಲ್ಲಿ ಅವರೊಂದಿಗೆ ಅರ್ಥಪೂರ್ಣ ಸಂವಾದ ಸಾಧ್ಯವಿತ್ತು.
ಇದೇ ಕಾರಣಕ್ಕೆ ಇಡೀ ದೇಶದಲ್ಲಿ ಮೋದಿ ಎಂಬ ಅಲೆಯ ಸುನಾಮಿಯನ್ನು ಮಾಧ್ಯಮಗಳು ಸೃಷ್ಟಿಸಿದಾಗ ಅನಂತಮೂರ್ತಿ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಯಾವ ಕಾರಣಕ್ಕೆ ಮೋದಿಯನ್ನು ವಿರೋಧಿಸುತ್ತೇನೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದರು. ಇಂಥ ವಿಚಾರಗಳಲ್ಲಿ ಅನಂತಮೂರ್ತಿ ಅವರಿಗೆ ಯಾವುದೇ ಗೊಂದಲ ಇರಲಿಲ್ಲ.
ಕುರುಡು-ಕಿವುಡು ಚಿಂತಕರ ನಡುವೆ ಅನಂತಮೂರ್ತಿ ಇಷ್ಟವಾಗುವುದು ಇಂಥ ಕಾರಣಗಳಿಗಾಗಿ. ಮಲೆನಾಡಿನ ದಟ್ಟ ಕಾಡಿನಲ್ಲಿ ನಿಧಾನವಾಗಿ ಪೊರೆ ಕಳಚಿದ ನಡೆದಾಡಿ, ಹಾರಾಡಿ ಅಚ್ಚರಿ, ಆತಂಕ, ಸಂತಸ ಮೂಡಿಸಿದ ಸೂರ್ಯನ ಕುದುರೆ ಇಂದು ದಿಗಂತಕ್ಕೆ ಹಾರಿದೆ.
- ಆರ್. ಎಸ್. ಹಾಲಸ್ವಾಮಿ
ಕೃಪೆ: http://www.malenadumedia.com/
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


