ಪ್ರಧಾನ ಸುದ್ದಿ

ಸಾಯುವ ಮುನ್ನ ನನ್ನ ಬದುಕನ್ನು ಕಣ್ತುಂಬಿಕೊಂಡೆ

ಸಾಯುವ ಮುನ್ನ ನನ್ನ ಬದುಕನ್ನು ಕಣ್ತುಂಬಿಕೊಂಡೆ
Published On :

ಅಂತೂ ನಾನು ಸಾಯುವ ಮುನ್ನ ನನ್ನ ಚಿತ್ರ 'ಕಥೆ'ಯನ್ನು ತೆರೆ ಮೇಲೆ ನೋಡಿಕೊಂಡೆ. ಬದುಕಿದ್ದಾಗಲೇ ನನ್ನನ್ನು ದೃಶ್ಯ ರೂಪದಲ್ಲಿ ತೋರಿಸಿ ನನ್ನ ಜೀವನ ಸಾರ್ಥಕವಾಗಿಸಿದ್ದೀರಿ.....

ಪಕ್ಕದಲ್ಲೇ ನಿಂತಿದ್ದ ನಿರ್ದೇಶಕ ಪಂಚಾಕ್ಷರಿ ಹಾಗೂ ಛಾಯಾಗ್ರಾಹಕ ರವಿಕುಮಾರ್ ಸಾನ ಅವರ ಹೆಗಲ ಮೇಲೆ ಕೈ ಹಾಕಿಕೊಂಡು ಹೀಗೆ ಅತ್ಯಂತ ಭಾವುಕರಾಗಿ ಪ್ರತಿಕ್ರಿಯಿಸಿದ್ದು ಸಾಹಿತಿ ಯು.ಆರ್.ಅನಂತಮೂರ್ತಿ ಅವರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅವರ ಮಾತಿನ ನಡುವೆ 'ಇದು ನನ್ನ ಜೀವನದ ಅದ್ಭುತ ಕ್ಷಣ' ಎಂದರು. 'ನನ್ನ ಇಲ್ಲಿವರೆಗಿನ ಚಿತ್ರಗಳ ಪೈಕಿ ಅತ್ಯಂತ ಇಷ್ಟವಾದ ಸಿನಿಮಾ' ಎಂದು ಸಂಭ್ರಮಗೊಂಡರು.

ಅಂದಹಾಗೆ ಹೀಗೆ ಯು.ಆರ್.ಅನಂತಮೂರ್ತಿ ಅವರು ಮಾತನಾಡಿದ್ದು, 'ಪ್ರಕೃತಿ' ಎನ್ನುವ ಚಿತ್ರದ ಬಗ್ಗೆ. ಮತ್ತು ಆ ಚಿತ್ರತಂಡದ ಪ್ರಾಮಾಣಿಕವಾದ ಕೆಲಸದ ಕುರಿತು. 'ಪ್ರಕೃತಿ', ಯು.ಆರ್.ಅನಂತಮೂರ್ತಿ ಅವರ ಕಥೆಯನ್ನು ಆಧರಿಸಿದ ಸಾಕ್ಷ್ಯ ಚಿತ್ರ. ವಿಶೇಷ ಅಂದರೆ ಇದು ಅವರ ಮೊದಲ ಕತೆ. ಆದರೆ, ಈ ಮೊದಲ ಕತೆಯೇ ಅವರಿರುವಾಗ ಬೆಳ್ಳಿಪರದೆ ಮೇಲೆ ಬಂದ ಕೊನೆಯ ಚಿತ್ರವಾಯಿತು.

ಈ ಚಿತ್ರವನ್ನು ನಿರ್ದೇಶಿಸಿದ್ದು ಪಂಚಾಕ್ಷರಿ. ಇಡೀ ಕಥೆ ಮತ್ತು ಅದರ ಹಿನ್ನೆಲೆಯಲ್ಲಿ ಬರುವ ಮಲೆನಾಡಿನ ಪರಿಸರವನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದು ಛಾಯಾಗ್ರಾಹಕ ರವಿಕುಮಾರ್ ಸಾನ. ಅಶೋಕ್, ಹಿರಿಯ ನಟ ಸಂಕೇತ್ ಕಾಶಿ ಪುತ್ರಿ ಪ್ರತೀಕ್ಷಾ, ವರುಣ್ ಸಂತೋಷ್, ಮಂಜುನಾಥ್ ಜಂಬೆ, ಶೃಂಗೇರಿ ರಾಮಣ್ಣ, ಕೆ.ಜಿ.ಕೃಷ್ಣಮೂರ್ತಿ, ಪುಷ್ಪ ರಾಘವೇಂದ್ರ, ಬೇಬಿ ಸುಹಾಸಿನಿ 'ಪ್ರಕೃತಿ'ಯ ಮುಖ್ಯ ಪಾತ್ರಧಾರಿಗಳು. 22 ದಿನ ಸಾಗರ, ಕೊಲ್ಲೂರು ಹಾಗೂ ಜೋಗ್‌ಫಾಲ್ಸ್ ಸುತ್ತಮುತ್ತ ಚಿತ್ರೀಕರಣ. 2012 ಮತ್ತು 2013ನೇ ಸಾಲಿನ ನಾಲ್ಕು ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿತ್ತು. ಕೊನೆಗೆ ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿತು. ಇದರ ನಂತರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ತಮ್ಮದೇ ಕತೆಯ 'ಪ್ರಕೃತಿ' ಚಿತ್ರವನ್ನು ನೋಡಬೇಕೆಂದು ಕುತೂಹಲದಿಂದಲೇ ಸಿನಿಪೋಲೀಸ್ ಮಲ್ಟಿಪ್ಲೆಕ್ಸ್‌ಗೆ ಆಗಮಿಸಿದ ಯು.ಆರ್.ಅನಂತಮೂರ್ತಿ ಅವರು ಚಿತ್ರ ವೀಕ್ಷಿಸಿದರು.

ಚಿತ್ರ ಮುಗಿದ ಕೂಡಲೇ ಎದ್ದು ಬಂದು ನಿರ್ದೇಶಕ ಪಂಚಾಕ್ಷರಿ ಹಾಗೂ ಛಾಯಾಗ್ರಾಹಕ ರವಿಕುಮಾರ್ ಸಾನ ಅವರನ್ನು ತಬ್ಬಿಕೊಂಡು ಖುಷಿ ಪಟ್ಟಿದ್ದರಂತೆ. ಕೊನೆಗೆ ತಾವೇ ಚಿತ್ರತಂಡವನ್ನು ಆಹ್ವಾನಿಸಿ ಒಂದು ಗಂಟೆ ಚಿತ್ರದ ಬಗ್ಗೆ ಮಾತನಾಡಿದ್ದನ್ನು ನಿರ್ದೇಶಕ ಪಂಚಾಕ್ಷರಿ ಹೇಳುತ್ತಾರೆ. 'ಸಿನಿಮಾ ನೋಡುತ್ತಿದ್ದಾಗ ಅವರ ಸಂಭ್ರಮವನ್ನು ಪದಗಳಲ್ಲಿ ಹೇಳಲಾಗದು' ಎನ್ನುವ ಪಂಚಾಕ್ಷರಿ, 'ಇದು ಅಪ್ಪಟ ಭಾರತೀಯ ಸಿನಿಮಾ. ಯಾಕೆಂದರೆ ಭಾಷೆ, ಪರಿಸರ, ಚಿತ್ರಕಥೆ ಹಾಗೂ ವಸ್ತ್ರ ವಿನ್ಯಾಸ ಎಲ್ಲದರಲ್ಲೂ ವೈವಧ್ಯಗಳಿವೆ. ಭಾರತ ಕೂಡ ವೈವಿಧ್ಯಗಳ ನೆಲೆ. ಹೀಗಾಗಿ ಇದು ಭಾರತೀಯ ಸಿನಿಮಾ. ಅಲ್ಲದೆ ಈ ಪ್ರಕೃತಿ ಹಾಗೂ ಸಂಸ್ಕಾರ ಈ ಎರಡು ಒಂದೇ ಬೀಜದಲ್ಲಿ ಹುಟ್ಟಿದ ಅಕ್ಷರ ಸಸಿಗಳು. ನನ್ನ ಪ್ರಕೃತಿ, ಬಾಲ್ಯ, ಮನೆ, ಓದು ಎಲ್ಲವನ್ನೂ ಒಳಗೊಂಡಿರುವ ಹಾಗೂ ಸರ್ವಕಾಲಿಕ ಸತ್ಯವನ್ನು ಹೇಳುವ ಕತೆ. ಅಂಧ ಅಪರೂಪದ ಕತೆಗೆ ಧಕ್ಕೆಯಾಗದಂತೆ ತೆರೆ ಮೇಲೆ ದೃಶ್ಯೀಕರಣ ಮಾಡಿದ್ದೀರಿ. ಹೀಗಾಗಿ ನನ್ನ ಚಿತ್ರ ಬದುಕನ್ನೇ ನಾನೇ ತೆರೆ ಮೇಲೆ ನೋಡಿಕೊಂಡೆ. ಅದೂ ಸಾಯುವ ಮುನ್ನ ನನ್ನ ಕಥಾ ಜಗತ್ತನ್ನು ತೆರೆ ಮೇಲೆ ತೋರಿಸಿದ್ದೀರಿ' ಎಂದು ಯು.ಆರ್.ಭಾವುಕರಾಗಿ ನುಡಿದಿದ್ದನ್ನು ಪಂಚಾಕ್ಷರಿ ಹಾಗೂ ರವಿಕುಮಾರ್ ಸನಾ ಈಗಲೂ ನೆನಪಿಸಿಕೊಳ್ಳುತ್ತಾರೆ.

ಸಾಹಿತಿ ಯು.ಆರ್. ಅನಂತಮೂರ್ತಿ ಅವರ ಕತೆಯನ್ನು ಸಿನಿಮಾ ಮಾಡಿ ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದಿದು ನನ್ನ ಅದೃಷ್ಟವಲ್ಲ, ಅದು ನನಗೆ ಮೇಷ್ಟ್ರು ಕೊಟ್ಟಿರುವ ಗೌರವ ನನ್ನೊಟ್ಟಿಗೆ ಇದೆ. ಮೇಷ್ಟ್ರು ಕೂಡ ನನ್ನ ಜೊತೆಯಲ್ಲೇ ಇದ್ದಾರೆ.... ಎನ್ನುತ್ತಾರೆ ನಿರ್ದೇಶಕ ಪಂಚಾಕ್ಷರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.