ಪ್ರಧಾನ ಸುದ್ದಿ

ಭವದಿಂದ ದಿವ್ಯಕ್ಕೆ ಮೌನಿ

ಭವದಿಂದ ದಿವ್ಯಕ್ಕೆ ಮೌನಿ
Published On :

ಮತ್ತೆ ಹುಟ್ಟಿ ಬಂದು ಬದುಕುತ್ತೀಯ ಎಂದು ವಿಧಿಯೇನಾದರೂ ಕೇಳಿದರೆ ನಾನೇನು ಹೇಳುತ್ತೇನೆ? ಗೊತ್ತಿಲ್ಲ. ಬೆಳೆಯುವುದರಲ್ಲಿ ಇರುವ ಬಾಧೆ ಸುಖದ್ದು ಖಂಡಿತಾ ಇಲ್ಲ: ಕೇವಲ ನೋವಿನದೂ ಅಲ್ಲ.ಅದು ಇದೆ-ಅಷ್ಟೇ. ಮನುಷ್ಯ ಮಾತ್ರರಾದ ನಮಗೆಲ್ಲರಿಗೂ ಇದೆ.
-ಯು.ಆರ್.ಅನಂತಮೂರ್ತಿ

ಬೆಂಗಳೂರು:
ಕನ್ನಡನಾಡಿನ ಸಾಕ್ಷಿಪ್ರಜ್ಞೆ, ಸಾಂಸ್ಕೃತಿಕ ರಾಯಭಾರಿ, ನವ್ಯ ಸಾಹಿತ್ಯದ ವಕ್ತಾರ, ಆಧುನಿಕ ಚಿಂತನ ಕ್ರಮವನ್ನು ಮುಂದಿನ ತಲೆಮಾರಿಗೆ ದಾಟಿಸಿದ ಧೀಮಂತ ಚಿಂತಕ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಇಂಗ್ಸಿಷ್ ಸಾಹಿತ್ಯ ಪ್ರತಿಪಾದನೆಯ ಮೂಲಕ ಕನ್ನಡವನ್ನು ಪ್ರತಿನಿಧಿಸಿದ ವಿದ್ವಾಂಸ, ಜ್ಞಾನಪೀಠ ಪುರಸ್ಕೃತ, ಸಾವಿರಾರು ಸಾಹಿತಿಗಳ ನೆಚ್ಚಿನ 'ಮೇಷ್ಟ್ರು', ವಿವಾದಪ್ರಿಯ, ಬಹುಶ್ರುತವಾಗ್ಮಿ ಯು.ಆರ್.ಅನಂತಮೂರ್ತಿ ಇನ್ನಿಲ್ಲ.

ಸಾಹಿತ್ಯಲೋಕದ ಸಾಕ್ಷಿಪ್ರಜ್ಞೆ, ಬಹುಮುಖ ಆಸಕ್ತ, ವಿವಾದ ಪ್ರೀತ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ (82) 'ಭವ'ದ ಬಂಧ ಕಡಿದುಕೊಂಡಿದ್ದಾರೆ. ಈ ಮೂಲಕ ಕನ್ನಡಿಗರು ಇನ್ನೊಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಕಳೆದುಕೊಂಡಂತಾಗಿದೆ. ಕಿಡ್ನಿ ವೈಫಲ್ಯ ಮತ್ತು ಉಸಿರಾಟ ತೊಂದರೆಯಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕಳೆದ 15 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು, ಶುಕ್ರವಾರ ಸಾಯಂಕಾಲ ತೀವ್ರ ಹೃದಯಾಘಾತದಿಂದ ನಿಧನರಾದರು.

ಮಧ್ಯಾಹ್ನದ ಹೊತ್ತಿಗೆ ಅನಂತಮೂರ್ತಿ ನಿಧನರಾದರು ಎಂಬ ಸುದ್ದಿ ಹಬ್ಬಿತ್ತಾದರೂ, ಸಂಜೆ ಹೊತ್ತಿಗೆ ಆ ಆತಂಕಕರ ದುರಾದೃಷ್ಟವಶಾತ್ ನಿಜವಾಯಿತು.

ಅನಂತಮೂರ್ತಿ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆ ಘೋಷಿಸಿದೆ. ಶನಿವಾರ ಸರ್ಕಾರಿ ಕಚೇರಿಗಳು, ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಲಾಗಿದ್ದು, ಪಾರ್ಥಿವ ಶರೀರವನ್ನು ಡಾಲರ್ಸ್ ಕಾಲನಿಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ. ಎರಡೂ ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದ ಅನಂತಮೂರ್ತಿ, ಕಳೆದ ಎರಡು ವರ್ಷದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಸಕ್ಕರೆ ಕಾಯಿಲೆಯಿಂದಲೂ ಬಳಲುತ್ತಿದ್ದ ಅವರಿಗೆ ಹದಿನೈದು ದಿನಗಳ ಹಿಂದೆ ಸೋಂಕು ಮತ್ತು ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಅವರ ರಕ್ತದೊತ್ತಡದ ಪ್ರಮಾಣವೂ ಕಡಿಮೆಯಾಗಿತ್ತು.

ಹೀಗಾಗಿ ಮಣಿಪಾಲ ಆಸ್ಪತ್ರೆ ನಿರ್ದೇಶಕ ಡಾ.ಸುದರ್ಶನ್ ಬಲ್ಲಾಳ್ ನೇತೃತ್ವದಲ್ಲಿ 10 ವೈದ್ಯರ ತಂಡ ಹಗಲಿರುಳೆನ್ನದೆ ಅವರನ್ನು ಉಳಿಸಿಕೊಳ್ಳಲು ಸತತ ಪ್ರಯತ್ನ ನಡೆಸಿತ್ತು. ಆದರೆ ಶುಕ್ರವಾರ ಬೆಳಗ್ಗೆ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ವಿಷಮಗೊಂಡಿತು. ಸಾಯಂಕಾಲ 6.45ರ ಸುಮಾರಿಗೆ ಹೃದಯ ಸ್ತಂಭನದಿಂದ ಅವರು ನಿಧನರಾದರು. ಅನಂತಮೂರ್ತಿ ಎರಡು ವರ್ಷದಿಂದಲೂ ಕಿಡ್ನಿ ವೈಫಲ್ಯ ಸಮಸ್ಯೆ ಎದುರಿಸುತ್ತಿದ್ದರು. ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಅಸ್ವಸ್ಥಗೊಂಡು ಕುಸಿದ ಹಿನ್ನೆಲೆಯಲ್ಲಿ ಅವರನ್ನು ಅಂದು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

7.15ರ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಸಮಾಲೋಚನೆ ನಡೆಸಿದ ನಂತರ ಅನಂತಮೂರ್ತಿ ನಿಧನವಾರ್ತೆಯನ್ನು ಅಧಿಕೃತವಾಗಿ ಪ್ರಕಟಿಸಿದ ಮಣಿಪಾಲ ಆಸ್ಪತ್ರೆ ನಿರ್ದೇಶಕ ಡಾ.ಸುದರ್ಶನ್ ಬಲ್ಲಾಳ, ಕನ್ನಡ ಸಾಹಿತ್ಯ ಜಗತ್ತಿನ ದಿಗ್ಗಜ ಡಾ.ಅನಂತಮೂರ್ತಿ ಇಂದು ನಮ್ಮೊಂದಿಗಿಲ್ಲ ಎಂದು ಪ್ರಕಟಿಸಲು ವಿಷಾದಿಸುತ್ತೇನೆ ಎಂದರು.

ಅನಂತಮೂರ್ತಿ ನಿಧನಕ್ಕೆ ನಾಡಿನ ಸಾಹಿತ್ಯ ಲೋಕ ಕಂಬನಿ ಮಿಡಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ನಾಡಿನ ಹಲವಾರು ಗಣ್ಯರು, ರಾಷ್ಟ್ರಮಟ್ಟದ ವಿದ್ವಾಂಸರು ಶೋಕ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಸಂತಾಪ
ಟ್ವಿಟರ್ ಮೂಲಕ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಅನಂತಮೂರ್ತಿಯವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬ ವರ್ಗಕ್ಕೆ ಭಗವಂತ ನೀಡುವ ಜತೆಗೆ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಹೇಳಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ಡಾ.ಯು.ಆರ್.ಅನಂತಮೂರ್ತಿಯವರು ನೀಡಿದ ಕೊಡುಗೆ ಅಪಾರ. ಕರ್ನಾಟಕ ಮತ್ತು ಇಡೀ ದೇಶ ಅವರು ನೀಡಿದ ಗಣನೀಯ ಕೊಡುಗೆ ನೆನಪಿಸಿಕೊಳ್ಳಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ಪ್ರಣಬ್ ಮುಖರ್ಜಿ, ರಾಷ್ಟ್ರಪತಿ

ಯು.ಆರ್.ಅನಂತಮೂರ್ತಿಯವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ನಷ್ಟವಾಗಿದೆ. ಅವರ ಅಗಲಿಕೆಯ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
-ನರೇಂದ್ರ ಮೋದಿ, ಪ್ರಧಾನಮಂತ್ರಿ

ಸಾರ್ವಜನಿಕ ಬುದ್ಧಿಜೀವಿ
ಕನ್ನಡ ಸಾರಸ್ವತ ಲೋಕದ ದಿಗ್ಗಜ, ನವ್ಯ ಸಾಹಿತ್ಯ ಚಳವಳಿಯ ಪಿತಾಮಹರಲ್ಲಿ ಒಬ್ಬರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಸಾಹಿತಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು ಎಂದು ಪ್ರತಿಪಾದಿಸಿದ ಪದ್ಮಭೂಣಣ ಅನಂತಮೂರ್ತಿ ಅವರು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಿಗೆ ಸದಾ ಸ್ಪಂದಿಸುತ್ತಿದ್ದರು. ರಾಜ್ಯದ ಹಾಗೂ ಶ್ರೀ ಸಾಮಾನ್ಯನ ಹಿತ ಕಾಯುವಲ್ಲಿ ವಿಶೇಷ ಕಳಕಳಿ ಹಾಗೂ ಅಪ್ರತಿಮ ಬದ್ಧತೆ ತೋರುತ್ತಿದ್ದ ಅವರು ಈ ನಿಟ್ಟಿನಲ್ಲಿ ತಮ್ಮ ಸ್ಪಷ್ಟ ಅಭಿಪ್ರಾಯ ಹಾಗೂ ದಿಟ್ಟ ನಿಲುವು ಪ್ರಕಟಿಸುವಲ್ಲಿ ಎಂದೂ ಹಿಂಜರಿಯುತ್ತಿರಲಿಲ್ಲ.
ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಅನಂತಮೂರ್ತಿ ಅವರು ನಿಜವಾದ ಅರ್ಥದಲ್ಲಿ ಸಾರ್ವಜನಿಕ ಬುದ್ಧಿಜೀವಿ ಎನಿಸಿದ್ದರು. ಕಿರುಯ ಬರಹಗಾರರ ಬಗ್ಗೆ ಅಪಾರ ಪ್ರೀತಿ ತೋರುತ್ತಿದ್ದ ಅನಂತಮೂರ್ತಿ ಅವರು ತಮ್ಮ ಅನುಭವ ಧಾರೆ ಎರೆದು ಅವರನ್ನು ಪ್ರೋತ್ಸಾಹಿಸುತ್ತಿದ್ದರು. ನನ್ನ ಅವರ ಒಡನಾಟ40 ವರ್ಷಗಳದ್ದು, ಅವರ ಸಾವು ಸಾಹಿತ್ಯ ಲೋಕಕ್ಕೆ ಮಾತ್ರವಲ್ಲ. ವೈಯಕ್ತಿಕವಾಗಿಯೂ ನನಗೆ ನಷ್ಟವಾಗಿದೆ. ಅವರು ಒಂದು ರೀತಿಯಲ್ಲಿ ಮಾರ್ಗದರ್ಶಕರಾಗಿದ್ದರು. ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿಯೂ ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡಿ. ಭಾಷಾ ಜಗತ್ತಿನಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಬೆಳೆದು ಬೆಳಗಿದ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಶೋಕ ಆವರಿಸಿದೆ.
-ಮುಖ್ಯಮಂತ್ರಿ ಸಿದ್ಧರಾಮಯ್ಯ.

ಅನಂತಮೂರ್ತಿಯವರ ನಿಧನ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ನಷ್ಟ ಮಾತ್ರವಲ್ಲ, ಕನ್ನಡ ಸಾರಸ್ವತ ಲೋಕದಲ್ಲಿ ಶೂನ್ಯವನ್ನು ಸೃಷ್ಟಿಸಿದೆ. ಯಾರಿಂದಲೂ ಆ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಕೇವಲ ಸಾಹಿತ್ಯ ಲೋಕ ಮಾತ್ರವಲ್ಲ, ಕರ್ನಾಟಕ ಎಂದಿಗೂ ಅವರನ್ನು ಮರೆಯುವುದಿಲ್ಲ.
-ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ

ಸರ್ಕಾರಿ ರಜೆ-ಅಂತ್ಯ ಸಂಸ್ಕಾರ
ಇಂದು ಸರ್ಕಾರಿ ರಜೆ, 3 ದಿನಗಳ ಕಾಲ ಶೋಕಾಚರಣೆ.

ರವೀಂದ್ರ ಕಲಾಕ್ಷೇತ್ರ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ.
ಕುಟುಂಬ ವರ್ಗ, ಸಾಹಿತಿ-ಚಿಂತಕರ ಜತೆ ಚರ್ಚಿಸಿ ಅಂತ್ಯ ಸಂಸ್ಕಾರದ ಸ್ಥಳ ನಿಗದಿ.
-ಮೈಸೂರಿನ ತೋಟ ಅಥವಾ ಬೆಂಗಳೂರಿನ ಕಲಾಗ್ರಾಮದಲ್ಲಿ ಅಂತ್ಯ ಸಂಸ್ಕಾರ ಸಾಧ್ಯತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.